ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೆಲದ ಮರೆಯ ನಿಧಾನದಂತೆ ಫಲದ ಮರೆಯ ರುಚಿಯಂತೆ ಶಿಲೆಯ ಮರೆಯ ಹೇಮದಂತೆ ತಿಲದ ಮರೆಯ ತೈಲದಂತೆ ಮರದ ಮರೆಯ ತೇಜದಂತೆ ಭಾವದ ಮರೆಯ ಬ್ರಹ್ಮವಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು.
--------------
ಅಕ್ಕಮಹಾದೇವಿ
ನಾನು ಮಜ್ಜನವ ಮಾಡುವುದಕ್ಕೆ ಮುನ್ನವೆ ಜಂಗಮಕ್ಕೆ ಮಜ್ಜನವ ಮಾಡಿಸುವೆ. ನಾನು ಸೀರೆಯನುಡುವುದಕ್ಕೆ ಮುನ್ನವೆ ಜಂಗಮಕ್ಕೆ ದೇವಾಂಗವನುಡಿಸುವೆ. ನಾನು ಪರಿಮಳವ ಲೇಪಿಸುವುದಕ್ಕೆ ಮುನ್ನವೆ ಜಂಗಮಕ್ಕೆ ಸುಗಂಧದ್ರವ್ಯಂಗಳ ಲೇಪಿಸುವೆ. ನಾನು ಅಕ್ಷತೆಯನಿಡುವುದಕ್ಕೆ ಮುನ್ನವೆ ಜಂಗಮಕ್ಕೆ ಅಕ್ಷತೆಯನಿಡುವೆ. ನಾನು ಪುಷ್ಪವ ಮುಡಿವುದಕ್ಕೆ ಮುನ್ನವೆ ಜಂಗಮಕ್ಕೆ ಪರಿಮಳಪುಷ್ಪವ ಮುಡಿಸುವೆ. ನಾನು ಧೂಪವಾಸನೆಯ ಕೊಳ್ಳುವ ಮುನ್ನವೆ ಜಂಗಮಕ್ಕೆ ಧೂಪವಾಸನೆಯ ಕೊಡುವೆ. ನಾನು ದೀಪಾರತಿಯ ನೋಡುವ ಮುನ್ನವೆ ಜಂಗಮಕ್ಕೆ ಆರತಿಯ ನೋಡಿಸುವೆ. ನಾನು ಸಕಲ ಪದಾರ್ಥಂಗಳ ಸ್ವೀಕರಿಸುವ ಮುನ್ನವೆ ಜಂಗಮಕ್ಕೆ ಮೃಷ್ಟಾನ್ನವ ನೀಡುವೆ. ನಾನು ಪಾನಂಗಳ ಕೊಳ್ಳುವ ಮುನ್ನವೆ ಜಂಗಮಕ್ಕೆ ಅಮೃತಪಾನಂಗಳ ಕೊಡುವೆ. ನಾನು ಕೈಯ ತೊಳೆಯುವ ಮುನ್ನವೆ ಜಂಗಮಕ್ಕೆ ಹಸ್ತಪ್ರಕ್ಷಾಲನವ ಮಾಡಿಸುವೆ. ನಾನು ವೀಳೆಯವ ಮಾಡುವುದಕ್ಕೆ ಮುನ್ನವೆ ಜಂಗಮಕ್ಕೆ ತಾಂಬೂಲವ ಕೊಡುವೆ. ನಾನು ಗದ್ದುಗೆಯ ಮೇಲೆ ಕುಳ್ಳಿರುವುದಕ್ಕೆ ಮುನ್ನವೆ ಜಂಗಮಕ್ಕೆ ಉನ್ನತಾಸನವನಿಕ್ಕುವೆ. ನಾನು ಸುನಾದಂಗಳ ಕೇಳುವುದಕ್ಕೆ ಮುನ್ನವೆ ಜಂಗಮಕ್ಕೆ ಸುಗೀತ ವಾದ್ಯಂಗಳ ಕೇಳಿಸುವೆ. ನಾನು ಭೂಷಣಂಗಳ ತೊಡುವುದಕ್ಕೆ ಮುನ್ನವೆ ಜಂಗಮಕ್ಕೆ ಆಭರಣಂಗಳ ತೊಡಿಸುವೆ. ನಾನು ವಾಹನಂಗಳನೇರುವುದಕ್ಕೆ ಮುನ್ನವೆ ಜಂಗಮಕ್ಕೆ ವಾಹಂಗಳನೇರಿಸುವೆ. ನಾನು ಮನೆಯೊಳಗಿಹುದಕ್ಕೆ ಮುನ್ನವೆ ಜಂಗಮಕ್ಕೆ ಗೃಹವಕೊಡುವೆ. ಇಂತೀ ಹದಿನಾರು ತೆರದಭಕ್ತಿಯನು ಚರಲಿಂಗಕ್ಕೆ ಕೊಟ್ಟು ಆ ಚರಲಿಂಗಮೂರ್ತಿ ಭೋಗಿಸಿದ ಬಳಿಕ ನಾನು ಪ್ರಸಾದ ಮುಂತಾಗಿ ಭೋಗಿಸುವೆನಲ್ಲದೆ ಜಂಗಮವಿಲ್ಲದೆ ಇನಿತರೊಳೊಂದು ಭೋಗವನಾದಡೂ ನಾನು ಭೋಗಿಸಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಇಂತೀ ಕ್ರಮದಲ್ಲಿ ನಡೆವಾತಂಗೆ ಗುರುವುಂಟು ಲಿಂಗವುಂಟು ಜಂಗಮವುಂಟು, ಪಾದೋದಕವುಂಟು ಪ್ರಸಾದವುಂಟು ಆಚಾರವುಂಟು ಭಕ್ತಿಯುಂಟು. ಈ ಕ್ರಮದಲ್ಲಿ ನಡೆಯದಾತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲಾಚಾರವಿಲ್ಲ ಭಕ್ತಿಯಿಲ್ಲ. ಅವನ ಬಾಳುವೆ ಹಂದಿಯ ಬಾಳುವೆ. ಅವನ ಬಾಳುವೆ ನಾಯ ಬಾಳುವೆ. ಅವನ ಬಾಳುವೆ ಕತ್ತೆಯ ಬಾಳುವೆ. ಅವನು ಸುರೆಮಾಂಸ ಭುಂಜಕನು, ಅವನು ಸರ್ವ ಚಾಂಡಾಲನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನಂದಿ ದೇವಂಗೆ, ಖಳ ಸಿರಿಯಾಳಂಗೆ, ಲಿಂಗ ದಾಸಿಮಯ್ಯಂಗೆ, ಜಾಗರ ಬಸವಣ್ಣಂಗೆ, ಆದರಿಕೆಯ ಬಿಟ್ಟು ಜೂಜನಾಡರೆ ನಮ್ಮವರಂದು ? ಒಬ್ಬಂಗೆ ಮಗನ ರಪಣ, ಒಬ್ಬಂಗೆ ಸೀರೆಯ ರಪಣ, ಒಬ್ಬಂಗೆ ತನು ಮನ ಧನದ ರಪಣ. ಮೂವರೂ ಮೂದಲಿಸಿ ಮುಕ್ಕಣ್ಣನ ಗೆಲಿದರು ಎನ್ನ ದೇವ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನಮಗೆ ನಮ್ಮ ಲಿಂಗದ ಚಿಂತೆ, ನಮಗೆ ನಮ್ಮ ಭಕ್ತರ ಚಿಂತೆ, ನಮಗೆ ನಮ್ಮ ಆದ್ಯರ ಚಿಂತೆ, ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ ಲೋಕದ ಮಾತು ನಮಗೇಕಣ್ಣಾ ?
--------------
ಅಕ್ಕಮಹಾದೇವಿ
ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು. ಸಂಸಾರ ಹುಟ್ಟಿದಲ್ಲಿ ಅಜ್ಞಾನ ಹುಟ್ಟಿತ್ತು. ಅಜ್ಞಾನ ಹುಟ್ಟಿದಲ್ಲಿ ಆಶೆ ಹುಟ್ಟಿತ್ತು. ಆಶೆ ಹುಟ್ಟಿದಲ್ಲಿ ಕೋಪ ಹುಟ್ಟಿತ್ತು. ಆ ಕೋಪಾಗ್ನಿಯ ತಾಮಸಧೂಮ್ರ ಮುಸುಕಿದಲ್ಲಿ ನಾ ನಿಮ್ಮ ಮರೆದು ಭವದುಃಖಕ್ಕೀಡಾದೆ. ನೀ ಕರುಣದಿಂದೆತ್ತಿ ಎನ್ನ ಮರಹ ವಿಂಗಡಿಸಿ ನಿಮ್ಮ ಪಾದವನರುಹಿಸಯ್ಯಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನೋಡೆನೆಂಬವರ ನೋಡಿಸುವೆ, ನುಡಿಯೆನೆಂಬವರ ನುಡಿಯಿಸುವೆ, ಒಲ್ಲೆನೆಂಬವರನೊಲಿಸುವೆ, ಒಲಿದೆನೆಂಬವರ ತೊಲಗಿಸುವೆ ನೋಡಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನೀನಲ್ಲದನ್ಯರ ಮುಖದ ನೋಡೆನೆಂದಡೆ ನೋಡುವಂತೆ ಮಾಡಿದೆಯಲ್ಲಾ ಲಿಂಗವೆ?
