ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಆವ ವ್ರತ ನೇಮವ ಹಿಡಿದಡೂ ಆ ವ್ರತ ನೇಮದ ಭಾವಶುದ್ಧವಾಗಿರಬೇಕು. ಅಸಿ ಕೃಷಿ ಯಾಚಕ ವಾಣಿಜ್ಯತ್ವದಿಂದ ಬಂದ ದ್ರವ್ಯಂಗಳಲ್ಲಿ ಬಾಹ್ಯದ ಬಳಕೆ ಅಂತರಂಗದ ನಿರಿಗೆ ಉಭಯ ಶುದ್ಧವಾಗಿಪ್ಪ ಭಕ್ತನಂಗವೆ ಏಲೇಶ್ವರಲಿಂಗದಂಗ.
--------------
ಏಲೇಶ್ವರ ಕೇತಯ್ಯ
ಆವ ಜಾತಿಯಲ್ಲಿ ಹುಟ್ಟಿದವನಾದಡಾಗಲಿ, ಶ್ರೀಮಹಾದೇವನ ನೆನೆವಾತನದ್ಥಿಕ ನೋಡಾ. ಆತನಿಂದದ್ಥಿಕ ಕಂಗಳು ತುಂಬಿ ನೋಡುವಾತ. ಆತನಿಂದದ್ಥಿಕ ಕೈಮುಟ್ಟಿ ಪೂಜಿಸುವಾತ. ಅದೆಂತೆಂದಡೆ, ಶಿವಧರ್ಮೇ- ``ಲಿಂಗಸ್ಯ ದರ್ಶನಂ ಪುಣ್ಯಂ ದರ್ಶನಾತ್ ಸ್ಪರ್ಶನಂ ಶುಭಂ | ಶಿವಲಿಂಗಂ ಮಹಾಪುಣ್ಯಂ ಸರ್ವದೇವ ನಮಸ್ಕøತಂ | ಯಃ ಸ್ಪøಶೇದಪಿ ಪಾಣಿಭ್ಯಾಂ ನ ಸ ಪಾಪೈಃ ಪರಿಲಿಪ್ಯತೇ ||'' ಎಂದುದಾಗಿ, ಅಂತಪ್ಪ ಶಿವಲಿಂಗವನು ಹೆರೆಹಿಂಗದೆ ಅಂಗದ ಮೇಲೆ ನಿರಂತರ ಧರಿಸಿಕೊಂಡಿಪ್ಪಾತನೆ ಎಲ್ಲರಿಂದದ್ಥಿಕ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆ ಅಕ್ಷರವನು ಆರೈದು ತೋರಿರಿ ಓರಂತೆ ಎನ್ನ ಸದುಹೃದಯನೆನಿಸಿ ನಾದ ಕಳೆಗಳನೆನ್ನ ಆಕರದೊಳಗಿಟ್ಟು ಅಭೇದ್ಯ ಪರಮಾನಂದ ಸತ್ಯರೂಪ ನಿತ್ಯಾನಂದ ಶ್ರೀ ಗುರು ಚೆನ್ನಬಸವಣ್ಣನುನ್ನತವನಾರು ಬಲ್ಲರು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆನೆತ್ತಲಯ್ಯಾ, ಕ್ರಿಮಿಕೀಟಕನಾಗಿ ಹುಟ್ಟುವನ ಹುಟ್ಟ ಕೆಡಿಸಿದೆ. ಇನ್ನಹುದಾನೇನರಿದು ಹೇಳಾ, ಎಲೆ ಅಯ್ಯಾ. ಶುದ್ಧಸಿದ್ಧಪ್ರಸಿದ್ಧವನು ತೋರಿ ಪ್ರಾಪ್ತಭೋಕ್ತಭುಕ್ತಿಯೆಂಬುದಕ್ಕೆ ಹೊರಗು ಮಾಡಿದೆ. ಇನ್ನು ನಾನಿನಪ್ಪುದೇನರಿದೈ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆರು ಕೇರಿಗಳಲ್ಲಿ ಆರು ಮೂರ್ತಿಗಳಿಪ್ಪರು ನೋಡಾ. ಆರು ಮೂರ್ತಿಗಳಲ್ಲಿ ಆರು ಶಕ್ತಿಗಳಿಪ್ಪರು ನೋಡಾ. ಆರು ಶಕ್ತಿಗಳು