ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಜಲ ನೆಲ ಅನಲ ಅನಿಲ ಮಿಕ್ಕಾದ ದೃಷ್ಟಂಗಳೆಲ್ಲವನೂ ನಿರೀಕ್ಷಿಸಿ ಸಾದ್ಥಿಸಿಕೊಂಡು ಶ್ರುತ ದೃಷ್ಟ ಅನುಮಾನಂಗಳಲ್ಲಿ ತಿಳಿದು, ಹಿಂದಣ ಮುಂದಣ ಸಂದೇಹವ ಹರಿದು ಮುಟ್ಟೂದು ಘಟಕ್ರಿಯಾಭೇದ ಮನಕ್ಕೆ ಮನೋಹರ ಸಂಕೇಶ್ವರ ಲಿಂಗವನರಿವುದಕ್ಕೆ.
--------------
ಕರುಳ ಕೇತಯ್ಯ
ಜಗವನೊಳಕೊಂಡ ಲಿಂಗವು ಸೊಗಸಿಂದೆ ಎನ್ನ ಕರಸ್ಥಲಕ್ಕೆ ಬಂದಿರಲು, ಕಂಡು ಹಗರಣವಾಯಿತ್ತೆನಗೆ. ಗುರುಲಿಂಗಜಂಗಮಸ್ವರೂಪವಾಗಿ ಮೂರ್ತಿಗೊಂಡಿತ್ತು ನೋಡಾ. ಆಹಾ ಎನ್ನ ಪುಣ್ಯವೇ ! ಆಹಾ ಎನ್ನ ಭಾಗ್ಯವೇ ! ಆಹಾ ಅಖಂಡೇಶ್ವರಾ, ನಿಮ್ಮ ಘನವ ಕಂಡು ಎನ್ನ ಮನಕ್ಕೆ ಮಂಗಳವಾಯಿತ್ತು ನೋಡಾ.
--------------
ಷಣ್ಮುಖಸ್ವಾಮಿ
ಜಾÕನನೇತ್ರ ಮುಸುಕ ತೆಗೆದು ಮುಂದಕ್ಕೆ ಅದೇನ ಕಾಬುದು? ಕಾಬುದು ಕಾಣಿಸಿಕೊಂಬುದು ನಿಜ ತಾನಾದಲ್ಲಿ ಗೋಪತಿನಾಥ ವಿಶ್ವೇಶ್ವರಲಿಂಗವು ಉಭಯನಾಮವಿಲ್ಲ.
--------------
ತುರುಗಾಹಿ ರಾಮಣ್ಣ
ಜಲಮಣಿಯ ಬೆಗಡವನಿಕ್ಕಬಹುದೆ ? ಬಯಲ ಬಂದ್ಥಿಸಬಹುದೆ ? ಒಲುಮೆಯ ರಸಿಕಕ್ಕೆ ಸಲೆ ನಿಳಯವುಂಟೆ ? ಇದು ಸುಲಲಿತ, ಇದರ ಒಲುಮೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ: ಜಾತಿ ಘನವೊ ಗುರುದೀಕ್ಷೆ ಘನವೊ ? ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ ಗುರುದೀಕ್ಷೆ ಪಡೆದು, ಗುರುಕರಜಾತರಾಗಿ ಜಾತಕವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ ? ಜಾತಿವಿಡಿದು ಕಳೆಯಿತ್ತೆ ಜಾತಿತಮವು ? ಅಜಾತಂಗೆ ಆವುದು ಕುಲಳ ಆವ ಕುಲವಾದಡೇನು ದೇವನೊಲಿದಾತನೆ ಕುಲಜ. ಅದೆಂತೆಂದಡೆ; ದೀಯತೇ ಜಾÕನಸಂಬಂಧಃ ಕ್ಷೀಯತೇ ಚ ಮಲತ್ರಯಂ ದೀಯತೇ ಕ್ಷೀಯತೇ ಯೇನ ಸಾ ದೀಕ್ಷೇತಿ ನಿಗದ್ಯತೇ ಎಂಬುದನರಿದು, ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು ಅವನೊಡಗೂಡಿಕೊಂಡು ನಡೆದು ಜಾತಿ ಎಂಜಲುಗಳ್ಳರಾಗಿ ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ ಹಂದಿ-ನಾಯಂತೆ ಒಡಲ ಹೊರೆವ ದರುಶನಜಂಗುಳಿಗಳು ಜಂಗಮಪಥಕ್ಕೆ ಸಲ್ಲರಾಗಿ. ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ, ಜಂಗಮವಿಲ್ಲ ಜಂಗಮಪ್ರಸಾದವಿಲ್ಲ. ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗ? ಸ್ವಯ-ಚರ-ಪರವೆಂದಾರಾಧಿಸಿ ಪ್ರಸಾದವ ಕೊಳಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ, ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ. ಈ ಮಾಯೆಯ ಕಳೆವಡೆ ಎನ್ನಳವಲ್ಲ, ನೀವೆ ಬಲ್ಲಿರಿ ಕೂಡಲಸಂಗಮದೇವಾ ! 15
--------------
ಬಸವಣ್ಣ
ಜಗದಗಲದ ಗದ್ಗುಗೆಗಳಿಗೆ ಅಪ್ರಮಾಣದ ಲಿಂಗಪ್ರತಿಷ್ಠೆಯ ಮಾಡಿದರು ನೋಡಾ. ಅದಕ್ಕೆ ತೊಂಬತ್ತಾರಂಗುಲ ಪ್ರಮಾಣಿನ ದೇಗುಲ ನೋಡಾ. ನಾಲ್ಕೈದು ಬಾಗಿಲು ನೋಡಾ. ಬೇರೊಂದು ಬಾಗಿಲು ಮುಚ್ಚಿ ಮುಸುಕಿಹುದು. ದಶಮದ್ವಾರವ ನೆರೆಹೆವೆಂದು ಬಾಗಿಲ ಮುಚ್ಚಹೋದಡೆ ತೆಗೆವವು. ತೆಗೆಯಹೋದಡೆ ಮುಚ್ಚುವವು ನೋಡಾ. ಈ ವರ್ಮಸಕೀಲವನರಿಯದೆ ಅತಿರಥರು ಮಹಾರಥರು ತೊಳಲಿ ಬಳಲುತೈದಾರೆ. ವೀರದ್ಥೀರಸುಭಟರುಗಳೆಲ್ಲಾ ಹೇಡಿಬಳೆಯಂ ತೊಟ್ಟು ಹೆಣ್ಣಾಗಿ ಹೋದರು. ಅರುಹಿರಿಯರೆಲ್ಲಾ ಮರುಳಾಗಿ ಮತಿಗೆಟ್ಟು ಹೋದರು. ಇದನಾರಯ್ಯಾ ಬಲ್ಲವರು ? ನೀವಿಕ್ಕಿದ ಕದವ ತೆಗೆಯಬಲ್ಲವರಾರೊ ಅಯ್ಯಾ ! ತೆಗೆಯದ ಕದವನಿಕ್ಕಬಲ್ಲವರಾರೊ ಅಯ್ಯಾ ! ಪದಪಂಕದಲ್ಲಿನ ದ್ವಾರಮಂ ಕಾಯ್ದಿಪ್ಪ ದಿಟ್ಟಿಯ ಕಡೆಗಣ್ಣಿನ ಬೆಳಗಿನೊಳಗಾಡುವ ಅವ್ಯಯ ಹರಿಬ್ರಹ್ಮಾದಿಗಳು ಮೊದಲಾದ ಸಚರಾಚರದವರನೆಲ್ಲ ನುಂಗಿತ್ತು ನೋಡಾ. ಇದನಾರಿಗೂ ಅರಿಯಬಾರದು ನೋಡಾ. ನೀವಿದ್ದಲ್ಲಿ ಇಲ್ಲದಿಪ್ಪ ಶರಣರಿಗಲ್ಲದೆ ಇದರ ಭೇದವ ಬಲ್ಲವ ಅಲ್ಲಮನು. ಕಾಮನ ಕಣ್ಣಿಗೆ ಮುಳ್ಳಬೆಟ್ಟದೊಡನೆ ಮುಟ್ಟದ ಕದವು ತೆಗೆದವು. ತೆಗೆದಿದ್ದ ಬಾಗಿಲು ತಮತಮಗೆ ಮುಚ್ಚಿದವು ನೋಡಾ. ಹೂಗಲ್ಲಿಗೆ ಕಿಚ್ಚನಿಕ್ಕಿ ಆ ಬಾಗಿಲ ಕಾಯ್ದಿಪ್ಪವಳ ಮೂಗ ಮೊಲೆಯ ಕೊಯ್ದು, ಸಾಗರದ ಕಟ್ಟೆಯ ಒಡೆದು, ದಶಮ ದ್ವಾರದಲ್ಲಿ ನಿಂದು, ನಿಮ್ಮ ಹೊತ್ತಿರ್ಪವಳ ನೆತ್ತಿಗಣ್ಣಿಂದ ತೆಗೆದು ನೋಡಿ, ಏಕಾದಶದ್ವಾರದ ಸೂತ್ರ ಸೂಕ್ಷ್ಮವಿನ್ನು ಮಹಾಬೆಳಗಿನೊಳಗೆ ಸಾಸಿವೆಯ ಛಿದ್ರವ ಮಾಡಿ ಕುಂಬಳದ ಕಾಯ ಕೀಲಕೊಟ್ಟಂತೆಯಿಪ್ಪ ನಿಜಗುರು ಭೋಗೇಶ್ವರ ನಿಮ್ಮ ಇರವು, ಪ್ರಭುವಿನ ಕರುಣವುಳ್ಳ ಲಿಂಗಾಂಗಿಗಳಿಗಲ್ಲದೆ ವಾಗದ್ವೈತದಿಂದ ಒಡಲ ಹೊರೆವ ಬಹುಭಾಷಿಗಳಿಗೆಂತು ಸಾಧ್ಯವಪ್ಪುದೊ ?
