ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗಾನುಭಾವ ಸಿದ್ಧಿಯಾದ ಬಳಿಕ ಮತ್ತೇಕಯ್ಯ ಕೂಟವೆಮಗೆ ಹೆರರೊಡನೆ ? ಹೇಳಿರಯ್ಯಾ, ಎನ್ನದೇವ ಚೆನ್ನಮಲ್ಲಿಕಾರ್ಜುನನು ಕರುಣಿಸಿದ ಬಳಿಕ
--------------
ಅಕ್ಕಮಹಾದೇವಿ
ಲಿಂಗಕ್ಕೆ ಶರಣೆಂದು ಪೂಜಿಸಿ ಅರ್ಪಿಸಬಹುದಲ್ಲದೆ, ಜಂಗಮವ ಪೂಜಿಸಿ ಸರ್ವಸುಖವನರ್ಪಿಸಿ ಶರಣೆನ್ನಬಾರದು ಎಲೆ ತಂದೆ. ಆಡಬಹುದು ಪಾಡಬಹುದಲ್ಲದೆ, ನುಡಿದಂತೆ ನಡೆಯಲು ಬಾರದು ಎಲೆ ತಂದೆ. ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರು ನುಡಿದಂತೆ ನಡೆಯಲು ಬಲ್ಲರು ಎಲೆ ತಂದೆ.
--------------
ಅಕ್ಕಮಹಾದೇವಿ
ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ ? ಧರ್ಮತ್ಯಾಗಿಗೆ ನರಕವಲ್ಲದೆ ಲಿಂಗವಿಲ್ಲ ವೈರಾಗ್ಯಸಂಪನ್ನಂಗೆ ಮುಕ್ತಿಯಲ್ಲದೆ ಲಿಂಗವಿಲ್ಲ ? ಜ್ಞಾನಿಗೆ ಪರಿಭ್ರಮಣವಲ್ಲದೆ ಲಿಂಗವಿಲ್ಲ ? ಇಂತಪ್ಪ ಭ್ರಾಂತನತಿಗಳದು ತನು ತಾನಾದ ಇರವೆಂತೆಂದಡೆ ದ್ವೈತವಳಿದು ಅದ್ವೈತದಿಂದ ತನ್ನ ತಾನರಿದಡೆ ಚೆನ್ನಮಲ್ಲಿಕಾರ್ಜುನಲಿಂಗವು ತಾನೆ.
--------------
ಅಕ್ಕಮಹಾದೇವಿ
ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ. ಆಕಾರವಿಡಿದು ಸಾಕಾರಸಹಿತ ನಡೆವೆ. ಹೊರಗೆ ಬಳಸಿ ಒಳಗೆ ಮರೆದಿಪ್ಪೆ. ಬೆಂದನುಲಿಯಂತೆ ಹುರಿಗುಂದದಿಪ್ಪೆ. ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ, ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತಿಪ್ಪೆ.
