ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯಾ, ಪರಾತ್ಪರ ಸತ್ಯ ಸದಾಚಾರ ಗುರುಲಿಂಗಜಂಗಮದ ಶ್ರೀಚರಣವನು ಹಿಂದೆ ಹೇಳಿದ ಅಚ್ಚಪ್ರಸಾದಿಯೋಪಾದಿಯಲ್ಲಿ ನಿರ್ವಂಚಕತ್ವದಿಂದ ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಸಮರ್ಪಿಸಿ, ಒಪ್ಪತ್ತು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಅರ್ಚನೆಯ ಮಾಡಿ, ಆ ಚರಣೋದಕ ಪ್ರಸಾದವನು ತನ್ನ ಸರ್ವಾಂಗದಲ್ಲಿ ನೆಲೆಸಿರ್ಪ ಇಷ್ಟ ಮಹಾಲಿಂಗದೇವಂಗೆ ಕೊಟ್ಟು ಕೊಂಬುವಂತಹದೆ ಇದಿರಿಟ್ಟು ಜಂಗಮ ಪಾದೋದಕ ಪ್ರಸಾದವ ಕೊಂಬ ಆಚರಣೆಯ ನಿಲುಗಡೆ ನೋಡಾ. ಆಮೇಲೆ ಒಪ್ಪತ್ತು ಸಂಬಂಧವಿಟ್ಟು ಆಚರಿಸುವ ನಿಲುಕಡೆ ಎಂತೆಂದಡೆ: ಅಯ್ಯಾ, ನಿನ್ನ ಷಟ್‍ಸ್ಥಾನದಲ್ಲಿ ನೆಲೆಸಿರ್ಪ ಇಷ್ಟಮಹಾಲಿಂಗದೇವನ ತ್ರಿವಿಧಸ್ಥಾನದಲ್ಲಿ ಓಂ ಬಸವಣ್ಣ ಚೆನ್ನಬಸವಣ್ಣ ಅಲ್ಲಮಪ್ರಭುವೆಂಬ ತ್ರಿವಿಧ ನಾಮಸ್ವರೂಪವಾದ ಷೋಡಶಾಕ್ಷರಂಗಳೆ ಷೋಡಶವರ್ಣವಾಗಿ ನೆಲೆಸಿಪ್ಪರು ನೋಡಾ. ಇಂತು ಷೋಡಶಕಳಾಸ್ವರೂಪವಾದ ಚಿದ್ಘನ ಮಹಾಲಿಂಗದೇವನ ನಿರಂಜನ ಜಂಗಮದೋಪಾದಿಯಲ್ಲಿ ಸಗುಣ ನಿರ್ಗುಣ ಪೂಜೆಗಳ ಮಾಡಿ ಜಂಗಮಚರಣಸೋಂಕಿನಿಂ ಬಂದ ಗುರುಪಾದೋದಕವಾದಡೂ ಸರಿಯೆ, ಅದು ದೊರೆಯದಿದ್ದಡೆ, ಲಿಂಗಾಣತಿಯಿಂ ಬಂದೊದಗಿದ ಪರಿಣಾಮೋದಕವಾದಡೂ ಸರಿಯೆ, ಒಂದು ಭಾಜನದಲ್ಲಿ ಸೂಕ್ಷ್ಮದಿಂ ರಚಿಸಿ ಆ ಉದಕದೊಳಗೆ ಹಸ್ತೋದಕ ಮಂತ್ರೋದಕ ಭಸ್ಮೋದಕವ ಮಾಡಿ, ಆ ಮೇಲೆ ಅನಾದಿ ಮೂಲಪ್ರಣವ ಪ್ರಸಾದಪ್ರಣವದೊಳಗೆ ಅಖಂಡಜ್ಯೋತಿಪ್ರಣವ, ಅಖಂಡಮಹಾಜ್ಯೋತಿಪ್ರಣವವ ಲಿಖಿತವಮಾಡಿ, ಶುದ್ಧಾದಿಯಾದ ಪೂರ್ಣಭಕ್ತಿಯಿಂದ ಮಹಾಚಿದ್ಘನತೀರ್ಥವೆಂದು ಭಾವಿಸಿ ಪಂಚಾಕ್ಷರ ಷಡಕ್ಷರ ಮಂತ್ರಧ್ಯಾನದಿಂದ ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ, ಮೂರು