--------------
ಅಕ್ಕಮಹಾದೇವಿ
ನೀರಕ್ಷೀರದಂತೆ ನೀನಿಪ್ಪೆಯಾಗಿ, ಆವುದು ಮುಂದು, ಆವುದು ಹಿಂದು ಎಂದರಿಯೆ. ಆವುದು ಕರ್ತೃ, ಆವುದು ಭೃತ್ಯನೆಂದರಿಯೆ. ಆವುದು ಘನ, ಆವುದು ಕಿರಿದೆಂದರಿಯೆ. ಚೆನ್ನಮಲ್ಲಿಕಾರ್ಜುನಯ್ಯಾ, ನೀನೊಲಿದು ಕೊಂಡಾಡಿದಡೆ ಇರುಹೆ ರುದ್ರನಾಗದೆ ಹೇಳಯ್ಯಾ ?
--------------
ಅಕ್ಕಮಹಾದೇವಿ
ನಾಣಮರೆಯ ನೂಲು ಸಡಿಲಲು ನಾಚುವರು ನೋಡಾ ಗಂಡು ಹೆಣ್ಣೆಂಬ ಜಾತಿಗಳು. ಪ್ರಾಣದೊಡೆಯ ಜಗದೊಳಗೆ ಮುಳುಗಲು ತೆರಹಿಲ್ಲದಿರಲು ದೇವರ ಮುಂದೆ ನಾಚಲೆಡೆಯುಂಟೆ ? ಚೆನ್ನಮಲ್ಲಿಕಾರ್ಜುನ ಜಗವೆಲ್ಲ ಕಣ್ಣಾಗಿ ನೋಡುತ್ತಿರಲು ಮುಚ್ಚಿ ಮರಸುವ ಠಾವಾವುದು ಹೇಳಯ್ಯಾ ?
--------------
ಅಕ್ಕಮಹಾದೇವಿ
ನಡೆಶುಚಿ, ನುಡಿಶುಚಿ, ತನುಶುಚಿ, ಮನಶುಚಿ, ಭಾವಶುಚಿ. ಇಂತೀ ಪಂಚ ತೀರ್ಥಂಗಳನೊಳಕೊಂಡು ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ನಾನುಣ್ಣದ ಮುನ್ನವೆ ಜಂಗಮಕ್ಕೆ ಅಮೃತಾನ್ನಾದಿ ನೈವೇದ್ಯವ ನೀಡುವೆ. ನಾನುಡದ ಮುನ್ನವೆ ಜಂಗಮಕ್ಕೆ ದೇವಾಂಗಾದಿ ವಸ್ತ್ರವನುಡಿಸುವೆ. ನಾನು ಹೂಸದ ಮುನ್ನವೆ ಜಂಗಮಕ್ಕೆ ಸುಗಂಧಾದಿ ಪರಿಮಳದ್ರವ್ಯವ ಹೂಸುವೆ. ನಾನು ಮುಡಿಯದ ಮುನ್ನವೆ ಜಂಗಮಕ್ಕೆ ಪರಿಪರಿಯ ಪುಷ್ಪವ ಮುಡಿಸುವೆ. ನಾನು ತೊಡದ ಮುನ್ನವೆ ಜಂಗಮಕ್ಕೆ ತೊಡಿಗೆಯ ತೊಡಿಸುವೆ. ನಾನಾವಾವ ಭೋಗವ ಭೋಗಿಸುವದ ಜಂಗಮಕ್ಕೆ ಭೋಗಿಸಲಿತ್ತು, ಆ ಶೇಷಪ್ರಸಾದವ ಲಿಂಗಕ್ಕಿತ್ತು ಭೋಗಿಸಿದ ಬಳಿಕಲಲ್ಲದೆ ಭೋಗಿಸಿದಡೆ ಬಸವಣ್ಣಾ, ನಿಮ್ಮಾಣೆಯಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನಾಳದ ಮರೆಯ ನಾಚಿಕೆ, ನೂಲಮರೆಯಲ್ಲಿ ಅಡಗಿತ್ತೆಂದು ಅಂಜುವರು, ಅಳುಕುವರು. ಮನ ಮೆಚ್ಚಿದಭಿಮಾನಕ್ಕೆ ಆವುದು ಮರೆ ಹೇಳಾ ? ಕಾಯ ಮಣ್ಣೆಂದು ಕಳೆದ ಬಳಿಕ, ದೇಹದಭಿಮಾನ ಅಲ್ಲಿಯೇ ಹೋಯಿತ್ತು. ಪ್ರಾಣ ಬಯಲೆಂದು ಕಳೆದ ಬಳಿಕ, ಮನದ ಲಜ್ಜೆಯಲ್ಲಿಯೆ ಹೋಯಿತ್ತು. ಚೆನ್ನಮಲ್ಲಿಕಾರ್ಜುನನ ಕೂಡಿ ಲಜ್ಜೆಗೆಟ್ಟವಳ ಉಡಿಗೆಯ ಸೆಳೆದುಕೊಂಡಡೆ, ಮುಚ್ಚಿದ ಸೀರೆ ಹೋದರೆ ಅಂಜುವರೆ ಮರುಳೆ ?
--------------
ಅಕ್ಕಮಹಾದೇವಿ
ನಡೆಯದ ನುಡಿಗಡಣ, ಮಾಡದ ಕಲಿತನ, ಚಿತ್ರದಸತಿಯ ಶೃಂಗಾರವದೇತಕ್ಕೆ ಪ್ರಯೋಜನ ? ಎಲೆಯಿಲ್ಲದ ಮರನು, ಜಲವಿಲ್ಲದ ನದಿಯು, ಗುಣಿಯಲ್ಲದ ಅವಗುಣಿಯ ಸಂಗವದೇತಕ್ಕೆ ಪ್ರಯೋಜನ ? ದಯವಿಲ್ಲದ ಧರ್ಮ, ಉಭಯವಿಲ್ಲದ ಭಕ್ತಿಯು, ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ ಎನ್ನ ದೇವ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ನಿನ್ನರಿಕೆಯ ನರಕವೆ ಮೋಕ್ಷ ನೋಡಯ್ಯಾ, ನಿನ್ನನರಿಯದ ಮುಕ್ತಿಯೆ ನರಕ ಕಂಡಯ್ಯಾ. ನೀನೊಲ್ಲದ ಸುಖವೆ ದಃಖ ಕಂಡಯ್ಯಾ, ನೀನೊಲಿದ ದುಃಖವೆ ಪರಮಸುಖ ಕಂಡಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನೀ ಕಟ್ಟಿ ಕೆಡಹಿದ ಬಂಧನವ ನಿರ್ಬಂಧವೆಂದಿಪ್ಪೆನು.
--------------
ಅಕ್ಕಮಹಾದೇವಿ
ನಚ್ಚುಗೆ ಮನ ನಿಮ್ಮಲ್ಲಿ, ಮಚ್ಚುಗೆ ಮನ ನಿಮ್ಮಲ್ಲಿ, ಸಲುಗುಗೆ ಮನ ನಿಮ್ಮಲ್ಲಿ, ಸೋಲುಗೆ ಮನ ನಿಮ್ಮಲ್ಲಿ, ಅಳಲುಗೆ ಮನ ನಿಮ್ಮಲ್ಲಿ, ಬಳಲುಗೆ ಮನ ನಿಮ್ಮಲ್ಲಿ, ಕರಗುಗೆ ಮನ ನಿಮ್ಮಲ್ಲಿ, ಕೊರಗುಗೆ ಮನ ನಿಮ್ಮಲ್ಲಿ. ಎನ್ನ ಪಂಚೇಂದ್ರಿಯಂಗಳು ಕಬ್ಬುನ ಉಂಡ ನೀರಿನಂತೆ ನಿಮ್ಮಲ್ಲಿ ಬೆರಸುಗೆ ಚೆನ್ನಮಲ್ಲಿಕಾರ್ಜುನಯ್ಯಾ.
