ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ, ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಲಿಂಗಜಂಗಮಸೇವೆಯ, ಪಡೆವುದರಿದು ಸತ್ಯಶರಣರನುಭಾವವ. ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೆ.
--------------
ಅಕ್ಕಮಹಾದೇವಿ
ಪರರೊಡತಣ ಮಾತು ನಮಗೇತರದಯ್ಯ ? ಪರರೊಡತಣ ಗೊಟ್ಟಿ ನಮಗೇಕಯ್ಯ ? ಲೋಕದ ಮಾನವರೊಡನೆ ನಮಗೇತರ ವಿಚಾರವಯ್ಯ ? ಚೆನ್ನಮಲ್ಲಿಕಾರ್ಜುನನ ಒಲವಿಲ್ಲದವರೊಡನೆ ನಮಗೇತರ ವಿಚಾರವಯ್ಯಾ ?
--------------
ಅಕ್ಕಮಹಾದೇವಿ
ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು. ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು. ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ ಮರುಳಾಗಿ ತೋರುವುದು. ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.
--------------
ಅಕ್ಕಮಹಾದೇವಿ
ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ? ಹರಿಬ್ರಹ್ಮರ ಬಲುಹ ಮುರಿದು ಕೊಂದು ಕೂಗಿತಲ್ಲಾ ? ಮಹಾ ಋಷಿಯರ ತಪವ ಕೆಡಿಸಿ ಕೊಂದು ಕೂಗಿತಲ್ಲಾ ? ಚೆನ್ನಮಲ್ಲಿಕಾರ್ಜುನಂಗೆ ಶರಣೆಂದು ನಂಬಿ ಮರೆಹೊಕ್ಕಡೆ ಅಂಜಿ ನಿಂದುದಲ್ಲಾ ?
--------------
ಅಕ್ಕಮಹಾದೇವಿ
ಪೃಧ್ವಿಯಗೆಲಿದ ಏಲೇಶ್ವರನ ಕಂಡೆ. ಭಾವಭ್ರಮೆಯ ಗೆಲಿದ ಬ್ರಹ್ಮೇಶ್ವರನ ಕಂಡೆ. ಸತ್ವ ರಜ ತಮ ತ್ರಿವಿಧವ ಗೆಲಿದ ತ್ರಿಪುರಾಂತಕನ ಕಂಡೆ. ಅಂತರಂಗದ ಆತ್ಮಜ್ಞಾನದಿಂದ ಜ್ಯೋತಿಸಿದ್ಧಯ್ಯನ ಕಂಡೆ. ಇವರೆಲ್ಲರ ಮಧ್ಯಮಸ್ಥಾನ ಪ್ರಾಣಲಿಂಗ ಜಂಗಮವೆಂದು ಸುಜ್ಞಾನದಲ್ಲಿ ತೋರಿದ ಬಸವಣ್ಣ ; ಆ ಬಸವಣ್ಣನ ಪ್ರಸಾದದಿಂದ ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯಾ
--------------
ಅಕ್ಕಮಹಾದೇವಿ
ಪಂಚೇಂದ್ರಿಯಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ? ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ? ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಪುದುಗಿದ ಸಂಸಾರದ ಬಂಧನದೊಳು ಪೆಣಗಿದೆ ಅದೆಂದಿಗೆ ಬಿಟ್ಟು ಪೋಪುದೊ ? ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನೊ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಪ್ರಥಮದಲಾದ ಮೋಹ ಸಾತ್ವಿಕವಾದಡೆ ಕಿತವೇಕಯ್ಯಾ ಹೆರರನೊಲ್ಲದ ಬೇಟಕ್ಕೆ ಕಿತವೇಕಯ್ಯಾ ? ಚೆನ್ನಮಲ್ಲಿಕಾರ್ಜುನದೇವರದೇವನನೆಂದಿಗೆ ಬಿಡದ ನೇಹಕ್ಕೆ ಕಿತವೇಕಯ್ಯಾ ?