ವೇಳೆ ಪ್ರದಕ್ಷಿಣವ ಮಾಡಿ, ಆ ಚಿದ್ಘನ ತೀರ್ಥವನು ದ್ವಾದಶದಳ ಕಮಲದ ಮಧ್ಯದಲ್ಲಿ ನೆಲೆಸಿರ್ಪ ಇಷ್ಟ ಮಹಾಲಿಂಗ ಜಂಗಮಕ್ಕೆ ಅಷ್ಟವಿಧಮಂತ್ರ ಸಕೀಲಂಗಳಿಂದ ಆಚಾರಾದಿ ಶೂನ್ಯಾಂತವಾದ ಅಷ್ಟವಿಧ ಲಿಂಗಧ್ಯಾನದಿಂದ ಅಷ್ಟವಿಧ ಬಿಂದುಗಳ ಸಮರ್ಪಿಸಿದಲ್ಲಿಗೆ ಅಷ್ಟವಿಧೋದಕವಾಗುವುದಯ್ಯಾ. ಆ ಇಷ್ಟಮಹಾಲಿಂಗ ಜಂಗಮವೆತ್ತಿ ಅಷ್ಟಾದಶಮಂತ್ರ ಸ್ಮರಣೆಯಿಂದ ಮುಗಿದಲ್ಲಿಗೆ ನವಮೋದಕವಾಗುವುದಯ್ಯಾ. ಉಳಿದೋದಕವ ತ್ರಿವಿಧ ಪ್ರಣವಧ್ಯಾನದಿಂದ ಮುಕ್ತಾಯವ ಮಾಡಿದಲ್ಲಿಗೆ ದಶವಿಧೋದಕವೆನಿಸುವುದಯ್ಯಾ. ಹೀಗೆ ಮಹಾಜ್ಞಾನ ಲಿಂಗಜಂಗಮಸ್ವರೂಪ ಪಾದತೀರ್ಥ ಮುಗಿದ ಮೇಲೆ ತಟ್ಟೆ ಬಟ್ಟಲಲ್ಲಿ ಎಡೆಮಾಡಬೇಕಾದಡೆ ಗೃಹದಲ್ಲಿರ್ದ ಕ್ರಿಯಾಶಕ್ತಿಯರಿಗೆ ಧಾರಣವಿರ್ದಡೆ ತಾ ಸಲಿಸಿದ ಪಾದೋದಕ ಪ್ರಸಾದವ ಕೊಡುವುದಯ್ಯಾ. ಸಹಜಲಿಂಗಭಕ್ತರಾದಡೆ ಮುಖ ಮಜ್ಜನವ ಮಾಡಿಸಿ ತಾ ಧರಿಸುವ ವಿಭೂತಿಧಾರಣವ ಮಾಡಿಸಿ ಶಿವಶಿವಾ ಹರಹರ ಬಸವಲಿಂಗಾ ಎಂದು ಬೋಧಿಸಿ ಎಡೆಮಾಡಿಸಿಕೊಂಬುವುದಯ್ಯಾ. ಆಮೇಲೆ ತಾನು ಸ್ಥಲವಾದಡೆ ಸಂಬಂಧಪಟ್ಟು, ಪರಸ್ಥಲವಾದಡೆ ಚಿದ್ಘನ ಇಷ್ಟಮಹಾಲಿಂಗ ಜಂಗಮವ ವಾಮಕರಸ್ಥಲದಲ್ಲಿ ಮೂರ್ತಮಾಡಿಸಿಕೊಂಡು ದಕ್ಷಿಣಹಸ್ತದಲ್ಲಿ ಗುರುಲಿಂಗಜಂಗಮ ಸೂತ್ರವಿಡಿದು ಬಂದ ಕ್ರಿಯಾಭಸಿತವ ಲೇಪಿಸಿ, ಮೂಲಪ್ರಣವ ಪ್ರಸಾದಪ್ರಣವದೊಳಗೆ ಗೋಳಕಪ್ರಣವ ಅಖಂಡಗೋಳಕಪ್ರಣವ ಅಖಂಡ ಮಹಾಗೋಳಕಪ್ರಣವ, ಜ್ಯೋತಿಪ್ರಣವ ಧ್ಯಾನದಿಂದ ದ್ವಾದಶ ಮಣಿಯ ಧ್ಯಾನಿಸಿ ಪ್ರದಕ್ಷಿಸಿ, ಮೂಲಮೂರ್ತಿ ಲಿಂಗಜಂಗಮದ ಮಸ್ತಕದ ಮೇಲೆ ಸ್ಪರ್ಶನವ ಮಾಡಿ, ಬಟ್ಟಲಿಗೆ ಮೂರು ವೇಳೆ ಸ್ಪರ್ಶನವ ಮಾಡಿ, ಪದಾರ್ಥದ ಪೂರ್ವಾಶ್ರಯವ ಕಳೆದು ಶುದ್ಧಪ್ರಸಾದವೆಂದು ಭಾವಿಸಿ, ಆ ಇಷ್ಟ ಮಹಾಲಿಂಗ ಜಂಗಮಕ್ಕೆ ಅಷ್ಟಾದಶ ಮಂತ್ರಸ್ಮರಣೆಯಿಂದ ಮೂರುವೇಳೆ ರೂಪ ಸಮರ್ಪಿಸಿ, ಎರಡು ವೇಳೆ ರೂಪ ತೋರಿ, ಚಿರಪ್ರಾಣಲಿಂಗ ಮಂತ್ರ ಜಿಹ್ವೆಯಲ್ಲಿಟ್ಟು ಆರನೆಯ ವೇಳೆಗೆ ಭೋಜ್ಯಗಟ್ಟಿ ಆ ಇಷ್ಟಮಹಾಲಿಂಗ ಮಂತ್ರಧ್ಯಾನದಿಂದ ಸಮರ್ಪಿಸಿ, ಷಡ್ವಿಧ ಲಿಂಗಲೋಲುಪ್ತಿಯಿಂದ ಸಂತೃಪ್ತನಾಗಿ ಆಚರಿಸಿದಾತನೆ ಗುರುಭಕ್ತನಾದ ನಿಚ್ಚಪ್ರಸಾದಿಯೆಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಅಂಗಸಂಗದಲ್ಲಿ ಲಿಂಗಸಂಗಿಯಾದೆನು. ಲಿಂಗಸಂಗದಲ್ಲಿ ಅಂಗಸಂಗಿಯಾದೆನು. ಉಭಯಸಂಗವನೂ ಅರಿಯದೆ ಪರಿಣಾಮಿಯಾದೆನು. ನುಡಿಯ ಗಡಣವ ಮರೆದು ತೆರಹಿಲ್ಲದಿದ್ದೆನು. ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಬೆರಸಿದ ಬಳಿಕ ಎನ್ನ ನಾನು ಏನೆಂದೂ ಅರಿಯೆನಯ್ಯಾ.
--------------
ಅಕ್ಕಮಹಾದೇವಿ
ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ. ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು ಬಂದೆನ್ನ ನೆರೆದ ನೋಡವ್ವಾ. ಆತನನಪ್ಪಿಕೊಂಡು ತಳವೆಳಗಾದೆನು. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ಣಮುಚ್ಚಿ ತೆರೆದು ತಳವೆಳಗಾದೆನು.
--------------
ಅಕ್ಕಮಹಾದೇವಿ
ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ. ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ. ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ. ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ. ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ ? ಚೆನ್ನಮಲ್ಲಿಕಾರ್ಜುನ, ಕಾಮನಕೊಂದು ಮನಸಿಜನಾಗುಳುಹಿದಡೆ ಮನಸಿಜನ ತಲೆಯ ಬರಹವ ತೊಡೆದೆನು.
