ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಖಂಡಿತವಿಲ್ಲಾಗಿ ಸರ್ವಾಂಗವೂ ನಾಸಿಕವಾಯಿತ್ತು. ತಾನಲ್ಲದೆ ಅನ್ಯವಾಸನೆಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತ್ತು. ಖಂಡತವಿಲ್ಲಾಗಿ ಸರ್ವಾಂಗವೂ ಜಿಹ್ವೆಯಾಯಿತ್ತು. ತಾನಲ್ಲದೆ ಅನ್ಯ ರುಚಿಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಪ್ಪುವಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ನೇತ್ರವಾಯಿತ್ತು. ತಾನಲ್ಲದೆ ಅನ್ಯ ರೂಪಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಗ್ನಿಯಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ಮಹಾತ್ವಕ್ಕಾಯಿತ್ತು. ತಾನಲ್ಲದೆ ಅನ್ಯಸ್ಪರ್ಶವಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ವಾಯುವಡಗಿತ್ತು ಖಂಡಿತವಿಲ್ಲಾಗಿ ಸರ್ವಾಂಗವೂ ಶ್ರೋತ್ರವಾಯಿತ್ತು ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ ಅಲ್ಲಿಯ ಮಹತ್ತಪ್ಪ ಆಕಾಶವಡಗಿತ್ತು. ಇಂತು ಬ್ರಹ್ಮಾಂಡವೆ ಪಂಚಭೂತಮಯವಾದಡೆ, ಶರಣನ ಸರ್ವಾಂಗದಲ್ಲಿ ಪಂಚಬ್ರಹ್ಮಮಯವಡಗಿತ್ತು. ಅದೆ ಪಂಚವರ್ಣಾತೀತವಾದ ಮಹಾಬಯಲೊಳಗೆ ನಿಂದ ಭೇದವು. ಅದರಲ್ಲಿ ಜಗತ್ತು ಅಡಗಿದ ಭೇದವ, ಮಹತ್ತು ಮಹತ್ತನೊಳಕೊಂಡ ಭೇದವ ಏನೆಂದುಪಮಿಸುವೆನಯ್ಯಾ, ಕೂಡಲಚೆನ್ನಸಂಗಯ್ಯಾ !
--------------
ಚನ್ನಬಸವಣ್ಣ
ಖೇಚರರಾಗಲಿ ಭೂಚರರಾಗಲಿ ಲಾಂಛನಧಾರಿಯಾಗಲಿ, ಮರಣವಾರಿಗೂ ಮನ್ನಣೆಯಿಲ್ಲ! ಸನಕ ಸನಂದಾದಿಗಳಿಗೂ ಮರಣ ಮನ್ನಣೆಯಿಲ್ಲ. ಇದು ಕಾರಣ _ ಗುಹೇಶ್ವರಾ ನಿಮ್ಮ ಶರಣರು ಕಾಲನ ಬಾರಿಗೆ ಕಲ್ಪಿತರಾಗರು !
--------------
ಅಲ್ಲಮಪ್ರಭುದೇವರು
ಖಂಡಿತವಳಿದು ಇಂದ್ರಿಯಂಗಳು ಅಖಂಡಿತವಾದವಯ್ಯಾ. ಖಂಡಿತವಳಿದು ತನ್ಮಾತ್ರೆಗಳು ಅಖಂಡಿತವಾದವಯ್ಯಾ. ಖಂಡಿತವಳಿದು ¨sõ್ಞತಿಕಂಗಳು ಅಖಂಡಿತವಾದವಯ್ಯಾ. ಪಂಚಭೂತಮಯವಾದ ಬ್ರಹ್ಮಾಂಡ ಶರಣನ ಅಂಗದಲ್ಲಿ ಪಂಚಬ್ರಹ್ಮವಾಯಿತ್ತಾಗಿ, ಇಷ್ಟ ಅಖಂಡಿತವಾಗಿ ಸೌರಾಷ್ಟ್ರ ಸೋಮೇಶ್ವರನ ಶರಣರು ಅಖಂಡಿತರಯ್ಯಾ.
