ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಗಲೆನ್ನೆ ಇರುಳೆನ್ನೆ ಉದಯವೆನ್ನೆ ಅಸ್ತಮಾನವೆನ್ನೆ ; ಹಿಂದೆನ್ನ ಮುಂದೆನ್ನ, ನೀನಲ್ಲದೆ ಪೆರತೊಂದಹುದೆನ್ನೆ. ಮನ ಘನವಾದುದಿಲ್ಲವಯ್ಯಾ. ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯಾ. ನಿಮ್ಮ ಶರಣ ಬಸವಣ್ಣನ ತೇಜದೊಳಗಲ್ಲದೆ ಆನಿನ್ನೆಂದು ಕಾಂಬೆನು ಹೇಳಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಹೊಳೆ ಕೆಂಜೆಡೆಯ ಮೇಲೆ ಎಳೆವೆಳದಿಂಗಳು, ಫಣಿಮಣಿ ಕರ್ಣಕುಂಡಲ ನೋಡವ್ವಾ ; ರುಂಡಮಾಲೆಯ ಕೊರಳವನ ಕಂಡಡೆ ಒಮ್ಮೆ ಬರಹೇಳವ್ವಾ ? ಗೋವಿಂದನ ನಯನ ಉಂಗುಟದ ಮೇಲಿಪ್ಪುದು, ಚೆನ್ನಮಲ್ಲಿಕಾರ್ಜುನದೇವನ ಕುರುಹವ್ವಾ.
--------------
ಅಕ್ಕಮಹಾದೇವಿ
ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು ? ಹೆಣ್ಣ ಬಿಟ್ಟ ಬಳಿಕ ಆಕೆಯನಾರು ಕೂಡಿದಡೇನು ? ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರು ಉತ್ತಡೇನು ? ಚೆನ್ನ ಮಲ್ಲಿಕಾರ್ಜುನನರಿಯದ ಬಳಿಕ ಆ ಕಾಯವ ನಾಯಿ ತಿಂದಡೇನು, ನೀರು ಕುಡಿದಡೇನು?
--------------
ಅಕ್ಕಮಹಾದೇವಿ
ಹಸಿವಾದಡೆ ಊರೊಳಗೆ ಬ್ಥಿಕ್ಷಾನ್ನಗಳುಂಟು. ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು. ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು. ಶಯನಕ್ಕೆ ಹಾಳು ದೇಗುಲಗಳುಂಟು. ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ನೀನೆನಗುಂಟು.
--------------
ಅಕ್ಕಮಹಾದೇವಿ
ಹಿಡಿವೆನೆಂದಡೆ ಹಿಡಿಗೆ ಬಾರನವ್ವಾ. ತಡೆವೆನೆಂದಡೆ ಮೀರಿ ಹೋಹನವ್ವಾ. ಒಪ್ಪಚ್ಚಿ ಅಗಲಿದಡೆ ಕಳವಳಗೊಂಡೆ. ಚೆನ್ನಮಲ್ಲಿಕಾರ್ಜುನನ ಕಾಣದೆ ಆನಾರೆಂದರಿಯೆ ಕೇಳಾ, ತಾಯೆ.
--------------
ಅಕ್ಕಮಹಾದೇವಿ
ಹೊನ್ನು ಮುರಿದಡೆ ಬೆಸಸಬಹುದಲ್ಲದೆ, ಮುತ್ತು ಒಡೆದಡೆ ಬೆಸಸಬಹುದೆ ? ಮನ ಮುರಿದಡೆ ಮನಕೊಬ್ಬರೊಡೆಯರುಂಟೆ ? ಚೆನ್ನಮಲ್ಲಿಕಾರ್ಜುನ ಸಾಕ್ಷಿಯಾಗಿ ಬೇಟವುಳ್ಳಲ್ಲಿ ಬೆರೆಸೆ ಘನ.
