ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಾವಿಸಿ ನೋಡಿದಡೆ ಅಂಗವಾಯಿತ್ತು, ಅಂಗಸಂಗವಾಗಿ ಸಂಯೋಗವ ಮರೆದು, ಲಿಂಗಸೈವೆರಗಾದೆ. ಲಿಂಗೈಕ್ಯ, ನಿಮ್ಮನಗಲದೆ ಅಂಗರುಚಿಗಳ ಮರೆದು, ಲಿಂಗರುಚಿಗಳಲ್ಲಿ ಸೈವೆರಗಾದೆ. ಲಿಂಗ ಸೈವೆರಗಾದ ಬಳಿಕ ಚೆನ್ನಮಲ್ಲಿಕಾರ್ಜುನನ ಕೊಂದು ಸಾವ ಭಾಷೆ.
--------------
ಅಕ್ಕಮಹಾದೇವಿ
ಭವಿಯಾಚಾರವ ಬಿಡದೆ ಭಯಾಗರವ ಹೊಗದೆ, ಶಿವಾಚಾರದಲ್ಲಿ ನಡೆವ ನಾಯಿಗಳು ಬರಿದೆ ನಾವು ಶಿವಾಚಾರಿಗಳೆಂದರೆ ನಮ್ಮ ಶಿವಾಚಾರಿ ಶರಣ ಬಸವಣ್ಣ ಮೆಚ್ಚ ನೋಡಯ್ಯ. ಶಿವಾಚಾರದ ಮಾರ್ಗವನು, ಶಿವಾಚಾರದ ಮರ್ಮವನು, ಶಿವಾಚಾರದ ವಿಸ್ತಾರವನು ನಮ್ಮ ಶರಣ ಬಸವಣ್ಣ ಬಲ್ಲನಲ್ಲದೆ ಉದರವ ಹೊರವ ವೇಷಧಾರಿಗಳೆತ್ತಬಲ್ಲರಯ್ಯ ? ಅಂತಪ್ಪ ಶಿವಾಚಾರದ ವಿಸ್ತಾರ ಸಕೀಲ ಹೇಳಿಹೆ ಕೇಳಿರಣ್ಣ. ಅದೆಂತೆಂದೊಡೆ v ಲಿಂಗಾಚಾರವೆಂದು, ಸದಾಚಾರವೆಂದು, ಶಿವಾಚಾರವೆಂದು, ಭೃತ್ಯಾಚಾರವೆಂದು, ಗಣಾಚಾರವೆಂದು ಶಿವಾಚಾರವು ಐದುತೆರನಾಗಿಪ್ಪುದು ನೋಡಯ್ಯಾ. ಶ್ರೀ ಗುರು ಕರುಣಿಸಿಕೊಟ್ಟ ಲಿಂಗವನಲ್ಲದೆ ಅನ್ಯದೈವಂಗಳಿಗೆರಗದಿಹುದೇ ಲಿಂಗಾಚಾರ ನೋಡಯ್ಯ. ತಾ ಮಾಡುವ ಸತ್ಯ ಕಾಯಕದಿಂದ ಬಂದ ಅರ್ಥಾದಿಗಳಿಂದ ತನ್ನ ಕುಟುಂಬ ರಕ್ಷಣೆಗೊಂಬ ತೆರದಿ ಗುರುಲಿಂಗಜಂಗಮ ದಾಸೋಹಿಯಾಗಿಪ್ಪುದೇ ಸದಾಚಾರ ನೋಡಯ್ಯ. ಶಿವಭಕ್ತರಾದ ಲಿಂಗಾಂಗಿಗಳಲ್ಲಿ ಪೂರ್ವದ ಜಾತಿಸೂತಕಾದಿಗಳನ್ನು ವಿಚಾರಿಸದೆ ಅವರ ಮನೆಯಲ್ಲಿ ತಾ ಹೊಕ್ಕು ಒಕ್ಕು ಮಿಕ್ಕ ಪ್ರಸಾದವ ಕೊಂಬುದೇ ಶಿವಾಚಾರ ನೋಡಯ್ಯ. ಲಿಂಗಾಂಗಿಗಳಾದ ಶಿವಭಕ್ತರೇ ಮರ್ತ್ಯದಲ್ಲಿ ಮಿಗಿಲಹರೆಂದು ತಾನು ಅವರ ಭೃತ್ಯನೆಂದರಿದು ಅಂತಪ್ಪ ನಿಜಲಿಂಗಾಂಗಿಗಳ ಚಮ್ಮಾವುಗೆಯ ಕಾಯ್ದಿಪ್ಪುದೇ ಭೃತ್ಯಾಚಾರ ನೋಡಯ್ಯ. ಗುರುಲಿಂಗಜಂಗಮ ಪಾದೋದಕ ಪ್ರಸಾದ ರುದ್ರಾಕ್ಷಿ ಮಂತ್ರಗಳೆಂಬಷ್ಟಾವರಣಂಗಳು ತನ್ನ ಪ್ರಾಣಸ್ವರೂಪವಾಗಿ ಅವುಗಳ ನಿಂದೆಯನ್ನು ಕೇಳಿ ಸೈರಿಸದೆ ಶಿಕ್ಷಿಸುವೆನೆಂಬ ನಿಷ್ಠೆಗೊಂಡುದೇ ಗಣಾಚಾರ ನೋಡಯ್ಯ. ಇದಕ್ಕೆ ಸಾಕ್ಷಿ - ಪರಮರಹಸ್ಯೇ- 'ಲಿಂಗಾಚಾರಸ್ಸದಾಚಾರಶ್ಶಿವಾಚಾರಸ್ತಥವಚ ಭೃತ್ಯಾಚಾರೋ ಗಣಾಚಾರಃ ಪಂಚಾಚಾರಃ ಪ್ರಕೀರ್ತಿತಃ || ಗುರೂಣಾ ದತ್ತಲಿಂಗಂಚ ನಾಸ್ತಿ ದೈವಂ ಮಹೀತಲೇ' ಇತಿ ಭಾವಾನುಸಂಧಾನೋ ಲಿಂಗಾಚಾರಸ್ಸಮುಚ್ಯತೇ || ಧರ್ಮಾರ್ಜಿತವಿತ್ತೇನ ತೃಪ್ತಿಶ್ಚ ಕ್ರಿಯತೇ ಸದಾ ಗುರುಜಂಗಮಲಿಂಗಾನಾಂ ಸದಾಚಾರಃ ಪ್ರಕೀರ್ತಿತಃ || ಅವಿಚಾರೇಷು ಭಕ್ತೇಷು ಜಾತಿಧರ್ಮಾದಿ ಸೂತಕಾನ್ ೀ ತದ್ಗøಹೇಷ್ವನ್ನಪಾನಾದಿ ಭೋಜನಂ ಕ್ರಿಯತೇ ಸದಾ || ತಚ್ಫಿವಾಚಾರಮಿತ್ಯಾಹುರ್ವೀರಶೈವಪರಾಯಣಾ ಶಿವಭಕ್ತಜನಾ ಸರ್ವೇ ವರಿಷ್ಠಾಃ ಪೃಥಿವೀತಲೇ || ತೇಷಾಂ ಭೃತ್ಯೋಹಮಿತ್ಯೇತದ್ಭೃತ್ಯಾಚಾರಸ್ಸ ಉಚ್ಯತೇ ೀ ಗುರುಲಿಂಗ ಜಂಗಮಶ್ಚೈವ ಪಾದತೀರ್ಥಃ ಪ್ರಸಾದತಃ ೀ ಇತಿ ಪಂಚಸ್ವರೂಪೋ[s]ಯಹಂ ಗಣಾಚಾರಃ ಪ್ರಕೀರ್ತಿತಃ ||ú ಎಂದುದಾಗಿ, ಇಂತಪ್ಪ ಶಿವಾಚಾರದ ಆಚಾರವನರಿಯದೆ ನಾ ಶಿವಭಕ್ತ ನಾ ಶಿವಭಕ್ತೆ ನಾ ಶಿವಾಚಾರಿ ಎಂದು ಕೊಂಬ ಶೀಲವಂತರ ನೋಡಿ ಎನ್ನ ಮನ ನಾಚಿ ನಿಮ್ಮಡಿಮುಖವಾಯಿತ್ತಯ್ಯ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಯ್ಯ.
