ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಸಹಸ್ರಶೀರ್ಷನಾದಿಪುರುಷನು. ವೇದಪುರುಷನೊಬ್ಬ ಪುರುಷನು. ತ್ರಿಪಾದ ಊಧ್ರ್ವನೊಬ್ಬ ಪುರುಷನು. ಉದನ್ಮುಖನೊಬ್ಬ ಪುರುಷನು. ಉದಯಪುರುಷನೊಬ್ಬ ಪುರುಷನು. ವಿರಾಟ್ಪುರುಷನೊಬ್ಬ ಪುರುಷನು. ಆದಿಪುರುಷನೊಬ್ಬ ಪುರುಷನು. ವಿಯತ್ಪುರುಷನೊಬ್ಬ ಪುರುಷನು. ತದ್ವಿಯತ್ಪುರುಷ ಪುರುಷರಿಲ್ಲದ ಪ್ರಭೆ ನೋಡಿದರೆ, ವೇದನಾದಾತೀತ ತೂರ್ಯಪರಮಾನಂದ ನಿರವಯ ಷಟ್‍ತ್ರಿಂಶತ್‍ಪ್ರಭಾಪಟಲಪ್ರಭೆಯ ಬೆಳಗಿದೆ ನೋಡಿರೆ. ಬೆಳಗಿನೊಳಗಣ ಮಹಾಬೆಳಗಿನ ಬೆಳಗು ಕೂಡಲಸಂಗಯ್ಯ.
--------------
ಬಸವಣ್ಣ
ಸೊಲ್ಲಿಗೆ ಒಂದು ಖಂಡುಗ ನವಣೆ ನುಂಗಿತ್ತಯ್ಯಾ. ಆ ನವಣೆಯ ಹೊಯ್ದಳೆಯಬೇಕೆಂದಡೆ ಸ್ಥಲ ಸಾಲದಯ್ಯಾ- ಹಲಬರು ಛಲವಿಡಿದುವಿಡಿದು ಹೊಲಬುಗೇಡಿಯಾದರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು ನಿಚ್ಚಲೊಂದು ಉಪದೇಶ ಮಂತ್ರವ ಕಲಿತಂತೆ. ಬಚ್ಚಬರಿಯ ಭವಿಗಳ ಸಂಗದಲ್ಲಿದ್ದರೆ ಕಿಚ್ಚಿನೊಳಗೆ ಬಿದ್ದ ಕೀಡೆಯಂತಪ್ಪುದಯ್ಯ. ಸುಚಿತ್ತದಿಂದ ನಿಮ್ಮ ಸದ್ಭಕ್ತರ ಸಂಗದಲ್ಲಿರಿಸದಿರ್ದಡೆ ನಾನಿನ್ನೆತ್ತ ಸಾರುವೆನು ಹೇಳಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಸಾಸಿರದಳಕಮಲವೆಂದಡೆ ಸೂಸಿಕೊಂಡಿರುವ ಮನ. ಪವನವೆಂದಡೆ ಎಲ್ಲೆಡೆಯಲ್ಲಿ ಸೂಸಿ ಆಡುವಂತಹದು. ಬಿಂದುವೆಂದಡೆ ಆಗುಮಾಡುವಂತಹದು. ಈ ಮನ ಪವನ ಬಿಂದು ಮೂರನು ಒಡಗೂಡಿ ನೋಡಲು, ಪರಂಜ್ಯೋತಿಪ್ರಕಾಶದಂತಹ ಬೆಳಗೆ ಎನ್ನ ಕಂಗಳ ಮುಂದೆ ನಿಂದಿತ್ತು. ಆ ಮಹಾಬೆಳಗನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ, ಎನ್ನಂಗದ ಒಳಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ, ನಿಮ್ಮ ಪಾದಕರುಣದಿಂದ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು. ಮಾಡಿದಡೆ ಮಾಡಲಿ, ಮಾಡಿದಡೆ ತಪ್ಪೇನು ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡುಕಿದಡೆ ಅದು ಪ್ರಸಾದವಲ್ಲ, ಕಿಲ್ಬಿಷ. ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದೆಗೆದಡೆ, ಅದು ಲಿಂಗಕ್ಕೆ ಬೋನ. ಇದು ಕಾರಣ, ಕೂಡಲಸಂಗಮದೇವಾ, ಇಂತಪ್ಪ ಸದಾಚಾರಿಗಳನೆನಗೆ ತೋರಾ 400
--------------
ಬಸವಣ್ಣ
ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರಾಳವಾಯಿತ್ತು. ನಿರಾಳದಿಂದ ನಿರವಯವಾಯಿತ್ತು, ನಿರವಯದಿಂದ ಅನಾದಿಯಾಗಿತ್ತು. ಅನಾದಿಯಲ್ಲಿ ಮೂರ್ತಿಯಾದನೊಬ್ಬ ಶರಣ. ಆ ಶರಣನ ಮೂರ್ತಿಯಿಂದ ಸದಾಶಿವನಾದ, ಆ ಸದಾಶಿವನ ಮೂರ್ತಿಯಿಂದ ಶಿವನಾದ, ಆ ಶಿವನ ಮೂರ್ತಿಯಿಂದ ರುದ್ರನಾದ, ಆ ರುದ್ರನ ಮೂರ್ತಿಯಿಂದ ವಿಷ್ಣುವಾದ. ಆ ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ. ಆ ಬ್ರಹ್ಮನ ಮೂರ್ತಿಯಿಂದಾದವು ಸಕಲ ಜಗತ್ತುಗಳೆಲ್ಲಾ_ ಇವರೆಲ್ಲ ನಮ್ಮ ಗುಹೇಶ್ವರನ ಕರಸ್ಥಲದ ಹಂಗಿನಲ್ಲಿ ಹುಟ್ಟಿ ಬೆಳೆದರು
--------------
ಅಲ್ಲಮಪ್ರಭುದೇವರು
ಸಾಧ್ಯ ಸಾಧಕರಿಲ್ಲದಂದು, ಪೂಜ್ಯ ಪೂಜಕರಿಲ್ಲದಂದು, ದೇವ ಭಕ್ತನೆಂಬ ನಾಮ ತಲೆದೋರದಂದು, ಉಪಾಸ್ಯ ಉಪಾಸಕರಿಲ್ಲದಂದು, ಅಂಗಸ್ಥಲ ಲಿಂಗಸ್ಥಲವಾಗದಂದು, ನಿನ್ನ, ನಿಃಕಲ ಶಿವತತ್ವವೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸತ್ತಾತ ಗುರು, ಹೊತ್ತಾತ ಲಿಂಗವು, ಎತ್ತಿಕೊಂಡಾತ ಜಂಗಮವೆಂದೆಂಬೆನಯ್ಯ. ಸತ್ತವನೊಬ್ಬ, ಹೊತ್ತವನೊಬ್ಬ, ಎತ್ತಿಕೊಂಡವನೊಬ್ಬನೆಂಬನ್ನಕ್ಕರ ಕತ್ತಲೆ ಹರಿಯದಯ್ಯ. ಆತ್ತವರಮರರು, ನಿತ್ಯವಾದುದು ಪ್ರಸಾದ, ಪರಿಪೂರ್ಣವಾದುದು ಪಾದಜಲ. ಇದರರ್ಥವ ಬಲ್ಲರೆ ಸತ್ತಹಾಗಿರಬೇಕು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸ್ವಯವಿದ್ದಂತೆ ಲಯವ ಕೂಡುವರೆ ಅಯ್ಯಾ ? ಪರುಷವಿದ್ದಂತೆ ಹೇಮವನರಸುವರೆ ಅಯ್ಯಾ ? ಸ್ವಯಂಜ್ಯೋತಿಯಿದ್ದಂತೆ ದೀಪವನರಸುವರೆ ಅಯ್ಯಾ ? ನೀನಲ್ಲಿ ಇಲ್ಲಿ ಕೂಡಿಹೆನೆಂಬ ಕೂಟದ ಭಿನ್ನವ ಹೇಳಯ್ಯಾ ? ಕಣ್ಣಿಲಿ ನೋಡಿ ಕಣ್ಣ ಮರೆದೆನೆಂದು ಆ ಭಿನ್ನಭಾವದಂತೆ ಆದಿರಲ್ಲಾ ? ಅದು ನಿಮ್ಮ ಗುಣವಲ್ಲ, ಎನ್ನ ಗುಣ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಸಮಶೀಲ ನೇಮ ಒಂದಾದಲ್ಲಿ ಉಡುವ ತೊಡುವ ಕೊಡುವ ಕೊಂಬ ಅಡಿಯೆಡೆ ಮುಂತಾಗಿ ಸಕ್ಕರೆಯ ಬುಡಶಾಖೆಯಂತೆ ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ ಕಟ್ಟಾಚಾರ ನಿಶ್ಚಯವಾದವಂಗೆ, ಅಂಗ ಹಲವಲ್ಲದೆ ಕುಂದಣ ಒಂದೆ ಭೇದ. ನೇಮ ಹಲವಲ್ಲದೆ ಜ್ಞಾನವೊಂದೆ ಭೇದ. ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ, ಬಂದ ಯೋನಿ ಒಂದೆ. ತಾ ಮುಂದಿಕ್ಕುವ ಯೋನಿ ಒಂದಾದ ಕಾರಣ. ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ. ಇದು ತಪ್ಪದ ಆಚಾರ, ಇದಕ್ಕೆ ಮಿಥ್ಯತಥ್ಯವಿಲ್ಲ, ತಪ್ಪದು ನಿಮ್ಮಾಣೆ. ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಸಾದಾಖ್ಯ ದೇಹದ ಆದ್ಯಂತ ಶೂನ್ಯದ ಆಮೋದದಕ್ಷರವು ಕಂಗಳಾಗಿ ಆನಂದ ರೂಪು ಕಪಿಲಸಿದ್ಧಮಲ್ಲಿಕಾರ್ಜುನನ ನೇಮಾಕ್ಷರದ ರೂಪಕಳೆಯ ಪೇಳುವೆನಯಾ
--------------
ಸಿದ್ಧರಾಮೇಶ್ವರ
ಸಿಂಬೆಗೆ ರಂಭೆತನವುಂಟೆ ? ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ ? ಡಿಂಗರಿಗಂಗೆ ಸಮವೆಂಬ ಸಂಭ್ರಮವುಂಟೆ ? ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ, ನೀ ಬಂದೆಯಲ್ಲಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ, ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ಪ್ರಭುದೇವರ ಕಾರುಣ್ಯದಿಂದ ಬದುಕಿದೆ.
--------------
ಮರುಳಶಂಕರದೇವ
ಸೊಡರ ಹಿಡಿದು ಕುಣಿಯಲ್ಲಿ ಬೀಳುವವರ ಕಂಡು, ವಿದ್ಥಿಯ ಕೈಯಲ್ಲು ನಿಸ್ತರಿಸಲಾರೆನಯ್ಯಾ ನಾನು. ಅಹಂಗಾದೆನಲ್ಲಾ ಎಂಬ ಚಿಂತೆಯ ನಿಸ್ತರಿಸಲಾರೆನಯ್ಯಾ. ವೇದವೆಂಬ ಮಹಾಜ್ಯೋತಿಯ ಹಿಡಿದು ಶಿವಪಥದಲ್ಲಿ ನಡೆಯಲರಿಯದೆ ಪಾಪದ ಕುಣಿಯಲ್ಲಿ ಬೀಳುವವರ ಕಂಡು ನಗೆಯಾದುದಯ್ಯಾ. ಗುರೂಪದೇಶವೆಂಬ ಜ್ಯೋತಿಯ ಹಿಡಿದು, ಶಿವಪಥದಲ್ಲಿ ನಡೆದು ಪ್ರಸಾದವೆಂಬ ನಿಧಾನವ ಕಂಡುಕೊಂಡು ಉಂಡು ಪರಿಣಾಮಿಸಿ ಬದುಕಿದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸ್ತ್ರೀಯರ ಮೂವರ ಮುಂದುಗೆಡಿಸಿತ್ತು ಮೋಹ, ಅರಿಯರವ್ವಾ, ತಾವೊಂದು ದೇಹವುಂಟೆಂದೆಂಬುದ. ಅರಿಯರವ್ವಾ ತಾವೊಂದು ರೂಪುಂಟೆಂದೆಂಬುದ. ತ್ರಿಗುಣಾತ್ಮಕವೇ ರೂಪಾಗಿ, ರೂಪು ಅರೂಪಾದಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನೆರೆವ ನೆನಹಿನಲ್ಲಿಲೀಯವಾದರು.
--------------
ಸಿದ್ಧರಾಮೇಶ್ವರ
ಸಚರಾಚರವೆಂಬುದೊಂದು ಕಿಂಚಿತ್ತು. ಚತುರ್ಯುಗವೆಂಬುದೊಂದು ಕಿಂಚಿತ್ತು. ಅಪ್ಪುದೆಂಬುದೊಂದು ಕಿಂಚಿತ್ತು, ಆಗದೆಂಬುದೊಂದು ಕಿಂಚಿತ್ತು. ತಾನು ಶುದ್ಧವಾದ ಶರಣಂಗೆ ಗುಹೇಶ್ವರನೆಂಬುದೊಂದು ಕಿಂಚಿತ್ತು.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...
-->