ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶರಣರ ಮನ ನೋಯ ನುಡಿದೆನಾಗಿ, ಹರಜನ್ಮವಳಿದು ನರಜನ್ಮಕ್ಕೆ ಬಂದೆನು. ಹರನಟ್ಟಿದ ಬೆಸನ ಶಿರದೊಳಗಾಂತೊಡೆ, ಗಿರಿಗಳ ಭಾರವೆನಗಾದುದಯ್ಯ. ಚೆನ್ನಮಲ್ಲಿಕಾರ್ಜುನನ ಧರ್ಮದಿಂದ ಸಂಸಾರ ಕರ್ಮದ ಹೊರೆಯನಿಳುಹಿ, ನಡುದೊರೆಯ ಹಾಯಿದು ಹೋದೆನು.
--------------
ಅಕ್ಕಮಹಾದೇವಿ
ಶಿವಂಗೆ ತಪ್ಪಿದ ಕಾಲ ಭಸ್ಮವಾದುದನರಿಯಾ ? ಶಿವಂಗೆ ತಪ್ಪಿದ ಕಾಮನುರಿದುದನರಿಯಾ ? ಶಿವಂಗೆ ತಪ್ಪಿದ ಬ್ರಹ್ಮನ ಶಿರ ಹೋದುದನರಿಯಾ ? ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ತಪ್ಪಿದಡೆ, ಭವಘೋರನರಕವೆಂದರಿಯಾ, ಮರುಳೆ ?
--------------
ಅಕ್ಕಮಹಾದೇವಿ
ಶಿವಭಕ್ತರ ರೋಮನೊಂದಡೆ, ಶಿವನು ನೋವ ನೋಡಾ. ಶಿವಭಕ್ತರು ಪರಿಣಾಮಿಸಿದಡೆ, ಶಿವನು ಪರಿಣಾಮಿಸುವ ನೋಡಾ. ಭಕ್ತದೇಹಿಕದೇವನೆಂದು ಶ್ರುತಿ ಹೊಗಳುವ ಕಾರಣ, ಶಿವಭಕ್ತರ ಲೇಸು ಹೊಲ್ಲೆಹ ಶಿವನ ಮುಟ್ಟುವುದು ನೋಡಾ. ತಾಯಿನೊಂದಡೆ ಒಡಲಶಿಶು ನೋವತೆರನಂತೆ, ಭಕ್ತರು ನೊಂದಡೆ ತಾ ನೋವ ನೋಡಾ ಚೆನ್ನಮಲ್ಲಿಕಾರ್ಜುನ.
--------------
ಅಕ್ಕಮಹಾದೇವಿ
ಶಿವಶಿವಾ, ಶ್ರೀಗುರುಲಿಂಗಯ್ಯದೇವರು ತನ್ನ ಕರಸ್ಥಲವ ತಂದು ಎನ್ನ ಶಿರಸ್ಥಲದ ಮೇಲಿರಿಸಿದ ಬಳಿಕ ಎನ್ನ ಭವಂ ನಾಸ್ತಿಯಾಯಿತ್ತು. ಎನ್ನ ತನ್ನಂತೆ ಮಾಡಿದ, ತನ್ನ ಎನ್ನಂತೆ ಮಾಡಿದ ; ಎನ್ನಲ್ಲಿ ತನ್ನಲ್ಲಿ ತೆರಹಿಲ್ಲದೆ ಮನಕ್ಕೆ ತೋರಿದ. ತನ್ನ ಕರಸ್ಥಲದೊಳಗಿದ್ದ ಶಿವಲಿಂಗದೇವರನು ಎನ್ನ ಕರಸ್ಥಲದೊಳಗೆ ಮೂರ್ತಿಗೊಳಿಸಿದ. ಎನ್ನ ಕರಸ್ಥಲದೊಳಗಿದ್ದ ಶಿವಲಿಂಗದೇವರನು ಎನ್ನ ತನುವಿನ ಮೇಲೆ ಮೂರ್ತಿಗೊಳಿಸಿದ. ಎನ್ನ ತನುವಿನ ಮೇಲಣ ಶಿವಲಿಂಗದೇವರನು ಎನ್ನ ಮನವೆಂಬ ಮಂಟಪದೊಳಗೆ ಮೂರ್ತಿಗೊಳಿಸದ. ಎನ್ನ ಮನವೆಂಬ ಮಂಟಪದೊಳಗೆ ಮೂರ್ತಿಗೊಳಿಸಿದ ಶಿವಲಿಂಗದೇವರನು ಎನ್ನ ಜ್ಞಾನವೆಂಬ ಮಂಟಪದೊಳಗೆ ಮೂರ್ತಿಗೊಳಿಸಿದ. ಎನ್ನ ಜ್ಞಾನವೆಂಬ ಮಂಟಪದೊಳಗಣ ಶಿವಲಿಂಗದೇವರನು