--------------
ಆದಯ್ಯ
ಖೇಚರರಾಗಲಿ, ಭೂಚರರಾಗಿಲಿ, ಪುರಹರರಾಗಲಿ, ಮಧ್ಯಸ್ಥರಾಗಲಿ, ಪವನನುಂಡುಂಡು ದಣಿಯದವರಾಗಲಿ, ಅಗ್ನಿ ಪರಿಹರರಾಗಲಿ, ಖೇಚರರೊಳು ಬಸವಾಜ್ಞೆ, ಭೂಚರರೊಳು ಬಸವಾಜ್ಞೆ. ಪುರಹರರೊಳು ಬಸವನ ಮಹಾರತಿ. ಮಧ್ಯಸ್ಥರೊಳು ಬಸವನೇಕಾಂತವಾಸಿ. ಪವನದೊಳು ಬಸವ ಹೇಳಿತ್ತ ಕೇಳುವೆ. ಅಗ್ನಿಯೊಳು ಬಸವಂಗೆ ದಾಸೋಹವ ಮಾಡುವೆ. ಎನ್ನನೀ ಪರಿಯಲ್ಲಿ ಸಲಹಿದಾತ ಬಸವಣ್ಣ ಕಾಣಾ ಕಲಿದೇವರದೇವಯ್ಯಾ.
--------------
ಮಡಿವಾಳ ಮಾಚಿದೇವ
ಖಂಡಿತಭಾವವಳಿದು ಅಖಂಡಬ್ರಹ್ಮದಲ್ಲಿ ಅವಿರಳ ಸಮರಸದಿಂದಡಗಿದ ಶರಣಂಗೆ ಜ್ಞಾನಕ್ರಿಯೆಯೆಂಬುದೇನೊ ? ಧ್ಯಾನಮೌನವೆಂಬುದೇನೊ ? ನೇಮ ನಿತ್ಯವೆಂಬುದೇನೊ ? ಜಪತಪವೆಂಬುದೇನೊ ? ಅರುಹು ಆಚಾರವೆಂಬುದೇನೊ ? ಕುರುಹು ಪೂಜೆಯೆಂಬುದೇನೊ ? ಇಂತೀ ಮೇರೆಯುಳ್ಳನ್ನಕ್ಕರ ಭಿನ್ನಫಲಪ್ರಾಪ್ತಿಯಲ್ಲದೆ, ಮುಂದೆ ಅವಿರಳ ಸಮರಸ ನಿಜೈಕ್ಯ ನಿರವಯಲ ಪದವಿನ್ನೆಲ್ಲಿಯದೊ ? ಇದನರಿದು ಇಂತಿವೆಲ್ಲವು ಹಾಳು ಸಂಕಲ್ಪ, ವಿಪರೀತ ಭ್ರಾಂತಿ, ಅಜ್ಞಾನವೆಂದು ತಿಳಿದು, ಇವನೆಲ್ಲವ ವಿಭಾಗಿಸಿ ಕಳೆದು, ಬಚ್ಚಬರಿಯ ಬಯಲಬ್ರಹ್ಮವೆ ತನ್ನ ನಿಜದ ನಿಲವೆಂದು ತಿಳಿದು, ದಗ್ಧಪಟನ್ಯಾಯದಂತೆ ದೇಹವಿರ್ದು ನಿರ್ದೇಹಿಯಾಗಿರ್ದನಯ್ಯಾ ನಿಮ್ಮ ಶರಣ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಖ್ಯಾತಿಲಾಭದ ಪೂಜೆ, ದ್ರವ್ಯವ ಕೆಡಿಸುವುದಕ್ಕೆ ಮೊದಲಾಯಿತ್ತು. ವೈರಾಗ್ಯದ ವಿರಕ್ತಿ ಮೂರಕ್ಕೆ ಒಡಲುಗೊಳಿಸಿತ್ತು. ವಾಗದ್ವೈತದ ಕೇಣಸರ, ಗೆಲ್ಲ ಸೋಲಕ್ಕೆ ಕಲ್ಲೆದೆಯ ಮಾಡಿತ್ತು. ಇವೆಲ್ಲವ ತಿಳಿದು, ಇಲ್ಲ ಉಂಟು ಎಂಬಲ್ಲಿಯೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಖಂಡಿತವ್ರತದ ನಿರಂಗನ ವ್ರತವೆಂತುಟೆಂದಡೆ ತನ್ನ ಸತಿಗೆ ಗರ್ಭ ತಲೆದೋರಿದಲ್ಲಿಯೆ, ಮುಖವ ಕಾಂಬುದಕ್ಕೆ ಮುನ್ನವೆ ಲಿಂಗಧಾರಣಮಂ ಮಾಡಿ, ಮಾಡಿದ ಮತ್ತೆ ತನ್ನ ವ್ರತದ ಪಟ್ಟವಂ ಕಟ್ಟಿ, ಶಕ್ತಿಯಾದಲ್ಲಿ ತನ್ನ ನೇಮದ ವ್ರತಿಗಳಿಗೆ ಕೊಟ್ಟಿಹೆನೆಂದು ಸುತನಾದಲ್ಲಿ ತನ್ನ ನೇಮದ ವ್ರತಿಗಳಲ್ಲಿ ತಂದೆಹೆನೆಂದು, ಗಣಸಾಕ್ಷಿಯಾಗಿ ವಿಭೂತಿಯ ಪಟ್ಟವಂ ಕಟ್ಟಿ ಇಪ್ಪುದು ಖಂಡಿತನ ವ್ರತ, ಶೀಲ, ನೇಮ. ಹಾಗಲ್ಲದೆ ದಿಂಡೆಯತನದಿಂದ ಹೋರಿ, ಮಕ್ಕಳಿಗೆ ಸಂದೇಹದ ವ್ರತವ ಕಟ್ಟಬಹುದೆಯೆಂದು ಬುದ್ಧಿಯಾದಂದಿಗೆ ವ್ರತವಾಗಲಿಯೆಂಬವರ ಅಂಗಳವ ಮೆಟ್ಟಬಹುದೆ ಅದೆಂತೆಂದಡೆ ವ್ರತದ ಅಂಗಳದಲ್ಲಿ ಬೆಳೆದ ಗರ್ಭವ ಮತ್ತಂದಿಗಾಗಲಿಯೆಂಬ ಭಂಡರ ನೋಡಾ ಅಂದಿಗಾಗಲಿಯೆಂಬವನ ವ್ರತ ಇಂದೆ ಬಿಟ್ಟಿತ್ತು. ಅದೆಂತೆಂದಡೆ ತನ್ನಂಗದಲ್ಲಿ ಆದ ಲಿಂಗದೇಹಿಯ ಮುಂದಕ್ಕೆ ಭವಿಸಂಗಕ್ಕೆ ಈಡುಮಾಡುವ ವ್ರತಭಂಗಿತನ ಕಂಡು, ಅವನೊಂದಾಗಿ ನುಡಿದಡೆ ಕುಂಭೀನರಕ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಅವನ ಹಂಗಿರಬೇಕಯ್ಯಾ.
--------------
ಅಕ್ಕಮ್ಮ
ಖೇಚರದ ಗಮನವ ಖೇಚರರಲ್ಲದೆ ಭೂಚರರು ಬಲ್ಲರೆ ಅಯ್ಯಾ? ಸವಿವಾಲು ಸಕ್ಕರೆಯ ಸವಿಯ ಸವಿದ ಭೋಗಿಯಲ್ಲದೆ ರೋಗಿ ಬಲ್ಲನೆ ಅಯ್ಯಾ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಲಿಂಗಾಂಗದ ಲಿಂಗ ಸಹಗಮನಿಯ ಹೃದಯವ ಲಿಂಗಾಂಗಿಯಲ್ಲದೆ ಅಂಗಜೀವಿಗಳು ಬಲ್ಲರೆ ಅಯ್ಯಾ?.