--------------
ಭೋಗಣ್ಣ
ಜ್ಞಾನವನರಿದೆನೆಂದು ಕಾಯವ ದಂಡಿಸಲೇಕೆ ? ನಾನೆಲ್ಲವನರಿದೆನೆಂದು ಸೊಲ್ಲು ಸೊಲ್ಲಿಗೆ ಹೋರಲೇಕೆ ? ನಾನೆಲ್ಲವ ಕಳೆದುಳಿದೆನೆಂದು ಅಲ್ಲಲ್ಲಿಗೆ ಹೊಕ್ಕು, ಬಲ್ಲೆನೆಂದು ಕಲ್ಲಿಗೆ ಸನ್ನೆಯ ಕೊಡುವನಲ್ಲಿರುವನಂತೆ, ಇಂತಿವರ ಬಲ್ಲತನ ಬರುಸೂರೆಹೋಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಂಗಮದ ಮುಂದಿಟ್ಟು ಕೊಟ್ಟು ಕೊಂಡೆಹೆನೆಂಬ ಸರ್ವಸಮಯಾಚಾರ ಸಂಪತ್ತಿನಿರವು: ಮಜ್ಜನ ಭೋಜನ ಅಂದಳ ಛತ್ರ ಚಾಮರ ಕರಿ ತುರಗ ದರ್ಪಣ ಹಲುಕಡ್ಡಿ ನಖಚಣ ಪರಿಮಳ ಗಂಧ ಮೆಟ್ಟಡಿ ತಾಂಬೂಲ ರತ್ನಾಭರಣ ಮೆತ್ತೆ ಶಯನ ಸ್ತ್ರೀಸಂಸರ್ಗ ಒಡೆಯಂಗೆ ಆಯಿತ್ತೆಂಬುದ ಕೇಳಿ, ಆ ಒಡೆಯನ ವಾಚಾಪ್ರಸಾದದಿಂದ ಮಹಾಪ್ರಸಾದವೆಂದು ತನ್ನ ಸ್ವಸ್ತ್ರೀಗೆ ಕೂಟಸ್ಥನಾಗಬೇಕು. ಇಂತೀ ಭಾವ ಸರ್ವಸಮಯಾಚಾರ. ಈ ವರ್ತಕದಂಗ ನಿಂದಾತನ ಸಂಗ, ಏಲೇಶ್ವರದಂಗ ಉಮೇಶ್ವರಲಿಂಗವು ಆ ಭಕ್ತನಂಗ.
--------------
ಏಲೇಶ್ವರ ಕೇತಯ್ಯ
ಜಪತಪ ನೇಮವಲ್ಲ, ಮಂತ್ರತಂತ್ರ ನೇಮವಲ್ಲ, ಧೂಪದೀಪಾರತಿ ನೇಮವಲ್ಲ, ಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ. ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲಿದ್ದ ಕಾರಣ ನಿತ್ಯನೇಮ.