--------------
ಅಕ್ಕಮಹಾದೇವಿ
ಭಾವ ಬೀಸರವಾಯಿತ್ತು, ಮನ ಮೃತ್ಯುವನಪ್ಪಿತ್ತು ; ಆನೇವೆನಯ್ಯಾ ? ಆಳಿತನದ ಮನ ತಲೆಕೆಳಗಾಯಿತ್ತು ; ಆನೇವೆನಯ್ಯಾ ? ಬಿಚ್ಚಿ ಬೇರಾಗದ ಭಾವವಾಗೆ, ಬೆರೆದೊಪ್ಪಚ್ಚಿ ನಿನ್ನ ನಿತ್ಯಸುಖದೊಳಗೆಂದಿಪ್ಪೆನಯ್ಯಾ, ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಭಕ್ತನೆ ಕುಲಜನೆಂದ ಮಾತಿನಂತೆ ಹೋಗದು. ಭಕ್ತನೆ ಕುಲಜನೆಂಬ ನುಡಿಯೆಲ್ಲಿಯು ಸಲ್ಲದು. ಭಕ್ತನೆ ಕುಲಜನೆಂಬುದು ಪಾತಕವಯ್ಯ. ಅವಯವವೆ ಮೂರ್ತಿಯಾಗಿ ಸರ್ವಾಂಗಲಿಂಗಕ್ಕೆ ಅನುಭಾವವಿಲ್ಲಾಗಿ ಎನ್ನ ದೇವ ಚೆನ್ನಮಲ್ಲಿಕಾರ್ಜುನನಲಿ ಯಥಾ ತಥಾ ಎಂಬ ವಚನವನರಿಯಿರೆ.
--------------
ಅಕ್ಕಮಹಾದೇವಿ
ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ ? ಎಂಬತ್ತುನಾಲ್ಕು ಲಕ್ಷ ಊರಲ್ಲಿ ಎಡೆಗೆಯ್ಯಬೇಕು. ಒಂದೂರಭಾಷೆಯೊಂದೂರಲಿಲ್ಲ. ಒಂದೂರಲ್ಲಿ ಕೊಂಡಂಥ ಆಹಾರ ಮತ್ತೊಂದೂರಲಿಲ್ಲ. ಇಂತೀ ಊರ ಹೊಕ್ಕ ತಪ್ಪಿಂಗೆ ಕಾಯವ ಭೂಮಿಗೆ ಸುಂಕವ ತೆತ್ತು ಜೀವವನುಳುಹಿಕೊಂಡು ಬರಬೇಕಾಯಿತ್ತು. ಇಂತೀ ಮಹಾಘನದ ಬೆಳಕಿನೊಳಗೆ ಕಳೆದುಳಿದು ಸುಳಿದಾಡಿ ನಿಮ್ಮ ಪಾದವ ಕಂಡು ಸುಯಿಧಾನಿಯಾದೆ ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ
--------------
ಅಕ್ಕಮಹಾದೇವಿ
ಭೃತ್ಯನಾದ ಬಳಿಕ ಕರ್ತೃವಿಂಗೆ ಉತ್ತಮ ವಸ್ತುವನೀಯಬೇಕು, ಇದೇ ಕರ್ತೃಭೃತ್ಯರ ಭೇದ. ಲಿಂಗಭಕ್ತನಾದಡೆ ಜಂಗಮಪಾದತೀರ್ಥಪ್ರಸಾದವ ಲಿಂಗಕ್ಕೆ ಮಜ್ಜನ ಭೋಜನ ನೈವೇದ್ಯವ ಮಾಡಿ, ಪ್ರಸಾದವ ಕೊಳ್ಳಬೇಕು. ಇದೇ ವರ್ಮ, ಇದೇ ಧರ್ಮ ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಭವಿಸಂಗವಳಿದು ಭಕ್ತನಾದ ಬಳಿಕ, ಭಕ್ತಂಗೆ ಭವಿಸಂಗವತಿಘೋರ ನರಕ. ಶರಣಸತಿ ಲಿಂಗಪತಿಯಾದ ಬಳಿಕ, ಶರಣಂಗೆ ಸತಿಸಂಗವು ಅಘೋರನರಕ. ಚೆನ್ನಮಲ್ಲಿಕಾರ್ಜುನಾ, ಪ್ರಾಣಗುಣವಳಿಯದವರ ಸಂಗವೇ ಭಂಗ.
