ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನ ನಾಲಗೆಗೆ ಬಪ್ಪರುಚಿ ನಿಮಗರ್ಪಿತ. ಎನ್ನ ನಾಸಿಕಕ್ಕೆ ಬಪ್ಪ ಪರಿಮಳ ನಿಮಗರ್ಪಿತ. ಎನ್ನ ಕಾಯಕ್ಕೆ ಬಪ್ಪ ಸುಖ ನಿಮಗರ್ಪಿತ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗರ್ಪಿಸದ ಮುನ್ನ ಮುಟ್ಟಲಮ್ಮೆನಯ್ಯಾ.
--------------
ಅಕ್ಕಮಹಾದೇವಿ
ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆ. ಅಯ್ಯಾ ಎನ್ನೊಳಗೆ ಇನಿತಿರ್ದು ಮೈದೋರದ ಭೇದವ ನಿಮ್ಮಲ್ಲಿ ಕಂಡೆ ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಎಮ್ಮೆಗೊಂದು ಚಿಂತೆ; ಸಮಗಾರಗೊಂದು ಚಿಂತೆ. ಧರ್ಮಿಗೊಂದು ಚಿಂತೆ; ಕರ್ಮಿಗೊಂದು ಚಿಂತೆ. ಎನಗೆ ಎನ್ನ ಚಿಂತೆ, ತನಗೆ ತನ್ನ ಕಾಮದ ಚಿಂತೆ. ಒಲ್ಲೆ ಹೋಗು, ಸೆರಗ ಬಿಡು ಮರುಳೆ. ಎನಗೆ ಚೆನ್ನಮಲ್ಲಿಕಾರ್ಜುನದೇವರು ಒಲಿವರೊ ಒಲಿಯರೊ ಎಂಬ ಚಿಂತೆ !
--------------
ಅಕ್ಕಮಹಾದೇವಿ
ಎನ್ನ ಮೀಸಲ ಬೀಸರ ಮಾಡಿದೆಯಲ್ಲಯ್ಯ. ಎನ್ನ ಮೀಸಲ ಬೀಸಾಡಿ ಕಳೆದೆಯಲ್ಲಯ್ಯ. ಎನ್ನ ಭಾಷೆಯ ಪೈಸರ ಮಾಡಿದೆಯಲ್ಲಯ್ಯ. ಎನ್ನ ಭಾಷೆಗೆ ದೋಷವ ತೋರಿಸಿದೆಯಲ್ಲಯ್ಯ. ಎನ್ನ ಮೀಸಲ ಕಾಯವ ನಿಮಗೆಂದಿರಿಸಿಕೊಂಡಿದ್ದಡೆ, ಬೀಸಾಡಿ ಕಳೆವರೆ ಹೇಳಾ ತಂದೆ ? ಏಸು ಕಾಲ ನಿಮಗೆ ನಾನು ಮಾಡಿದ ತಪ್ಪ ಈ ಸಮಯದಲ್ಲಿ ಹೊರಿಸಿ ಕೊಂದೆಯಲ್ಲಾ ಚೆನ್ಮಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಎಲೆ ಕಾಲಂಗೆ ಸೂರೆಯಾದ ಕರ್ಮಿ, ಎಲೆ ಕಾಮಂಗೆ ಗುರಿಯಾದ ಮರುಳೆ, ಬಿಡು ಬಿಡು ಕೈಯ ನರಕವೆಂದರಿಯದೆ ತಡೆವರೆ ಮನುಜಾ ? ಚೆನ್ನಮಲ್ಲಿಕಾರ್ಜುನನ ಪೂಜೆಯ ವೇಳೆ ತಪ್ಪಿದರೆ ನಾಯಕ ನರಕ ಕಾಣಾ ನಿನಗೆ.
--------------
ಅಕ್ಕಮಹಾದೇವಿ
ಎರದ ಮುಳ್ಳಿನಂತೆ ಪರಗಂಡರೆನಗವ್ವಾ. ಸೋಂಕಲಮ್ಮೆ ಸುಳಿಯಲಮ್ಮೆ; ನಂಬಿ ನಚ್ಚಿ ಮಾತಾಡಲಮ್ಮೆನವ್ವಾ. ಚೆನ್ನಮಲ್ಲಿಕಾರ್ಜುನನಲ್ಲದ ಗಂಡರಿಗೆ ಉರದಲ್ಲಿ ಮುಳ್ಳುಂಟೆಂದು ನಾನಪ್ಪಲಮ್ಮೆನವ್ವಾ.
