ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಓಂಕಾರವೇ ನಾದಮಯ. ಓಂಕಾರವೇ ಮಂತ್ರಮಯ. ಓಂಕಾರವೇ ಪರಿಪೂರ್ಣವಾಗಿ ಸರ್ವವ್ಯಾಪಕತ್ವವನ್ನುಳ್ಳುದು ನೋಡಾ. ಪ್ರಣವವೇ ಪರಮಾತ್ಮ ಸ್ವರೂಪವಾಗಿ ಪರಮೇಶ್ವರನ ಗೌಪ್ಯಮುಖ ನೋಡಾ. ಪ್ರಣವವೆ ಶಿವಶರಣರ ಹೃದಯಾದ್ಥಿಪತಿ ಇದು ಕಾರಣ, ಹೃದಯಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವಧ್ಯಾನದಲ್ಲಿ ತರಹರವಾಗಿ ಪ್ರಣವಸ್ವರೂಪನಾಗಿದ್ದೆನಯ್ಯ. ಪಂಚಾಕ್ಷರವೆ ಪಂಚಬ್ರಹ್ಮಮಯವಾಗಿ ಆ ಪಂಚಾಕ್ಷರಿಮಂತ್ರವೆ ಶರೀರವಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಓಡ ಕುದುರೆಯ ಮೇಲೆ ಮಸಿಯ ಹಲ್ಲಣವ ಹಾಕಿ, ಬಸಲೆಯ ಹಂಬ ಬಾಯಿಗೆ ಕಟ್ಟಿ, ದೆಸೆವರಿವ ಅಸುರಾವುತ ಚೊಲ್ಲೆಹದ ಬಲ್ಲೆಹವ ಹಿಡಿದು, ಮುಗುಳುನಗೆಯವಳಲ್ಲಿ ಏರಿ ತಿವಿದ. ಚೊಲ್ಲೆಹದ ಬಲ್ಲೆಹ ಮುರಿದು, ಓಡಿನ ಕುದುರೆ ಒಡೆದು, ಮಸಿಯ ಹಲ್ಲಣ ನುಗ್ಗುನುಸಿಯಾಗಿ, ಬಸಲೆಯ ಬಾಯಕಟ್ಟು ಹರಿದು, ಅಸುರಾವುತ ಅವಳ ಕಿಸಲೆಯ ರಸಕ್ಕೊಳಗಾದ. ಅದೇತರಿಂದ ಹಾಗಾದನೆಂಬುದ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಓಂ ನಮಃ ಶಿವಾಯಯೆಂಬುದನರಿಯದೆ ಜಗವೆಲ್ಲವು ನಾಯಾ[ಯಿತ್ತು] ತಮ್ಮ ತಾವರಿಯದವರಿಗೆ, ಇನ್ನು ಹೇಳಿ ಕೇಳಿದಂತೆ ಆಚರಿಸದಿರ್ದಡೆ ಆ ನಾಯ ಸಾವು ತಪ್ಪದು. ಇನ್ನೆತ್ತಣ ಮುಕ್ತಿ ? ಅವರಿಗೆ ಭೋಧಿಸಿದ್ದಾನಗದುಫ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಓಂಕಾರವೆಂಬ ಉಲುಹಿನಲ್ಲಿ ಪ್ರಣವಸೋಹಂಕಾರವಿಡಿದು ಆಚರಿಸುತಿದ್ದನಯ್ಯ ಆ ಶರಣನು. ಆ ಶರಣಂಗೆ ಇಹಲೋಕವೆಂದಡೇನು? ಪರಲೋಕವೆಂದಡೇನು? ಇಹಪರವನೊಳಕೊಂಡು ತಾನು ತಾನಾದ ಭೇದವ ತಾನೇ ಬಲ್ಲನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಗರವಿಲ್ಲದಿರ್ದಡೆ ಓಂ ನಮಃ ಶಿವಾಯ ಎಂಬ ನುಡಿಯಿಲ್ಲ. ಕಾಮವಿಲ್ಲದಿರ್ದಡೆ ಪ್ರೇಮವಿಲ್ಲ. ಭೂಮಿಯಿಲ್ಲದಿರ್ದಡೆ ಜೀವನಿಗೆ ಜನ್ಮವಿಲ್ಲ. ಇದ ಮಹಾಮಹಿಮರು ಬಲ್ಲರಲ್ಲದೆ ಮಹಿಮರರಿಯರು. ಕಾಮಧೂಮ ಧೂಳೇಶ್ವರಲಿಂಗದ ಶರಣರ ಕಂಡೆ, ಬಲ್ಲೆನೆಂಬವರಂತಿರಲಿ.
--------------
ಮಾದಾರ ಧೂಳಯ್ಯ
ಓ ಎಂದಲ್ಲಿ ವಸ್ತು, ಕಾ ಎಂದಲ್ಲಿ ಶಕ್ತಿ ಕೂಡಿ ಪ್ರಣವವಾಯಿತ್ತು. ಮಾತಿನ ಸೂತಕದಿಂದ ವೇದವಾಯಿತ್ತು, ನೀತಿಯ ಹೇಳುವಲ್ಲಿ ಶಾಸ್ತ್ರವಾಯಿತ್ತು. ಸರ್ವರ ಕೂಟದ ಕೂಗಿನಿಂದ ಪುರಾಣವಾಯಿತ್ತು. ಇಂತಿವರ ಗೋಷ್ಠಿಯ ಹುದುಗಿಗಾರದೆ, ಅಲೇಖನಾದ ಶೂನ್ಯ ಕಲ್ಲಿನೊಳಗಾದ.
--------------
ವಚನಭಂಡಾರಿ ಶಾಂತರಸ
ಓಂ ನಮಃ ಶಿವಾಯ ಎಂಬ ಮೂಲಮಂತ್ರದಿಂದ ಗಿರಿಜೆ ಬಂದು ಪಾದಾಮೃತವ ಪಡೆದಳು. ಆ ಪಾದಾಮೃತದಿಂದ ಕ್ಷೀರಸಮುದ್ರ, ಶಿಲಾನದಿ, ಅಮೃತನದಿ ಇಂತೀ ಮೂರು ನದಿ ಹುಟ್ಟಿದವು ನೋಡಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಓವಿದ ಬೆಣ್ಣೆಯ ಓಡಿನಲಿಕ್ಕಿ, ಸಾವುತ ಬೇವುತಲೈದರಲ್ಲಾ. ಇರ್ದ ತಳವಾರ ನಿದ್ರೆಯಲೊರಗಲು, ಹೊದ್ದಿರ್ದ ನಿಧಾನ ಹೋಯಿತ್ತಲ್ಲಾ. ಬದ್ಧಕತನದಲಿ ಬಳಲುವರೆಲ್ಲರ ಹೊದ್ದದೆ ಹೋದನೊ ಮಾರೇಶ್ವರಾ.
--------------
ಮಾರೇಶ್ವರೊಡೆಯರು
ಓದಿ ಬೋದ್ಥಿಸಿ ಇದಿರಿಗೆ ಹೇಳುವನ್ನಬರ ಚದುರತೆಯಲ್ಲವೆ ? ತಾ ತನ್ನನರಿದಲ್ಲಿ, ಆ ಅರಿಕೆ ಇದಿರಿಗೆ ತೋರಿದಲ್ಲಿ ಅದೆ ದೇವತ್ವವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಓಡುವಾತ ಲೆಂಕನಲ್ಲ, ಬೇಡುವಾತ ಭಕ್ತನಲ್ಲ. ಓಡಲಾಗದು ಲೆಂಕನು, ಬೇಡಲಾಗದು ಭಕ್ತನು. ಓಡೆನಯ್ಯಾ, ಬೇಡೆನಯ್ಯಾ, ಕೂಡಲಸಂಗಮದೇವಾ. 442
--------------
ಬಸವಣ್ಣ
