ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಒಂದಾದುದು ಎರಡಪ್ಪುದೆ ? ಎರಡಾದುದು ಒಂದಪ್ಪುದೆ_[ಎಂದ]À ಪರಿಣಾಮದ ವೇಳೆಯಲ್ಲಿ ಸಂದೇಹ ಹುಟ್ಟಲುಂಟೆ ? ಬಂದ ಜಂಗಮದ ನಿಲವನರಿಯದೆ, ಹಿಂದನೆಣಿಸಿ ಹಲವ ಹಂಬಲಿಸುವರೆ ? ಈ ಒಂದು ನಿಲವಿಂಗೆ ಪರಿಣಾಮವ ಮಾಡಬಲ್ಲಡೆ ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಪರಿಣಾಮವಹುದು ನೋಡಾ. ಗುಹೇಶ್ವರನೆಂಬ ಲಿಂಗದ ನಿಲವನರಿಯದೆ ಮರುಳಾದೆಯಲ್ಲಾ ಸಂಗನಬಸವಣ್ಣಾ
--------------
ಅಲ್ಲಮಪ್ರಭುದೇವರು
ಒಡೆಯರಿಲ್ಲದ ಮನೆಯ ತುಡುಗುಣಿ ನಾಯಿ ಹುಗುವಂತೆ, ನೀನಿಲ್ಲದವರ ಮನೆಯ ಹೊಗೆನು, ಸಂಗಯ್ಯಾ, ಶ್ವಪಚೋಪಿಗಳಾಗಲಿ, ಕೂಡಲಸಂಗಯ್ಯಾ ನೀನಿದ್ದವನೆ ಕುಲಜನು.
--------------
ಬಸವಣ್ಣ
ಒಲುಮೆ ಒಚ್ಚತವಾದವರು ಕುಲಛಲವನರಸುವರೆ ? ಮರುಳುಗೊಂಡವರು ಲಜ್ಜೆನಾಚಿಕೆಯ ಬಲ್ಲರೆ ? ಚೆನ್ನಮಲ್ಲಿಕಾರ್ಜುನದೇವಗೊಲಿದವರು ಲೋಕಾಭಿಮಾನವ ಬಲ್ಲರೆ ?
--------------
ಅಕ್ಕಮಹಾದೇವಿ
ಒಬ್ಬರು ನಡೆದಾಚರಣೆಯಲ್ಲಿ ನಡೆಯರು. ಒಬ್ಬರು ಹಿಡಿದ ಶೀಲವ ಹಿಡಿಯರು. ಒಬ್ಬರು ನುಡಿದ ಭಾಷೆಯ ನುಡಿಯರು. ಅದೇನು ಕಾರಣವೆಂದೊಡೆ : ತಮ್ಮ ಲಿಂಗಮಚ್ಚಿ ನಡೆವರು. ತಮ್ಮ ಲಿಂಗಮಚ್ಚಿ ಹಿಡಿವರು. ತಮ್ಮ ಲಿಂಗಮಚ್ಚಿ ನುಡಿವರು. ಇದು ಕಾರಣ. ಅಖಂಡೇಶ್ವರಾ, ನಿಮ್ಮ ಶರಣರು ಪರಮ ಸ್ವತಂತ್ರಶೀಲರು.
--------------
ಷಣ್ಮುಖಸ್ವಾಮಿ
ಒಳಗೆ ತಿಳಿಯದೆ ಹೊರಗೆ ಮಾಡುವ ಮಾಟವೆಲ್ಲ ಅಜ್ಞಾನದ ಗಡಣದೊಳಗು. ಒಳಗೆ ಗುರುಲಿಂಗಜಂಗಮದ ಪಾದತೀರ್ಥಪ್ರಸಾದವ ಕೊಂಡೆವೆಂದು ಹೊರಗೆ ಮಾಡುವ ಭಕ್ತಿಯ ಬಿಟ್ಟರೆ ಮುಂದೆ ಒದಗುವ ಮುಕ್ತಿಯ ಕೇಡು. ಅದೆಂತೆಂದೊಡೆ : ಅಸಲು ಕಳೆದ ಬಳಿಕ ಲಾಭವುಂಟೇ ? ಇಲ್ಲ ಇಲ್ಲ, ಮಾಣು. ಒಳಗಣ ಕೂಟ, ಹೊರಗಣ ಮಾಟವನರಿಯದೆ ಕೆಟ್ಟರು ನೋಡಾ ಹಿರಿಯರೆಲ್ಲರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಂದೆ ಕಂಬದ ನಡುವೆ ಹಲವು ಬಿದಿರುಗೂಡಿ, ಅಗಲಕ್ಕೆ ಹೊಲಬಾಯಿತ್ತು ನೋಡಾ. ಬಿಸಿಲ ಕಾಯದು, ಗಾಳಿಯ ತಡೆಯದು, ಮಳೆಗೆ ನೆನೆವುತ್ತಿದೆ ನೋಡಾ. ಈ ಸತ್ತಿಗೆಯ ಹರಕು ನಿಜಸತ್ಯವಾಗಿ, ಐಘಂಟೇಶ್ವರಲಿಂಗವನರಿದಲ್ಲದೆ ಸತ್ತಿಗೆಯ ಕಾವಿನ ಹಂಗು ಹರಿಯದು ನೋಡಾ.
--------------
ಸತ್ತಿಗೆ ಕಾಯಕದ ಮಾರಯ್ಯ
ಒತ್ತೆಯ ಸೂಳೆ[ಗೆ] ಒತ್ತೆಯ ತೋರುವಂತೆ, ಹೆತ್ತ ತಾಯಿಗೆ ಮಲತಾಯ ತೋರುವಂತೆ, ಸತ್ಯಕ್ಕೆ ಅಸತ್ಯವ ತೋರುವ ಭಕ್ತಿಹೀನ ತೊತ್ತುಗುಲವರಿದು ಸತ್ತಹಾಗೆ ಸುಮ್ಮನಿರಿರೆ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಒಡಲಡಗ ಮಚ್ಚಿದಾತನ ಅಚ್ಚಶರಣನೆಂಬೆ. ಮಡಿಲಡಗ ಮಚ್ಚಿದಾತನ ಅಚ್ಚಲಿಂಗವಂತನೆಂಬೆ. (ಈ ಒಡಲಡಗು ಮಡಿಲಡಗಿನೊಳಗೆ ಒಂದ ಮಚ್ಚದಿದ್ದರೆ ?) ಉತ್ಪತ್ತಿ ಪ್ರಳಯ ತಪ್ಪದು. ಶ್ರೀಗುರು ಮಹಾಲಿಂಗದಲ್ಲಿ ಒಡಲಡಗ ಮಚ್ಚಿ ಅಚ್ಚಭವಿಯಾದ ಶರಣನೊಬ್ಬನೆ_ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಒಂದನೆ ದೆಸೆಯಲ್ಲಿ ಒಂದು ಮುಖದ ಭೈರವನು. ಎರಡನೆಯ ದೆಸೆಯಲ್ಲಿ ಎರಡು ಮುಖದ ಭೈರವನು. ಮೂರನೆಯ ದೆಸೆಯಲ್ಲಿ ಮೂರು ಮುಖದ ಭೈರವನು. ನಾಲ್ಕನೆಯ ದೆಸೆಯಲ್ಲಿ ನಾಲ್ಕು ಮುಖದ ಭೈರವನು. ಐದನೆಯ ದೆಸೆಯಲ್ಲಿ ಐದು ಮುಖದ ಭೈರವನು. ಆರನೆಯ ದೆಸೆಯಲ್ಲಿ ಆರು ಮುಖದ ಭೈರವನು. ಏಳನೆಯ ದೆಸೆಯಲ್ಲಿ ಏಳು ಮುಖದ ಭೈರವನು. ಎಂಟನೆಯ ದೆಸೆಯಲ್ಲಿ ಎಂಟು ಮುಖದ ಭೈರವನು. ಇಂತಿರುವ ಅಷ್ಟಭೈರವರು ಹೊರಸುತ್ತಿನಲ್ಲಿ ಪಹರಿಕರು. ತುತ್ತರಸಿನವೆಂಬ ಚಕ್ರವು ಸುರಗಿಯಂದದಿ ಸುತ್ತಿ, ತೆರಹು ಇಲ್ಲವೆ ತಿರುಗುತ್ತಿಹುದು. ಅದು ಕಾಣಬಾರದಂತಿಹುದು ನೋಡಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಒಳ್ಳೆ ಪದಾರ್ಥಬಂದಡೆ ನೀಡೆಂಬಿರಿ, ಕೀಳುಪದಾರ್ಥಬಂದಡೆ ಬೇಡೆಂಬಿರಿ. ಕಮ್ಮಾದರೆ ನೀಡೆಂಬಿರಿ, ಆ ಪದಾರ್ಥ ಹೆಚ್ಚಾದರೆ ಪ್ರಸಾದ[ವೆಂದು] ಕೈಕೊಂಬಿರಿ. ಕಡ್ಡಿ ಹರಳು ಮೊದಲಾದ ಕಠಿನಪದಾರ್ಥ ಬಂದಡೆ, ಜಿಹ್ವೆಯಲ್ಲಿ ತೊಂಬಲವನಾರಿಸಿಬಿಡುವಿರಿ. ಮಕ್ಷಿಕ ಮೊದಲಾದ ಕ್ರಿಮಿಗಳು ಬಿದ್ದರೆ ಆರೂ ಅರಿಯದ ಹಾಗೆ ತೆಗೆದು ಸಿಪ್ಪದೆ ವರಸದೆ ಕದ್ದು ಚಲ್ಲುವಿರಿ. ಇಂತಪ್ಪ ಮೂಳಹೊಲೆಯರು ಪ್ರಸಾದಿಗಳೆಂದಡೆ ಪರಶಿವಪ್ರಸಾದಿಗಳಾದ ಶಿವಶರಣರು ಊರ ಸೂಳೆಯರ ಹಾಟಹೊಯಿಸಿ ತಲೆಯಬೋಳಿಸಿ ಪಟ್ಟಿಯ ತೆಗೆದು ಅವರ ಎಡಗಾಲಕೆರ್ಪಿನಿಂದ ಘಟ್ಟಿಸಿ ಮೂಡಲದಿಕ್ಕಿಗೆ ಅಟ್ಟಿದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಕ್ಕುದ ಮಿಕ್ಕುದನುಂಡು ಕಿವಿಕಿವಿದಾಡುವೆ. ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು, ಕೂಡಲಸಂಗನ ಶರಣರ ಮನೆಯ ಭಕ್ತಿಯ ಮರುಳ ನಾನು. 461
--------------
ಬಸವಣ್ಣ
ಒಳಗೊಂದು ಗಾಲಿ, ಹೊರಗೊಂದು ಗಾಲಿ ಎರಡಕ್ಕೆ ಹೂಡಿದುದೊಂದು ಹರಿಯಚ್ಚು, ಮೇಲೆ ಹಾಸಿದ ನೀಳ Zõ್ಞಕದ ಕುರುಗುಣಿಯ ಕೊಂಬಿಂಗೆ ಈಚೆರಡು. ಏಳು ಹುರಿಯ ಬಲುಮಿಣಿಯಿಂ ಆಳವನಿಕ್ಕಿದ ಕಾಮನ ನೊಗ. ಅರೆತ್ತು ಹೂಡಿ, ಹಾಸು ದಡಿಕೆ ಒಂದು, ಮೇಲು ದಡಿಕೆ ಎರಡು, ಒಂದು ದೊಡ್ಡದು, ಒಂದು ಚಿಕ್ಕದು, ಒಂದುರೆ ಚಿಕ್ಕದು, ಬಂಡಿಯ ಮೇಲೊಬ್ಬ ಮೊದಲೆತ್ತ ಹೊಡೆವ, ತಲೆಯಾರು ನಡುವಣಾರು ಹೊಡೆವರಿಬ್ಬರು. ಬಂಡಿ ನಡೆವ ಬಟ್ಟೆಯಯ್ದು, ತುಂಬಿದ ಭಂಡವೈದು, ಐದು ಬಟ್ಟೆಯಂ ತಪ್ಪಿಸಿ ಆರು ಬಟ್ಟೆಯಲಿ ನಡೆಸಿ, ಹೇರಿದ ಭಂಡವನೊಡೆಯಂಗೊಪ್ಪಿಸಲರಿಯದೆ, ಎಡೆಯ ಕಡಿದು ಭುಂಜಿಸಿ ಒಡೆಯಂಗೆ ದೂರಾಗಿ, ಬಹುಮುಖದ ದಂಡಣೆಗೊಳಗಾಗಿ ಬಹಳ ಮುಖದಲ್ಲಿ ಬಂದು, ಹೇರಡವಿಯ ಕಗ್ಗತ್ತಲಲ್ಲಿ ತೊಳಲಿ ಭ್ರಮಿಸುವ ಹೊಲಬರಿಯದೆ ಹೊಲಬುಗೆಟ್ಟ ಮಲಮಾಯಾದ್ಥಿಕರು ನಿಮ್ಮನೆತ್ತ ಬಲ್ಲರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾರಿ
--------------
ಉರಿಲಿಂಗಪೆದ್ದಿ
ಒಂದು, ಎರಡು, ಮೂರು, ನಾಲಕ್ಕು, ಅಯಿದು, ಆರು, ಏಳು, ಎಂಟು ಒಂಬತ್ತು, ಹತ್ತು, ಹನ್ನೊಂದು ಹನ್ನೆರಡು, ಹದಿಮೂರು, ಹದಿನಾಲಕ್ಕು, ಹದಿನೈದು, ಹದಿನಾರು, ಹದಿನೇಳು, ಹದಿನೆಂಟು, ಹತ್ತೊಂ¨ತ್ತು, ಇಪ್ಪತ್ತು, ಇಪ್ಪತ್ತೊಂದು, ಇಪ್ಪತ್ತೆರಡು, ಇಪ್ಪತ್ತಮೂರು, ಇಪ್ಪತ್ತನಾಲಕ್ಕು. ಇಪ್ಪತ್ತನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತನಾಲಕ್ಕು ಎಂದರೆ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ಯುದಿಷ್ಠಿರೋ ವಿಕ್ರ[ಮೋ]ಶಾಲಿವಾಹನ[ಃ] ತ[ಪಸಾ] ಧ್ರುವಶ್ಚ [ದಿವಿ]ಜರಾಜನಂದನಃ ನಾಗಾಂತಕೋ ಭೂಪತಿ [ಷಷ್ಠಮಃ] ಕಲಿಯುಗೇ ಷಟ್‍ಚಕ್ರವರ್ತಿ[ನಃ] ಈ ಆರು ಮಂದಿ ಕಲಿಯುಗದ ಚಕ್ರವರ್ತಿಗಳು. ಇಪ್ಪತ್ತಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತಮೂರು ಎಂದರೆ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ಯಯಾತಿ ನಹುಷ[ಶ್ಶಂತನುಃ] ಚಿತ್ರವೀರ್ಯಶ್ಚ ಪಾಂಡವಃ ರಾಜಾ ದುರ್ಯೋಧನ[ಶ್ಚೈ]ವ ದ್ವಾಪರೇ ಷ[ಟ್] ಚಕ್ರವರ್ತಿ[ನಃ] ಆ ಆರು ಮಂದಿ ದ್ವಾಪರದ ಚಕ್ರವರ್ತಿಗಳು. ಇಪ್ಪತ್ತೆರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತೆರಡು ಎಂದರೆ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ವೈವ[ಸ್ವ]ತೋ ದಿಲೀಪಶ್ಚ ರಘು ಚಕ್ರೇಶ್ವರೋ ಅ[ಜಃ] ದಶರಥೋ ರಾಮಚಂದ್ರ[ಶ್ಚ] ಷಡೈತೇ ಚಕ್ರವರ್ತಿ[ನಃ] ಈ ಆರು ಮಂದಿ ತ್ರೇತಾಯುಗದ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ಹರಿಶ್ಚಂ[ದ್ರೋ] ನ[ಳ]ರಾಜ[ಃ] ಪುರುಕು[ತ್ಸ]ಶ್ಚ ಪುರೂರವಃ ಸಗರಃ ಕಾರ್ತವೀರ್ಯಶ್ಚ ಷಡೈತೇ ಚಕ್ರವರ್ತಿ[ನಃ] ಈ ಆರು ಮಂದಿ ಕೃತಯುಗದ ಚಕ್ರವರ್ತಿಗಳು. ಅಂತೂ ಇಪ್ಪತ್ತನಾಲ್ಕು ಮಂದಿ ಚಕ್ರವರ್ತಿಗಳು. ಇಪ್ಪತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತು ಎಂದರೆ ಪ್ರಪಂಚ ನಿರ್ಮಾಣ ಸಹಾಯ[ದ]ವರು. ಅದು ಎಂತೆಂದಡೆ: ಆಂಗೀರಸ, ಪುಲಸ್ತ್ಯ, ಪುಲಹ, ಶಾಂತ, ದಕ್ಷ, ವಸಿಷ್ಠ, ವಾಮದೇವ, ನವಬ್ರಹ್ಮ, ಕೌಶಿಕ, ಶೌನಕ, ಸ್ವಯಂಭು, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷಷ, ವೈವಸ್ವತ, ಸೂರ್ಯಸಾವರ್ಣಿ, ಚಂದ್ರಸಾವರ್ಣಿ, ಬ್ರಹ್ಮಸಾವರ್ಣಿ, ಇಂದ್ರ ಸಾವರ್ಣಿ ಇವರು ಇಪ್ಪತ್ತು ಮಂದಿ ಪ್ರಪಂಚ ನಿರ್ಮಾಣ ಸಹಾಯ[ದ]ವರು. ಹತ್ತೊಂಬತ್ತು ಎಂದರೆ ಪುಣ್ಯನದಿಗಳು. ಅದು ಎಂತೆಂದಡೆ: ಗ್ರಂಥ || ಗಂಗಾ ಪುಷ್ಕ[ರಿಣೀ] ನರ್ಮದಾ ಚ ಯಮುನಾ ಗೋದಾವರೀ ಗೋಮತೀ ಗಂಗಾದ್ವಾರ ಗಯಾ ಪ್ರಯಾಗ ಬದರೀ ವಾರಾಣಸೀ ಸೈಯಿಂಧವೀ ಇವು ಹತ್ತೊಂಬತ್ತು ಪುಣ್ಯನದಿಗಳು. ಹದಿನೆಂಟು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನೆಂಟು ಎಂದರೆ.......... ಅದು ಎಂತೆಂದಡೆ: ........................... ಹದಿನೇಳು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನೇಳು ಎಂದರೆ................. ಅದು ಎಂತೆಂದಡೆ: .................... ಹದಿನಾರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನಾರು ಎಂದರೆ [ಅ]ರಸುಗಳು ಅದು ಎಂತೆಂದಡೆ: ಗ್ರಂಥ || ಗಯಾಂಬರೀ[ಷ] ಶ[ಶ]ಬಿಂದುರಂಗದೋ ಪೃಥು[ರ್ಮ]ರು[ತ್] ಭರತ[ಸ್ಸು]ಹೋತ್ರಃ ರಾಮೋ ದಿಲೀಪೋ ಸಗರ ರಂತಿ ರಾಮ[ಃ] ಯಯಾತಿ ಮಾಂಧಾತ ಭಗೀರಥ[ಶ್ಚ] ಎಂದುದಾಗಿ, ಗಯ, ಅಂಬರೀಷ, ಶಶಬಿಂದು, ಪೃಥು, ಮರುತ್, ಭರತ, ಸುಹೋತ್ರ, ಪರಶುರಾಮ, ದಿಲೀಪ, ಸಗರ, ರಂತಿ, ರಾಮಚಂದ್ರ, ಯಯಾತಿ, ಮಾಂಧಾತ, ಭಗೀರಥ, ಅ[ಂಗದ] ಇವರು ಹದಿನಾರು ಮಂದಿ ಅರಸುಗಳು. ಹದಿನೈದು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನೈದು ಎಂದರೆ ತಿಥಿಗಳು. ಅದು ಎಂತೆಂದಡೆ: ಪಾಡ್ಯ, ಬಿದಿಗೆ, ತದಿಗೆ, ಚವುತಿ, [ಪಂಚಮಿ], ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಅಮಾವಾಸ್ಯೆ ಇವು ಹದಿನೈದು ತಿಥಿಗಳು. ಹದಿನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನಾಲಕ್ಕು ಎಂದರೆ ಲೋಕಂಗಳು. ಅದು ಎಂತೆಂದಡೆ: ಅತಲ ವಿತಲ ಸುತಲ ತಲಾತಲ ಮಹಾತಲ ರಸಾತಲ ಪಾತಾಳ ಭೂಲೋಕ ಭುವರ್ಲೋಕ ಸುರ್ವರ್ಲೋಕ ಮಹರ್ಲೋಕ ತಪೋಲೋಕ ಜನೋಲೋಕ ಸತ್ಯಲೋಕ ಇವು ಹದಿನಾಲ್ಕು ಲೋಕಂಗಳು. ಹದಿಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೆನಪ್ಪ ? ಹದಿಮೂರು ಎಂದರೆ ಚಕ್ರಂಗಳು. ಅದು ಎಂತೆಂದಡೆ, ಆಧಾರಚಕ್ರ, ಸ್ವಾಷ್ಠಾನಚಕ್ರ, ಮಣಿಪೂರಕಚಕ್ರ, ಅನಾಹಚಕ್ರ, ವಿಶುದ್ಧಿಚಕ್ರ, ಆಜ್ಞಾಚಕ್ರ, ಶಿಖಾಚಕ್ರ, ಬ್ರಹ್ಮಚಕ್ರ, ಘಟಚಕ್ರ, ಕಾಲಚಕ್ರ, ಮೇಘಚಕ್ರ, ಭೂಚಕ್ರ, ಅವಗಡಚಕ್ರ ಇವು ಹದಿಮೂರು ಚಕ್ರಂಗಳು. ಹನ್ನೆರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹನ್ನೆರಡು ಎಂದರೆ ಮಾಸಂಗಳು. ಅದು ಎಂತೆಂದರೆ, ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವೀಜ, ಕಾರ್ತೀಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಇವು ಹನ್ನೆರಡು ಮಾಸಂಗಳು. ಹನ್ನೊಂದು ಎಂದರೆ ನೋಡಿದ್ದೇನಪ್ಪ ? ಕೇಳಿದ್ದೇನಪ್ಪ ? ಹನ್ನೊಂದು ಎಂದರೆ ಭಾರತಂಗಳು. ಅದು ಎಂತೆಂದಡೆ: ಆದಿಭಾರತ, ಕೈಲಾಸಭಾರತ, ಶ್ರೀರುದ್ರಭಾರತ, ನಂದಿಭಾರತ, ನಾರ[ದ]ಭಾರ[ತ], ಭೃಗುಭಾರತ, ಮನುಭಾರತ, ಉಮಾಭಾರತ, ಪ್ರಸಿದ್ಧಭಾರತ, ಸಿದ್ಧೋರಗಭಾರತ, ಶ್ರೀರಂಗಭಾರತ ಇವು ಹನ್ನೊಂದು ಭಾರತಂಗಳು. ಹತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹತ್ತು ಎಂದರೆ, ದಶಾವತಾರಂಗಳು. ಅದು ಎಂತೆಂದರೆ, ಗ್ರಂಥ || ಮತ್ಸ್ಯಃ ಕೂರ್ಮಃ ವರಾಹಶ್ಚ ನಾರಸಿಂಹಶ್ಚ ವಾಮನಃ ರಾಮೋ ರಾಮಶ್ಚ [ಕೃಷ್ಣ]ಶ್ಚ ಬೌದ್ಧಃ ಕಲ್ಕಿ[ರೇ]ವ ಚ ಎಂದುದಾಗಿ, ಈ ದಶಾವತಾರಂಗಳಲ್ಲಿ ಯಾರಾರು ಸಂಹಾರ ಎಂದರೆ, ಮತ್ಯ್ಸಾವತಾರದಲ್ಲಿ ಅಮೃತಮಥನೇ ಸೋಮಕಾಸುರನ ಸಂಹಾರ. ಕೂರ್ಮಾವತಾರದಲ್ಲಿ ಮಂದರಪರ್ವತಕ್ಕೆ ಆಧಾರ. ವರಾಹಾವತಾರದಲ್ಲಿ ಹಿರಣ್ಯಾಕ್ಷನ ಸಂಹಾರ. ನರಸಿಂಹಾವತಾರದಲ್ಲಿ ಹಿರಣ್ಯಕಶ್ಯಪ ಸಂಹಾರ. ವಾಮನಾವತಾರದಲ್ಲಿ ಪಂಚಮೇಢ್ರಾಸುರ ಎಂಬ ರಾಕ್ಷಸನ ಸಂಹಾರ. ಪರಶುರಾಮಾವತಾರದಲ್ಲಿ ಕಾರ್ತವೀರ್ಯರ ಸಂಹಾರ. ರಫ್ಸುರಾಮಾವತಾರದಲ್ಲಿ ರಾವಣಕುಂಭಕರ್ಣರ ಸಂಹಾರ. 1ಬಲಭದ್ರ1 ನವತಾರದಲ್ಲಿ ಪ್ರಲಂಬಕವಾದ ಅಸುರರ ಸಂಹಾರ. ಬೌದ್ಧಾವತಾರದಲ್ಲಿ ತ್ರಿಪುರದಾನವಸತಿಯರ ಕೆಡಿಸಿದ. ಕಲ್ಕ್ಯವತಾರದಲ್ಲಿ 2ಕಂಸಾಸುರ, ನರಕಾಸುರ, ಬಾಣಾಸುರರ2 ಸಂಹಾರ, ಇವು ಹತ್ತು ದಶಾವತಾರಗಳು. ಒಂಬತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಒಂಬತ್ತು ಎಂದರೆ ನವಗ್ರಹಂಗಳು. ಅದು ಎಂತೆಂದರೆ: ಆದಿತ್ಯ, ಸೋಮ, ಮಂಗಳ, ಬುಧ, ಬೃಹಸ್ಪತಿ, ಶುಕ್ರ, ಶನಿ, ರಾಹು, ಕೇತು- ಇವು ಒಂಬತ್ತು ನವಗ್ರಹಂಗಳು. ಎಂಟು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ? ಎಂಟು ಎಂದರೆ ಅಷ್ಟದಿಕ್ಪಾಲಕರು. ಅದು ಎಂತೆಂದರೆ: ಇಂದ್ರ, ಅಗ್ನಿ, ಯಮ, ನೈರುತಿ, ವರುಣ, ವಾಯುವ್ಯ, ಕುಬೇರ, ಈಶಾನ್ಯ- ಎಂಟು ಮಂದಿ ಅಷ್ಟದಿಕ್ಪಾಲಕರು. ಏಳು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ? ಏಳು ಎಂದರೆ ಸಪ್ತಋಷಿಗಳು. ಅದು ಎಂತೆಂದರೆ: ಗ್ರಂಥ || ಕಶ್ಯಪಾತ್ರಿ ಭರದ್ವಾಜ[ಃ] ವಿಶ್ವಾಮಿ[ತ್ರಶ್ಚ] ಗೌತಮ[ಃ] ಜಮದಗ್ನಿ[ಃ] ವಸಿಷ್ಠ[ಶ್ಚ] ಸಪ್ತೈತೇ ಋಷಯ[ಃ ಸ್ಮøತಾಃ] ಎಂದುದಾಗಿ, ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ- ಇವರು ಏಳುಮಂದಿ ಸಪ್ತ ಋಷಿಗಳು. ಆರು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ? ಆರು ಎಂದರೆ ಶಾಸತ್ತ್ರಂಗಳು. ಅದು ಎಂತೆಂದರೆ: ಶಿಲ್ಪಶಾಸ್ತ್ರ, ಭರತಶಾಸ್ತ್ರ, ತರ್ಕಶಾಸ್ತ್ರ, ಶಬ್ದಶಾಸ್ತ್ರ, ಆ[ನ್ವೀಕ್ಷಕೀ]ಶಾಸ್ತ್ರ, ಜ್ಯೋತಿಷ್ಯಶಾಸ್ತ್ರ- ಇವು ಆರು ಶಾಸ್ತ್ರಂಗಳು. ಐದು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಐದು ಎಂದರೆ ಈಶ್ವರನ ಪಂಚ ಮುಖಂಗಳು ಅದು ಎಂತೆಂದರೆ, ಗ್ರಂಥ || ಸದ್ಯೋಜಾ[ತೋ]ದ್ಭವೋರ್ಭೂಮಿಃ] ವಾಮದೇವೋದ್ಭ[ವಂ ಜಲಂ] ಅಫ್ಸೋ[ರಾದ್ವಹ್ನಿ]ರು[ದ್ಭೂತಂ] ತತ್ಪರು[ಷಾದ್ವಾಯುರ್ಭವೇತ್ ಈಶಾನಾದ್ಗಗನಂ ಜಾತಂ] ಎಂದುದಾಗಿ, ಸದ್ಯೋಜಾತಮುಖ, ವಾಮದೇವಮುಖ, ಅಘೋರಮುಖ, ತತ್ಪುರುಷಮುಖ, ಈಶಾನ್ಯಮುಖ- ಇವು ಐದು ಪಂಚಮುಖಂಗಳು. ನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ನಾಲಕ್ಕು ಎಂದರೆ ವೇದಂಗಳು. ಅದು ಎಂತೆಂದರೆ: ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ- ಇವು ನಾಲ್ಕು ವೇದಂಗಳು. ಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಮೂರು ಎಂದರೆ ತ್ರಿಮೂರ್ತಿಗಳು. ಅದು ಎಂತೆಂದರೆ: ಬ್ರಹ್ಮ, ವಿಷ್ಣು, ಈಶ್ವರ- ಇವರು ಮೂವರು ತ್ರಿಮೂರ್ತಿಗಳು. ಎರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಎರಡು ಎಂದರೆ ಭಾನು ಶಶಿ. ಅದು ಎಂತೆಂದರೆ: ಸೂರ್ಯ, ಚಂದ್ರ- ಇವರಿಬ್ಬರು ಸೂರ್ಯಚಂದ್ರಾದಿಗಳು. ಒಂದು ಎಂದರೆ ನೋಡಿದ್ದೆನಪ್ಪ ಕೇಳಿದ್ದೇನಪ್ಪ ? ಒಂದು ಎಂದರೆ ಏಕೋ[ಏವ]ದೇವಃ ಅದು ಎಂತೆಂದರೆ: ದೇವನು ಒಬ್ಬನೇ. ದೇವನು] ಒಬ್ಬನೇ ಅಲ್ಲದೆ ಇಬ್ಬರೆಂದು ಬಗುಳುವನ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ, ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ ! 26
--------------
ಬಸವಣ್ಣ
ಒಳಗರಿದ ಭಕ್ತನ ಒಳಗಾದ ಲಿಂಗವು ಒಳಗಾದ ಲಿಂಗದೊಳಗಾದ ಭಕ್ತನ ಹೊರಗಾದ ಲಿಂಗವ ಒಳಗೆ ತಂದಿರಿಸಿ ಆ ಭಕ್ತನ ತನುವಿನ ವಳೆಯವನಿನ್ನೇನ ಹೇಳುವೆ! ರಾಮನಾಥ.
--------------
ಜೇಡರ ದಾಸಿಮಯ್ಯ

ಇನ್ನಷ್ಟು ...
-->