--------------
ಅಕ್ಕಮಹಾದೇವಿ
ಹಿಂಡನಗಲಿ ಹಿಡಿವಡೆದ ಕುಂಜರ ತನ್ನ ವಿಂಧ್ಯವ ನೆನೆವಂತೆ ನೆನೆವೆನಯ್ಯಾ. ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನಯ್ಯಾ ಕಂದಾ, ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಹೊಳೆವ ಕೆಂಜೆಡೆಗಳ, ಮಣಿಮಕುಟದ, ಒಪ್ಪುವ ಸುಲಿಪಲ್ಗಳ, ನಗೆಮೊಗದ, ಕಂಗಳ ಕಾಂತಿಯ, ಈರೇಳುಭುವನವ ಬೆಳಗುವ ದಿವ್ಯಸ್ವರೂಪನ ಕಂಡೆ ನಾನು. ಕಂಡೆನ್ನ ಕಂಗಳ ಬರ ಹಿಂಗಿತ್ತೆನಗೆ. ಗಂಡಗಂಡರೆಲ್ಲರ ಹೆಂಡಿರಾಗಿ ಆಳುವ ಗರುವನ ಕಂಡೆ ನಾನು. ಜಗದಾದಿ ಶಕ್ತಿಯೊಳು ಬೆರಸಿ ಮಾತನಾಡುವ ಪರಮಗುರು ಚೆನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು
--------------
ಅಕ್ಕಮಹಾದೇವಿ
ಹಗಲು ನಾಲ್ಕುಜಾವ ನಿಮ್ಮ ಕಳವಳದಲ್ಲಿಪ್ಪೆನು. ಇರುಳು ನಾಲ್ಕುಜಾವ ಲಿಂಗದ ವಿಕಳಾವಸ್ಥೆಯಲ್ಲಿಪ್ಪೆನು. ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿಪ್ಪೆನು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಒಲುಮೆ ನಟ್ಟು ಹಸಿವು ತೃಷೆ ನಿದ್ರೆಯ ತೊರೆದೆನಯ್ಯಾ
--------------
ಅಕ್ಕಮಹಾದೇವಿ
ಹಾಲಹಿಡಿದು ಬೆಣ್ಣೆಯನರಸಲುಂಟೆ ? ಲಿಂಗವಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ? ಲಿಂಗದ ಪಾದತೀರ್ಥ ಪ್ರಸಾದವ ಕೊಂಡು ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ ? ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ ತಡೆಯದೆ ಹುಟ್ಟಿಸುವನು ಶ್ವಾನನ ಗರ್ಭದಲ್ಲಿ. ಅದೆಂತೆಂದಡೆ ಶಿವಧರ್ಮಪುರಾಣದಲ್ಲಿ 'ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಸ್ಯ ಪೂಜಕಃ ೀ ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್' ||ú ಎಂದುದಾಗಿ, ಇದನರಿದು ಗುರು ಕೊಟ್ಟ ಲಿಂಗದಲ್ಲಿಯೆ ಎಲ್ಲಾ ತೀರ್ಥಂಗಳೂ ಎಲ್ಲಾ ಕ್ಷೇತ್ರಂಗಳೂ ಇದ್ದಾವೆಂದು ಭಾವಿಸಿ ಮುಕ್ತರಪ್ಪುದಯ್ಯಾ. ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದುಮಾಡಿ, ತೀರ್ಥಲಿಂಗವ ಹಿರಿದುಮಾಡಿ ಹೋದಾತಂಗೆ ಅಘೋರ ನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಹೂವು ಕಂದಿದಲ್ಲಿ ಪರಿಮಳವನರಸುವರೆ ? ಕಂದನಲ್ಲಿ ಕುಂದನರಸುವರೆ ? ಎಲೆ ದೇವ, ಸ್ನೇಹವಿದ್ದ ಠಾವಿನೊಳು ದ್ರೋಹವಾದ ಬಳಿಕ ಮರಳಿ ಸದ್ಗುಣವನರಸುವರೆ ? ಎಲೆ ದೇವ, ಬೆಂದ ಹುಣ್ಣಿಗೆ ಬೇಗೆಯನಿಕ್ಕುವರೆ ? ಕೇಳಯ್ಯಾ, ಶ್ರೀಶೈಲ ಚೆನ್ನಮಲ್ಲಿಕಾರ್ಜುನಾ ಹೊಳೆಯಿಳಿದ ಬಳಿಕ ಅಂಬಿಗಂಗೇನುಂಟು?
--------------
ಅಕ್ಕಮಹಾದೇವಿ
ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ ; ಇರುಳಿನ ಕೂಟದಲ್ಲಿ ಇಂಬರಿದು ಹತ್ತಿದೆ. ಕನಸಿನಲ್ಲಿ ಮನಸಂಗವಾಗಿ ಮೈಮರೆದಿರ್ದೆ ; ಮನಸ್ಸಿನಲ್ಲಿ ಮೈಮರೆದು ಒರಗಿದೆ. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆ.
--------------
ಅಕ್ಕಮಹಾದೇವಿ
ಹಸಿವೆ ನೀನು ನಿಲ್ಲು ನಿಲ್ಲು ತೃಷೆಯೆ ನೀನು ನಿಲ್ಲು ನಿಲ್ಲು ನಿದ್ರೆಯೆ ನೀನು ನಿಲ್ಲು ನಿಲ್ಲು ಕಾಮವೆ ನೀನು ನಿಲ್ಲು ನಿಲ್ಲು ಕ್ರೋಧವೆ ನೀನು ನಿಲ್ಲು ನಿಲ್ಲು ಮೋಹವೆ ನೀನು ನಿಲ್ಲು ನಿಲ್ಲು ಲೋಭವೆ ನೀನು ನಿಲ್ಲು ನಿಲ್ಲು ಮದವೆ ನೀನು ನಿಲ್ಲು ನಿಲ್ಲು ಮಚ್ಚರವೆ ನೀನು ನಿಲ್ಲು ನಿಲ್ಲು ಸಚರಾಚರವೆ ನೀನು ನಿಲ್ಲು ನಿಲ್ಲು ನಾನು ಚೆನ್ನಮಲ್ಲಿಕಾರ್ಜುನದೇವರ ಅವಸರದ ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ.
--------------
ಅಕ್ಕಮಹಾದೇವಿ
ಹಸಿವು ತೃಷೆಯಾದಿಗಳು ಎನ್ನೊಳಗಾದ ಬಳಿಕ, ವಿಷಯ ವಿಕಾರವೆನ್ನನಿರಿಸಿ ಹೋದವು ಕಾಣಾ ತಂದೆ. ಅದೇ ಕಾರಣ ನೀವು ಅರಸಿಕೊಂಡು ಬಂದಿರಣ್ಣ. ನೀವು ಅರಸುವ ಅರಕೆ - ಎನ್ನೊಳಗಾಯಿತ್ತು. ಎನ್ನ ದೇವ ಚೆನ್ನಮಲ್ಲಿಕಾರ್ಜುನ ತನ್ನೊಳಗೆನ್ನನಿಂಬಿಟ್ಟುಕೊಂಡನಾಗಿ ಇನ್ನು ನಿನ್ನ ತಂದೆ ತಾಯಿತನವನೊಲ್ಲೆ ನಾನು.
--------------
ಅಕ್ಕಮಹಾದೇವಿ
ಹಿಂದಣ ಹಳ್ಳ, ಮುಂದಣ ತೊರೆ, ಸಲ್ಲುವ ಪರಿಯೆಂತು ಹೇಳಾ ? ಹಿಂದಣ ಕೆರೆ, ಮುಂದಣ ಬಲೆ, ಹದುಳವಿನ್ನೆಲ್ಲಿಯದು ಹೇಳಾ ? ನೀನಿಕ್ಕಿದ ಮಾಯೆ ಕೊಲುತಿಪ್ಪುದು ಕಾಯಯ್ಯಾ, ಕಾಯಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಹೆದರದಿರು ಮನವೆ, ಬೆದರದಿರು ತನುವೆ, ನಿಜವನರಿತು ನಿಶ್ಚಿಂತನಾಗಿರು. ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ, ಎಲವದಮರನ ಇಡುವರೊಬ್ಬರ ಕಾಣೆ. ಭಕ್ತಿಯುಳ್ಳವರ ಬೈವರೊಂದುಕೋಟಿ, ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ. ನಿಮ್ಮ ಶರಣರ ನುಡಿಯೆ ಎನಗೆ ಗತಿ, ಸೋಪಾನ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಹರಿಯ ನುಂಗಿತ್ತು ಮಾಯೆ, ಅಜನ ನುಂಗಿತ್ತು ಮಾಯೆ ಇಂದ್ರನ ನುಂಗಿತ್ತು ಮಾಯೆ, ಚಂದ್ರನ ನುಂಗಿತ್ತು ಮಾಯೆ ಬಲ್ಲೆನೆಂಬ ಬಲುಗೈಯರ ನುಂಗಿತ್ತು ಮಾಯೆ, ಅರಿಯೆನೆಂಬ ಅಜ್ಞಾನಿಗಳ ನುಂಗಿತ್ತು ಮಾಯೆ, ಈರೇಳುಭುವನವನಾರಡಿಗೊಂಡಿತ್ತು ಮಾಯೆ, ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ಮಾಯವ ಮಾಣಿಸಾ ಕರುಣಿ.