ಓದನಾದರಿಸಿ, ಗಿಳಿಯ ತಂದು ಸಲಹಿ ಓದಿಸಿದಳಯ್ಯಾ; ಆಲದ ಮರದ ಗಿಳಿ ಓಜೆಗೊಂಡಿತ್ತಯ್ಯಾ ! ಗಿಳಿ ಓದಿತ್ತು, ತನ್ನ ಪರಬ್ರಹ್ಮವ ಬೇಡಿತ್ತು; ತನ್ನ ಪೂರ್ವಾಶ್ರಯದ ಕೊರೆಯ ಕೂಳನುಂಡ ಗಿಳಿ, ಮರೆಯಿತ್ತು ತನ್ನ ತಾನು ! ಅರಿವೆಂಬ ಜ್ಞಾನ ಹುಟ್ಟಿತ್ತಯ್ಯಾ ; ಅರಿವೆಂಬ ಜ್ಞಾನ ಹುಟ್ಟಲಿಕೆ ಜಂಪಿನ ಕಡ್ಡಿಯ ಮೇಲೆ ಕುಳಿತಿರ್ದಿತ್ತಯ್ಯಾ ! ಜಂಪಿನ ಕಡ್ಡಿಯ ಮೇಲೆ ಕುಳಿತ ಗಿಳಿ, ಜಂಪಳಿಸುತ್ತಿರ್ದಿತ್ತು ತನ್ನ ತಾನು. `ಅಕ್ಕಟಾ ಅಕ್ಕಟಾ' ಎಂದು, ತನ್ನ ಪೂರ್ವಾಶ್ರಯದ ಅಕ್ಕನೆಂಬಾ ಅಕ್ಕನ ಕರೆಯಿತ್ತು. ಚಕ್ಕನೆ ಲಿಂಗವೆಂಬ ಗೊಂಚಲ ಹಿಡಿಯಲು ಮಿಕ್ಕು ಪಲ್ಲವಿಸಿತ್ತು, ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವೆಂಬ ಲಿಂಗವು.
--------------
ಚನ್ನಬಸವಣ್ಣ
ಓಂಕಾರವೇ ಶಿವ, ಯಕಾರವೇ ಸದಾಶಿವ, ವಾಕಾರವೇ ಈಶ್ವರ, ಶಿಕಾರವೇ ಮಹೇಶ್ವರ, ಮಃಕಾರವೇ ಈಶ್ವರ, ನಕಾರವೇ ಈಶಾನ. ಈ ಷಡಕ್ಷರವೆ ಷಡ್ವಿಧಮಂತ್ರಮೂರ್ತಿಯಾಗಿ ಒಪ್ಪುತಿಪ್ಪುದಯ್ಯ, ಮತ್ತೆ-ನಕಾರವೇ ಮೂರ್ತಿಬ್ರಹ್ಮ, ಮಃಕಾರವೇ ಪಿಂಡಬ್ರಹ್ಮ, ಶಿಕಾರವೇ ಕಲಾಬ್ರಹ್ಮ, ವಾಕಾರವೇ ಆನಂದಬ್ರಹ್ಮ, ಯಕಾರವೇ ವಿಜ್ಞಾನಬ್ರಹ್ಮ, ಓಂಕಾರವೇ ಪರಬ್ರಹ್ಮ, ಈ ಷಡಕ್ಷರವೆ ಷಡ್ವಿಧಬ್ರಹ್ಮವೆಂದು ಹೇಳಲ್ಪಟ್ಟಿತ್ತು ನೋಡಾ. ಮತ್ತೆ-ನಕಾರವೇ ಕ್ರಿಯಾಶಕ್ತಿ:ಮಕಾರವೇ ಜ್ಞಾನಶಕ್ತಿ, ಶಿಕಾರವೇ ಇಚ್ಛಾಶಕ್ತಿ, ವಾಕಾರವೇ ಆದಿಶಕ್ತಿ, ಯಕಾರವೇ ಪರಶಕ್ತಿ, ಓಂಕಾರವೇ ಚಿಚ್ಛಕ್ತಿ, ಇಂತಿವು ಮಂತ್ರಶಕ್ತಿಸ್ವರೂಪೆಂದರಿವುದು ನೋಡಾ. ಮತ್ತೆ-ನಕಾರವೇ ಕರ್ಮಸಾದಾಖ್ಯ, ಮಃಕಾರವೇ ಕರ್ತೃಸಾದಾಖ್ಯ, ಶಿಕಾರವೇ ಮೂರ್ತಿಸಾದಾಖ್ಯ, ವಾಕಾರವೇ ಅಮೂರ್ತಿಸಾದಾಖ್ಯ; ಯಕಾರವೇ ಶಿವಸಾದಾಖ್ಯ, ಓಂಕಾರವೇ ಮಹಾಸಾದಾಖ್ಯ ನೋಡ. ಮತ್ತೆ-ನಕಾರವೇ ಪೀತವರ್ಣ, ಮಃಕಾರವೇ ನೀಲವರ್ಣ, ಶಿಕಾರವೇ ಕುಂಕುಮವರ್ಣ, ವಾಕಾರವೇ ಶ್ವೇತವರ್ಣ, ಯಕಾರವೇ ಸ್ಫಟಿಕವರ್ಣ, ಓಂಕಾರವೇ ಜ್ಯೋತಿರ್ಮಯಸ್ವರೂಪು ನೋಡಾ. ಇಂತಿವು ಮಂತ್ರಮೂರ್ತಿಯ ವರ್ಣಭೇದವೆಂದರಿವುದಯ್ಯ. ಮತ್ತೆ-ನಕಾರವೇ ಸದ್ಯೋಜಾತಮಂತ್ರಮೂರ್ತಿ. ಮಃಕಾರವೇ ವಾಮದೇವಮಂತ್ರಮೂರ್ತಿ. ಶಿಕಾರವೇ ಅಘೋರಮಂತ್ರಮೂರ್ತಿ. ವಾಕಾರವೇ ತತ್ಪುರುಷಮಂತ್ರಮೂರ್ತಿ. ಯಕಾರವೇ ಈಶಾನ್ಯಮಂತ್ರಮೂರ್ತಿ. ಓಂಕಾರವೇ ಮಹಾಮಂತ್ರಮೂರ್ತಿ. ಇಂತಿವು ಮಂತ್ರಮೂರ್ತಿಯ ವದನಭೇದವೆಂದರಿವುದು ನೋಡಾ. ಮತ್ತೆ-ನಕಾರವೇ ಸತ್ತು, ಮಃಕಾರವೇ ಚಿತ್ತು, ಶಿಕಾರವೇ ಆನಂದ ವಾಕಾರವೇ ನಿತ್ಯ, ಯಕಾರವೇ ಪರಿಪೂರ್ಣ, ಓಂಕಾರವೇ ನಿರಂಜನಸ್ವರೂಪವೆಂದರಿವುದಯ್ಯ. ಮತ್ತೆ-ನಕಾರವೇ ಆಚಾರಲಿಂಗ, ಮಃಕಾರವೇ ಗುರುಲಿಂಗ, ಶಿಕಾರವೇ ಶಿವಲಿಂಗ, ವಾಕಾರವೇ ಜಂಗಮಲಿಂಗ, ಯಕಾರವೇ ಪ್ರಸಾದಲಿಂಗ, ಓಂಕಾರವೇ ಮಹಾಲಿಂಗ ಇಂತಿವು ಷಡಕ್ಷರ ಮಂತ್ರಲಿಂಗವೆಂದರಿವುದಯ್ಯ. ಇಂತಿವು ಲಿಂಗಷಡಕ್ಷರವೆಂದು ಹೇಳಲ್ಪಟ್ಟವು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಓಂ ಜಯ ಪರಮೇಶ್ವರಂ ಪರಮಾತ್ಮಂ ಈಶ್ವರನುರ್ವಿಪರ್ವಿ ಅಡಗಿಕೊಂಡಿಪ್ಪನು. ಒಬ್ರ್ಬಣಿಗೆಯಾಗಿ ಯೋಗಿಗಳ ಮನದ ಸಂಸಾರ ತೆಪ್ಪದೊಳಗೆ ಆನೀಗ ಅದ್ದು ಅಳಲುತಪ್ಪೆನಯ್ಯಾ, ಬೇಗ ಬಾರ ಬಾರಯ್ಯಾ ಬಾರಾ. ವಜ್ರಲೇಪದ ಬಿದ್ದಿದ್ದೇನೆ, ಬೇಗ ಬಂದೆತ್ತಯ್ಯಾ ಎತ್ತಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಓಲೆಯನಿಕ್ಕಿದ ಬಾಲೆಯ ಓಲೆಗಳೆಯದಿದೆಂತೊ ? ಓಲೆಯಿದ್ದು [ಓಲೆ]ಗಾಯತವಾಯಿತ್ತೆಲ್ಲರಿಗೆಯೂ, ಓಲೆಯೂ ಹೋಯಿತ್ತೆನಗೆ, ಬಾಲೆಯೂ ಹೋಯಿತ್ತೆನಗೆ, ಓಲೆಯ ಬಾಲೆಯ ಕೀಲಬಲ್ಲವರ ಕೂಡಲಚೆನ್ನಸಂಗನೆಂಬೆನು.