--------------
ಸ್ವತಂತ್ರ ಸಿದ್ಧಲಿಂಗ
ಖೇಚರಪವನದಂತೆ ಜಾತಿಯೋಗಿಯ ನಿಲುವು ! ಮಾತಿನೊಳು ಧಾತು ನುಂಗಿ ಉಗುಳದಿನ್ನೆಂತೊ ? ಭೂಚಕ್ರವಳಯವನು ಆಚಾರ್ಯ ರಚಿಸಿದ. ಗ್ರಾಮವೆಲ್ಲವ ಸುಟ್ಟು, ನೇಮ ನಾಮವ ನುಂಗಿ ಗ್ರಾಮದ ಪ್ರಭುವನೆ ನುಂಗಿ, `ಗುಹೇಶ್ವರ ಗುಹೇಶ್ವರ' ಎನುತ ನಿರ್ವಯಲಾಗಿತ್ತು.
--------------
ಅಲ್ಲಮಪ್ರಭುದೇವರು
ಖರ್ಜುರ ಸಾರಾಯ ಕಾಯಶೂನ್ಯ, ನಾರಿವಾಳ ಸಾರಾಯ ಮನಶೂನ್ಯ, ದ್ವಂದ್ವಮೂರ್ತಿಯನೊಂದು ಭಾವ ಸತಿಭಾವ ಸಾರಾಯ ಸತ್ಯಾಂಗ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಖಂಡಿತವಿಲ್ಲದ ಅಖಂಡಿತ ನೀನೆ. ನಿಮ್ಮ ಕಂಡವರುಂಟೆ? ಹೇಳಯ್ಯ. ಕಂಡೆನೆಂಬವರೆಲ್ಲ ಬಂಜೆಯ ಮಕ್ಕಳು ನೀ ನಿಂದ ಹಜ್ಜೆಯ ಕೆಳಗೆ ಒಂದು ಬಿಂದು ಹುಟ್ಟಿ ಬೆಳಗುವ ಛಂದವ ಕಂಡು ಕಣ್ದೆರೆದೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಖ್ಯಾತಿಲಾಭಕ್ಕೆ ಮಾಡೂದು ಎಂಬುದನರಿದು ಭೂತಹಿತ ದಯದಾಕ್ಷಿಣ್ಯಕ್ಕೆ ಇಕ್ಕುವಾತನೆಂಬುದನರಿದು ಮಹಿಮಾಸ್ಪದರಿಂದ ವೀರವೈರಾಗ್ಯಂಗಳಿಂದ ಇಕ್ಕುವಾತನೆಂಬುದನರಿದು ಮಾಡಿಕೊಂಡ ಕೃತ್ಯಕ್ಕೆ ಬಿಟ್ಟಡೆ ನುಡಿದಹರೆಂದು ಗುತ್ತಗೆಯಲ್ಲಿ ಇಕ್ಕುವಾತನೆಂಬುದನರಿದು ಅರ್ತಿ ತಪ್ಪದೆ ಬಾಹ್ಯದ ಭಕ್ತಿ ತಪ್ಪದೆ ಅರ್ಚನೆ ಪೂಜನೆಗಳಲ್ಲಿ ನಿತ್ಯನೇಮ ತಪ್ಪದೆ ಸುಚಿತ್ತ ಧರ್ಮದಲ್ಲಿ ಮಾಡುವವನರಿದು ಇಂತೀ ವರ್ಮಧರ್ಮಂಗಳಲ್ಲಿ ಅರಿದು ಸುಮ್ಮಾನದ ಸುಖತರದಲ್ಲಿ ಮಾಡುವ ವರ್ಮಿಗನನರಿದು ಆರಾರ ಭಾವದ ಕಲೆಯನರಿದು, ಗುಣವೆಂದು ಸಂಪಾದಿಸದೆ ಅವಗುಣವೆಂದು ಭಾವದಲ್ಲಿ ಕಲೆಗೆ ನೋವ ತಾರದೆ ಇಂತೀ ಸರ್ವಗುಣ ಸಂಪನ್ನನಾಗಿ ಪೂಜಿಸಿಕೊಂಬ ಗುರುವಿಂಗೆ ಚರಿಸುವ ಜಂಗಮಕ್ಕೆ ಉಪಾಧಿ ನಷ್ಟವಾದ ವಿರಕ್ತಂಗೆ ಕೂಗಿಂದಿತ್ತ ನಮೋ ಎಂದು ಬದುಕಿದೆ ಮಹಾಮಹಿಮ ಮಾರೇಶ್ವರಾ.
