ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಲಿಗೆ ಕೋಳ, ಕೈಗೆ ಸಂಕಲೆ, ಕೊರಳಿಗೆ ಪಾಶ ಪಾಷಂಡಿಗಳಾಗುತ್ತ, ಮತ್ತಾ ಅರಿವಿನ ಹೊಲಬೆಲ್ಲ ಅಡಗಿತ್ತು. ಅಂಗದ ಕ್ರೀ, ಲಿಂಗದ ಕೂಟ, ನಿರಂಗದ ಸುಖವೆಂಬುದು ಆ ಮೂರರ ಬಂಧದಲ್ಲಿ ಅಡಗಿತ್ತು. ಬೇರೊಂದು ಸಂಗವೆಲ್ಲಿದ್ದಿತ್ತು ಹೇಳಾ ? ನಿರಂಗವೆಂಬ ನಾಮವಿಲ್ಲದನೆ ಕಾಮಕ್ಕೇಕೆ ಕೂಟವಾದೆ ? ದುರ್ಮುಖಕ್ಕೇಕೆ ಆತ್ಮನಾದೆ ? ಕಾಮಧೂಮ ಧೂಳೇಶ್ವರನೆಂಬುದಕ್ಕೆ ಕುರುಹಿಲ್ಲದ ನೆರೆ ನಾಮವಾದೆಯಲ್ಲಾ.
--------------
ಮಾದಾರ ಧೂಳಯ್ಯ
ಕಂಡು ಅರ್ಪಿಸುವುದು ಬ್ರಹ್ಮತತ್ವ. ಸಂದೇಹದಲ್ಲಿ ಅರ್ಪಿಸುವುದು ವಿಷ್ಣುತತ್ವ. ಬಂಧಮೋಕ್ಷಕರ್ಮಗಳಿಲ್ಲವೆಂದು ಅರ್ಪಿಸುವುದು ರುದ್ರತತ್ವ. ತತ್ವಂಗಳ ಗೊತ್ತ ಮುಟ್ಟದೆ ನಿಶ್ಚಯವಾದ ಪರಿಪೂರ್ಣಂಗೆ ಉತ್ಪತ್ತಿ ಸ್ಥಿತಿ ಲಯವೆಂಬುದು ಇತ್ತಲೇ ಉಳಿಯಿತ್ತು, ಕಾಮಧೂಮ ಧೂಳೇಶ್ವರನ ಮುಟ್ಟಲಿಲ್ಲವಾಗಿ.
--------------
ಮಾದಾರ ಧೂಳಯ್ಯ
ಕ್ರೀಯೆಂದು ಕಲ್ಪಿಸುವಲ್ಲಿ, ನಿಃಕ್ರೀಯೆಂದು ಆರೋಪಿಸುವಲ್ಲಿ, ಆ ಗುಣ ಭಾವವೋ, ನಿರ್ಭಾವವೋ ? ಕ್ರೀಯಲ್ಲಿ ಕಾಬ ಲಕ್ಷ, ನಿಃಕ್ರೀಯಲ್ಲಿ ಕಾಬ ಚಿತ್ತ, ಉಭಯದ ಗೊತ್ತು ಅದೇನು ಹೇಳಾ. ಬೀಜದ ಸಸಿಯ ಒಳಗಣ ಬೇರಿನಂತೆ, ಅದಾವ ಠಾವಿನ ಕುರುಹು ಹೇಳಾ. ಲಕ್ಷ ನಿರ್ಲಕ್ಷವೆಂಬುದು ಅದೆಂತೆ ಇದ್ದಿತ್ತು ಅಂತೆ ಇದ್ದಿತ್ತು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಕಾಮಿಗೆ ಯೋನಿಯೆಲ್ಲವೂ ಸರಿ. ಕ್ರೋದ್ಥಿಗೆ ಕೊಲೆ ಸರ್ವಜೀವವೆಲ್ಲವೂ ಸರಿ. ಲೋಬ್ಥಿಗೆ ಜಯ ಅಪಜಯದಿಂದ ಬಂದ ದ್ರವ್ಯವೆಲ್ಲವೂ ಸರಿ. ಪಾತಕಂಗೆ ಪಾಪಪುಣ್ಯವೆಂಬುದಿಲ್ಲ. ಇಂತೀ ಜಗದ ಸೂತಕಕ್ಕೆ ಹೊರಗಾಗಿ, ತ್ರಿಕರಣಸೂತಕಕ್ಕೆ ಒಳಗಲ್ಲದೆ, ಕಾತು ಕರ್ಮವನರಿಯದೆ, ಜೀವ ಭವವ ನುಣ್ಣದೆ, ಆವ ಠಾವಿನಲ್ಲಿಯೂ ಕಲೆ ನಿಷ್ಪತ್ತಿಯಾದ ಮತ್ತೆ ಕಾಯಕ್ಕೆ ಕುರುಹಿಲ್ಲ, ಜೀವಕ್ಕೆ ಭಯವಿಲ್ಲ, ಅರಿವಿಂಗೆ ಮರವೆಯಿಲ್ಲದೆ ತೋರದ ನಿರಾಳ, ಕಾಮಧೂಮ ಧೂಳೇಶ್ವರ ತಾನೂ ತಾನೆ.