--------------
ಅಕ್ಕಮಹಾದೇವಿ
ಅಯ್ಯಾ, ಚಿದಂಗ ಚಿದ್ಘನಲಿಂಗ ಶಕ್ತಿ ಭಕ್ತಿ ಹಸ್ತ ಮುಖ ಪದಾರ್ಥ ಪ್ರಸಾದ ಎಂಬಿವಾದಿಯಾದ ಸಮಸ್ತ ಸಕೀಲಂಗಳ ನೆಲೆ ಕಲೆಯರಿಯದೆ, ಜಿಹ್ವಾಲಂಪಟಕ್ಕೆ ಆಹ್ವಾನಿಸಿ, ಗುಹ್ಯಾಲಂಪಟಕ್ಕೆ ವಿಸರ್ಜಿಸಿ, ಸಕಲೇಂದ್ರಿಯಮುಖದಲ್ಲಿ ಮೋಹಿಯಾಗಿ, ಸದ್ಗುರುಕರುಣಾಮೃತರಸ ತಾನೆಂದರಿಯದೆ ಬರಿದೆ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಗುರುಚರಪರವೆಂದು ಬೊಗಳುವ ಕುನ್ನಿಗಳ ನೋಡಿ ಎನ್ನ ಮನ ಬೆರಗು ನಿಬ್ಬೆರಗು ಆಯಿತ್ತಯ್ಯಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಘಟಿತ ಘಟಿತನ ಒಲವಿನ ಶಿಶು ಕಟ್ಟಿದೆನು ಜಗಕ್ಕೆ ಬಿರಿದನು. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳಿಗೆ ಇಕ್ಕಿದೆನು ಕಾಲಲಿ ತೊಡರನು. ಗುರುಕೃಪೆಯೆಂಬ ತಿಗುರನಿಕ್ಕಿ ಮಹಾಶರಣೆಂಬ ತಿಲಕವನಿಕ್ಕಿ ನಿನ್ನ ಕೊಲುವೆ ಗೆಲುವೆ ಶಿವಶರಣೆಂಬ ಅಲಗ ಕೊಂಡು. ಬಿಡು ಬಿಡು ಕರ್ಮವೆ, ನಿನ್ನ ಕೊಲ್ಲದೆ ಮಾಣೆನು. ಕೆಡಹಿಸಿಕೊಳ್ಳದೆನ್ನ ನುಡಿಯ ಕೇಳಾ. ಕೆಡದ ಶಿವಶರಣೆಂಬ ಅಲಗನೆ ಕೊಂಡು ನಿನ್ನ ಕೊಲುವೆ ಗೆಲುವೆ ನಾನು. ಬ್ರಹ್ಮಪಾಶವೆಂಬ ಕಳನನೆ ಸವರಿ, ವಿಷ್ಣು ಮಾಯೆಯೆಂಬ ಎಡೆಗೋಲನೆ ನೂಕಿ, ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿ ಕಾದುವೆನು ನಾನು.
--------------
ಅಕ್ಕಮಹಾದೇವಿ
ಅಂದೂ ನೀನೆ, ಇಂದೂ ನೀನೆ, ಎಂದೂ ನೀನೆ, ಕೇಳಾ ತಂದೆ. ನಿನ್ನ ಬೆಂಬಳಿವಿಡಿದ ಹಳೆಮಗಳಾನಯ್ಯ ಅಂದೂ ಇಂದೂ ಎಂದೂ ನಿನ್ನ ನಂಬಿದ ಒಲವಿನ ಶಿಶು ನಾನಯ್ಯ. ಒಂದಲ್ಲದೆ ಎರಡರಿಯೆನಯ್ಯಾ. ಎನ್ನ ತಂದೆ ಕೇಳಾ, ಚೆನ್ನಮಲ್ಲಿಕಾರ್ಜುನಾ ನಿಮ್ಮ ಎಂಜಲನುಂಬ ಹಳೆಯವಳಾನಯ್ಯಾ.
