ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಲುಮೆ ಒಚ್ಚತವಾದವರು ಕುಲಛಲವನರಸುವರೆ ? ಮರುಳುಗೊಂಡವರು ಲಜ್ಜೆನಾಚಿಕೆಯ ಬಲ್ಲರೆ ? ಚೆನ್ನಮಲ್ಲಿಕಾರ್ಜುನದೇವಗೊಲಿದವರು ಲೋಕಾಭಿಮಾನವ ಬಲ್ಲರೆ ?
--------------
ಅಕ್ಕಮಹಾದೇವಿ
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ ಎಂಬತ್ತುನಾಲ್ಕುಲಕ್ಷಯೋನಿಯೊಳಗೆ ಬಾರದ ಭವಂಗಳಲ್ಲಿ ಬಂದೆ ಬಂದೆ. ಉಂಡೆ ಉಂಡೆ ಸುಖಾಸುಖಂಗಳ. ಹಿಂದಣ ಜನ್ಮ ತಾನೇನಾದಡೆಯೂ ಆಗಲಿ ಮುಂದೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಒಳಗಣ ಗಂಡನಯ್ಯಾ, ಹೊರಗಣ ಮಿಂಡನಯ್ಯಾ. ಎರಡನೂ ನಡೆಸಲು ಬಾರದಯ್ಯಾ. ಲೌಕಿಕ ಪಾರಮಾರ್ಥವೆಂಬೆರಡನೂ ನಡೆಸಲು ಬಾರದಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ಬಿಲ್ವ ಬೆಳವಲಕಾಯಿ ಒಂದಾಗಿ ಹಿಡಿಯಲು ಬಾರದಯ್ಯಾ.
--------------
ಅಕ್ಕಮಹಾದೇವಿ
ಒಂದರಳ ಶಿವಂಗೆಂದ ಫಲದಿಂದ ಶಿವಪದಂಗಳಾದುದ ಕೇಳಿಯರಿಯಾ ? ಒಂದರಳನೇರಿಸುವಲ್ಲಿ ಅಡ್ಡವಿಸಿದರೆ ಗೊಂದಣದ ಕುಲಕೋಟಿಗೆ ನರಕ ಕಾಣಾ. ಇಂದು ಚೆನ್ನಮಲ್ಲಿಕಾರ್ಜುನನ ವೇಳೆ ತಡೆದಡೆ ಮುಂದೆ ಬಹ ನರಕಕ್ಕೆ ಕಡೆಯಿಲ್ಲ ಮರುಳೆ.
--------------
ಅಕ್ಕಮಹಾದೇವಿ
ಒಪ್ಪುವ ವಿಭೂತಿಯ ನೊಸಲಲ್ಲಿ ಧರಿಸಿ, ದೃಷ್ಟಿವಾ[ರಿ] ನಿಮ್ಮನೋಡಲೊಡನೆ ಬೆಟ್ಟದಷ್ಟು ತಪ್ಪುಳ್ಳಡೆಯೂ ಮುಟ್ಟಲಮ್ಮವು ನೋಡಾ. ದುರಿತ ಅನ್ಯಾಯವ ಪರಿಹರಿಸಬಲ್ಲಡೆ 'ಓಂ ನಮಃ ಶಿವಾಯ' ಶರಣೆಂಬುದೆ ಮಂತ್ರ. ಅದೆಂತೆಂದಡೆ 'ನಮಃ ಶಿವಾಯೇತಿ ಮಂತ್ರಂ ಯಃ ಕರೋತಿ ತ್ರಿಪುಂಡ್ರಕಂ ಸಪ್ತಜನ್ಮಕೃತಂ ಪಾಪಂ ತತ್‍ಕ್ಷಣಾದೇವ ನಶ್ಯತ್ಬಿ' ಇಂತೆಂದುದಾಗಿ, ಸಿಂಹದ ಮರಿಯ ಸೀಳ್ನಾಯಿ ತಿಂಬಡೆ ಭಂಗವಿನ್ನಾರದೊ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು. ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು. ಅವು ನೀಡಿದವು ತಮ್ಮ ಲಿಂಗಕ್ಕೆಂದು. ಆನು ಬೇಡಿ ಭವಿಯಾದೆನು ; ಅವು ನೀಡಿ ಭಕ್ತರಾದವು. ಇನ್ನು ಬೇಡಿದೆನಾದಡೆ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಾಣೆ.
