ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆರೂ ಇಲ್ಲದವಳೆಂದು ಆಳಿಗೊಳಲುಬೇಡ ಕಂಡೆಯಾ ಏನ ಮಾಡಿದಡೂ ಆನಂಜುವಳಲ್ಲ. ತರಗೆಲೆಯ ಮೆಲಿದು ಆನಿಹೆನು, ಸರಿಯ ಮೇಲೊರಗಿ ಆನಿಹೆನು. ಚೆನ್ನಮಲ್ಲಿಕಾರ್ಜುನಯ್ಯಾ, ಕರ ಕೇಡನೊಡ್ಡಿದಡೆ ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು.
--------------
ಅಕ್ಕಮಹಾದೇವಿ
ಆತುರದ ಧ್ಯಾನದಿಂದ ಧಾವತಿಗೊಂಡೆ ; ಜ್ಯೋತಿರ್ಲಿಂಗವ ಕಾಣಿಸಬಾರದು. ಮಾತಿನ ಮಾಲೆಗೆ ಸಿಲುಕುವನಲ್ಲ ; ಧಾತುಗೆಡಿಸಿ ಮನವ ನೋಡಿ ಕಾಡುವನು. ಆತುಮನಂತರ ಪರವನರಿದಡೆ ಆತನೆ ಯೋಗಿ ; ಆತನ ಪಾದಕ್ಕೆ ಶರಣೆಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಆಧಾರ ಸ್ವಾಧಿಷ್ಠಾನ ಮಣಿಪೂರಕ ವಿಶುದ್ಧಿ ಆಜ್ಞೇಯವ ನುಡಿದಡೇನು ಆದಿ ಅನಾದಿಯ ಸುದ್ದಿಯ ಕೇಳಿದಡೇನು ಹೇಳಿದಡೇನು ತನ್ನಲ್ಲಿದ್ದುದ ತಾನರಿಯದನ್ನಕ್ಕರ. ಉನ್ಮನಿಯ ರಭಸದ ಮನ ಪವನದ ಮೇಲೆ ಚೆನ್ನಮಲ್ಲಿಕಾರ್ಜುನಯ್ಯನ ಭೇದಿಸಲರಿಯರು.
--------------
ಅಕ್ಕಮಹಾದೇವಿ
ಆದಿ ಅನಾದಿಯೆನ್ನದೆ ಬಸವಣ್ಣ ಗಣಮೇಳಾಪವಾಗಿ ಅನಂತ ಯುಗಂಗಳಲ್ಲಿಯೂ ಸಕಲ ಲೋಕದೊಳು ಚರಿಸುತ್ತಿಪ್ಪ ಸುಳುಹನರಿಯದೆ ಸಕಲ ನಿಃಕಲರೆಲ್ಲ ಭ್ರಮೆಗೊಂಡು ಬೀಳುತ್ತೇಳುತ್ತಿರ್ದರು. ಇವರೆಲ್ಲರ ಮುಂದೆ ಆ ಗಣಂಗಳ ನಾನರಿದು ಬದುಕಿದೆನು ಕಾಣಾ ಶ್ರೀಶೈಲಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಆದಿ ಅನಾದಿ ನಿತ್ಯಾನಿತ್ಯವ ತಿಳಿಯಲರಿಯದೆ ವಾಯಕ್ಕೆ ಪರಬ್ರಹ್ಮವ ನುಡಿವ ವಾಯುಪ್ರಾಣಿಗಳವರೆತ್ತ ಬಲ್ಲರೋ, ಆ ಪರಬ್ರಹ್ಮದ ನಿಜದ ನಿಲವ ? ಅದೆಂತೆಂದಡೆ ; ಆದಿಯೆ ದೇಹ, ಅನಾದಿಯೆ ನಿರ್ದೇಹ, ಆದಿಯೆ ಸಕಲ, ಅನಾದಿಯೆ ನಿಷ್ಕಲ, ಆದಿಯೆ ಜಡ, ಅನಾದಿಯೆ ಅಜಡ. ಆದಿಯೆ ಕಾಯ, ಅನಾದಿಯೆ ಪ್ರಾಣ. ಈ ಎರಡರ ಯೋಗವ ಭೇದಿಸಿ ತನ್ನಿಂದ ತಾನೆ ತಿಳಿದು ನೋಡಲು, ಆದಿ ಸಂಬಂಧವಪ್ಪ ಭೂತಂಗಳು ನಾನಲ್ಲ. ದಶವಿಧೇಂದ್ರಿಯಂಗಳು ನಾನಲ್ಲ, ದಶವಾಯುಗಳು