ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉರಕ್ಕೆ ಜವ್ವನಗಳು ಬಾರದ ಮುನ್ನ, ಮನಕ್ಕೆ ನಾಚಿಕೆಗಳು ತೋರದ ಮುನ್ನ, ನಮ್ಮವರಂದೆ ಮದುವೆಯ ಮಾಡಿದರು; ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ. ಹೆಂಗೂಸೆಂಬ ಭಾವ ತೋರದ ಮುನ್ನ ನಮ್ಮವರಂದೆ ಮದುವೆಯ ಮಾಡಿದರು
--------------
ಅಕ್ಕಮಹಾದೇವಿ
ಉದಯದಲೆದ್ದು ನಿಮ್ಮ ನೆನೆವೆನಯ್ಯಾ. ಕಸದೆಗೆದು ಚಳೆಯ ಕೊಟ್ಟು ನಿಮ್ಮ ಬರವ ಹಾರುತಿರ್ದೆನಯ್ಯಾ. ಹಸೆ ಹಂದರವನಿಕ್ಕಿ ನಿಮ್ಮಡಿಗಳಿಗೆಡೆಮಾಡಿಕೊಂಡಿರ್ದೆನಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನೀನಾವಾಗ ಬಂದೆಯಾ ಎನ್ನ ದೇವಾ ?
--------------
ಅಕ್ಕಮಹಾದೇವಿ
ಉಡುವೆ ನಾನು ಲಿಂಗಕ್ಕೆಂದು, ತೊಡುವೆ ನಾನು ಲಿಂಗಕ್ಕೆಂದು, ಮಾಡುವೆ ನಾನು ಲಿಂಗಕ್ಕೆಂದು, ನೋಡುವೆ ನಾನು ಲಿಂಗಕ್ಕೆಂದು, ಎನ್ನಂತರಂಗ ಬಹಿರಂಗಗಳು ಲಿಂಗಕ್ಕಾಗಿ. ಮಾಡಿಯೂ ಮಾಡದಂತಿಪ್ಪೆ ನೋಡಾ. ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ ಹತ್ತರೊಡನೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವಾ!
--------------
ಅಕ್ಕಮಹಾದೇವಿ
ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು. ಕಾಣಲೆಂದು ಬಂದ ದುಃಖ ಕಂಡಲ್ಲದೆ ಹರಿಯದು. ತನುವಿಂಗೆ ಬಂದ ಕರ್ಮ ಹರಿವ ಕಾಲಕ್ಕೆ ಚೆನ್ನಮಲ್ಲಿಕಾರ್ಜುನದೇವರು ಕಡೆಗಣ್ಣಿನಿಂದ ನೋಡಿದರು.
--------------
ಅಕ್ಕಮಹಾದೇವಿ
ಉಳುಹುವ, ಕರವ ನೇಹವುಂಟೆ ನಿಮ್ಮಲ್ಲಿ ಸಂಸಾರಕ್ಕೆಡೆಯಾ [ಡದ] ಭಕ್ತಿಯೊಳವೆ ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯಾ, ಏನ ಹೇಳುವೆನಯ್ಯ ಲಜ್ಜೆಯ ಮಾತನು
--------------
ಅಕ್ಕಮಹಾದೇವಿ
ಉರಿಯ ಫಣಿಯನುಟ್ಟು ಊರಿಂದ ಹೊರಗಿರಿಸಿ, ಕರೆಯಲಟ್ಟಿದ ಸಖಿಯ ನೆರೆದ ನೋಡೆಲೆಗವ್ವಾ. ತೂರ್ಯಾವಸ್ಥೆಯಲ್ಲಿ ತೂಗಿ ತೂಗಿ ನೋಡಿ ಬೆರಗಾಗಿ ನಿಲಲಾರೆನವ್ವಾ. ಆರವಸ್ಥೆ ಕರ ಹಿರಿದು ಎಲೆ ತಾಯೆ. ಗಿರಿ ಬೆಂದು ತರುವುಳಿದು ಹೊನ್ನರಳೆಯ ಮರನುಲಿವಾಗ ಹಿರಿಯತನಗೆಡಿಸಿ ನೆರೆವೆನು ಚೆನ್ನಮಲ್ಲಿಕಾರ್ಜುನನ.
--------------
ಅಕ್ಕಮಹಾದೇವಿ
ಉಳ್ಳುದೊಂದು ತನು, ಉಳ್ಳುದೊಂದು ಮನ. ನಾನಿನ್ನಾವ ಮನದಲ್ಲಿ ಧ್ಯಾನವ ಮಾಡುವೆನಯ್ಯಾ ? ಸಂಸಾರವನಾವ ಮನದಲ್ಲಿ ತಲ್ಲೀಯವಾಹೆನಯ್ಯಾ ? ಅಕಟಕಟಾ, ಕೆಟ್ಟೆ ಕೆಟ್ಟೆ ? ಸಂಸಾರಕ್ಕಲ್ಲಾ, ಪರಮಾರ್ಥಕ್ಕಲ್ಲಾ ? ಎರಡಕ್ಕೆ ಬಿಟ್ಟ ಕರುವಿನಂತೆ ? ಬಿಲ್ವ ಬೆಳವಲಕಾಯನೊಂದಾಗಿ ಹಿಡಿಯಬಹುದೆ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ? ಕ್ಷಮೆ ದಮೆ ಶಾಂತಿ ಸೈರಣೆಯಿರಲು ಸಮಾಧಿಯ ಹಂಗೇಕಯ್ಯಾ? ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ, ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ ಶಿವನ ನೆನೆಯಿರೆ ! ಶಿವನ ನೆನೆಯಿರೆ ! ಈ ಜನ್ಮ ಬಳಿಕಿಲ್ಲ. ಚೆನ್ನಮಲ್ಲಿಕಾರ್ಜುನದೇವರದೇವನ ನೆನೆದು ಪಂಚಮಹಾಪಾತಕರೆಲ್ಲರು ಮುಕ್ತಿವಡೆದರಂದು ?
--------------
ಅಕ್ಕಮಹಾದೇವಿ
ಉಪಮಾತೀತರು ರುದ್ರಗಣಂಗಳು, ಅವರೆನ್ನ ಬಂಧುಬಳಗಂಗಳು. ನಮ್ಮ ಶ್ರೀಶೈಲ ಚೆನ್ನಮಲ್ಲಿಕಾರ್ಜುನ ಒಲಿದಡೆ ಮರಳಿತ್ತ ಬಾರೆನಮ್ಮಾ ತಾಯೆ.
--------------
ಅಕ್ಕಮಹಾದೇವಿ
ಉರಿಯೊಡ್ಡಿದಡೆ ಸೀತಳವೆನಗೆ. ಗಿರಿಮೇಲೆ ಬಿದ್ದರೆ ಪುಷ್ಪವೆನಗೆ. ಸಮುದ್ರಮೇಲುವಾಯಿದರೆ ಕಾಲುವೆಯೆನಗೆ. ಚೆನ್ನಮಲ್ಲಿಕಾರ್ಜುನಾ, ನಿಮ್ಮಾಣೆಯೆಂಬುದು ತಲೆಯೆತ್ತಿ ಬಾರದ ಭಾರವೆನಗೆ.
--------------
ಅಕ್ಕಮಹಾದೇವಿ