--------------
ಮಾದಾರ ಧೂಳಯ್ಯ
ಕೆಂಡ ಕೆಟ್ಟು ಕೆಂಡವಾಗಬಲ್ಲುದಲ್ಲದೆ, ಬೂದಿಯಾಗಿ ಬೂದಿ ಹೊತ್ತಬಲ್ಲುದೆ ? ಸೂತಕ ಸೂತಕಕ್ಕೊಳಗಪ್ಪುದಲ್ಲದೆ, ಭಸ್ಮ ಮೇಲೆ, ಕೆಂಡ ಒಳಗಡಗಿದುದುಂಟೆ ? ಅರಿದ ಅರಿವು ಮರವಿಂಗಪ್ಪುದೆ ? ಅರಿವೆ ಶೂನ್ಯವಾಗಿ ಸುಖದುಃಖಕ್ಕೆ ಹೊರಗಾಗಬೇಕು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಕಾಮವೆಂದಡೆ ಕುರಿತು ಕಾಬುದೊಂದು. ಧೂಮವೆಂದಡೆ ಅದರಲ್ಲಿ ಉದಿಸಿ ತೋರುವ ತಮ. ಇಂತೀ ಕಾಮ ಧೂಮವೆಂಬೀ ಎರಡ ಪುಡಿಗಟ್ಟಿ, ಧೂಳಿ ಧೂಳೇಶ್ವರನಾದ.
--------------
ಮಾದಾರ ಧೂಳಯ್ಯ
ಕಟ್ಟಿದೆ ಘಟದಟ್ಟೆಯ ಹೊಲಿದು, ಇಕ್ಕಿದೆ ಚತುರ್ವಿಧದ ನಾಲ್ಕು ಗುಂಟವ ಬಲಿದು. ಗುಂಟದ ದ್ವಾರದಲ್ಲಿ, ಉಭಯಸಂಚದ ಬಾರ ತೆಗೆದು, ತೊಡಕು ಬಂಧವನಿಕ್ಕಿ, ಅಡಿಯ ಬಿಡದಂತೆ, ಹಿಂದಣ ಮಡ ಮುಂದಣ ಉಂಗುಷ*ಕ್ಕೆ ಒಂದನೊಂದು ಜಾರದಂತೆ ಬಂಧಿಸಿ, ಸಕಲೇಂದ್ರಿಯವೆಂಬ ಉಭಯವ ಸಂಧಿಸಿ ಕುಣಿಕೆಯನಿಕ್ಕಿ, ಕಾಮದ ಒಡಲ ಮಾದಿಗ ಬಂದೆ, ಘಟ ತೋಕುಳು ತೊಗಲು ಹದಬಂದಿತ್ತು. ಹೊತ್ತು ಹೋದಿಹಿತಣ್ಣಾ. ಮೆಟ್ಟಡಿಯ ಕೊಂಡ ರೊಕ್ಕವ ಕೊಡಿ. ಒಪ್ಪಿದರಿರಲಿ, ಒಪ್ಪದಿದ್ದಡೆ ಮೂರು ಮುಖದಪ್ಪಗೆ ಕೊಟ್ಟೆಹೆ. ತಪ್ಪಡಿಯ ಮೆಟ್ಟೆ ಹೋಗುತ್ತಿದ್ದೇನೆ, ಚನ್ನಯ್ಯಪ್ರಿಯ ಧೂಳನ ಧೂಳಿಗೊಳಗಾಗಿ.
