ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವನವೆಲ್ಲಾ ನೀನೆ, ವನದೊಳಗಣ ದೇವತರುವೆಲ್ಲಾ ನೀನೆ, ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ. ಚೆನ್ನಮಲ್ಲಿಕಾರ್ಜುನಾ, ಸರ್ವಭರಿತನಾಗಿ ಎನಗೇಕೆ ಮುಖದೋರೆ ?
--------------
ಅಕ್ಕಮಹಾದೇವಿ
ವೃಷಭನ ಹಿಂದೆ ಪಶುವಾನು ಬಂದೆನು ; ನಂಬಿ ನಚ್ಚಿ ಪಶುವಾನುಬಂದೆನು. ಸಾಕಿ ಸಲಹಿಹನೆಂದು ಸಲೆ ನಚ್ಚಿ ಬಂದೆನು. ಒಲಿದಹ ಒಲಿದಹನೆಂದು ಬಳಿಯಲ್ಲಿ ಬಂದೆನು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ನಂಬಿ ಬಂದ ಹೆಂಗೂಸ ಹಿಂದೊಬ್ಬರೆಳದೊಯ್ದರೆ ಎಂತು ಸೈರಿಸಿದೆ ಹೇಳಾ, ಎನ್ನ ದೇವರದೇವಾ ?
--------------
ಅಕ್ಕಮಹಾದೇವಿ
ವಟವೃಕ್ಷದೊಳಡಗಿದ ಸಮರಸ ಬೀಜ ಭಿನ್ನಭಾವಕ್ಕೆ ಬಪ್ಪುದೆ ? ಕಂಗಳ ನೋಟ, ಕರುವಿಟ್ಟ ಮನದ ಸೊಗಸು ಅನಂಗನ ದಾಳಿಯ ಗೆಲಿದವು ಕಾಣಾ. ಈ ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಗೆ ಸಿಲುಕುವುದೆ ? ನಿನ್ನ ಕೈವಶಕ್ಕೆ ಸಿಕ್ಕಿಹಳೆಂಬುದ ಮರೆಯಾ ಮರುಳೆ. ಚೆನ್ನಮಲ್ಲಿಕಾರ್ಜುನನಲ್ಲದೆ ಪರಪುರುಷ ನಮಗಾಗದ ಮೋರೆ ನೋಡಣ್ಣಾ.
--------------
ಅಕ್ಕಮಹಾದೇವಿ
ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ. ಇವ ಕುಟ್ಟಲೇಕೆ ಕುಸುಕಲೇಕೆ ? ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ವಾನರಂಗಳಿಗೆ ಭೈತ್ರ ತಪ್ಪಿಬಂದಡೆ ಮುತ್ತು ಮಾಣಿಕ್ಯ ನವರತ್ನದ ಪೆಟ್ಟಿಗೆಗಳು ಸಾರಿದವು. ಸಾರಿದಡೆ ಆ ವಾನರಂಗಳು ಬಲ್ಲವೆ ಮುತ್ತಿನ ರಕ್ಷೆಯ ? ನವರತ್ನದ ಪೆಟ್ಟಿಗೆಯ ತೆರೆದು ನೋಡಿ, ಕೆಯ್ಕೊಂಡು, ವಾನರಂಗಳು ಮೆದ್ದು ನೋಡಿ, ಹಣ್ಣಲ್ಲವೆಂದು ಬಿಟ್ಟು ಕಳೆದವು. ಲೋಕದೊಳಗೆ ಶರಣ ಸುಳಿದಡೆ, ಆ ಶರಣನ ನಡೆ ನುಡಿ ಚಾರಿತ್ರವ ಕರ್ಮಿಗಳೆತ್ತ ಬಲ್ಲರು ? ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಇರವನು ನಿಮ್ಮ ಶರಣರು ಬಲ್ಲರಲ್ಲದೆ ಆ ವಾನರನಂತಹ ಮನುಜರೆತ್ತ ಬಲ್ಲರು.