ಆರಾರು ಲಿಂಗಾರ್ಚನೆಯ ಮಾಡಿ ಮೂರು ಬಾಗಿಲ ದಾಂಟಿ ಮಹಾಘನಲಿಂಗವನಾಚರಿಸುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿಭಕ್ತಿವಿಡಿದು ಮೆಲ್ಲಮೆಲ್ಲನೆ ಸಾದ್ಥಿಸಿ ಕೈಗೊಟ್ಟ ಪರಿಯ ನೋಡಾ ! ಹಾದಿ ಬಟ್ಟೆಯ ಸಾಧಕರತ್ತ ಸವೆಯದೆ ಮೂದೇವರ ಮಾಟದೊಳಗಿರ್ದು ಕೂಟಕೈದಿದ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಶೆ ಇಚ್ಛೆಗೆನ್ನ ಗಾಸಿ ಮಾಡದಿರಯ್ಯಾ, ದಾಸೋಹಿಯಾಗಿರ್ಪ ದಾಸನಾಗಿರಿಸೆನ್ನ ಕೂಡಲಸಂಗಮದೇವಾ, ನಿಮ್ಮ ಧರ್ಮ.
--------------
ಬಸವಣ್ಣ
ಆಳುದ್ದಿಯದೊಂದು ಬಾವಿ ಆಕಾಶದ ಮೇಲೆ ಹುಟ್ಟಿತ್ತು ನೋಡಾ ! ಆ ಬಾವಿಯ ನೀರನೊಂದು ಮೃಗ ಬಂದು ಕುಡಿಯಿತ್ತು. ಕುಡಿಯ ಬಂದ ಮೃಗವು ಆ ನೀರೊಳಗೆ ಮುಳಿಗಿದಡೆ ಉರಿಯ ಬಾಣದಲೆಚ್ಚು ತೆಗೆದೆ ನೋಡಾ ! ಒಂದೆ ಬಾಣದಲ್ಲಿ ಸತ್ತ ಮೃಗವು, ಮುಂದಣ ಹೆಜ್ಜೆಯನಿಕ್ಕಿತ್ತ ಕಂಡೆ ! ಅಂಗೈಯೊಳಗೊಂದು ಕಂಗಳು ಮೂಡಿ, ಸಂಗದ ಸುಖವು ದಿಟವಾಯಿತ್ತು ! ಲಿಂಗಪ್ರಾಣವೆಂಬುದರ ನಿರ್ಣಯವನು ಇಂದು ಕಂಡೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆವಾವ ತ್ರಿಗುಣಭೇದದಲ್ಲಿವಿಶ್ವಾಸವ ಮಾಡಿದಡೂ ಭಾವಶುದ್ಧವಾಗಿರಬೇಕು. ಯೋಗಿಯಾದಲ್ಲಿ ದೇಹಧರ್ಮವ ಮರೆದು, ಭೋಗಿಯಾದಲ್ಲಿ ಸಂಚಿತವ ಮರೆದು, ತ್ಯಾಗಿಯಾದಲ್ಲಿ ನೆನಹು ಹಿಂಚು ಕೊಡುವುದು ಮುಂಚಾಗಿರಬೇಕು. ಇಂತೀ ಯೋಗಿ ಭೋಗಿ ತ್ಯಾಗಿ, ಇಂತೀ ತ್ರಿವಿಧವನೊಳಕೊಂಡು ವಿರಕ್ತನಾದಲ್ಲಿ ಆತನ ಅಡಿಗೆರಗುವೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆರುಸ್ಥಲದಲ್ಲಿ ಅರಿತಿಹೆನೆಂದು ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ ! ಅಂಗದ ಮೇಲೆ ಲಿಂಗಸಂಬಂಧಿಯಾದಡೇನಯ್ಯ, ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ ! ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆಇಲ್ಲದನ್ನಕ್ಕ ಅಷ್ಟಮದಂಗಳ ನಷ್ಟವಮಾಡಿ ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು ! ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ ರೂಪು ರುಚಿ ತೃಪ್ತಿಯನೀವ ವರ್ಮಾದಿವರ್ಮಂಗಳ ಭೇದವನರಿಯದೆ ! ಕರಸ್ಥಲದಲ್ಲಿ ಲಿಂಗವಿಡಿದು ಸಹಭೋಜನವೆಂದು ಒಂದಾಗಿ ಉಂಡು ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ ನಗುತ್ತಿರ್ದೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಮುಂತಾಗಿರ್ದ ದೃಷ್ಟ ಅರ್ಪಿತಂಗಳ ಅರ್ಪಿಸುವಲ್ಲಿ ಗಂಧದಿಂದ ಸುಳಿವ ನಾನಾ ಸುಗಂಧವ ರಸದಿಂದ ಬಂದ ನಾನಾ ರಸಂಗಳ ರೂಪಿನಲ್ಲಿ ಕಾಣಿಸಿಕೊಂಬ ನಾನಾ ಚಿತ್ರ ವಿಚಿತ್ರ ಖಂಡಿತ ಅಖಂಡಿತಮಪ್ಪ ದೃಷ್ಟಾಂತಂಗಳಲ್ಲಿ ಸ್ಪರ್ಶನದಲ್ಲಿ ಮೃದುಕಠಿಣದೊಳಗಾದ ಮುಟ್ಟುತಟ್ಟಿನ ಭೇದವ ಲಕ್ಷಿಸುವಲ್ಲಿ ಶಬ್ದದಿಂದ ಸಪ್ತಸ್ವರದೊಳಗಾದ ನಾನಾ ಘೋಷ ವಾಸನಂಗಳ ಅಳಿದುಳಿದು ತೋರುವ ಸುನಾದ ಸಂಚುಗಳಲ್ಲಿ -ಇಂತೀ ಪಂಚೇಂದ್ರಿಯಂಗಳಲ್ಲಿ ಪ್ರಸಾದ ಮುಂತಾಗಿ ಅರ್ಪಿಸಿಕೊಂಡೆಹೆವೆಂಬಲ್ಲಿ ಗುರುಪ್ರಸಾದಿಗೆ ಲಿಂಗಪ್ರಸಾದವಿಲ್ಲ. ಲಿಂಗಪ್ರಸಾದಿಗೆ ಜಂಗಮಪ್ರಸಾದವಿಲ್ಲ. ಜಂಗಮಪ್ರಸಾದಿಗೆ ಮಹಾಪ್ರಸಾದವಿಲ್ಲ. ಮಹಾಪ್ರಸಾದಿಗೆ ಪರಿಪೂರ್ಣ ಪ್ರಸಾದವಿಲ್ಲ. ಪರಿಪೂರ್ಣಪ್ರಸಾದಿಗೆ ಪಂಚೇಂದ್ರಿಯದೊಳಗಾದ ಮುಟ್ಟಿನ ಪ್ರಸಾದ, ಕಟ್ಟಿನ ಸೂತಕವಿಲ್ಲ. ಅದೆಂತೆಂದಡೆ: ಕರ್ಪೂರದ ಚಿತ್ರಸಾಲೆಯ ಕಿಚ್ಚು ಮುಟ್ಟಿದ ಮತ್ತೆ ಚಿತ್ರವಲ್ಲಿಯೆ ನಿರ್ಲಕ್ಷ್ಯವಾದಂತೆ ಪತ್ರಂಗಳಲ್ಲಿ ನಾನಾ ಅಕ್ಷರಂಗಳ ಲಕ್ಷಿಸಿ ಬರೆದು ಅವು ಕಿಚ್ಚು ಮುಟ್ಟಿ ಸುಟ್ಟಲ್ಲಿ ಎತ್ತಿ ಪ್ರತಿಯ ಲಕ್ಷಿಸಬಹುದೆ ? ಇಂತೀ ಅರಿದರುಹಿನಲ್ಲಿ ಎಡೆದೆರಪಿಲ್ಲದ ಪ್ರಸಾದಿಗೆ ಆ ಗುಣ ಪ್ರಸನ್ನಪ್ರಸಾದಿಯ ಇರವು ದಹನ ಚಂಡಿಕೇಶ್ವರಲಿಂಗದಿರವು.