--------------
ಮಾದಾರ ಧೂಳಯ್ಯ
ಕರಚರಣಾದಿ ದೇಹಂಗಳಲ್ಲಿ ಹೊಕ್ಕು, ಒಳಗಡಗಿ, ಹೊರಗಣ ಬಾಹ್ಯವ ಹಿಡಿವುದದೇನೋ ? ಹೊರಗಣ ಅರ್ಪಿತವ ಒಳಗೆ ಕೊಟ್ಟು, ಅರ್ಪಿಸುವುದದೇನೋ ? ಆ ಒಳಗು ಹೊರಗೆಂಬ ಉಭಯವ ತಿಳಿದಲ್ಲಿ, ಅನಲಂಗೆ ಕೀಳು ಮೇಲೆಂಬುದುಂಟೆ ? ನೆರೆ ಅರಿದ ಆತ್ಮಂಗೆ, ಒಳಹೊರಗೆಂಬ ಉಭಯದ ಸೂತಕವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಕ್ರಿಯಾದ್ವೈತ, ಭಾವಾದ್ವೈತ, ಅಧ್ಯಾತ್ಮಾದ್ವೈತ, ಅದ್ವೈತಂಗಳೆಂದು ದಂಪತಿ ಸಂಬಂಧವಾಗಿ ನುಡಿವ ವಾಗ್ವಿಲಾಸಿತರೆಲ್ಲರು ಜ್ಞಾನಾದ್ವೈತಸಂಬಂಧಿಗಳಾದರು. ಸ್ಥೂಲದಿಂದ ಕಂಡು, ಸೂಕ್ಷ್ಮದಿಂದ ಅರಿದು, ಕಾರಣದಲ್ಲಿ ಲಯವಾದ ಮತ್ತೆ, ತೋರಿಕೆ ದ್ವೈತವಾಯಿತ್ತು. ದ್ವೈತ ಲೇಪವಾದಲ್ಲಿ, ಕುರುಹಿನ ಸೂತಕ ಅಲ್ಲಿಯೇ ಅಡಗಿತ್ತು, ಕಾಮಧೂಮ ಧೂಳೇಶ್ವರನೆಂಬಲ್ಲಿಯೆ.
--------------
ಮಾದಾರ ಧೂಳಯ್ಯ
ಕುಂಭಘಟಕ್ಕೆ ಒಳಗೂ ಬಯಲು, ಹೊರಗು ಬಯಲು. ಮೀರಿ ತಾ ನೋಡಿದಲ್ಲಿಯೂ ಬಯಲು. ಶುಕ್ಲ ಶೋಣಿತದಾದ ಘಟಕ್ಕೆ, ಬಯಲೆಂಬುದಕ್ಕೆ ತೆರಪಿಲ್ಲ, ಚೇತನಕ್ಕೆ ಒಳಗಾಗಿದ್ದುದಾಗಿ. ಪೃಥ್ವಿ ಪೃಥ್ವಿಯ ಕೂಡುವನ್ನಬರ, ಅಪ್ಪು ಅಪ್ಪುವ ಕೂಡುವನ್ನಬರ, ತೇಜ ತೇಜವ ಕೂಡುವನ್ನಬರ, ವಾಯು ವಾಯುವ ಕೂಡುವನ್ನಬರ, ಆಕಾಶ ಆಕಾಶವ ಕೂಡುವನ್ನಬರ, ಪಂಚತತ್ವಂಗಳು ತತ್ವವನೆಯ್ದಿದಲ್ಲಿ, ಆತ್ಮಂಗೆ ಬಂಧಮೋಕ್ಷವೆಂಬ ಅಂದವಾವುದು ? ಉಂಟೆಂಬುದು ತನ್ನಿಂದ, ಇಲ್ಲಾ ಎಂಬುದು ತನ್ನಿಂದ, ತನ್ನಿಂದನ್ಯವಪ್ಪುದೊಂದಿಲ್ಲವಾಗಿ. ಸ್ಥಾಣು ಚೋರನಂತೆ, ರಜ್ಜು ಸರ್ಪನಂತೆ, ತಿಳಿದು ನೋಡಲಿಕೆ ಮತ್ತೇನೂ ಇಲ್ಲ. ಕಾಮಧೂಮ ಧೂಳೇಶ್ವರನೆಂಬಲ್ಲಿ ಏನೂ ಇಲ್ಲ.