ನಾನಲ್ಲ. ಅಷ್ಟಮದಂಗಳು, ಸಪ್ತವ್ಯಸನಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು, ಷಡ್ಬ್ರಮೆಗಳು, ಷಡ್ಭಾವವಿಕಾರಂಗಳು, ಷಟ್ಕರ್ಮಂಗಳು, ಷಡ್ಧಾತುಗಳು, ತನುತ್ರಯಂಗಳು, ಜೀವತ್ರಯಂಗಳು, ಮಲತ್ರಯಂಗಳು, ಮನತ್ರಯಂಗಳು, ಗುಣತ್ರಯಂಗಳು, ಭಾವತ್ರಯಂಗಳು, ತಾಪತ್ರಯಂಗಳು, ಅಂತಃಕರಣಂಗಳು ಇಂತಿವಾದಿಯಾಗಿ ತೋರುವ ತೋರಿಕೆಯೇನೂ ನಾನಲ್ಲ, ನನ್ನವಲ್ಲ. ಇಂತಿವೆಲ್ಲವೂ ನನ್ನಾಧೀನವಾಗಿಪ್ಪವು ನಾನಿವರಾಧೀನದವನಲ್ಲ. ನಾನು ತೂರ್ಯ ತೂರ್ಯಾತೀತವಪ್ಪ ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವಸ್ತುವೆ ತನ್ನಿರವೆಂದು ತಿಳಿಯೆ, ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದ ಬೆಸುಗೆ ಬಿಟ್ಟು ನಿರಾಳದಲ್ಲಿ ನಿಜವನೈದಲರಿಯದೆ ಮತ್ತೆಯುಂ ಭೌತಿಕ ತತ್ವಸಂಬಂಧಿಯಾಗಿ ಇರುತ್ತಿರಲು, ಇಂತೀ ತತ್ವದಾದಿ ತಾನೆಂತೆನಲು ಆ ಪರಬ್ರಹ್ಮವಪ್ಪ ನಿತ್ಯನಿರಾಳ ನಿಃಶೂನ್ಯಲಿಂಗವೆ ತನ್ನ ಲೀಲಾವಿಲಾಸದಿಂದ ತಾನೆ ಸುನಾದ ಬಿಂದು ಪ್ರಕಾಶ ತೇಜೋಮೂರ್ತಿಯಾಗಿ ನಿಂದು ಮಹಾಲಿಂಗವೆಂದೆನಿಸಿತ್ತು. ಆ ಮಹಾಲಿಂಗವೆ ಪಂಚಸಾದಾಖ್ಯವೆಂದೆನಿಸಿತ್ತು. ಆ ಪಂಚಸಾದಾಖ್ಯವೆ ಪಂಚಲಿಂಗ ಪ್ರಕಾಶವೆಂದೆನಿಸಿತ್ತು. ಆ ಪಂಚಲಿಂಗ ಪ್ರಕಾಶವೆ ಪಂಚಮುಖವೆಂದೆನಿಸಿತ್ತು. ಆ ಪಂಚಮುಖದಿಂದವೆ ಪಂಚಾಕ್ಷರಿಯುತ್ಪತ್ತಿ. ಆ ಪಂಚಾಕ್ಷರಿಯಿಂದವೆ ಪಂಚಕಲೆಗಳುತ್ಪತ್ತಿ. ಆ ಪಂಚಕಲೆಗಳಿಂದವೆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳುತ್ಪತ್ತಿ. ಆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳಿಂದವೆ ಪಂಚತನ್ಮಾತ್ರಂಗಳುತ್ಪತ್ತಿ. ಆ ಪಂಚತನ್ಮಾತ್ರಂಗಳಿಂದವೆ ಪಂಚಭೂತಂಗಳುತ್ಪತ್ತಿ. ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು. ಆ ಅಂಗಕ್ಕೆ ಜ್ಞಾನೇಂದ್ರಿಯಂಗಳು ಕರ್ಮೇಂದ್ರಿಯಂಗಳು ಪ್ರತ್ಯಂಗವೆಂದೆನಿಸಿತ್ತು. ಇಂತು ದೇಹ ಸಂಬಂಧಮಂ ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ, ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು ಎಲ್ಲಿಯಾಯಿತ್ತು ಅಲ್ಲಿಯೇ ಅಡಗಿಸಿ ಆ ಕಾಯದ ಪೂರ್ವಾಶ್ರಯವನಳಿದು ಮಹಾ ಘನಲಿಂಗವ ವೇಧಿಸಿ ಕೊಟ್ಟು, ಶಿವ ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿ ಎಂತೆಂದಡೆ ಆತ್ಮಗೂಡಿ ಪಂಚಭೂತಂಗಳನೆ ಷಡ್ವಿಧ ಅಂಗವೆಂದೆನಿಸಿ, ಆ ಅಂಗಕ್ಕೆ ಆ ಕಲೆಗಳನೆ ಷಡ್ವಿಧ ಶಕ್ತಿಗಳೆಂದೆನಿಸಿ, ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ, ಆ ಭಕ್ತಿಗಳಿಗೆ ಭಾವ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಂಗಳನೆ ಷಡ್ವಿಧ ಹಸ್ತಂಗಳೆಂದೆನಿಸಿ, ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ, ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯಪದಾರ್ಥಂಗಳೆಂದೆನಿಸಿ, ಆ ದ್ರವ್ಯಪದಾರ್ಥಂಗಳು ಆಯಾಯ ಮುಖದ ಲಿಂಗಂಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ. ಅಂಗಸ್ಥಲಂಗಳಡಗಿ ತ್ರಿವಿಧ ಲಿಂಗಾಂಗಸ್ಥಲಂಗಳುಳಿದು ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ ಗುರುವಿನಲ್ಲಿ ಶುದ್ಧಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ, ಜಂಗಮದಲ್ಲಿ ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧ ಪ್ರಸಾದವು ಏಕಾರ್ಥವಾಗಿ, ಮಹಾಘನ ಪರಿಪೂರ್ಣಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೇ ಅಲ್ಲ. ಶೂನ್ಯನಲ್ಲ, ನಿಃಶೂನ್ಯ ಮುನ್ನವೇ ಅಲ್ಲ. ದ್ವೈತಿಯಲ್ಲ, ಅದ್ವೈತಿ ಮುನ್ನವೇ ಅಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ? ಇದು ಕಾರಣ, ಇದರ ಆಗುಹೋಗು ಸಕೀಲಸಂಬಂಧವ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರೇ ಬಲ್ಲರು.
--------------
ಅಕ್ಕಮಹಾದೇವಿ
ಆಳುತನದ ಮಾತನಾಡದಿರೆಲವೊ ಮೇಲೆ ಕಾರ್ಯದಿಮ್ಮಿತ್ತಣ್ಣಾ. ಅಲಗಿನ ಮೊನೆಯ ಧಾರೆ ಮಿಂಚುವಾಗ ಕೊಡದೆ ಕೊಂಕದೆ ನಿಲಬೇಕಯ್ಯ. ಬಂಟ ಬೆಟ್ಟ ಭಕ್ತಿಯೊಂದೆ ಕಂಡಯ್ಯ. ಚೆನ್ನಮಲ್ಲಿಕಾರ್ಜುನನಂತಲ್ಲದೊಲ್ಲ.