--------------
ಅಕ್ಕಮಹಾದೇವಿ
ಎನಗೇಕಯ್ಯಾ? ನಾ ಪ್ರಪಂಚಿನ ಪುತ್ಥಳಿ. ಮಾಯಿಕದ ಮಲಭಾಂಡ, ಆತುರದ ಭವನಿಳಯ. ಜಲಕುಂಭದ ಒಡೆಯಲ್ಲಿ ಒಸರುವ ನೆಲೆವನೆಗೇಕಯ್ಯಾ ? ಬೆರಳು ತಾಳಹಣ್ಣ ಹಿಸುಕಿದಡೆ ಮೆಲಲುಂಟೆ ? ಬಿತ್ತೆಲ್ಲಾ ಜೀವ ಅದರೊಪ್ಪದ ತೆರ ಎನಗೆ. ಎನ್ನ ತಪ್ಪನೊಪ್ಪಗೊಳ್ಳಿ, ಚೆನ್ನಮಲ್ಲಿಕಾರ್ಜುನದೇವರದೇವ ನೀವೆ ಅಣ್ಣಗಳಿರಾ.
--------------
ಅಕ್ಕಮಹಾದೇವಿ
ಎನ್ನ ಭಕ್ತಿ ಬಸವಣ್ಣನ ಧರ್ಮ, ಎನ್ನ ಜ್ಞಾನ ಪ್ರಭುವಿನ ಧರ್ಮ, ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ. ಈ ಮೂವರು ಒಂದೊಂದ ಕೊಟ್ಟೊಡೆನಗೆ ಮೂರು ಭಾವವಾಯಿತ್ತು. ಆ ಮೂರನು ನಿಮ್ಮಲ್ಲಿ ಸಮರ್ಪಿಸಿದ ಬಳಿಕ ಎನಗಾವ ಜಂಜಡವಿಲ್ಲ. ಚೆನ್ನಮಲ್ಲಿಕಾರ್ಜುನದೇವರ ನೆನಹಿನಲ್ಲಿ ನಿಮ್ಮ ಕರುಣದ ಕಂದನಾಗಿದ್ದೆ ಕಾಣಾ ಸಂಗನಬಸವಣ್ಣಾ.
--------------
ಅಕ್ಕಮಹಾದೇವಿ
ಎಲ್ಲರ ಪ್ರಾಣವಂಗೈಯಲದೆ; ಎನ್ನ ಪ್ರಾಣ ಜಂಗಮದಲದೆ. ಎಲ್ಲರ ಆಯುಷ್ಯ ಶಿರದಲ್ಲಿ ಬರೆದಿದೆ; ಎನ್ನ ಆಯುಷ್ಯ ನಿಮ್ಮಲ್ಲಿ ಸಂದಿದೆ. ಚೆನ್ನಮಲ್ಲಿಕಾರ್ಜುನಾ, ನಿಮ್ಮ ಶರಣರೆನ್ನ ಪ್ರಾಣಲಿಂಗವೆಂದು ಧರಿಸಿದೆನು.
--------------
ಅಕ್ಕಮಹಾದೇವಿ
ಎನ್ನ ಮಾಯದ ಮದವ ಮುರಿಯಯ್ಯಾ. ಎನ್ನ ಕಾಯದ ಕತ್ತಲೆಯ ಕಳೆಯಯ್ಯಾ. ಎನ್ನ ಜೀವದ ಜಂಜಡವ ಮಾಣಿಸಯ್ಯಾ. ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ಸುತ್ತಿದ ಪ್ರಪಂಚವ ಬಿಡಿಸಾ ನಿಮ್ಮ ಧರ್ಮ
--------------
ಅಕ್ಕಮಹಾದೇವಿ
ಎಲ್ಲ ಎಲ್ಲವನರಿದು ಫಲವೇನಯ್ಯಾ, ತನ್ನ ತಾನರಿಯಬೇಕಲ್ಲದೆ ? ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ ? ಚೆನ್ನಮಲ್ಲಿಕಾರ್ಜುನಾ, ನೀನರಿವಾಗಿ ಮುಂದುದೋರಿದ ಕಾರಣ ನಿಮ್ಮಿಂದ ನಿಮ್ಮನರಿದೆನಯ್ಯಾ ಪ್ರಭುವೆ.
--------------
ಅಕ್ಕಮಹಾದೇವಿ
ಎಲೆ ದೇವಾ, ಸಕಲ ಕರಣಂಗಳ ಉಪಟಳಕ್ಕಂಜಿ ನಿಮ್ಮ ಶರಣರ ಮರೆಯೊಕ್ಕು ಕಾರುಣ್ಯಮಂ ಪಡೆದು, ಬಂದು ನಿಮ್ಮ ಶ್ರೀ ಮೂರ್ತಿಯ ಕಂಡೆ. ಇನ್ನು ಎನ್ನ ನಿಮ್ಮೊಳಗೆ ಐಕ್ಯವ ಮಾಡಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಎಳೆವರದಲ್ಲಿ ಮೋಹಮೊಳೆ ಹುಟ್ಟಿತ್ತು, ಗುರುಹಸ್ತದಲ್ಲಿ ಅಂಕುರವಾಯಿತ್ತು, ಏಳೆಲೆ ಹೋಯಿತ್ತು ಬಳಗದ ನಡುವೆ. ಕೇಳೆಲೆಯವ್ವಾ, ನೀನು ಕೇಳು ತಾಯೆ. ಒಂಬತ್ತೆಲೆ ಎಂದಿಂಗೆ ಪರಿಪೂರ್ಣವಾಯಿತ್ತು ನೋಡವ್ವಾ. ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ ಲೋಕದವರ ಸಂಬಂಧವಿಲ್ಲೆಂದು ಬಿಟ್ಟು ತೊಲಗಿದೆನು ಕಾಣಾ ಎಲೆಯವ್ವಾ.
--------------
ಅಕ್ಕಮಹಾದೇವಿ
ಎನ್ನ ತುಂಬಿದ ಜವ್ವನ, ತುಳುಕುವ ಮೋಹನವ, ನಿನಗೆ ಇಂಬು ಮಾಡಿಕೊಂಡಿರ್ದೆನಲ್ಲಾ ಎಲೆಯಯ್ಯಾ. ಎನ್ನ ಲಂಬಿಸುವ ಲಾವಣ್ಯದ ರೂಪುರೇಖೆಗಳ ನಿನ್ನ ಕಣ್ಣಿಂಗೆ ಕೈವಿಡಿದಂತೆ ಮಾಡಿರ್ದೆನಲ್ಲಯ್ಯ. ನಿನ್ನ ಮುಂದಿರಟ್ಟಲನ್ಯರು ಕೊಂಡೊಯಿವಾಗಲೆಂತು ಸೈರಿಸಿದೆ ಹೇಳಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು, ಕನಸಿನಲ್ಲಿ ಕಳವಳಿಸಿ, ಆನು ಬೆರಗಾದೆ. ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ ಆಪತ್ತಿಗೆ ಸಖಿಯರನಾರನೂ ಕಾಣೆ. ಅರಸಿ ಕಾಣದ ತನುವ, ಬೆರಸಿ ಕೂಡದ ಸುಖವ, ಎನಗೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಎನ್ನ ಪ್ರಾಣ ಜಂಗಮ, ಎನ್ನ ಜೀವ ಜಂಗಮ, ಎನ್ನ ಪುಣ್ಯದ ಫಲವು ಜಂಗಮ ಎನ್ನ ಹ[ರು]ರುಷದ ಮೇರೆ [ಜಂಗಮ] ಚೆನ್ನಮಲ್ಲಿಕಾರ್ಜುನಾ, ಜಂಗಮ ತಿಂಥಿಣಿಯಲೋಲಾಡುವೆ.
--------------
ಅಕ್ಕಮಹಾದೇವಿ
ಎಲೆ ತಾಯಿ ನೀನಂತಿರು, ಎಲೆ ತಂದೆ ನೀನಂತಿರು, ಎಲೆ ಬಂಧುವೆ ನೀನಂತಿರು, ಎಲೆ ಕುಲವೆ ನೀನಂತಿರು, ಎಲೆ ಬಲವೆ ನೀನಂತಿರು. ಚೆನ್ನಮಲ್ಲಿಕಾರ್ಜುನನ ಕೂಡುವ ಭರದಿಂದ ಹೋಗುತ್ತಿದ್ದೇನೆ. ನಿಮಗೆ ಶರಣಾರ್ಥಿ ಶರಣಾರ್ಥಿ.