--------------
ಮಾದಾರ ಧೂಳಯ್ಯ
ಕಂಗಳಲ್ಲಿ ನೋಡಿ ದೃಕ್ಕಿಂಗೆ ಒಳಗಪ್ಪುದದೇನು ಹೇಳಾ. ನಾಸಿಕದಲ್ಲಿ ವಾಸಿಸಿ ಲೇಸಾಯಿತ್ತೆಂಬುದದೇನು ಹೇಳಾ. ಕರ್ಣದಲ್ಲಿ ಕೇಳಿ ಜೊಂಪಿಸಿ ತಲೆದೂಗುವುದು ಅದೇನು ಹೇಳಾ. ಜಿಹ್ವೆಯಲ್ಲಿ ಚಪ್ಪಿರಿದು ಪರಿಭಾವ ಪರಿಪೂರ್ಣವಾಯಿತ್ತೆಂಬುದದೇನು ಹೇಳಾ. ಕೈಯಲ್ಲಿ ಮುಟ್ಟಿ ಮೃದು ಕಠಿನವಾಯಿತ್ತೆಂಬುದದೇನು ಹೇಳಾ. ಇಂತೀ ಗುಣ, ಐದರ ಸೂತಕವೋ ? ತಾನರಿದೆ ಮರದೆನೆಂಬ ಭಾವದ ಸೂತಕವೋ? ಒಂದು ಆತ್ಮನೆಂದಲ್ಲಿ, ಇಂದ್ರಿಯಂಗಳು ಒಂದು ಬಿಟ್ಟು ಒಂದರಿಯವಾಗಿ. ಹಲವೆಡೆ ಉಂಟೆಂದಲ್ಲಿ, ಆತ್ಮನ ಹೊಲಬುದಪ್ಪಿದಲ್ಲಿ, ಆ ಕಳೆಯೆಲ್ಲಿ ಅಡಗಿತ್ತು ಹೇಳಾ ? ಇಂತೀ ರೂಪು ಘಟಭಿನ್ನ ಹಲವು ಚೇತನಂಗಳಲ್ಲಿ ಚೇತನಿಸುವುದು ಅದೇತರ ಗುಣವೆಂದು ಅರಿತಲ್ಲಿ, ಅರಿವು ಸೂತಕ ಭ್ರಾಂತಿ ನಿಂದಲ್ಲಿ, ಕಾಮಧೂಮ ಧೂಳೇಶ್ವರನೆಂಬುದಕ್ಕೆ ಠಾವಾವುದಯ್ಯಾ ?
--------------
ಮಾದಾರ ಧೂಳಯ್ಯ
ಕುಸುಮದೊಳಗಡಗಿದ ಸುವಾಸನೆಯಂತೆ, ರಸಿಕನಲ್ಲಿ ಅಡಗಿದ ಎಸಕದಂತೆ, ಕೇಶದಲ್ಲಿ ಅಡಗಿದ ರಸರಂಜನೆಯಂತೆ, ಅರಿದು, ಅರುಹಿಸಿಕೊಂಬುದು. ಎರಡಳಿದು ಪರಿಪೂರ್ಣವಾದಲ್ಲಿ, ಹಲವುಮಾತಿನ ಹೊಲಬಿನ ಸೂತಕವೇತಕ್ಕೆ ಕಾಮಧೂಮ ಧೂಳೇಶ್ವರಾ ?
--------------
ಮಾದಾರ ಧೂಳಯ್ಯ
ಕಂಗಳ ಸೂತಕದಿಂದ ಕಾಣಿಸಿಕೊಂಬುದು, ಮನದ ಸೂತಕದಿಂದ ನೆನೆಯಿಸಿಕೊಂಬುದು, ಕಾಯದ ಸೂತಕದಿಂದ ಮುಟ್ಟಿಸಿಕೊಂಬುದು, ಮೂರರ ಸೂತಕದಲ್ಲಿ ಗಾರಾಗುತ್ತ, ಮೀರಿ ಕಾಬ ಅರಿವು ಸೂರೆಯೇ ? ನೆನಹಿಂಗೆ ಮುನ್ನವೆ ನೆನೆಯಿಸಿಕೊಂಡು, ಅರಿವುದಕ್ಕೆ ಮುನ್ನವೆ ಅರುಹಿಸಿಕೊಂಡು, ಬಂದುದನರಿಯದೆ ಕುರುಹಿನ ಹಾವಸೆಯಲ್ಲಿ ಮರೆದು ಒರಗುತ್ತಿಹರ ಕಂಡು, ಮರೆ ಮಾಡಿದೆಯಲ್ಲಾ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