--------------
ಆದಯ್ಯ
ಜಂಗಮವೆ ಗುರು, ಜಂಗಮವೆ ಲಿಂಗ, ಜಂಗಮವೆ ಪ್ರಾಣವೆಂದಡೆ, ಇಲ್ಲವೆಂಬ ಅಂಗಹೀನರಿರಾ, ನೀವು ಕೇಳಿರೊ. ಜಂಗಮವು ಗುರುವಲ್ಲದಿದ್ದಡೆ, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವ ಹಿಂಗಿಸುವನೆ ? ಜಂಗಮವು ಲಿಂಗವಲ್ಲದಿದ್ದಡೆ, ಪ್ರಾಣಲಿಂಗವ ತೋರುವನೆ ? ಜಂಗಮವು ಪ್ರಾಣವಲ್ಲದಿದ್ದಡೆ, ಪ್ರಾಣಕ್ಕೆ ಪ್ರಸಾದವನೂಡುವನೆ ? ಇದ ಕಂಡು ಕಾಣೆನೆಂಬ ಭಂಗಿತರ ನುಡಿಯ ಮೆಚ್ಚರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಜ್ಞಾನ ಸದ್ಭಕ್ತಿ ಸನ್ನಹಿತವಾಗಿ, ಲಿಂಗ ಮುಂತಾಗಿ ಮಾಡಿದ ಕ್ರೀ ಲಿಂಗಕ್ರೀ. ಧ್ಯಾನ ಪೂಜೆ ಭಕ್ತಿಯರ್ಪಿತ ಪ್ರಸಾದ ಮುಕ್ತಿ- ಇವೆಲ್ಲವು ತನ್ನೊಳಗೆ, ಅಜ್ಞಾನ ಅಭಕ್ತಿ ಮರವೆ ಮುಂತಾದ ಕ್ರೀ ಅಂಗಕ್ರೀ, ಅದು ಹೊರಗು. ಇದು ಕಾರಣ, ಜ್ಞಾನ ಸದ್ಭಕ್ತಿ ಸನ್ನಹಿತವಾದುದೆ ಮುಕ್ತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಜಂಗಮವೇನು ಕಾಮಿಯೇ? ಕ್ರೋದ್ಥಿಯೇ? ಲೋಬ್ಥಿಯೇ? ಅಲ್ಲ ಕಾಣಿರಣ್ಣ. ಮೋಹಿಯೇ? ಮದಡನೇ? ಮತ್ಸರನೇ? ಅಲ್ಲ ಕಾಣಿರಣ್ಣ. ಅಹಂಕಾರಿಯೇ ಮಮಕಾರಿಯೇ ಪ್ರಪಂಚಿಯೇ? ಇಂತೀ ಪ್ರಕೃತಿರೂಪನಲ್ಲ ಕಾಣಿರಣ್ಣ. ನಿಃಕಾಮಿ, ನಿಃಕ್ರೋದ್ಥಿ, ನಿರ್ಲೋಬ್ಥಿ, ನಿರ್ಮೋಹಿ, ನಿರ್ಮದ, ನಿರ್ಮತ್ಸರನಯ್ಯ. ನಿರಹಂಕಾರಿ, ನಿರ್ಮಮಕಾರಿ, ನಿಃಪ್ರಪಂಚಿ, ನಿರ್ಲೇಪಕನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜ್ಞಾನದ ಉಬ್ಬು ಕೊಬ್ಬಿನಲ್ಲಿ ನುಡಿವುತ್ತಿಪ್ಪರೆಲ್ಲರ (ಉಲಿವುತ್ತಿಪ್ಪರೆಲ್ಲರ ?); ನಾಮ ನಾಸ್ತಿಯಾಗದು, ತನುಗುಣ ನಾಸ್ತಿಯಾಗದು, ಕರಣಾದಿಗುಣಂಗಳು ನಾಸ್ತಿಯಾಗವು, ಕರಸ್ಥಲವು ನಾಸ್ತಿಯಾಗದು. ಇದೆತ್ತಣ ಉಲುಹೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಜಗದೊಳಹೊರಗೆಲ್ಲ ತೆರಹಿಲ್ಲದೆ ಸಂಭ್ರಮಿಸಿ ತುಂಬಿಕೊಂಡಿರ್ಪ ಪರವಸ್ತುವ ಆಹ್ವಾನಿಸಿ ಕರೆದು ವಿಸರ್ಜಿಸಿ ಬಿಡುವುದಕ್ಕೆ ಇಂಬುಂಟೇನೋ ಮರುಳೆ ? ಇಂತೀ ಅಖಂಡ ಪರಿಪೂರ್ಣವಾದ ಪರಬ್ರಹ್ಮದ ನಿಲವನರಿಯದೆ ಖಂಡಿತಬುದ್ಧಿಯಿಂದ ಕಲ್ಪಿಸಿ ಪೂಜಿಸಿ ಕರ್ಮದ ಬಲೆಯಲ್ಲಿ ಸಿಲ್ಕಿ ಕಾಲಂಗೆ ಗುರಿಯಾಗಿ ಹೋದವರ ಕಂಡು ಬೆರಗಾದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ

ಇನ್ನಷ್ಟು ...
-->