--------------
ಚನ್ನಬಸವಣ್ಣ
ಓಂಕಾರ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿಯಃ ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ ನಮಂತಿ ಋಷಯೋ ದೇವಾ ನಮಂತ್ಯಪ್ಸರಸಾಂಗಣಾಃ ನಮಂತಿ ದೇವಾ ದೇವೇಶಂ `ನ' ಕಾರಾಯ ನಮೋ ನಮಃ ಮಹಾದೇವಂ ಮಹಾತ್ಮಾನಂ ಮಹಾಜ್ಞಾನಪರಾಯಣಂ ಮಹಾಪಾಪ ಹರಂ ನಿತ್ಯಂ `ಮ' ಕಾರಾಯ ನಮೋ ನಮಃ ಶಿವಂ ಶಾಂತಧರಂ ದೇವಂ ಲೋಕಾನುಗ್ರಹ ಕಾರಣಂ ಶಿವಮೇಕಂ ಪರಬ್ರಹ್ಮ `ಶಿ'ಕಾರಾಯ ನಮೋ ನಮಃ ವಾಹನಂ ವೈಷಭೋ ಯಸ್ಯ ವಾಸುಕಿಃ ಕಂಠಭೂಷಣಂ ವಾಮಶಕ್ತಿಧರಂ ದೇವಂ `ವ'ಕಾರಾಯ ನಮೋ ನಮಃ ಯತ್ರ ಯತ್ರ ಸ್ಥಿತೋ ದೇವಃ ಸರ್ವವ್ಯಾಪಿ ಮಹೇಶ್ವರಃ ಯೋ ಗುರುಃ ಸರ್ವದೇವಾನಾಂ `ಯ'ಕಾರಾಯ ನಮೋ ನಮಃ ವೇದ: ನಕಾರಾಯ ಮಕಾರಾಯ ಶಿಕಾರಾಯ ತಥೈವ ಚ ವಕಾರಾಯ ಯಕಾರಾಯ ಓಂಕಾರಾಯ ನಮೋ ನಮಃ ವೇದಮಾತಾ ಚ ಗಾಯಿತ್ರೀ ಮಂತ್ರಮಾತಾ ಷಡಕ್ಷರೀ ಸರ್ವದೇವಪಿತಾ ಶಂಭುಃ ಭರ್ಗೋ ದೇವಸ್ಯ ದ್ಥೀಮಹಿ ಷಡಕ್ಷರಮಿದಂ ಪುಣ್ಯಂ ಯಃ ಪಠೀತ್ ಶಿವಸನ್ನಿಧೌ ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೆ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎನ್ನದಿರ್ದಡೆ ಭವಬಂಧನ ಇಹಪರ ಸಂಸಾರಾದಿ ಪ್ರಪಂಚಬಂಧನ ಬಿಡದು. ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದಡೆ ಮೋಕ್ಷಸಿದ್ಧಿ. ಸಾಕ್ಷಿ: ಷಡಕ್ಷರಜಪಾನ್ನಾಸ್ತಿ ಸರ್ವೇಷಾಂ ಬಂಧನಂ ತಥಾ ತನ್ಮಂತ್ರಂ ಚ ಜಪನ್ ಭಕ್ತ್ಯಾ ಸದ್ಯೋ ಮುಕ್ತೋ ನ ಸಂಶಯಃ ಎಂಬುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯ ಬಂದು ಮೋಕ್ಷ ತಾನೇ ಓಂ ನಮಃ ಶಿವಾಯ.
--------------
ಉರಿಲಿಂಗಪೆದ್ದಿ

ಇನ್ನಷ್ಟು ...
-->