--------------
ಅಕ್ಕಮಹಾದೇವಿ
ಹಂದಿಯೂ ಮದಕರಿಯೂ ಒಂದೇ ದಾರಿಯಲ್ಲಿ ಸಂಧಿಸಿದಡೆ ಹಂದಿಗಂಜಿ ಮದಕರಿ ಕೆಲಕ್ಕೆ ಸಾರಿದಡೆ ಈ ಹಂದಿಯದು ಕೇಸರಿಯಪ್ಪುದೆ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಹಿಡಿಯದಿರು ತಡೆಯದಿರು ಬಿಡುಬಿಡು ಕೈಯಸೆರಗ. ಭಾಷೆಯ ಬರೆದುಕೊಟ್ಟ ಸತ್ಯಕ್ಕೆ ತಪ್ಪಿದರೆ ಅಘೋರ ನರಕವೆಂದರಿಯಾ ? ಚೆನ್ನಮಲ್ಲಿಕಾರ್ಜುನನ ಕೈವಿಡಿದ ಸತಿಯ ಮುಟ್ಟಿದರೆ ಕೆಡುವೆ ಕಾಣಾ ಮರುಳೆ.
--------------
ಅಕ್ಕಮಹಾದೇವಿ
ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೆ ಲೇಸು ಕಂಡಯ್ಯಾ. ಕಾಯದ ಸಂಗವ ವಿವರಿಸಬಲ್ಲಡೆ ಕಾಯದ ಸಂಗವೆ ಲೇಸು ಕಂಡಯ್ಯಾ. ತಾಯಿ ರಕ್ಕಸಿಯಾದಂತೆ ಕಾಯವಿಕಾರವು. ಚೆನ್ನಮಲ್ಲಿಕಾರ್ಜುನಯ್ಯಾ, ನೀನೊಲಿದವರು ಕಾಯಗೊಂಡಿದ್ದರೆನಬೇಡ.
--------------
ಅಕ್ಕಮಹಾದೇವಿ
ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು. ಇರುಳು ನಾಲ್ಕುಜಾವ ವ್ಯಸನಕ್ಕೆ ಕುದಿವರು. ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ, ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಹಸೆ ಹಂದರವನಿಕ್ಕಿ, ತೊಂಡಿಲ ಬಾಸಿಗವ ಕಟ್ಟಿ, ಮದುವೆಯಾದೆನಲ್ಲಾ ನಾನು; ಮಚ್ಚಿ ಮದುವೆಯಾದೆನಲ್ಲಾ ನಾನು. ಗಂಡನೆ, ನಿನಗೋತು ಕೈವಿಡಿದವಳನು ಮತ್ತೊಬ್ಬರು ಕೈವಿಡಿದರೆ ನಿನ್ನಭಿಮಾನವ ಪರರೆಳದೊಯಿದಂತೆ ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ ? ಸೂರ್ಯಕಾಂತದ ಅಗ್ನಿಯನಾರು ಭೇದಿಸಬಲ್ಲರು ? ಅಪಾರಮಹಿಮ ಚೆನ್ನಮಲ್ಲಿಕಾರ್ಜುನಾ, ನೀನೆನ್ನೊಳಡಗಿಪ್ಪ ಪರಿಯ ಬೇರಿಲ್ಲದೆ ಕಂಡು ಕಣ್ದೆರೆದೆನು.
--------------
ಅಕ್ಕಮಹಾದೇವಿ
ಹುಟ್ಟು ಹೊರೆಯ ಕಟ್ಟಳೆಯ ಕಳೆದನವ್ವಾ. ಹೊನ್ನು ಮಣ್ಣಿನ ಮಾಯೆಯ ಮಾಣಿಸಿದನವ್ವಾ. ಎನ್ನ ತನುವಿನ ಲಜ್ಜೆಯನಿಳುಹಿ, ಎನ್ನ ಮನದ ಕತ್ತಲೆಯ ಕಳೆದ ಚೆನ್ನಮಲ್ಲಿಕಾರ್ಜುನಯ್ಯನೊಳಗಾದವಳ ಏನೆಂದು ನುಡಿಸುವಿರವ್ವಾ ?
--------------
ಅಕ್ಕಮಹಾದೇವಿ
ಹೆಣ್ಣು ಹೆಣ್ಣಾದಡೆ ಗಂಡಿನಸೂತಕ. ಗಂಡು ಗಂಡಾದಡೆ ಹೆಣ್ಣಿನಸೂತಕ. ಮನದಸೂತಕ ಹಿಂಗಿದಡೆ ತನುವಿನ ಸೂತಕಕ್ಕೆ ತೆರಹುಂಟೆ ? ಅಯ್ಯಾ, ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ. ಎನ್ನ ದೇವ ಚೆನ್ನಮಲ್ಲಿಕಾರ್ಜುನನೆಂಬ ಗರುವಂಗೆ ಜಗವೆಲ್ಲ ಹೆಣ್ಣು ನೋಡಾ ಅಯ್ಯಾ.
--------------
ಅಕ್ಕಮಹಾದೇವಿ

ಇನ್ನಷ್ಟು ...