ಮಹಾಘನದಲ್ಲಿ ಮೂರ್ತಿಗೊಳಿಸಿದ. ಕಬ್ಬಿನ ತನಿರಸವ ಕೊಂಡು ಸಿಪ್ಪೆಯ ಬಿಡುವಂತೆ, ಮನದ ಮೇಲಣ ಶಿವಲಿಂಗದೇವರಿರಲು ತನುವಿನ ಮೇಲಣ ಶಿವಲಿಂಗದೇವರು ಹೋಯಿತ್ತೆಂದು ಆತ್ಮಘಾತವ ಮಾಡಿಕೊಂಬ ಬ್ರಹ್ಮೇತಿ ಸೂನೆಗಾರರ ನೋಡಯ್ಯಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಶಿವನು ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇದಿಸಿಕೊಟ್ಟ ಪರಿಯೆಂತೆಂದೊಡೆ ಆತ್ಮಗೂಡಿ ಪಂಚಭೂತಂಗಳನೆ ಷಡಂಗವೆಂದೆನಿಸಿ, ಆ ಅಂಗಕ್ಕೆ ಕಲೆಗಳನೆ ಷಡುಶಕ್ತಿಗಳೆನಿಸಿ, ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ, ಆ ಭಕ್ತಿಗಳಿಗೆ ಭಾವಜ್ಞಾನಮನಬುದ್ಧಿಚಿತ್ತ ಅಹಂಕಾರಗಳನೆ ಹಸ್ತಂಗಳೆಂದೆನಿಸಿ, ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಂಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ, ಆ ಮಂತ್ರಲಿಂಗಂಗಳಿಗೆ ಹೃದಯಗೂಡಿ ಪಂಚೇಂದ್ರಿಯಂಗಳನೆ ಮುಖಂಗಳೆಂದೆನಿಸಿ, ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯ ಪದಾರ್ಥಗಳೆಂದೆನಿಸಿ, ಆ ದ್ರವ್ಯಪದಾರ್ಥಂಗಳು ಆಯಾ ಮುಖದ ಲಿಂಗಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ ಅಂಗಸ್ಥಲಂಗಳಡಗಿ, ತ್ರಿವಿಧ ಲಿಂಗಾಂಗ ಸ್ಥಲಂಗಳುಳಿದು, ಕಾಯಗುರು, ಪ್ರಾಣಲಿಂಗ, ಜ್ಞಾನ ಜಂಗಮ, ಗುರುವಿನಲ್ಲಿ ಶುದ್ಧ ಪ್ರಸಾದ ಲಿಂಗದಲ್ಲಿ ಸಿದ್ಧಪ್ರಸಾದ ಜಂಗಮದಲ್ಲಿ ಪ್ರಸಿದ್ಧ ಪ್ರಸಾದ ಇಂತೀ ತ್ರಿವಿಧ ಪ್ರಸಾದ ಏಕಾರ್ಥವಾಗಿ ಮಹಾಘನ ಪರಿಪೂರ್ಣ ಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೆ ಅಲ್ಲ, ಶೂನ್ಯನಲ್ಲ, ನಿಶ್ಶೂನ್ಯನಲ್ಲ, ದ್ವೈತಿಯಲ್ಲ, ಅದ್ವೈತಿಯಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ಇದು ಕಾರಣ, ಇದರಾಗುಹೋಗು ಸಕಲಸಂಬಂಧವ ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರೆ ಬಲ್ಲರು.
--------------
ಅಕ್ಕಮಹಾದೇವಿ
ಶಿವಶಿವಾ, ಕರ್ಮಕ್ಷಯವಾದಲ್ಲಿ ಕರ್ಮದ ಮಾತ ಕೇಳಿಸಿದೆಯಯ್ಯಾ ? ಪಾಪಲೇಪವಳಿದಲ್ಲಿ ಪಾಪದ ಮಾತ ಕೇಳಿಸಿದೆಯಲ್ಲಯ್ಯಾ ? ಶಿವಶಿವಾ, ಭವದ ಬಟ್ಟೆಯನಗಲಿದಲ್ಲಿ ? ಬಂಧನದ ನುಡಿಯನಾಡಿಸಿದೆಯಲ್ಲಯ್ಯಾ ? ಚೆನ್ನಮಲ್ಲಿಕಾರ್ಜುನಯ್ಯಾ, ನೀನೆ ಗಂಡನೆಂದಿದ್ದಲ್ಲಿ, ಪರಪುರುಷರ ಮಾತನಾಡಿಸಿದೆಯಲ್ಲಯ್ಯಾ ?
--------------
ಅಕ್ಕಮಹಾದೇವಿ
ಶಿವ ಶಿವಾ, ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ, ನಿಮ್ಮ ನಿಜವನಾರಯ್ಯಾ ಬಲ್ಲವರು ವೇದಂಗಳಿಗಭೇದ್ಯನು ಶಾಸ್ತ್ರಂಗಳಿಗಸಾಧ್ಯನು ಪುರಾಣಕ್ಕೆ ಆಗಮ್ಯನು ಆಗಮಕ್ಕೆ ಅಗೋಚರನು ; ತರ್ಕಕ್ಕೆ ಅತರ್ಕ್ಯನು ವಾಙ್ಮನಾತೀತವಾಗಿಪ್ಪ ಪರಶಿವಲಿಂಗವನು ಕೆಲಂಬರು ಸಕಲನೆಂಬರು ; ಕೆಲಂಬರು ನಿಃಕಲನೆಂಬರು ಕೆಲಂಬರು ಸೂಕ್ಷ್ಮನೆಂಬರು ; ಕೆಲಂಬರು ಸ್ಥೂಲನೆಂಬರು ಈ ಬಗೆಯ ಭಾವದಿಂದ, ಹರಿ, ಬ್ರಹ್ಮ, ಇಂದ್ರ, ಚಂದ್ರ, ರವಿ, ಕಾಲ, ಕಾಮ, ದಕ್ಷ, ದೇವ, ದಾನವ, ಮಾನವರೆಲ್ಲರೂ ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾದರು. ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು ನಮ್ಮ ಬಸವಣ್ಣನು ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಅವತರಿಸಿ ವೀರಶೈವ ಮಾರ್ಗವನರುಪುವುದಕ್ಕೆ ಬಾವನ್ನ ವಿವರವನೊಳಕೊಂಡು ಚರಿಸಿದನದೆಂತೆಂದಡೆ ಗುರುಕಾರುಣ್ಯವೇದ್ಯನು, ವಿಭೂತಿ ರುದ್ರಾಕ್ಷಿಧಾರಕನು, ಪಂಚಾಕ್ಷರೀ ಭಾಷಾಸಮೇತನು, ಲಿಂಗಾಂಗ ಸಂಬಂಧಿ, ನಿತ್ಯ ಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ, ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು, ಏಕಲಿಂಗನಿಷ್ಠೆಪರನು, ಚರಲಿಂಗಲೋಲುಪ್ತನು, ಶರಣಸಂಗಮೈಶ್ವರ್ಯನು, ತ್ರಿವಿಧಕ್ಕಾಯತನು, ತ್ರಿಕರಣ ಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ, ಅನ್ಯದೈವ ಸ್ಮರಣೆಯ ಹೊದ್ದ, ಭವಿಸಂಗವ ಮಾಡ, ಭವಿಪಾಕವ ಕೊಳ್ಳ, ಪರಸತಿಯ ಬೆರಸ, ಪರಧನವನೊಲ್ಲ, ಪರನಿಂದೆಯನಾಡ, ಅನೃತವ ನುಡಿಯ, ಹಿಂಸೆಯ ಮಾಡ, ತಾಮಸಭಕ್ತಸಂಗವ ಮಾಡ, ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನ ಮುಂತಾದವೆಲ್ಲವ ಸಮರ್ಪಿಸಿ, ಪ್ರಸಾದ ಮುಂತಾಗಿ ಭೋಗಿಸುವ, ಜಂಗಮನಿಂದೆಯ ಸೈರಿಸ, ಪ್ರಸಾದನಿಂದೆಯ ಕೇಳ, ಅನ್ಯರನಾಸೆಗೆಯ್ಯ, ಪಾತ್ರಪಾತ್ರವನರಿದೀವ, ಚತುರ್ವಿಧಪದವಿಯ ಹಾರ, ಅರಿಷಡ್ವರ್ಗಕ್ಕೆ ಅಳುಕ, ಕುಲಾದಿಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ, ಸಂಕಲ್ಪವಿಕಲ್ಪವ ಮಾಡುವನಲ್ಲ, ಕಾಲೋಚಿತವ ಬಲ್ಲ, ಕ್ರಮಯುಕ್ತನಾಗಿ ಷಟ್‍ಸ್ಥಲಭರಿತ, ಸರ್ವಾಂಗಲಿಂಗಿ, ದಾಸೋಹಸಂಪನ್ನ. ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ ಮೆರೆದ ನಮ್ಮ ಬಸವಣ್ಣನು. ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ ನಮೋ ನಮೋ ಎಂದು ಬದುಕಿದೆನು ಕಾಣಾ, ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಶಿವಗಣಂಗಳ ಮನೆಯಂಗಳ ವಾರಣಾಸಿಯೆಂಬುದು ಹುಸಿಯೆ, ಪುರಾತನರ ಮನೆಯಂಗಳದಲ್ಲಿ ಅಷ್ಟಾಷಷ್ಟಿ ತೀರ್ಥಂಗಳು ನೆಲೆಸಿಪ್ಪವಾಗಿ. ಅದೆಂತೆಂದಡೆ ಅದಕ್ಕೆ ಆಗಮ ಸಾಕ್ಷಿ 'ಕೇದಾರಸ್ಯೋದಕೆ ಪೀತೇ ವಾರಣಾಸ್ಯಾ ಮೃತೇ ಸತೀ' ಶ್ರೀಶೈಲಶಿಖರೇ ದೃಷ್ಟೇ ಪುನರ್ಜನ್ಮ ನ ವಿದ್ಯತೇ ||ú ಎಂಬ ಶಬ್ದಕ್ಕಧಿಕವು. ಸುತ್ತಿಬರಲು ಶ್ರೀಶೈಲ, ಕೆಲಬಲದಲ್ಲಿ ಕೇದಾರ, ಅಲ್ಲಿಂದ ಹೊರಗೆ ವಾರಣಾಸಿ. ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗೆ, ಎನ್ನ ದೇವ ಚೆನ್ನಮಲ್ಲಿಕಾರ್ಜುನಾ ನಿಮ್ಮ ಭಕ್ತರ ಮನೆಯಂಗಳ ಪ್ರಯಾಗದಿಂದ ಗುರುಗಂಜಿಯಧಿಕ ನೋಡಾ?
--------------
ಅಕ್ಕಮಹಾದೇವಿ