ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಅಂ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗಸಂಗದಲ್ಲಿ ಲಿಂಗಸಂಗಿಯಾದೆನು. ಲಿಂಗಸಂಗದಲ್ಲಿ ಅಂಗಸಂಗಿಯಾದೆನು. ಉಭಯಸಂಗವನೂ ಅರಿಯದೆ ಪರಿಣಾಮಿಯಾದೆನು. ನುಡಿಯ ಗಡಣವ ಮರೆದು ತೆರಹಿಲ್ಲದಿದ್ದೆನು. ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಬೆರಸಿದ ಬಳಿಕ ಎನ್ನ ನಾನು ಏನೆಂದೂ ಅರಿಯೆನಯ್ಯಾ.
--------------
ಅಕ್ಕಮಹಾದೇವಿ
ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ. ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ. ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ. ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ. ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ ? ಚೆನ್ನಮಲ್ಲಿಕಾರ್ಜುನ, ಕಾಮನಕೊಂದು ಮನಸಿಜನಾಗುಳುಹಿದಡೆ ಮನಸಿಜನ ತಲೆಯ ಬರಹವ ತೊಡೆದೆನು.
--------------
ಅಕ್ಕಮಹಾದೇವಿ
ಅಂದೂ ನೀನೆ, ಇಂದೂ ನೀನೆ, ಎಂದೂ ನೀನೆ, ಕೇಳಾ ತಂದೆ. ನಿನ್ನ ಬೆಂಬಳಿವಿಡಿದ ಹಳೆಮಗಳಾನಯ್ಯ ಅಂದೂ ಇಂದೂ ಎಂದೂ ನಿನ್ನ ನಂಬಿದ ಒಲವಿನ ಶಿಶು ನಾನಯ್ಯ. ಒಂದಲ್ಲದೆ ಎರಡರಿಯೆನಯ್ಯಾ. ಎನ್ನ ತಂದೆ ಕೇಳಾ, ಚೆನ್ನಮಲ್ಲಿಕಾರ್ಜುನಾ ನಿಮ್ಮ ಎಂಜಲನುಂಬ ಹಳೆಯವಳಾನಯ್ಯಾ.
--------------
ಅಕ್ಕಮಹಾದೇವಿ
ಅಂಗೈಯೊಳಗಣ ಲಿಂಗವ ಪೂಜಿಸುತ್ತ, ಮಂಗಳಾರತಿಗಳನು ತೊಳಗಿ ಬೆಳಗುತ್ತಲಿರ್ದೆ ನೋಡಯ್ಯಾ. ಕಂಗಳ ನೋಟ, ಕರುವಿಟ್ಟ ಭಾವ, ಹಿಂಗದ ಮೋಹ ತೆರಹಿಲ್ಲದಿರ್ದೆ ನೋಡಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.
--------------
ಅಕ್ಕಮಹಾದೇವಿ
ಅಂಗವ ಲಿಂಗಮುಖದಲ್ಲಿ ಅರ್ಪಿಸಿ, ಅಂಗ ಅನಂಗವಾಯಿತ್ತು. ಮನವ ಅರಿವಿಂಗರ್ಪಿಸಿ, ಮನ ಲಯವಾಯಿತ್ತು. ಭಾವವ ತೃಪ್ತಿಗರ್ಪಿಸಿ, ಭಾವ ಬಯಲಾಯಿತ್ತು. ಅಂಗ ಮನ ಭಾವವಳಿದ ಕಾರಣ ಕಾಯ ಅಕಾಯವಾಯಿತ್ತು. ಎನ್ನ ಕಾಯದ ಸುಖಭೋಗವ ಲಿಂಗವೆ ಭೋಗಿಸುವನಾಗಿ, ಶರಣಸತಿ ಲಿಂಗಪತಿಯಾದೆನು. ಇದು ಕಾರಣ, ಚೆನ್ನಮಲ್ಲಿಕಾರ್ಜುನನೆಂಬ ಗಂಡನ ಒಳಹೊಕ್ಕು ಬೆರಸಿದೆನು.
