ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಶ್ಚಯಿಸಿಕೊಂಡಲ್ಲಿಯೆ ನಿಜತತ್ವ. ಉತ್ತರ ಪೂರ್ವ ಉಭಯದ ಕಕ್ಷೆಯ ಬಿಟ್ಟಲ್ಲಿಯೆ ನಿತ್ಯತ್ವ. ಅನಿತ್ಯತ್ವವೆಂಬ ಗೊತ್ತ ಮರೆದಲ್ಲಿಯೆ, ಕಾಮಧೂಮ ಧೂಳೇಶ್ವರನು ಸಚ್ಚಿದಾನಂದ.
--------------
ಮಾದಾರ ಧೂಳಯ್ಯ
ನುಡಿದಡೆ ಮಿಥ್ಯ, ಸುಮ್ಮನಿದ್ದಡೆ ತಥ್ಯವಲ್ಲ. ಈ ಉಭಯದ ಹೆಚ್ಚು ಕುಂದ ಹೊತ್ತುಹೋರಿಯಾಡುತ್ತ, ಮತ್ತೆ ನಿಶ್ಚಯವಂತ ನಾನೆಂದು, ಹೆಚ್ಚು ಕುಂದಿನೊಳಗೆ ಬೇವುತ್ತ, ಮತ್ತೆ ನಿಶ್ಚಯಕ್ಕೆ ದೃಷ್ಟವ ಕೇಳಲಿಲ್ಲ. ಕಾಮಧೂಮ ಧೂಳೇಶ್ವರನು ನಿತ್ಯಾನಿತ್ಯದವನಲ್ಲ.
--------------
ಮಾದಾರ ಧೂಳಯ್ಯ
ನೋಡುವುದಕ್ಕೆ ಮುನ್ನವೆ ಕಂಡು, ಕಾಬುದಕ್ಕೆ ಮೊದಲೆ ಕೂಡಿ, ಕೂಡುವುದಕ್ಕೆ ಮೊದಲೆ ಶೂನ್ಯವೆಂಬ ಭಾವವೇನೂ ಕಲೆದೋರದೆ, ನಿರಾಳ ಸುರಾಳವಾಯಿತ್ತು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ನಾನಾ ಶಬ್ದಂಗಳ ಮುಟ್ಟುವ ಕೈ, ಮುಟ್ಟಿಸಿಕೊಂಬ ವಾದ್ಯ, ಈ ಉಭಯದ ತಂತ್ರವನರಿದು ಮುಟ್ಟುವ ಆತ್ಮಂಗೆ ಮನ ನೆನೆದು ಮುಟ್ಟಿ, ವಾದ್ಯ ರಚನೆಯಾಗಿ, ಕಳಾಸ ಕಡೆಗೇರಿದ ಮತ್ತೆ, ತ್ರಿವಿಧದ ಗೊತ್ತು, ಸೂತಕ ಇತ್ತಲೆ ಉಳಿಯಿತ್ತು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ನಡೆವಾತನ ಕಾಲ ತರಿದು, ಕೊಡುವಾತನ ಕೈಯ ಮುರಿದು, ನುಡಿವಾತನ ನಾಲಗೆಯ ಕಿತ್ತು, ನೋಡುವಾತನ ಕಣ್ಣ ಕಳೆದು, ಅರಿದೆಹೆನೆಂಬ ಸೂತಕವ ಮುನ್ನವೆ ಮರೆದು, ಅರಿದ ಮತ್ತೆ ತರುವಿನ ಶಾಖೆಯಲ್ಲಿ ತೋರುವ ಅರಗಿನ ಉರಿಯ ಯೋಗದಂತೆ, ತನುವಿನ ಮೇಲಣ ಕುರುಹು, ಮನದ ಮೇಲಣ ಸೂತಕ. ನೆನಹು ನಿಷ್ಪತ್ತಿಯಾದಲ್ಲಿ, ಕಾಮಧೂಮ ಧೂಳೇಶ್ವರ, ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ನೆನೆವುದು ನೆನೆಹಿಸಿಕೊಂಬುದು ಜಡನೆಂದು ಮತ್ತೆ, ನಾ ನೀನೆಂಬುದಿಲ್ಲ. ಬಾಳೆಯ ಫಲದಂತೆ, ಚೇಳಿಗೆ ಗರ್ಭವಾದಂತೆ, ವೇಣುವಿಗೆ ಅಕ್ಕಿ ಹುಟ್ಟಿದ ಮತ್ತೆ ಬಾಳುವೆ ಉಂಟೆ ? ನೀನೆಂಬುದ ತಾನರಿದಲ್ಲಿ, ನಾ ನೀನೆಂಬ ಭಾವವೇನೂ ಇಲ್ಲ. ಕಾಮಧೂಮ ಧೂಳೇಶ್ವರ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ನಾನಾ ಚಿತ್ರ ವಿಚಿತ್ರ, ನಾನಾ ದೃಷ್ಟವಿದ್ಯಂಗಳಲ್ಲಿ ಕಾಯಸಿಧ್ಧಿ ಲೋಹಸಿದ್ದಿ ಅಂಜನಸಿದ್ಧಿ ಒಳಗಾದ ಸಂದೇಹಸಿದ್ಧಿವುಳ್ಳವರುಂಟು. ಭಾವ ನಿರ್ಭಾವಸಿದ್ಧಿವಂತರನಾರನೂ ಕಾಣೆ. ಅವರು ಕಂಡಲ್ಲಿಯೆ ನಾನೆಂಬ ಪ್ರತಿರೂಪು, ಆ ಭಾವದಲ್ಲಿಯೆ ಲೇಪವಾಯಿತ್ತು, ಕಾಮಧೂಮ ಧೂಳೇಶ್ವರನೆಂಬುದು ಭಾವ ಲೇಪವಾದಲ್ಲಿ.
--------------
ಮಾದಾರ ಧೂಳಯ್ಯ
ನಾನಾ ಜೀವದ ನೋವು ಒಂದೆಂದಲ್ಲಿ, ಮರಣಕ್ಕೆ ನಾನಾ ಭೇದಂಗಳುಂಟು. ಯೋನಿಯ ಕೂಟದ ಸುಖವೊಂದೆಂದಲ್ಲಿ, ಯೋಗ ನಾನಾ ಭೇದಂಗಳುಂಟು. ನಾನಾ ಸ್ಥಳಂಗಳ ಭೇದಿಸಿ, ವೇಧಿಸಿ, ಮೆಟ್ಟಿ ನೋಡಲಿಕ್ಕೆ ಇಂದ್ರಿಯಂಗಳಿಗೆ ಭಿನ್ನರೂಪಾಗಿ ತೋರುತ್ತಿಹವು. ಅದೇತರ ಗುಣವೆಂದು ನಿರಾಕರಿಸಿ ನೋಡಲಿಕ್ಕೆ ಅದಂತೆ ಇದ್ದಿತ್ತು. ಅಂತೆಯಿದ್ದ ಮೇಲೆ ಅಂತೆಯಿಂತೆಯೆನಲಿಲ್ಲ ಆ ಗುಣ ಚಿಂತನೆಗೆ ಹೊರಗು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