--------------
ಅಕ್ಕಮಹಾದೇವಿ
ಅಯ್ಯಾ, ಸರ್ವಮೂಲಹಂಕಾರವಿಡಿದು ಕುಲಭ್ರಮೆ ಛಲಭ್ರಮೆ ಜಾತಿಭ್ರಮೆ, ನಾಮ ವರ್ಣ ಆಶ್ರಮ ಮತ ಶಾಸ್ತ್ರಭ್ರಮೆ, ತರ್ಕಭ್ರಮೆ ರಾಜ್ಯಭ್ರಮೆ, ಧನ ಧಾನ್ಯ ಪುತ್ರ ಮಿತ್ರಭ್ರಮೆ, ಐಶ್ವರ್ಯ ತ್ಯಾಗ ಭೋಗ ಯೋಗಭ್ರಮೆ, ಕಾಯ ಕರಣ ವಿಷಯಭ್ರಮೆ, ವಾಯು ಮನ ಭಾವ ಜೀವ ಮೋಹಭ್ರಮೆ, ನಾಹಂ ಕೋಹಂ ಸೋಹಂ ಮಾಯಾಭ್ರಮೆ ಮೊದಲಾದ ಬತ್ತೀಸ ಪಾಶಭ್ರಮಿತರಾಗಿ ತೊಳಲುವ ವೇಷಧಾರಿಗಳ ಕಂಡು ಶಿವಶಕ್ತಿ ಶಿವಭಕ್ತ ಶಿವಪ್ರಸಾದಿ ಶಿವಶರಣ ಶಿವೈಕ್ಯ ಶಿವಜಂಗಮವೆಂದು ನುಡಿಯಲಾರದೆ ಎನ್ನ ಮನ ನಾಚಿ ನಿಮ್ಮಡಿಗಬ್ಥಿಮುಖವಾಯಿತ್ತಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ, ಎಲುವಿನ ತಡಿಕೆ, ಕೀವಿನ ಹಡಿಕೆ ಸುಡಲೀ ದೇಹವ ; ಒಡಲುವಿಡಿದು ಕೆಡದಿರು, ಚೆನ್ನಮಲ್ಲಿಕಾರ್ಜುನನನರಿಯದ ಮರುಳೆ.
--------------
ಅಕ್ಕಮಹಾದೇವಿ
ಅಯ್ಯಾ, ನೀನು ಕೇಳಿದಡೆ ಕೇಳು, ಕೇಳದಡೆ ಮಾಣು ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ. ಅಯ್ಯಾ, ನೀನು ನೋಡಿದಡೆ ನೋಡು, ನೋಡದಡೆ ಮಾಣು ಆನು ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯಾ. ಅಯ್ಯಾ, ನೀನು ಮೆಚ್ಚಿದೆಡೆ ಮೆಚ್ಚು, ಮೆಚ್ಚದಡೆ ಮಾಣು ಆನು ನಿನ್ನನಪ್ಪಿದಲ್ಲದೆ ಸೈರಿಸಲಾರೆನ‍ಯ್ಯಾ. ಅಯ್ಯಾ, ನೀನು ಒಲಿದಡೆ ಒಲಿ, ಒಲಿಯದಡೆ ಮಾಣು ಆನು ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ಆನು ನಿಮ್ಮನರ್ಚಿಸಿ ಪೂಜಿಸಿ ಹರುಷದೊಳೋಲಾಡುವೆನಯ್ಯಾ.
--------------
ಅಕ್ಕಮಹಾದೇವಿ
ಅನಿಮಿಷನಲ್ಲಮಯ್ಯ, ಮರುಳಶಂಕರಯ್ಯ, ಕೋಲಶಾಂತಯ್ಯ, ಮಾದಾರ ಧೂಳಯ್ಯ, ಮಿಂಡಮಲ್ಲಿನಾಥ, ಚೆನ್ನಬಸವಣ್ಣ, ಚೇರಮರಾಯ, ತೆಲುಗ ಜೊಮ್ಮಣ್ಣ, ಕಿನ್ನರಯ್ಯ, ಹಲಾಯುಧ, ದಾಸಿಮಯ್ಯ, ಭಂಡಾರಿ, ಬಸವರಾಜ ಮುಖ್ಯವಾದ ಚೆನ್ನಮಲ್ಲಿಕಾರ್ಜುನನ ಶರಣರಿಗೆ ನಮೋ ನಮೋ ಎಂಬೆನು.