--------------
ಅಕ್ಕಮಹಾದೇವಿ
ಆಳುತನದ ಮಾತನೇರಿಸಿ ನುಡಿದಡೆ ಆಗಳೆ ಕಟ್ಟಿದೆನು ಗಂಡುಗಚ್ಚೆಯ. ತಿಗುರನೇರಿಸಿ ತಿಲಕವನಿಟ್ಟು ಕೈದುವ ಕೊಂಡು ಕಳನೇರಿದ ಬಳಿಕ, ಕಟ್ಟಿದ ನಿರಿ ಸಡಿಲಿದಡೆ ಇನ್ನು ನಿಮ್ಮಾಣೆ, ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಆನು ನೊಂದೆನಯ್ಯಾ, ಆನು ಬೆಂದೆನಯ್ಯಾ, ಆನು ಬೆಂದ ಬೇಗೆಯನರಿಯದೆ ಕೆಟ್ಟೆನಯ್ಯಾ, ಆನು ಕೆಟ್ಟ ಕೇಡನೇನೆಂದು ಹವಣಿಸುವೆನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ನೋವ ಕಂಡು ಆನು ಬೆಂದೆನಯ್ಯಾ.
--------------
ಅಕ್ಕಮಹಾದೇವಿ
ಆಯುಷ್ಯ ಹೋಗುತ್ತಿದೆ, ಭವಿಷ್ಯ ತೊಲಗುತ್ತಿದೆ, ಕೂಡಿರ್ದ ಸತಿಸುತರು ತಮತಮಗೆ ಹರಿದು ಹೋಗುತ್ತೈದಾರೆ ; ಬೇಡ ಬೇಡವೆಲೆ ಬಂಜೆಯಾಗಿ ಕೆಡಬೇಡ ಬಯಲಿಂಗೆ ಮನವೆ, ಚೆನ್ನಮಲ್ಲಿಕಾರ್ಜುನನ ಶರಣರ ಸಂಗದಲ್ಲಿ, ಹೂಣಿ ಹೊಕ್ಕು ಬದುಕು ಕಂಡಾ,ಮನವೆ.
--------------
ಅಕ್ಕಮಹಾದೇವಿ
ಆವಾಗಳೂ ಎನ್ನ ಮನ ಉದರಕ್ಕೆ ಹರಿವುದು. ಕಾಣಲಾರೆನಯ್ಯಾ ನಿಮ್ಮುವನು, ಭೇದಿಸಲರಿಯೆ. ಮಾಯದ ಸಂಸಾರದಲ್ಲಿ ಸಿಲುಕಿದೆನು. ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಹೊದ್ದುವಂತೆ ಮಾಡಾ, ನಿಮ್ಮ ಧರ್ಮ.
--------------
ಅಕ್ಕಮಹಾದೇವಿ
ಆಯತ ಸ್ವಾಯತ ಅನುಭಾವವ ನಾನೆತ್ತ ಬಲ್ಲೆನಯ್ಯಾ ಗುರು ಲಿಂಗ ಜಂಗಮಕ್ಕೆ ಅರ್ಥಪ್ರಾಣಾಭಿಮಾನವಂ ಸಮರ್ಪಿಸಿ, ಅಹಂಕಾರವಳಿದಿಹಂತಹ ಪುರಾತನರ ಮನೆಯಲ್ಲಿ ಭೃತ್ಯರ ಭೃತ್ಯಳಾಗಿಪ್ಪೆನಯ್ಯಾ. ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಗಣಂಗಳಲ್ಲದನ್ಯವ ನಾನರಿಯೆನಯ್ಯಾ.