--------------
ಅಕ್ಕಮಹಾದೇವಿ
ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ ಇಂಗಿತವನೇನೆಂದು ಬೆಸಗೊಂಬಿರಯ್ಯಾ ? ಅವರ ನಡೆಯೇ ಆಗಮ, ಅವರ ನುಡಿಯೇ ವೇದ ; ಅವರ ಲೋಕದಮಾನವರೆಂದೆನ್ನಬಹುದೆ ಅಯ್ಯಾ ? ಅದೆಂತೆಂದಡೆ, ಸಾಕ್ಷಿ 'ವೃಕ್ಷದ್ಭವತಿ ಬೀಜಂ ಹಿ ತದ್‍ವೃಕ್ಷೇ ಲೀಯತೇ ಪುನಃ ೀ ರುದ್ರಲೋಕಂ ಪರಿತ್ಯಕ್ತಾ ್ವ ಶಿವಲೋಕೇ ಭವಿಷ್ಯತಿ || ' ಎಂದುದಾಗಿ, ಅಂಕೋಲೆಯಬೀಜದಿಂದಾಯಿತ್ತು ವೃಕ್ಷವು ; ಆ ವೃಕ್ಷ ಮರಳಿ ಆ ಬೀಜದೊಳಡಗಿತ್ತು. ಆ ಪ್ರಕಾರದಲ್ಲಿ ಲಿಂಗದೊಳಗಿಂದ ಪುರಾತನರುದ್ಭವಿಸಿ, ಮರಳಿ ಆ ಪುರಾತನರು ಆ ಲಿಂಗದೊಳಗೆ ಬೆರಸಿದರು ನೋಡಿರಯ್ಯಾ. ಇಂತಪ್ಪ ಪುರಾತನರಿಗೆ ನಾನು ಶರಣೆಂದು ಹುಟ್ಟುಗೆಟ್ಟೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಲಿಂಗವೆನ್ನೆ ಲಿಂಗೈಕ್ಯವೆನ್ನೆ, ಸಂಗವೆನ್ನೆ ಸಮರಸವೆನ್ನೆ. ಆಯಿತೆನ್ನೆ ಆಗದೆನ್ನೆ, ನೀನೆನ್ನೆ ನಾನೆನ್ನೆ. ಚೆನ್ನಮಲ್ಲಿಕಾರ್ಜುನಯ್ಯಾ, ಲಿಂಗೈಕ್ಯವಾದ ಬಳಿಕ ಏನೂ ಎನ್ನೆ.
--------------
ಅಕ್ಕಮಹಾದೇವಿ
ಲಿಂಗವನು ಪುರಾತನರನು ಅನ್ಯರ ಮನೆಯೊಳಯಿಕೆ ಹೋಗಿ ಹೊಗಳುವರು, ತಮ್ಮದೊಂದುದರ ಕಾರಣ. ಲಿಂಗವು ಪುರಾತನರು ಅಲ್ಲಿಗೆ ಬರಬಲ್ಲರೆ ? ಅನ್ಯವನೆ ಮರೆದು ನಿಮ್ಮ ನೆನೆವರ ಎನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಲಾಂಛನ ಸಹಿತ ಮನೆಗೆ ಬಂದಡೆ, ತತ್ಕಾಲವನರಿದು ಪ್ರೇಮವ ಮಾಡದಿರ್ದಡೆ ನೀನಿರಿಸಿದ ಮನೆಯ ತೊತ್ತಲ್ಲ. ತತ್ಕಾಲ ಪ್ರೇಮವ ಮಾಡುವಂತೆ ಎನ್ನಮುದ್ದ ಸಲಿಸಯ್ಯಾ. ಅಲ್ಲದೊಡೆ ಒಯ್ಯಯ್ಯ ಸಿರಿಶೈಲ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಲಿಂಗಕ್ಕೆ ರೂಪ ಸಲಿಸುವೆ, ಜಂಗಮಕ್ಕೆ ರುಚಿಯ ಸಲಿಸುವೆ, ಕಾಯಕ್ಕೆ ಶುದ್ಧಪ್ರಸಾದವ ಕೊಂಬೆ. ಪ್ರಾಣಕ್ಕೆ ಸಿದ್ಧಪ್ರಸಾದವ ಕೊಂಬೆ. ನಿಮ್ಮ ಪ್ರಸಾದದಿಂದ ಧನ್ಯಳಾದೆನು. ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.