--------------
ಅಕ್ಕಮಹಾದೇವಿ
ವಿರಕ್ತಿ ವಿರಕ್ತಿ ಎಂಬರು ವಿರಕ್ತಿಯ ಪರಿ ಎಂತುಂಟು ಹೇಳಿರಯ್ಯಾ. ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ ? ಹುಟ್ಟು ಕೆತ್ತುವ ಡೊಂಬನಂತೆ ಬಿಟ್ಟಮಂಡೆಯ ಕೇಶವ ನುಣ್ಣಿಸಿ ಬಣ್ಣಿಸಿ, ಎಣ್ಣೆಯ ಗಂಟ ಹಾಕಿದಡೆ ವಿರಕ್ತನೆ ? ಕಟ್ಟುಹರಿದ ಪಂಜಿನಂತೆ, ಬಿಟ್ಟಮಂಡೆಯ ಕಟ್ಟದಿರ್ದಡೆ ವಿರಕ್ತನೆ ? ಹರದನಂತೆ ಹೇಸಿಯಾಗಿರ್ದಡೆ ವಿರಕ್ತನೆ ? ಮೂಗನಂತೆ ಮಾತನಾಡದಿರ್ದಡೆ ವಿರಕ್ತನೆ ? ಹೊನ್ನು ಹೆಣ್ಣು ಮಣ್ಣ ಬಿಟ್ಟು ಅಡವಿಯಾರಣ್ಯದಲ್ಲಿರ್ದಡೆ ವಿರಕ್ತನೆ ?ಅಲ್ಲ. ವಿರಕ್ತನ ಪರಿಯೆಂತೆಂದೊಡೆ ಒಡಲ ಹುಡಿಗುಟ್ಟಿ, ಮೃಡನೊಳೆಡದೆರಹಿಲ್ಲದಿರಬಲ್ಲಡೆ ವಿರಕ್ತನಪ್ಪನು. ಅಲ್ಲದಿರ್ದಡೆ ಮೈಲಾರಿ ಮಲ್ಲಿ ಗೊರವಿಯಲ್ಲವೆ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ವನವೆಲ್ಲಾ ಕಲ್ಪತರು, ಗಿಡವೆಲ್ಲಾ ಮರುಜವಣಿ, ಶಿಲೆಗಳೆಲ್ಲಾ ಪರುಷ, ನೆಲವೆಲ್ಲಾ ಅವಿಮುಕ್ತಿಕ್ಷೇತ್ರ. ಜಲವೆಲ್ಲಾ ನಿರ್ಜರಾಮೃತ, ಮೃಗವೆಲ್ಲಾ ಪುರುಷಾಮೃಗ, ಎಡಹುವ ಹರಳೆಲ್ಲಾ ಚಿಂತಾಮಣಿ. ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ, ನೋಡುತ್ತ ಬಂದು ಕದಳಿಯ ಬನವ ಕಂಡೆ ನಾನು.
--------------
ಅಕ್ಕಮಹಾದೇವಿ
ವಿಷಯದ ಸುಖ ವಿಷವೆಂದರಿಯದ ಮರುಳೆ, ವಿಷಯಕ್ಕೆ ಅಂಗವಿಸದಿರಾ. ವಿಷಯದಿಂದ ಕೆಡನೆ ರಾವಣನು ವಿಷಯದಿಂದ ಕೆಡನೆ ದೇವೇಂದ್ರನು ? ವಿಷಯದಿಂದಾರು ಕೆಡರು ಮರುಳೆ ? ವಿಷಯ ನಿರ್ವಿಷಯವಾಯಿತ್ತೆನಗೆ ನಿನ್ನಲ್ಲಿ. ಚೆನ್ನಮಲ್ಲಿಕಾರ್ಜುನಂಗೆ ಒಲಿದವಳ ನೀನಪ್ಪಿಹೆನೆಂದಡೆ ಒಣಗಿದ ಮರನಪ್ಪುವಂತೆ ಕಾಣಾ
--------------
ಅಕ್ಕಮಹಾದೇವಿ
ವಿರಕ್ತಿಯೇ ಅವಿರಕ್ತಿ, ವಿರಕ್ತನೆನ್ನದಿರಣ್ಣಾ. ನೋಟದ ಕರುಳ ಕೊಯ್ಯದನ್ನಕ್ಕರ, ಕ್ರೀಯದ ಕರಬೋನಗಳೊಡೆಯದನ್ನಕ್ಕರ, ಅಷ್ಟಮದಾದಿಗಳೆಂಬವ ಹೊಟ್ಟುಹುರಿಯದನ್ನಕ್ಕರ, ಬೇಕುಬೇಡಾಯೆಂದು ಪರಿವ ಸರ್ವಸಂದೇಹವ ಹೂಳದನ್ನಕ್ಕರ ವಿರಕ್ತ ವಿರಕ್ತನೆನ್ನದಿರಣ್ಣಾ. ಶ್ರೀಶೈಲಚೆನ್ನಮಲ್ಲಿಕಾರ್ಜುನದೇವನೊಬ್ಬನೆ ವಿರಕ್ತ ಕಾಣಿರಣ್ಣಾ.
--------------
ಅಕ್ಕಮಹಾದೇವಿ
ವಿರಕ್ತಿ ವಿರಕ್ತಿಯೆಂಬವರು ವಿರಕ್ತಿಯ ಪರಿಯೆಂತುಟು ಹೇಳಿರಯ್ಯಾ ? ಕಟ್ಟಿದ್ದ ಲಿಂಗವ ಕೈಯಲ್ಲಿ ಹಿಡಿದು ಬತ್ತಲೆಯಿರ್ದಡೆ ವಿರಕ್ತನೆ ? ಉಟ್ಟುದ ತೊರದ ಮತ್ತೆ ಕಟ್ಟಿದ ಲಿಂಗವ ಕೈಯಲ್ಲಿ ಹಿಡಿಯಲೇಬೇಕು. ಉಟ್ಟುದ ತೊರೆಯದೆ ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದ ಭ್ರಷ್ಟರನೇನೆಂಬೆ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