--------------
ಅಕ್ಕಮಹಾದೇವಿ
ಆವ ವಿದ್ಯೆಯ ಕಲಿತಡೇನು ಸಾವ ವಿದ್ಯೆ ಬೆನ್ನಬಿಡದು. ಅಶನವ ತೊರೆದಡೇನು, ವ್ಯಸನವ ಮರೆದಡೇನು? ಉಸುರ ಹಿಡಿದಡೇನು, ಬಸುರ ಕಟ್ಟಿದಡೇನು? ಚೆನ್ನಮಲ್ಲಿಕಾರ್ಜುನದೇವಯ್ಯಾ, ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು?
--------------
ಅಕ್ಕಮಹಾದೇವಿ
ಆಡಬಹುದು ಪಾಡಬಹುದಲ್ಲದೆ ನುಡಿದಂತೆ ನಡೆಯಬಾರದು ಎಲೆ ತಂದೆ. ಲಿಂಗಕ್ಕೆ ಶರಣೆನ್ನಬಹುದಲ್ಲದೆ ಜಂಗಮಕ್ಕೆ ಶರಣೆನ್ನಬಾರದೆಲೆ ತಂದೆ. ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರು ನುಡಿದಂತೆ ನಡೆಯಬಲ್ಲರು ಎಲೆ ತಂದೆ.
--------------
ಅಕ್ಕಮಹಾದೇವಿ
ಆದಿ ಅನಾದಿಗಳಿಂದತ್ತಲಯ್ಯಾ ಬಸವಣ್ಣನು. ಮೂದೇವರ ಮೂಲಸ್ಥಾನವಯ್ಯಾ ಬಸವಣ್ಣನು. ನಾದ ಬಿಂದು ಕಳಾತೀತ ಆದಿ ನಿರಂಜನನಯ್ಯಾ ಬಸವಣ್ಣನು. ಆ ನಾದಸ್ವರೂಪೇ ಬಸವಣ್ಣನಾದ ಕಾರಣ, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.
--------------
ಅಕ್ಕಮಹಾದೇವಿ
ಆಲಿಸೆನ್ನ ಬಿನ್ನಪವ, ಲಾಲಿಸೆನ್ನ ಬಿನ್ನಪವ, ಪಾಲಿಸೆನ್ನ ಬಿನ್ನಪವ. ಏಕೆನ್ನ ಮೊರೆಯ ಕೇಳೆಯಯ್ಯಾ ತಂದೆ ನೀನಲ್ಲದೆ ಮತ್ತಿಲ್ಲ ಮತ್ತಿಲ್ಲ. ನೀನೆ ಎನಗೆ ಗತಿ, ನೀನೆ ಎನಗೆ ಮತಿಯಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ.
--------------
ಅಕ್ಕಮಹಾದೇವಿ
ಆಹಾರವ ಕಿರಿದು ಮಾಡಿರಣ್ಣಾ, ಆಹಾರವ ಕಿರಿದು ಮಾಡಿ. ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ. ಆಹಾರದಿಂ ನಿದ್ರೆ, ನಿದ್ರೆಯಿಂ ತಾಮಸ, ಅಜ್ಞಾನ, ಮೈಮರಹು, ಅಜ್ಞಾನದಿಂ ಕಾಮವಿಕಾರ ಹೆಚ್ಚಿ, ಕಾಯವಿಕಾರ, ಮನೋವಿಕಾರ, ಇಂದ್ರಿಯವಿಕಾರ, ಭಾವವಿಕಾರ, ವಾಯುವಿಕಾರವನುಂಟುಮಾಡಿ, ಸೃಷ್ಟಿಗೆ ತಹುದಾದ ಕಾರಣ ಕಾಯದ ಅತಿಪೋಷಣ ಬೇಡ. ಅತಿ ಪೋಷಣೆ ಮೃತ್ಯುವೆಂದುದು. ಜಪ ತಪ ಧ್ಯಾನ ಧಾರಣ ಪೂಜೆಗೆ ಸೂಕ್ಷ್ಮದಿಂ ತನುಮಾತ್ರವಿದ್ದರೆ ಸಾಲದೆ ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಘ್ನವೆಂದುದು. ತನು ಪೋಷಣೆಯಿಂದ ತಾಮಸ ಹೆಚ್ಚಿ, ಅಜ್ಞಾನದಿಂ ವಿರಕ್ತಿ ಹಾನಿ, ಅರಿವು ನಷ್ಟ, ಪರವು ದೂರ, ನಿರಕೆ ನಿಲವಿಲ್ಲದ ಕಾರಣ. ಚೆನ್ನಮಲ್ಲಿಕಾರ್ಜುನನೊಲಿಸ ಬಂದ ಕಾಯವ ಕೆಡಿಸದೆ ಉಳಿಸಿಕೊಳ್ಳಿರಯ್ಯಾ.