--------------
ಅಕ್ಕಮಹಾದೇವಿ
ಲಿಂಗಾಂಗ ಸಂಗ ಸಮರಸ ಸುಖದಲ್ಲಿ ಮನ ವೇದ್ಯವಾಯಿತ್ತು. ನಿಮ್ಮ ಶರಣರ ಅನುಭಾವ ಸಂಗದಿಂದ ಎನ್ನ ತನು ಮನ ಪ್ರಾಣ ಪದಾರ್ಥವ ಗುರುಲಿಂಗಜಂಗಮಕ್ಕಿತ್ತು, ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದೆನು. ಆ ಮಹಾಪ್ರಸಾದದ ರೂಪು ರುಚಿ ತೃಪ್ತಿಯ ಇಷ್ಟ ಪ್ರಾಣ ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ ಮಹಾಘನಪ್ರಸಾದಿಯಾದೆನು. ಇಂತೀ ಸರ್ವಾಚಾರಸಂಪತ್ತು ಎನ್ನ ತನುಮನ ವೇದ್ಯವಾಯಿತ್ತು. ಇನ್ನೆಲ್ಲಿಯಯ್ಯಾ, ಎನಗೆ ನಿಮ್ಮಲ್ಲಿ ನಿರವಯವು ? ಇನ್ನೆಲ್ಲಿಯಯ್ಯಾ ನಿಮ್ಮಲ್ಲಿ ಕೂಡುವುದು ? ಪರಮಸುಖದ ಪರಿಣಾಮ ಮನಮೇರೆದಪ್ಪಿ ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನ ಪ್ರಭುವೆ ?
--------------
ಅಕ್ಕಮಹಾದೇವಿ
ಲೇಸು ಹಾಸು, ನೋಟವಾಭರಣ, ಆಲಿಂಗನ ವಸ್ತು, ಚುಂಬನವಾರೋಗಣೆ, ಲಲ್ಲೆವಾತು ತಾಂಬೂಲ, ಲವಲವಿಕೆಯ ಅನುಲೇಪನವೆನಗೆ. ಚೆನ್ನಮಲ್ಲಿಕಾರ್ಜುನನ ಕೂಟ ಪರಮಸುಖವವ್ವಾ.
--------------
ಅಕ್ಕಮಹಾದೇವಿ
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನವೇ ಬೀಜ. ಎನಗುಳ್ಳುದೊಂದು ಮನ. ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಲಿಂಗಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಲಿಂಗಸ್ಥಲ ನಿಃಶೂನ್ಯವಾಯಿತ್ತು ಸಂಗಮದೇವರ ಬೆನ್ನಿನಲ್ಲಿ. ಜಂಗಮಸ್ಥಲ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಜಂಗಮಸ್ಥಲ ನಿಃಶೂನ್ಯವಾಯಿತ್ತು ಪ್ರಭುದೇವರ ಬೆನ್ನಿನಲ್ಲಿ. ಭಕ್ತಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಭಕ್ತಿಸ್ಥಲ ನಿಃಶೂನ್ಯವಾಯಿತ್ತು ಸಂಗನಬಸವರಾಜದೇವರ ಬೆನ್ನಿನಲ್ಲಿ. ಪ್ರಾಣಲಿಂಗಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಪ್ರಾಣಲಿಂಗಿಸ್ಥಲ ನಿಃಶೂನ್ಯವಾಯಿತ್ತು ಸಿದ್ಧರಾಮೇಶ್ವರದೇವರ ಬೆನ್ನಿನಲ್ಲಿ. ಪ್ರಸಾದಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಪ್ರಸಾದಿಸ್ಥಲ ನಿಃಶೂನ್ಯವಾಯಿತ್ತು ಚಿಕ್ಕದಣ್ಣಾಯಕರ ಬೆನ್ನಿನಲ್ಲಿ. ಐಕ್ಯಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಐಕ್ಯಸ್ಥಲ ನಿಃಶೂನ್ಯವಾಯಿತ್ತು ಅಜಗಣ್ಣದೇವರ ಬೆನ್ನಿನಲ್ಲಿ. ಇಂತೆನ್ನ ಷಟ್‍ಸ್ಥಲಂಗಳು ಒಬ್ಬೊಬ್ಬರ ಬೆನ್ನಿನಲ್ಲಿ ನಿಃಶೂನ್ಯವಾದವು ಎನಗಿನ್ನಾವ ಕಿಂಚಿತುಸ್ಥಲವೂ ಇಲ್ಲವಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ
--------------
ಅಕ್ಕಮಹಾದೇವಿ