--------------
ಅಕ್ಕಮಹಾದೇವಿ
ಭಕ್ತೆಯಾನಪ್ಪೆನಯ್ಯಾ ; ಕರ್ತೃಭೃತ್ಯವ ನಾನರಿಯೆ. ಮಾಹೇಶ್ವರಿಯಾನಪ್ಪೆನಯ್ಯಾ ; ವ್ರತ ನೇಮ ಛಲವ ನಾನರಿಯೆ. ಪ್ರಸಾದಿಯಾನಪ್ಪೆನಯ್ಯಾ ; ಅರ್ಪಿತನರ್ಪಿತವೆಂಬ ಭೇದವ ನಾನರಿಯೆ. ಪ್ರಾಣಲಿಂಗಿಯಾನಪ್ಪೆನಯ್ಯಾ ; ಅನುಭಾವದ ಗಮನವ ನಾನರಿಯೆ. ಶರಣೆಯಾನಪ್ಪೆನಯ್ಯಾ? ಶರಣಸತಿ ಲಿಂಗಪತಿ ಎಂಬ ಭಾವವ ನಾನರಿಯೆ. ಐಕ್ಯಳಾನಪ್ಪೆನಯ್ಯಾ? ಬೆರಸಿ ಭೇದವ ನಾನರಿಯೆ. ಚೆನ್ನಮಲ್ಲಿಕಾರ್ಜುನಯ್ಯಾ, ಷಟ್‍ಸ್ಥಲದಲ್ಲಿ ನಿಃಸ್ಥಲವಾಗಿಪ್ಪೆನು.
--------------
ಅಕ್ಕಮಹಾದೇವಿ
ಭವಭವದಲ್ಲಿ ತೊಳಲಿ ಬಳಲಿತ್ತೆನ್ನಮನ, ಆನೇವೆನಯ್ಯಾ ? ಹಸಿದುಂಡಡೆ ಉಂಡು ಹಸಿವಾಯಿತ್ತು. ಇಂದು ನೀನೊಲಿದೆಯಾಗಿ, ಎನಗೆ ಅಮೃತದ ಆಪ್ಯಾಯನವಾಯಿತ್ತು. ಇದು ಕಾರಣ, ನೀನಿಕ್ಕಿದ ಮಾಯೆಯನಿನ್ನು ಮುಟ್ಟಿದೆನಾದಡೆ ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಭಾನುವಿನಂತಿಪ್ಪುದು ಜ್ಞಾನ, ಭಾನುಕಿರಣದಂತಿಪ್ಪುದು ಭಕ್ತಿ. ಭಾನುವನುಳಿದು ಕಿರಣಂಗಳಿಲ್ಲ, ಕಿರಣಂಗಳನುಳಿದು ಭಾನುವಿಲ್ಲ. ಜ್ಞಾನವಿಲ್ಲದ ಭಕ್ತಿ, ಭಕ್ತಿಯಿಲ್ಲದ ಜ್ಞಾನವೆಂತಿಪ್ಪುದು ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