--------------
ಅಕ್ಕಮಹಾದೇವಿ
ಅಳಿಸಂಕುಲವೆ, ಮಾಮರವೆ, ಬೆಳುದಿಂಗಳೆ, ಕೋಗಿಲೆಯೆ ನಿಮ್ಮನೆಲ್ಲರನೂ ಒಂದ ಬೇಡುವೆನು. ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವ ಕಂಡಡೆ ಕರೆದು ತೋರಿರೆ.
--------------
ಅಕ್ಕಮಹಾದೇವಿ
ಅರಿಯದವರೊಡನೆ ಸಂಗವ ಮಾಡಿದಡೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ. ಬಲ್ಲವರೊಡನೆ ಸಂಗವ ಮಾಡಿದಡೆ ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸಂಗವ ಮಾಡಿದಡೆ ಕರ್ಪುರದ ಗಿರಿಯನುಎಕೊಂಬಂತೆ.
--------------
ಅಕ್ಕಮಹಾದೇವಿ
ಅಕ್ಕ ಕೇಳೌ, ನಾನೊಂದು ಕನಸ ಕಂಡೆ. ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ. ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ. ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು.
--------------
ಅಕ್ಕಮಹಾದೇವಿ
ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ? ನೀನು ಬಹಿರಂಗವ್ಯವಹಾರದೂರಸ್ಥನು. ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ? ನೀನು ವಾಙ್ಮನಕ್ಕತೀತನು. ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯಾ? ನೀನು ನಾದಾತೀತನು. ಭಾವಜ್ಞಾನದಿಂದ ಒಲಿಸುವೆನೆ ಅಯ್ಯಾ? ನೀನು ಮತಿಗತೀತನು. ಹೃದಯ ಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ? ನೀನು ಸರ್ವಾಂಗ ಪರಿಪೂರ್ಣನು. ಒಲಿಸಲೆನ್ನಳವಲ್ಲ ನೀನೊಲಿವುದೆ ಸುಖವಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ.
--------------
ಅಕ್ಕಮಹಾದೇವಿ
ಅಮೃತವನುಂಬ ಶಿಶುವಿಂಗೆ ವಿಷವನೂಡುವರೆ ಅಯ್ಯಾ ನೆಳಲ ತಂಪಿನಲ್ಲಿ ಬೆಳೆದ ಸಸಿಗೆ ಉರಿಯ ಬೇಲಿಯ ಕಟ್ಟುವರೆ ಅಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಕರುಣದ ಕಂದನೊಡನೆ ಸೂನೆಗಾರರ ಮಾತನಾಡಿಸುವರೆ ಅಯ್ಯಾ
--------------
ಅಕ್ಕಮಹಾದೇವಿ
ಅರಿವು ಸಾಧ್ಯವಾಯಿತ್ತೆಂದು, ಗುರುಲಿಂಗಜಂಗಮವ ಬಿಡಬಹುದೆ ? ಸಂದು ಸಂಶಯವಳಿದು ಅಖಂಡ ಜ್ಞಾನವಾಯಿತ್ತೆಂದು ಪರಧನ ಪರಸ್ತ್ರೀಯರುಗಳಿಗೆ ಅಳುಪಬಹುದೆ ? 'ಯತ್ರ ಜೀವಃ ತತ್ರ ಶಿವಃ' ಎಂಬ ಅಭಿನ್ನ ಜ್ಞಾನವಾಯಿತ್ತೆಂದು ಶುನಕ ಸೂಕರ ಕುಕ್ಕುಟ ಮಾರ್ಜಾಲಂಗಳ ಕೂಡೆ ಭುಂಜಿಸಬಹುದೆ ? ಭಾವದಲ್ಲಿ ತನ್ನ ನಿಜದ ನೆಲೆಯನರಿತಿಹುದು' ಸುಜ್ಞಾನ ಸತ್ಕ್ರಿಯಾ ಸುನೀತಿ ಮಾರ್ಗದಲ್ಲಿ ವರ್ತಿಸುವುದು. ಹೀಂಗಲ್ಲದೆ ಜ್ಞಾನವಾಯಿತ್ತೆಂದು ತನ್ನ ಮನಕ್ಕೆ ಬಂದಹಾಂಗೆ ಮೀರಿನುಡಿದು ನಡೆದೆನಾದಡೆ ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯನು ?