--------------
ಪ್ರಸಾದಿ ಲೆಂಕಬಂಕಣ್ಣ
ಆಚಾರ ಗುರುಸ್ಥಲ, ಅನುಭಾವ ಲಿಂಗಸ್ಥಲ, ಅವಧಾನ ಅರ್ಪಿತಸ್ಥಲ, ಪರಿಣಾಮ ಪ್ರಸಾದಿಸ್ಥಲ, ಸಮಾಧಾನ ಶರಣಸ್ಥಲ, ಅರಿವು ನಿಃಪತಿಯಾಗಿ ತೆರಹಿಲ್ಲದ ನಿಜದಲ್ಲಿಲಿಂಗೈಕ್ಯವು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆಸುವಳಿದ ಕಾಯದಂತೆ ದೆಸೆಗೆಟ್ಟಿನಯ್ಯ ದೆಸೆಗೆಟ್ಟಿನಯ್ಯ. ಅದೇನು ಕಾರಣವೆಂದಡೆ: ಪಶುಪತಿಯ ಭಕ್ತಿ ವಿಶ್ವಾಸವಿಲ್ಲದೆ ವಿಷಯಾತುರನಾಗಿರ್ದೆನಯ್ಯ. ಇದು ಕಾರಣ, ಎನ್ನ ಸಂಸಾರವಿಷಯಂಗಳ ಮಾಣಿಸಿ ಭಕ್ತನೆಂದೆನಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ ಸಕಲನಿಃಕಲವ ನೋಡಿ, ಮೂರು ಮಂದಿರವ ದಾಂಟಿ, ಮಹಾಮಹಿಮನ ಕೂಡಿ, ನಿಃಪ್ರಿಯವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ ಅನಾಚಾರಿಗಳ ಮುಖವ ನೋಡಬಹುದೆ ? ಆಚಾರವಟ್ಟದ ಹೊನ್ನೆ ? ಮೊತ್ತದ ಮಡಕೆಯೆ ? ಸಂತೆಯ ಬೆವಹಾರವೆ ? ಜೂಜಿನ ಮಾತೆ ? ವೇಶ್ಯೆಯ ಸತ್ಯವೆ ? ಪೂಸರ ವಾಚವೆ ? ಇಂತೀ ವ್ರತದ ನಿಹಿತವ ತಿಳಿದಲ್ಲಿ, ಇಷ್ಟಬಾಹ್ಯನ ವ್ರತಭ್ರಷ್ಟನ ಸರ್ವಪ್ರಮಥರಲ್ಲಿ ಅಲ್ಲಾ ಎಂದವನ ನಾನರಿತು ಕೂಡಿದೆನಾದಡೆ, ಅರಿಯದೆ ಕೂಡಿ ಮತ್ತರಿದಡೆ, ಆ ತನುವ ಬಿಡದಿರ್ದಡೆ ಎನಗದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಪ್ಪಿದಡೆ ಹೊರಗೆಂದು ಮತ್ತೆ ಕೂಡಿಕೊಳ್ಳೆ.
--------------
ಅಕ್ಕಮ್ಮ

ಇನ್ನಷ್ಟು ...
-->