ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಬ್ರಹ್ಮಪಾಶ, ವಿಷ್ಣುಮಾಯೆ ಎಂಬ ಬಲೆಯ ಬೀಸಿ, ಹೊನ್ನು ಹೆಣ್ಣು ಮಣ್ಣು ತೋರಿ, ಮುಕ್ಕಣ್ಣನಾಡಿದ ಬೇಂಟೆಯ. ಆಸೆಯೆಂಬ ಕುಟುಕನಿಕ್ಕಿ, ಹೇಸದೆ ಕೊಂದೆಯಲ್ಲಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬಾಹ್ಯದಲ್ಲಿ ಶ್ರದ್ಧೆಭಾವ, ಭಾವದಲ್ಲಿ ಬಳಕೆ ನಾಸ್ತಿಯಾಗಿ, ಅಮಳಕಫಲ ಕರದಲ್ಲಿದ್ದಂತೆ ಕಲೆದೋರದಿರು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಬಯಲೆ ಅಂಗವಾಗಿ, ನಿರ್ವಯಲೆ ಲಿಂಗವಾಗಿ, ಭಾವಕೆ ಸಂಬಂಧವಾಯಿತ್ತು ನೋಡಾ. ಬಯಲಿಂದ ಅಂಗವಿಲ್ಲದೆ, ನಿರ್ವಯಲೆಂಬ ಲಿಂಗವು ನಿಶ್ಶಬ್ದವಾಗಿ, ಭಾವಕ್ಕೆ ಬೆರಗಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಣ್ಣವನರಿಯದ ಬಯಲಿನಂತೆ, ಬ್ಥಿನ್ನ ಅಬ್ಥಿನ್ನವನರಿಯದ ಬೆಳಗಿನಂತೆ, ಛಿನ್ನ ವಿಚ್ಫಿನ್ನವನರಿಯದ ಪರಿಪೂರ್ಣದಂತೆ, ಅವದ್ಥಿಗೊಡಲಿಲ್ಲದ ಭಾವವಿರಹಿತನಾದೆಯಲ್ಲಾ. ಸುಳುಹುಗೆಟ್ಟು ಸೂಕ್ಷ್ಮವರತು, ಬೆಳಗೆಂಬ ಕಳೆನಾಮ ನಷ್ಟವಾಗಿ, ಅದೆಂತೆಯಿದ್ದಿತ್ತು, ಅಂತೆ ಆದೆಯಲ್ಲಾ ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಬಹಳ ಬಹಳ ಕಂಡೆನೆಂದು ನುಡಿವ, ಬಿಸಿಲು ಮಧ್ಯಾಹ್ನದಲ್ಲಿ ಚಂದ್ರಬಿಂಬ ಉದಯವಾದ ಪ್ರತ್ಯಕ್ಷವಾಯಿತ್ತೆಂದು ಹೊರಗೆ ಕಂಡು ಒಳಗೆ ಕಂಡನಲ್ಲದೆ ಏನು ಅಪ್ಪುದು ಕಾಣಾ. ಎರಡೂ ಒಂದೇ. ಮುಂದೆ ಮೀರಿ ಮನಸಮಾದ್ಥಿ ಮಾಡಿದಡೆ ಮುಕ್ತಿಯೆಂದು ಹೇಳುವರು. ಮನ ಮುಳುಗಿದುದೆ ಲಿಂಗವೆಂದೆಂಬರು. ಆ ಲಿಂಗ ಮುಳುಗುವುದು ಸಮಾದ್ಥಿ ಕಾಣಾ, ತಾನಳಿದ ಮೇಲೆ ಮುಕ್ತಿ ಯಾರಿಗೆ ಹೇಳಾ ? ಲಿಂಗಕ್ಕೆ ಅಳಿವು ಬೆಳವುಂಟೆ ಕಾಣಾ ? ಚಿಂತಿಸಿ ಮುಳುಗಿದವರೆಲ್ಲ ಕಡೆಯಿಲ್ಲ ಮೊದಲಿಲ್ಲ ನೋಡಾ. ಇನ್ನು ಉಳಿದದ್ದು ಘನವು. ಉಳಿಯೆ ಹೇಳಾ ನಿಜಕೆಲ್ಲ. ಲಯವಿಲ್ಲ ಭಯವಿಲ್ಲದಾಡಿದ ವಿದೇಹ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಬಸವಣ್ಣನ ಮಗನಹುದೆಂಬುದು ಕಾಣಬಂದಿತ್ತು ನೋಡಾ; ಚನ್ನಬಸವಣ್ಣನ ಮಗನಮಗನೆಂಬುದು ಕಾಣಬಂದಿತ್ತು ನೋಡಾ; ಪ್ರಭುವಿನ ಮಗನಮಗನಮಗನೆಂಬುದು ಕಾಣ ಬಂದಿತ್ತು ನೋಡಾ; ಅವಸ್ಥಾತ್ರಯದಲ್ಲಿ ಗುರುನಿರಂಜನ ಚನ್ನಬಸವಲಿಂಗ ತಾನೆಂಬುದು ಕಂಡು ಮರೆಯಿತ್ತು ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು. ಅದಕ್ಕೆ ಸುತ್ತಲು ಬೇರು ಆವರಿಸಿತ್ತು. ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು. ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿಯೆ, ಮರ ಒಣಗಿತ್ತು, ಉಲುಹು ನಿಂದಿತ್ತು, ಎಲೆ ಉದುರಿತ್ತು. ತರಗೆಲೆಯಾದ ಶರಣರ ಚರಣವಿಡಿದು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಣ್ಣವಿಲ್ಲದೆ ಚಿನ್ನ ನಾಮಕ್ಕರ್ಹನಾದ ಪರಿ ಇನ್ನೆಂತಯ್ಯಾ. ಹೂವೊಣಗಿ ವಾಸನೆ ಮುಡಿದ ಠಾವಿನಲ್ಲಿ ವಾಸನೆ ನಿಂದುಲ್ಲವೆ? ಅಯ್ಯಾ. ಕ್ರೀಶುದ್ಧವಾದದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಂಗವು ಭಾವಶುದ್ಧವಾಗಿರ್ಪನು.