--------------
ಅಕ್ಕಮಹಾದೇವಿ
ನಿಮ್ಮ ಒಕ್ಕುದ ಕೊಂಡು ಓಲಾಡುವೆ, ಮಿಕ್ಕುದ ಕೊಂಡು ಕುಣಿದಾಡುವೆ. ನಿಮ್ಮ ತೊತ್ತಿನ ತೊತ್ತಿನ ಕರುಣಪ್ರಸಾದವ ಕೊಂಡು ನಿತ್ಯಳಾಗಿ ಬದುಕಿದೆನು ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನಾನು ನಿನಗೊಲಿದೆ, ನೀನು ಎನಗೊಲಿದೆ. ನೀನೆನ್ನನಗಲದಿಪ್ಪೆ, ನಾನಿನ್ನನಗಲದಿಪ್ಪೆನಯ್ಯಾ. ನಿನಗೆ ಎನಗೆ ಬೇರೊಂದು ಠಾವುಂಟೆ ? ನೀನು ಕರುಣಿಯೆಂಬುದ ಬಲ್ಲೆನು ; ನೀನಿರಿಸಿದ ಗತಿಯೊಳಗಿಪ್ಪವಳಾನು. ನೀನೆ ಬಲ್ಲೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನಿತ್ಯವೆನ್ನ ಮನೆಗೆ ನಡೆದುಬಂದಿತ್ತಿಂದು. ಮುಕ್ತಿ ಎನ್ನ ಮನೆಗೆ ನಡೆದುಬಂದಿತ್ತಿಂದು. ಜಯ ಜಯಾ, ಹರಹರಾ, ಶಂಕರ ಶಂಕರಾ, ಗುರುವೆ ನಮೋ, ಪರಮಗುರುವೆ ನಮೋ. ಚೆನ್ನಮಲ್ಲಿಕಾರ್ಜುನನ ತೋರಿದ ಗುರುವೆ ನಮೋ ನಮೋ.
--------------
ಅಕ್ಕಮಹಾದೇವಿ
ನೀನಿಕ್ಕಿದ ಸರಿದೊಡಕನಾರು ಬಿಡಿಸಬಲ್ಲರಯ್ಯಾ ? ನೀನಿಕ್ಕಿದ ಕಟ್ಟನಾರು ಕಳೆಯಬಲ್ಲರಯ್ಯಾ ? ನೀ ಸೀಳಿದ ರೇಖೆಯನಾರು ಮೀರಬಹುದಯ್ಯಾ ? ಚೆನ್ನಮಲ್ಲಿಕಾರ್ಜುನಯ್ಯಾ, ನೀನು ಕಳುಹಿದ ಸೆರೆಗೆ ಮಾರುವೋಗದಿರ್ದಡೆ ಎನ್ನಿಚ್ಚೆಯ ಅಯ್ಯಾ ?
--------------
ಅಕ್ಕಮಹಾದೇವಿ
ನೋಡುವ ಕಂಗಳಿಗೆ ರೂಪಿಂಬಾಗಿರಲು ನೀವು ಮನನಾಚದೆ ಬಂದಿರಣ್ಣಾ. ಕೇಳಿದ ಶ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣಾ. ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣಾ. ಮೂತ್ರವು ಬಿಂದು ಒಸರುವ ನಾಳವೆಂದು ಕಂಗಾಣದೆ ಮುಂದುಗೆಟ್ಟು ಬಂದಿರಣ್ಣಾ. ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ ಹೋಗಲಾಡಿಸಿಕೊಂಡು ಇದಾವ ಕಾರಣವೆಂದರಿಯದೆ, ನೀವು ನರಕಹೇತುವೆಂದರಿತು ಮನ ಹೇಸದೆ ಬಂದಿರಣ್ಣಾ. ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರರು. ಅಛೀ ಹೋಗಾ ಮರುಳೆ.