--------------
ಅಕ್ಕಮಹಾದೇವಿ
ಅಲ್ಲೆಂದಡೆ ಉಂಟೆಂಬುದೀ ಮಾಯೆ; ಒಲ್ಲೆನೆಂದಡೆ ಬಿಡದೀ ಮಾಯೆ ಎನಗಿದು ವಿಧಿಯೆ! ಚೆನ್ನಮಲ್ಲಿಕಾರ್ಜುನಯ್ಯಾ, ಒಪ್ಪಿ ಮರೆವೊಕ್ಕಡೆ ಮತ್ತುಂಟೆ ಕಾಯಯ್ಯಾ ಶಿವಧೋ !
--------------
ಅಕ್ಕಮಹಾದೇವಿ
ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ, ಬಯಸಿ ಹೊಕ್ಕಡಿಲ್ಲ, ತಪಸ್ಸು ಮಾಡಿದಡಿಲ್ಲ. ಅದು ತಾನಹ ಕಾಲಕ್ಕಲ್ಲದೆ ಸಾಧ್ಯವಾಗದು. ಶಿವನೊಲಿದಲ್ಲದೆ ಕೈಗೂಡದು. ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ ನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು.
--------------
ಅಕ್ಕಮಹಾದೇವಿ
ಅಯ್ಯಾ, ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಕ್‍ಜ್ಞಾನ ಸದ್ವರ್ತನೆ ಸಗುಣ ನಿರ್ಗುಣ ನಿಜಗುಣ ಸಚ್ಚರಿತ್ರ ಸದ್ಭಾವ ಅಕ್ರೋಧ ಸತ್ಯವಚನ ಶಮೆದಮೆ ಭವಿಭಕ್ತಭೇದ ಸತ್ಪಾತ್ರದ್ರವ್ಯಾರ್ಪಣ ಗೌರವಬುದ್ಧಿ ಲಿಂಗಲೀಯ ಜಂಗಮಾನುಭಾವ ದಶವಿಧಪಾದೋದಕ ಏಕಾದಶಪ್ರಸಾದ ಷೋಡಶಭಕ್ತಿನಿರ್ವಾಹ, ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಚನೆ, ತ್ರಿವಿಧ ಷಡ್ವಿಧ ನವವಿಧ ಜಪ, ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಪಣ. ಚಿದ್ವಿಭೂತಿ ಸ್ನಾನ ಧೂಳನ ಧಾರಣ, ಸರ್ವಾಂಗದಲ್ಲಿ ಚಿದ್ರುದ್ರಾಕ್ಷಿಧಾರಣ, ತಾ ಮಾಡುವ ಸತ್ಯಕಾಯಕ, ತಾ ಬೇಡುವ ಸದ್ಭಕ್ತಿಭಿಕ್ಷ, ತಾ ಕೊಟ್ಟು ಕೊಂಬ ಭೇದ, ತಾನಾಚರಿಸುವ ಸತ್ಯ ನಡೆನುಡಿ, ತಾ ನಿಂದ ನಿರ್ವಾಣಪದ. ಇಂತೀ ಬತ್ತೀಸ ನೆಲೆಕಲೆಗಳ ಸದ್ಗುರುಮುಖದಿಂದರಿದ ಬಸವ ಮೊದಲಾದ ಸಮಸ್ತ ಗಣಂಗಳೆಲ್ಲಾ ಪ್ರಮಥ ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದರು ನೋಡಾ. ಇಂತು ಪ್ರಮಥಗಣವಾಚರಿಸಿದ ಸತ್ಯ ಸನ್ಮಾರ್ಗವರಿಯದ ಮೂಢ ಅಧಮರನೆಂತು ಶಿವಶಕ್ತಿ ಶಿವಭಕ್ತ ಶಿವಜಂಗಮವೆಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಅಂಗೈಯೊಳಗಣ ಲಿಂಗವ ಪೂಜಿಸುತ್ತ, ಮಂಗಳಾರತಿಗಳನು ತೊಳಗಿ ಬೆಳಗುತ್ತಲಿರ್ದೆ ನೋಡಯ್ಯಾ. ಕಂಗಳ ನೋಟ, ಕರುವಿಟ್ಟ ಭಾವ, ಹಿಂಗದ ಮೋಹ ತೆರಹಿಲ್ಲದಿರ್ದೆ ನೋಡಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.