--------------
ಕೂಗಿನ ಮಾರಯ್ಯ
ಖಂಡಾಖಂಡ ಸಂಯೋಗವಿಲ್ಲದ ಅಖಂಡಿತನ ನಿಲವು, ತನ್ನಲ್ಲಿ ಅಲ್ಲದೆ ಮತ್ತೆಲ್ಲಿಯೂ ಇಲ್ಲ. ಬಯಲ ಹಿರಿಯರು ಬಯಲನೆ ಅರಸುವರು. ಅಲ್ಲಿ ಉಂಟೆ ಹೇಳಾ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಖಂಡಿತಕಾಯಕದ ವ್ರತಾಂಗಿಯ ಮಾಟದ ಇರವೆಂತೆಂದಡೆ ಕೃತ್ಯದ ನೇಮದ ಸುಯಿದಾನವ ಅಚ್ಚೊತ್ತಿದಂತೆ ತಂದು ಒಡೆಯರ ಭಕ್ತರ ತನ್ನ ಮಡದಿ ಮಕ್ಕಳು ಸಹಿತಾಗಿ ಒಡಗೂಡಿ, ಎಡೆಮಾಡಿ ಗಡಿಗೆ ಭಾಜನದಲ್ಲಿ ಮತ್ತೊಂದೆಡೆಗೆ, ಈಡಿಲ್ಲದಂತೆ, ಬಿಡುಮುಡಿಯನರಿಯದೆ, ಮತ್ತೆ ಇರುಳೆಡೆಗೆಂದಿರಿಸದೆ, ಹಗಲೆಡೆಯ ನೆನೆಯದೆ, ಇಂದಿಗೆ ನಾಳಿಗೆ ಎಂಬ ಸಂದೇಹಮಂ ಬಿಟ್ಟು ಮುಂದಣ ಕಾಯಕ ಅಂದಂದಿಗೆ ಉಂಟು ಎಂಬುದನರಿತು ಬಂದುದ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ ಸದಾನಂದದಲ್ಲಿಪ್ಪ ಭಕ್ತನಂಗಳ ಮಂಗಳಮಯ ಕೈಲಾಸ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಬೆಳಗು.
--------------
ಅಕ್ಕಮ್ಮ
ಖುದಾ ಜಾತಕು ಬಮ್ಮನ ಆದ್ಮಿಕು ಗರಕಾ ದಂದೇಗನೈ ಆಖು ಬಮ್ಮನ ಬಡಾವಲ್ಲಿ ಆದ್ಮಿಕು ದಿವಾರಾತ್ ರೋಯಿ ವಖತ್ ಅಲ್ಲಾಕು ಬಗರ ದುಸರಾಕು ಖಬರ್ ನಯಿ ಇದೋ ಇಕುಬಾತ್ ಖಬರ್ ಅಲ್ಲಾಕು ಜಾತ ಬಡಾ ವಲ್ಲಿಕು ಮಾಲುಮ್ ಸುನೋ ಬಲಾ ಆದ್ಮಿ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ

ಇನ್ನಷ್ಟು ...
-->