--------------
ಸಿದ್ಧರಾಮೇಶ್ವರ
ಬ್ರಹ್ಮನ ಡಾಗು ಬೆನ್ನಮೇಲೆ, ವಿಷ್ಣುವಿನ ಡಾಗು ಕೈಯ ಮೇಲೆ. ರುದ್ರನ ಡಾಗು ತಲೆಯ ಮೇಲೆ. ಇಂತೀ ಡಾಗಿನ ಪಶುಗಳಿಗೇಕೆ ಅನಾಗತನ ಸುದ್ದಿ ? ಇದು ನಿಮಗೆ ಸಾ[ದ್ಥಿ]ಸದೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬ್ರಹ್ಮನ ಹೆಂಡಿರ ಮಕ್ಕಳ ಹಿಡಿತಂದು, ಅಡಿಗೆಯ ಮಾಡಿಸಿದಾತ ಬಸವಣ್ಣ. ವಿಷ್ಣುವಿನ ಸಾಸಿರದೇಳುನೂರು ಕುಮಾರಿಯರ ಹಿಡಿತಂದು, ದಹಿಸಿದಾತ ಬಸವಣ್ಣ. ರುದ್ರರ ರುದ್ರಗಣಂಗಳ ಹಿಡಿತಂದು, ಸ್ವಾಮಿಭೃತ್ಯಾಚಾರಸಂಬಂಧವ ಮಾಡಿಸಿದಾತ ಬಸವಣ್ಣ. ಆ ಬಸವಣ್ಣಂಗೆ ಪ್ರಸಾದವೆ ನೆಲೆಯಾದುದು, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಬಂದ ಬಟ್ಟೆಯ ನಿಂದು ನೋಡಲೊಲ್ಲೆ ಕಂದಾ, ಅದೇನು ಸೋಜಿಗವೊ ? ಬಿಂದು ಛಂದವಲ್ಲ ಬಂದ ಪರಿಯನು ಗುಹೇಶ್ವರ ಬಲ್ಲ ಕಂದಾ.
--------------
ಅಲ್ಲಮಪ್ರಭುದೇವರು
ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು. ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು. ವ್ರತವಳಿದ ಪ್ರಪಂಚಿ ಎಂದರೆನ್ನ ಎಮ್ಮಯ್ಯನವರು. ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ. ಸಂಗಯ್ಯ, ಎಮ್ಮಯ್ಯನವರ ಕರುಣದಿಂದ ಆನು ಪರಮ ಪ್ರಸಾದಿಯಾದೆನಯ್ಯ.
--------------
ನೀಲಮ್ಮ
ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಸವಣ್ಣ ಮೊದಲಾದ ಮಹಾಭಕ್ತರೆಲ್ಲರೂ ಕಂಡರಯ್ಯಾ. ಮಹಾ ಕೈಲಾಸವೆಂಬ ಬೆಳ್ಳಿಯ ಬೆಟ್ಟವನೇರಿ, ಒಳ್ಳೆಯ ಪದದಲ್ಲಿ ತಲ್ಲೀಯರಾದಿಹೆವೆಂದು, ಬಲ್ಲತನವ ಮಚ್ಚಿ ಇರಲಾಗಿ, ಆ ಬೆಳ್ಳಿಯ ಬೆಟ್ಟ ಕಲ್ಲೋಲವಾಗಲಾಗಿ, ಅಲ್ಲಿರ್ದವರನೆಲ್ಲಿಯೂ ಕಾಣೆ. ಇವರಿಗಿನ್ನೆಲ್ಲಿಯ ಮುಕ್ತಿ ? ಜಲ್ಲೆಯನಡರ್ದು ಎಲ್ಲೆಯ ಪಾಯಿಸುವನಂತೆ, ಇವರೆಲ್ಲರೂ ಬಲ್ಲಹರೆ, ಬಲ್ಲಹ ಚೆನ್ನಬಸವಣ್ಣನಲ್ಲದೆ ? ಇವರೆಲ್ಲರನೊಲ್ಲೆನೆಂದೆ, ಬಲ್ಲರ ಬಲ್ಲಹನೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೆಲ್ಲದ ಹೊಗೆಯನಿಕ್ಕಿ, ಭರಣಿಯ ಹೊರವಂತೆ ಇರಬೇಡವೆ ಗುರುವಿನುಪದೇಶ? ದಾರಿಯ ಹಸಮಾಡಿ ನೀರ ತಿದ್ದುವಂತೆ ಇರಬೇಡವೆ ಗುರುವಿನುಪದೇಶ? ಹಾಲುಂಬ ಹಸುಳೆಗೆ ಕೂಳು ಮೈಯಕ್ಕುವುದೆ? ಬುದ್ಧಿಹೀನರು ಬಲ್ಲರೆ ಪರಬ್ರಹ್ಮದ ಸುಖವ? ಈ ಭೇದವನರಿಯದ ಗುರುಶಿಷ್ಯರಿಬ್ಬರೂ ಇದ್ದ ಊರೊಳಗಿರೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ

ಇನ್ನಷ್ಟು ...
-->