--------------
ಅಕ್ಕಮಹಾದೇವಿ
ನೋಡಿಹೆನೆಂದಡೆ ದೃಷ್ಟಿಮರೆಯಾಯಿತ್ತು. ಕೂಡಿಹೆನೆಂದಡೆ ಭಾವ ಮರೆಯಾಯಿತ್ತು. ಏನೆಂಬೆನೆಂತೆಂಬೆನಯ್ಯಾ ? ಅರಿದಿಹೆನೆಂದಡೆ ಮರಹು ಮರೆಯಾಯಿತ್ತು. ನಿನ್ನ ಮಾಯೆಯನತಿಗಳೆವಡೆ ಎನ್ನಳವೆ ? ಕಾಯಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನಿತ್ಯವೆಂಬ ನಿಜಪದವೆನ್ನ ಹತ್ತೆಸಾರ್ದು ಕಂಡಬಳಿಕ ಚಿತ್ತ ಕರಗಿ ಮನ ಕೊರಗಿ ಹೃದಯವರಳಿತ್ತು ನೋಡಯ್ಯಾ. ಒತ್ತಿ ಬಿಗಿದ ಸೆರೆಯೊಳಗೆ ಅತ್ತಿತ್ತಲೆಂದರಿಯದೆ ಚೆನ್ನಮಲ್ಲಿಕಾರ್ಜುನನ ಪಾದದಲ್ಲಿ ಮರೆದೊರಗಿದೆ ನೋಡಯ್ಯಾ.
--------------
ಅಕ್ಕಮಹಾದೇವಿ
ನಿಮ್ಮ ನಿಲವಿಂಗೆ ನೀವು ನಾಚಬೇಡವೆ ? ಅನ್ಯರ ಕೈಯಲ್ಲಿ ಅಲ್ಲ ಎನಿಸಿಕೊಂಬ ನಡೆನುಡಿ ಏಕೆ ? ಅಲ್ಲ ಎನಿಸಿಕೊಂಬುದರಿಂದ ಆ ಕ್ಷಣವೆ ಸಾವುದು ಲೇಸು ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನಾಳೆ ಬರುವುದು ನಮಗಿಂದೆ ಬರಲಿ, ಇಂದು ಬರುವುದು ನಮಗೀಗಲೆ ಬರಲಿ ; ಆಗೀಗ ಎನ್ನದಿರೊ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನಿತ್ಯತೃಪ್ತಂಗೆ ನೈವೇದ್ಯದ ಹಂಗೇತಕ್ಕೆ ? ಸುರಾಳ ನಿರಾಳಂಗೆ ಮಜ್ಜನದ ಹಂಗೇತಕ್ಕೆ ? ಸ್ವಯಂಜ್ಯೋತಿರ್ಮಯಂಗೆ ದೀಪಾರಾಧನೆಯ ಹಂಗೇತಕ್ಕೆ ? ಸುವಾಸನೆ ಸೂಕ್ಷ್ಮಗಂಧ ಕರ್ಪೂರಗೌರಂಗೆ ಪುಷ್ಪದ ಹಂಗೇತಕ್ಕೆ ? ಮಾಟದಲಿ ಮನ ನಂಬುಗೆಯಿಲ್ಲದ, ಅಹಂಕಾರಕ್ಕೀಡಾದ, ಭಕ್ತಿಯೆಂಬ ಪಸಾರವನಿಕ್ಕಿ ಹೊಲೆಹದಿನೆಂಟುಜನ್ಮವ ಹೊರೆವುದರಿಂದ ಅಂಗೈಯಲೊರಸಿ ಮುಕ್ತಿಯ ಮೂಲ ಶಿಖಿರಂಧ್ರದ ಕಾಮನ ಸುಟ್ಟು ಶುದ್ಧಸ್ಫಟಿಕ ಸ್ವಯಂಜ್ಯೋತಿಯನು ಸುನಾಳದಿಂದ ಹಂ ಕ್ಷಂ ಎಂಬೆರಡಕ್ಷರವ ಸ್ವಯಾನುಭಾವಭಕ್ತಿ ನಿರ್ವಾಣವಾದವರನೆನಗೊಮ್ಮೆ ತೋರಿದೆ. ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನೋಡಿ ನುಡಿಸಿ ಮಾತಾಡಿಸಿದಡೊಂದು ಸುಖ, ಏನ ಮಾಡದಯ್ಯಾ ನಿಮ್ಮ ಶರಣರ ಅನುಭಾವ ? ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸದ್ಗೋಷ್ಠಿ ಏನ ಮಾಡದಯ್ಯಾ ?
--------------
ಅಕ್ಕಮಹಾದೇವಿ

ಇನ್ನಷ್ಟು ...