--------------
ಅಕ್ಕಮಹಾದೇವಿ
ಪ್ರಾಣ ಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ ? ದೇವ ದಾನವ ಮಾನವರೆಲ್ಲಾ ಜೋಳವಾಳಿಯಲೈದಾರೆ. ಜಾಣಕಲುಕುಟಿಗನನಗಲದೆ ಹೂವನೆ ಕೊಯ್ದು, ಕಲಿಯುಗದ ಕರಸ್ಥಲದೇವಪೂಜೆ ಘನ. ಮೇರುವಿನ ಕುದುರೆ ನಲಿದಾಡಲದುಭುತ. ಜಾರಜಂಗುಳಿಗಳ ಜಗಳ ಮೇಳಾಪ, ಮರುಪತ್ತದ ಮಾತು, ನಗೆ ಹಗರಣ ? ಕ್ಷೀರಸಾಗರದಲ್ಲಿ ದಾರಿಯಳವಡದಯ್ಯಾ. ನೀ ಹೇಳಬೇಕು, ಭಕ್ತರೆಂತಿಪ್ಪರೊ ? ಪಂಚವರ್ಣದ ಬಣ್ಣ ಸಂತೆಯ ಪರದಾಟವು ಚೆನ್ನಮಲ್ಲಿಕಾರ್ಜುನಯ್ಯಾ, ತ್ರಿಭುವನದ ಹೆಂಡಿರ ನೀರಹೊಳೆಯಲ್ಲಿರಿಸಿತ್ತು.
--------------
ಅಕ್ಕಮಹಾದೇವಿ
ಪುಣ್ಯಪಾಪಂಗಳನರಿಯದ ಮುನ್ನ, ಅನೇಕ ಭವಂಗಳ ಬಂದೆನಯ್ಯಾ ? ಬಂದು ಬಂದು ನೊಂದು ಬೆಂದೆನಯ್ಯಾ ? ಬಂದು ನಿಮ್ಮ ನಂಬಿ ಶರಣುವೊಕ್ಕೆನಯ್ಯಾ ? ನಿಮ್ಮನೆಂದೂ ಅಗಲದಂತೆ ಮಾಡಿ ನಡೆಸಯ್ಯಾ ನಿಮ್ಮ ಧರ್ಮ ನಿಮ್ಮ ಧರ್ಮ. ನಿಮ್ಮಲೊಂದು ಬೇಡುವೆನು, ಎನ್ನ ಬಂಧನ ಬಿಡುವಂತೆ ಮಾಡಯ್ಯಾ ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಪೃಥ್ವಿ ಪೃಥ್ವಿಯ ಕೂಡದ ಮುನ್ನ, ಅಪ್ಪು ಅಪ್ಪುವ ಕೂಡದ ಮುನ್ನ, ತೇಜ ತೇಜವ ಕೂಡದ ಮುನ್ನ, ವಾಯು ವಾಯುವ ಕೂಡದ ಮುನ್ನ, ಆಕಾಶ ಆಕಾಶವ ಕೂಡದ ಮುನ್ನ ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ ಮುನ್ನ ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ ?
--------------
ಅಕ್ಕಮಹಾದೇವಿ
ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಪಿಡಿದು ಅಂತಃಕರಣಚತುಷ್ಟಯವೆಂಬ ಪಶುವಂ ಕಟ್ಟಿ ಓಂಕಾರವೆಂಬ ಶಿಣಿಗೋಲಂ ಪಿಡಿದು ವ್ರತ ಕ್ರಿಯವೆಂಬ ಸಾಲನೆತ್ತಿ ನಿರಾಶೆಯೆಂಬ ಕುಂಟೆಯಂ ತುರುಗಿ ದುಷ್ಕರ್ಮಂಗಳೆಂಬ ದುರ್ಮಲರಿಗಳಂ ಕಳೆದು ನಾನಾ ಮೂಲದ ಬೇರಂ ಕಿತ್ತು ಜ್ಞಾನಾಗ್ನಿಯೆಂಬ ಬೆಂಕಿಯಂ ಸುಟ್ಟು ಈ ಹೊಲನ ಹಸನಮಾಡಿ ಬಿತ್ತುವ ಪರ್ಯಾಯವೆಂತೆಂದೊಡೆ ನಾದ ಬಿಂದು ಕಳೆ ಮೊಳೆ ಹದ ಬೆದೆಯನರಿದು ಸ್ಥೂಲವೆಂಬ ದಿಂಡಿಂಗೆ ಶ್ರೀದೇವರೆಂಬ ತಾಳನಟ್ಟು ಸುಷುಮ್ನನಾಳವೆಂಬ ಕೋವಿಯಂ ಜೋಡಿಸಿ ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟೆಯಂ ಬಲಿದು ಕುಂಡಲಿಯ ಸರ್ಪನ ಹಗ್ಗವಂ ಬಿಗಿದು ಹಂಸನೆಂಬ ಎತ್ತಂ ಕಟ್ಟಿ ಪ್ರಣವವೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ ಸಂತೋಷವೆಂಬ ಬೆಳೆಯಂ ಬೆಳೆದು ಈ ಬೆಳೆಯ ಕೊಯಿದುಂಬ ಪರ್ಯಾಯವೆಂತೆಂದೊಡೆ ಬಾಗುಚಂದನೆಂಬ ಕುಡುಗೋಲಂ ಪಿಡಿದು ಜನನದ ನಿಲವಂ ಕೊಯಿದು, ಮರಣದ ಸೂಡಂ ಕಟ್ಟಿ ಆಕಾಶವೆಂಬ ಬಣಬೆಯ ಒಟ್ಟಿ ಅಷ್ಟಾಂಗಯೋಗವೆಂಬ ಜೀವಧನದಿಂದಮೊಕ್ಕಿ ತಾಪತ್ರಯವೆಂಬ ಮೆಟ್ಟನಂ ಮೆಟ್ಟಿಸಿ ಪಾಪದ ಹೊಟ್ಟ ತೂರಿ ಪುಣ್ಯದಜರ ಹಮ್ಮನುಳಿಯೆ ನಿರ್ಮಲನೆಂಬ ಘನರಾಶಿಯಂ ಮಾಡಿ ಚಿತ್ರಗುಪ್ತರೆಂಬ ಶಾನುಭೋಗರ ಸಂಪುಟಕ್ಕೆ ಬರಹಂ ಬರೆಸದೆ ವ್ಯವಹಾರಂ ಕದ್ದು ನಮ್ಮ ಶ್ರೀಶೈಲ ಚೆನ್ನಮಲ್ಲಿಕಾರ್ಜುನನಲ್ಲಿ ಭಾನುಗೆ ಒಂದೆ ಮುಖವಾದ ಒಕ್ಕಲುಮಗನ ತೋರಿಸಯ್ಯ ನಿಮ್ಮ ಧರ್ಮ ಶ್ರೀಶೈಲಚೆನ್ನಮಲ್ಲಿಕಾರ್ಜುನಪ್ರಭುವೆ.
--------------
ಅಕ್ಕಮಹಾದೇವಿ
ಪ್ರಾಣ ಲಿಂಗವೆಂದರಿದ ಬಳಿಕ ಪ್ರಾಣ ಪ್ರಸಾದವಾಯಿತ್ತು. ಲಿಂಗ ಪ್ರಾಣವೆಂದರಿದ ಬಳಿಕ ಅಂಗದಾಸೆ ಹಿಂಗಿತ್ತು. ಲಿಂಗ ಸೋಂಕಿನ ಸಂಗಿಗೆ ಕಂಗಳೆ ಕರುವಾದವಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ಹಿಂಗದೆ ಅನಿಮಿಷನಾಗಿಹ ಶರಣಂಗೆ.
--------------
ಅಕ್ಕಮಹಾದೇವಿ
ಪಂಚೇಂದ್ರಿಯದ ಉರವಣೆಯ ಉದುಮದದ ಭರದ ಜವ್ವನದೊಡಲು ವೃಥಾ ಹೋಯಿತ್ತಲ್ಲಾ ? ತುಂಬಿ ಪರಿಮಳವ ಕೊಂಡು ಲಂಬಿಸುವ ತೆರನಂತೆ ಇನ್ನೆಂದಿಂಗೆ ಒಳಕೊಂಬೆಯೊ, ಅಯ್ಯಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ, ಪವಳದ ಚಪ್ಪರವಿಕ್ಕಿ, ಮುತ್ತುಮಾಣಿಕದ ಮೇಲುಕಟ್ಟ ಕಟ್ಟಿ, ಮದುವೆಯ ಮಾಡಿದರು, ಎಮ್ಮವರೆನ್ನ ಮದುವೆಯ ಮಾಡಿದರು. ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯಮಾಡಿದರು
--------------
ಅಕ್ಕಮಹಾದೇವಿ
ಪಾತಾಳವಿತ್ತಿತ್ತ, ಪಾದಂಗಳತ್ತತ್ತ, ದಶದಿಕ್ಕು ಇತ್ತಿತ್ತ, ದಶಭುಜಂಗಳತ್ತತ್ತ, ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ, ಚೆನ್ನಮಲ್ಲಿಕಾರ್ಜುನಯ್ಯಾ, ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಲ್ಲಾ ಲಿಂಗವೆ.
--------------
ಅಕ್ಕಮಹಾದೇವಿ