--------------
ಅಕ್ಕಮಹಾದೇವಿ
ಆಶೆಯಾಮಿಷವಳಿದು, ಹುಸಿ ವಿಷಯಂಗಳೆಲ್ಲ ಹಿಂಗಿ, ಸಂಶಯ ಸಂಬಂಧ ವಿಸಂಬಂಧವಾಯಿತ್ತು ನೋಡಾ. ಎನ್ನ ಮನದೊಳಗೆ ಘನಪರಿಣಾಮವ ಕಂಡು ಮನ ಮಗ್ನವಾಯಿತ್ತಯ್ಯಾ. ಚೆನ್ನಮಲ್ಲಿಕಾರ್ಜುನಾ, ನಿಮ್ಮ ಶರಣ ಪ್ರಭುದೇವರ ಕರುಣದಿಂದ ಬದುಕಿದೆನಯ್ಯಾ.
--------------
ಅಕ್ಕಮಹಾದೇವಿ
ಆಕಾರವಿಲ್ಲದ ನಿರಾಕಾರ ಲಿಂಗವ ಕೈಯಲ್ಲಿ ಹಿಡಿದು ಕಟ್ಟಿದೆವೆಂಬರು ಅಜ್ಞಾನಿ ಜೀವಿಗಳು. ಹರಿಬ್ರಹ್ಮರು ವೇದ ಪುರಾಣ ಆಗಮಂಗಳು ಅರಸಿ ಕಾಣದ ಲಿಂಗ. ಭಕ್ತಿಗೆ ಫಲವಲ್ಲದೆ ಲಿಂಗವಿಲ್ಲ. ಕರ್ಮಕ್ಕೆ ನರಕವಲ್ಲದೆ ಲಿಂಗವಿಲ್ಲ. ಜ್ಞಾನಕ್ಕೆ ಪರಿಭ್ರಮಣವಲ್ಲದೆ ಲಿಂಗವಿಲ್ಲ. ವೈರಾಗ್ಯಕ್ಕೆ ಮುಕ್ತಿಯಲ್ಲದೆ ಲಿಂಗವಿಲ್ಲ. ಇದು ಕಾರಣ ತನ್ನ ತಾನರಿದು ತಾನಾದಡೆ ಚೆನ್ನಮಲ್ಲಿಕಾರ್ಜುನ ತಾನೆ ಬೇರಿಲ್ಲ.
--------------
ಅಕ್ಕಮಹಾದೇವಿ
ಆಡುವುದು ಹಾಡುವುದು ಹೇಳುವುದು ಕೇಳುವುದು ನಡೆವುದು ನುಡಿವುದು ಸರಸ ಸಮ್ಮೇಳವಾಗಿಪ್ಪುದಯ್ಯಾ ಶರಣರೊಡನೆ. ಚೆನ್ನಮಲ್ಲಿಕಾರ್ಜುನಯ್ಯಾ, ನೀ ಕೊಟ್ಟ ಆಯುಷ್ಯವುಳ್ಳನ್ನಕ್ಕರ ಲಿಂಗಸುಖಿಗಳ ಸಂಗದಲ್ಲಿ ದಿನಗಳ ಕಳೆವೆನು.
--------------
ಅಕ್ಕಮಹಾದೇವಿ