--------------
ಅಕ್ಕಮಹಾದೇವಿ
ಒಳಗ ಶೋಧಿಸಿ ಹೊರಗ ಶುದ್ಧಯಿಸಿ; ಒಳಹೊರಗೆಂಬ ಉಭಯ ಶಂಕೆಯ ಕಳೆದು, ಸ್ಫಟಿಕದ ಶಲಾಕೆಯಂತೆ ತಳವೆಳಗು ಮಾಡಿ ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ- ಶಿಷ್ಯನ ಸರ್ವ ಪ್ರಪಂಚ ನಿವೃತ್ತಿಯಂ ಮಾಡಿ ನಿಜೋಪದೇಶವನಿತ್ತು, ಆ ಶಿಷ್ಯನ ನಿಜದಾದಿಯನೈದಿಸುವನೀಗ ಜ್ಞಾನಗುರು. ಆ ಸಹಜ ಗುರುವೀಗ ಜಗದಾರಾಧ್ಯನು, ಅವನ ಶ್ರೀಪಾದಕ್ಕೆ ನಮೋ ನಮೋ ಎಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಒಬ್ಬಂಗೆ ಇಹವುಂಟು ಒಬ್ಬಂಗೆ ಪರವುಂಟು, ಒಬ್ಬಂಗೆ ಇಹವಿಲ್ಲ ಒಬ್ಬಂಗೆ ಪರವಿಲ್ಲ. ಒಬ್ಬಂಗೆ ಇಹಪರವೆರಡೂ ಇಲ್ಲ. ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ ಇಹಪರವೆರಡೂ ಉಂಟು.
--------------
ಅಕ್ಕಮಹಾದೇವಿ
ಒಡಲಿಲ್ಲದ ನುಡಿಯಿಲ್ಲದ ಕಡೆಯಿಲ್ಲದ ನಲ್ಲನ ಒಡಗೂಡಿ ಸುಖಿಯಾದೆ ಕೇಳಿರಯ್ಯಾ. ಭಾಷೆ ಪೈಸರವಿಲ್ಲ, ಓಸರಿಸೆನನ್ಯಕ್ಕೆ, ಆಸೆ ಮಾಡೆನು ಮತ್ತೆ ಭಿನ್ನ ಸುಖಕ್ಕೆ. ಆರಳಿದು ಮೂರಾಗಿ, ಮೂರಳಿದು ಎರಡಾಗಿ, ಎರಡಳಿದು ಒಂದಾಗಿ ನಿಂದೆನಯ್ಯಾ. ಬಸವಣ್ಣ ಮೊದಲಾದ ಶರಣರಿಗೆ ಶರಣಾರ್ಥಿ ಆ ಪ್ರಭುವಿನಿಂದ ಕೃತಕೃತ್ಯಳಾದೆನು ನಾನು. ಮರೆಯಲಾಗದು, ನಿಮ್ಮ ಶಿಶುವೆಂದು ಎನ್ನನು, ಚೆನ್ನಮಲ್ಲಿಕಾರ್ಜುನನ ಬೆರೆಸೆಂದು ಹರಸುತ್ತಿಹುದು.
--------------
ಅಕ್ಕಮಹಾದೇವಿ
ಒಬ್ಬನ ಮನೆಯಲುಂಡು, ಒಬ್ಬನ ಮನೆಯಲುಟ್ಟು, ಒಬ್ಬನ ಬಾಗಿಲ ಕಾದಡೆ ನಮಗೇನಯ್ಯಾ ? ನೀನಾರಿಗೊಲಿದಡೂ ನಮಗೇನಯ್ಯಾ ? ಚೆನ್ನಮಲ್ಲಿಕಾರ್ಜುನಯ್ಯಾ, ಭಕ್ತಿಯ ಬೇಡಿ ಬಾಯಿ ಬೂತಾಯಿತ್ತು.
--------------
ಅಕ್ಕಮಹಾದೇವಿ
ಒಮ್ಮೆ ಕಾಮನ ಕಾಲ ಹಿಡಿವೆ, ಮತ್ತೊಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ. ಸುಡಲೀ ವಿರಹವ, ನಾನಾರಿಗೆ ಧೃತಿಗೆಡುವೆ ? ಚೆನ್ನಮಲ್ಲಿಕಾರ್ಜುನ ಕಾರಣ ಎಲ್ಲರಿಗೆ ಹಂಗುಗಿತ್ತಿಯಾದೆನವ್ವಾ.
--------------
ಅಕ್ಕಮಹಾದೇವಿ
ಒಲೆಯ ಹೊಕ್ಕು ಉರಿಯ ಮರೆದವಳ, ಮಲೆಯ ಹೊಕ್ಕು ಉಲುಹ ಮರೆದವಳ ನೋಡು ನೋಡಾ. ಸಂಸಾರ ಸಂಬಂಧವ ನೋಡಾ. ಸಂಸಾರ ಸಂಬಂಧ ಭವಭವದಲ್ಲಿ ಬೆನ್ನಿಂದ ಬಿಡದು. ಸರವು ನಿಸ್ಸರವು ಒಂದಾದವಳನು, ಎನ್ನಲೇನ ನೋಡುವಿರಯ್ಯಾ, ಚೆನ್ನಮಲ್ಲಿಕಾರ್ಜುನಯ್ಯ
--------------
ಅಕ್ಕಮಹಾದೇವಿ