--------------
ಅಕ್ಕಮಹಾದೇವಿ
ಅರಸಿ ಮೊರೆವೊಕ್ಕಡೆ ಕಾವ ಗುರುವೆ, ಜಯ ಜಯ ಗುರುವೆ, ಆರೂ ಅರಿಯದ ಬಯಲೊಳಗೆ ಬಯಲಾಗಿ ನಿಂದ ನಿಲವ ಹಿಡಿದೆನ್ನ ಕರದಲ್ಲಿ ತೋರದ ಗುರುವೆ, ಚೆನ್ನಮಲ್ಲಿಕಾರ್ಜುನ ಗುರುವೆ, ಜಯ ಜಯ ಗುರುವೆ.
--------------
ಅಕ್ಕಮಹಾದೇವಿ
ಅರ್ಥಸನ್ಯಾಸಿಯಾದಡೇನಯ್ಯಾ, ಆವಂಗದಿಂದ ಬಂದಡೂ ಕೊಳದಿರಬೇಕು. ರುಚಿಸನ್ಯಾಸಿಯಾದಡೇನಯ್ಯಾ, ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು. ಸ್ತ್ರೀ ಸನ್ಯಾಸಿಯಾದಡೇನಯ್ಯಾ, ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು. ದಿಗಂಬರಿಯಾದಡೇನಯ್ಯಾ, ಮನ ಬತ್ತಲೆ ಇರಬೇಕು. ಇಂತೀ ಚತುರ್ವಿಧದ ಹೊಲಬರಿಯದೆ ವೃಥಾ ಕೆಟ್ಟರು ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಂಗವ ಲಿಂಗಮುಖದಲ್ಲಿ ಅರ್ಪಿಸಿ, ಅಂಗ ಅನಂಗವಾಯಿತ್ತು. ಮನವ ಅರಿವಿಂಗರ್ಪಿಸಿ, ಮನ ಲಯವಾಯಿತ್ತು. ಭಾವವ ತೃಪ್ತಿಗರ್ಪಿಸಿ, ಭಾವ ಬಯಲಾಯಿತ್ತು. ಅಂಗ ಮನ ಭಾವವಳಿದ ಕಾರಣ ಕಾಯ ಅಕಾಯವಾಯಿತ್ತು. ಎನ್ನ ಕಾಯದ ಸುಖಭೋಗವ ಲಿಂಗವೆ ಭೋಗಿಸುವನಾಗಿ, ಶರಣಸತಿ ಲಿಂಗಪತಿಯಾದೆನು. ಇದು ಕಾರಣ, ಚೆನ್ನಮಲ್ಲಿಕಾರ್ಜುನನೆಂಬ ಗಂಡನ ಒಳಹೊಕ್ಕು ಬೆರಸಿದೆನು.
--------------
ಅಕ್ಕಮಹಾದೇವಿ
ಅಯ್ಯಾ, ತನ್ನ ತಾನರಿಯಬೇಕಲ್ಲದೆ, ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ ಕೇಳಲುಂಟೆ? ಚೆನ್ನಮಲ್ಲಿಕಾರ್ಜುನಾ, ನೀನರಿವಾಗಿ ಎನಗೆ ಮುಂದುದೋರಿದ ಕಾರಣ ನಿಮ್ಮಿಂದ ನಿಮ್ಮನರಿವೆನು.
--------------
ಅಕ್ಕಮಹಾದೇವಿ

ಇನ್ನಷ್ಟು ...