--------------
ಅಕ್ಕಮಹಾದೇವಿ
ಅಂಗದಲ್ಲಿ ಆಚಾರವ ತೋರಿದ ಆ ಆಚಾರವೇ ಲಿಂಗವೆಂದರುಹಿದ. ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ; ಅರಿವೆ ಜಂಗಮವೆಂದು ತೋರಿದ. ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯ ಪ್ರಭುವೆ.
--------------
ಅಕ್ಕಮಹಾದೇವಿ
ಅಂಗವಿಕಾರಸಂಗವ ಮರೆದು, ಲಿಂಗವನೊಡಗೂಡುತಿಪ್ಪವರ ತೋರಾ ಎನಗೆ. ಕಾಮವಿಕಾರಕತ್ತಲೆಯಳಿದು, ಭಕ್ತಿಪ್ರಾಣವಾಗಿಪ್ಪವರ ತೋರಾ ಎನಗೆ. ತ್ರಿಕರಣ ಶುದ್ಧವಾಗಿ ನಿಮ್ಮ ನೆರೆ ನಂಬಿದ ಸದ್ಭಕ್ತರ ತೋರಾ ಎನಗೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ. ಮನದೊಳಗೆ ಮನವಾಗಿ, ಮನವ ಲಿಂಗೈಕ್ಯವ ಮಾಡಿದೆ. ಭಾವದೊಳಗೆ ಭಾವವಾಗಿ, ಭಾವವ ಲಿಂಗೈಕ್ಯವ ಮಾಡಿದೆ. ಅರಿವಿನೊಳಗೆ ಅರಿವಾಗಿ, ಅರಿವ ಲಿಂಗೈಕ್ಯವ ಮಾಡಿದೆ. ಜ್ಞಾನದೊಳಗೆ ಜ್ಞಾನವಾಗಿ, ಜ್ಞಾನವ ಲಿಂಗೈಕ್ಯವ ಮಾಡಿದೆ. ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ, ನಿಃಪತಿ ಲಿಂಗೈಕ್ಯವ ಮಾಡಿದೆ. ನಾನೆಂಬುದ ನಿಲಿಸಿ, ನೀನೆಂಬುದ ಕೆಡಿಸಿ, ಉಭಯವ ಲಿಂಗೈಕ್ಯವ ಮಾಡಿದೆ. ಚೆನ್ನಮಲ್ಲಿಕಾರ್ಜುನಯ್ಯನೊಳಗೆ ನಾನಳಿದೆನಾಗಿ, ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು ಕಾಣಾ ಸಂಗನಬಸವಣ್ಣಾ.
--------------
ಅಕ್ಕಮಹಾದೇವಿ
ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು. ಮನ, ಲಿಂಗವ ವೇಧಿಸಿ, ಮನ ಲಿಂಗದೊಳಗಾಯಿತ್ತು. ಭಾವ, ಲಿಂಗವ ವೇಧಿಸಿ, ಭಾವ ಲಿಂಗದೊಳಗಾಯಿತ್ತು. ಚೆನ್ನಮಲ್ಲಿಕಾರ್ಜುನಾ, ನಿಮ್ಮ ಒಲುಮೆಯ ಸಂಗದಲ್ಲಿರ್ದು ಸ್ವಯಲಿಂಗವಾಯಿತ್ತು.
--------------
ಅಕ್ಕಮಹಾದೇವಿ
ಅಂಗ ಕ್ರಿಯಾಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು. ಮನ ಅರಿವ ಬೆರಸಿ, ಜಂಗಮ ಸೇವೆಯ ಮಾಡಿ, ಮನ ಜಂಗಮಲಿಂಗದೊಳಗಾಯಿತ್ತು. ಭಾವ ಗುರುಲಿಂಗದೊಳಗೆ ಬೆರಸಿ, ಮಹಾಪ್ರಸಾದವ ಭೋಗಿಸಿ, ಭಾವ ಗುರುಲಿಂಗದೊಳಗಾಯಿತ್ತು. ಚೆನ್ನಮಲ್ಲಿಕಾರ್ಜುನಾ, ನಿಮ್ಮ ಒಲುಮೆಯಿಂದ ಸಂದಳಿದು ಸ್ವಯಲಿಂಗಿಯಾದೆನಯ್ಯಾ ಪ್ರಭುವೆ.
--------------
ಅಕ್ಕಮಹಾದೇವಿ