--------------
ಅಕ್ಕಮಹಾದೇವಿ
ಎಲ್ಲರ ಗಂಡರ ಶೃಂಗಾರದ ಪರಿಯಲ್ಲ, ಎನ್ನ ನಲ್ಲನ ಶೃಂಗಾರದ ಪರಿ ಬೇರೆ. ಶಿರದಲ್ಲಿ ಕಂಕಣ, ಉರದಮೇಲಂದುಗೆ, ಕಿವಿಯಲ್ಲಿ ಹಾವುಗೆ, ಉಭಯ ಸಿರಿವಂತನ ಮೊಳಕಾಲಲ್ಲಿ ಜಳವಟ್ಟಿಗೆ. ಉಂಗುಟದಲ್ಲಿ ಮೂಕುತಿ - ಇದು ಜಾಣರಿಗೆ ಜಗುಳಿಕೆ. ಚೆನ್ನಮಲ್ಲಿಕಾರ್ಜುನಯ್ಯನ ಶೃಂಗಾರದ ಪರಿ ಬೇರೆ.
--------------
ಅಕ್ಕಮಹಾದೇವಿ
ಎಲೆ ಅಣ್ಣಾ ಅಣ್ಣಾ, ನೀವು ಮರುಳಲ್ಲಾ ಅಣ್ಣಾ, ಎನ್ನ ನಿನ್ನಳವೆ ? ಹದಿನಾಲ್ಕು ಲೋಕವ ನುಂಗಿದ ಕಾಮನ ಬಾಣದ ಗುಣ ಎನ್ನ ನಿನ್ನಳವೆ ? ವಾರುವ ಮುಗ್ಗಿದಡೆ, ಮಿಡಿಹರಿಯ ಹೊಯ್ವರೆ ? ಮುಗ್ಗಿದ ಭಂಗವ ಮುಂದೆ ರಣದಲ್ಲಿ ತಿಳಿವುದು. ನಿನ್ನ ನೀ ಸಂವರಿಸಿ ಕೈದುವ ಕೊಳ್ಳಿರಣ್ಣಾ, ಚೆನ್ನಮಲ್ಲಿಕಾರ್ಜುನನೆಂಬ ಹಗೆಗೆ ಬೆಂಗೊಡದಿರಣ್ಣಾ.
--------------
ಅಕ್ಕಮಹಾದೇವಿ
ಎನ್ನಂತೆ ಪುಣ್ಯಗೈದವರುಂಟೆ ? ಎನ್ನಂತೆ ಭಾಗ್ಯಂಗೈದವರುಂಟೆ ? ಕಿನ್ನರನಂತಪ್ಪ ಸೋದರರೆನಗೆ? ಏಳೇಳು ಜನ್ಮದಲ್ಲಿ ಶಿವಭಕ್ತರೆ ಬಂಧುಗಳೆನಗೆ. ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ.
--------------
ಅಕ್ಕಮಹಾದೇವಿ
ಎನ್ನ ಕಾಯ ಮಣ್ಣು, ಜೀವ ಬಯಲು, ಆವುದ ಹಿಡಿವೆನಯ್ಯಾ. ದೇವಾ, ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯಾ ? ಎನ್ನ ಮಾಯೆಯನು ಮಾಣಿಸಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಎಲುವಿಲ್ಲದ ನಾಲಗೆ ಹೊದಕುಳಿಗೊಂಡಾಡುದು, ಎಲೆ ಕಾಲಂಗೆ ಗುರಿಯಾದ ಕರ್ಮಿ. ಉಲಿಯದಿರು, ಉಲಿಯದಿರು ಭವಭಾರಿ ನೀನು. ಹಲವು ಕಾಲದ ಹುಲುಮನುಜಂಗೆ ಹುಲುಮನುಜ ಹೆಂಡತಿ ಇವರಿದ್ದರೆ ಅದಕ್ಕದು ಸರಿ. ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ ಲೋಕದೊಳಗ್ಹೆಂಡಿರುಂಟಾದರೆ ಮಾಡಿಕೊ, ಎನ್ನ ಬಿಡು ಮರುಳೆ.
--------------
ಅಕ್ಕಮಹಾದೇವಿ
ಎನ್ನ ಮನವ ಮಾರುಗೊಂಡನವ್ವಾ, ಎನ್ನ ತನುವ ಸೂರೆಗೊಂಡನವ್ವಾ, ಎನ್ನ ಸುಖವನೊಪ್ಪುಗೊಂಡನವ್ವಾ. ಎನ್ನ ಇರವನಿಂಬುಗೊಂಡನವ್ವಾ. ಚೆನ್ನಮಲ್ಲಿಕಾರ್ಜುನನ ಒಲುಮೆಯವಳಾನು.
--------------
ಅಕ್ಕಮಹಾದೇವಿ
ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದಬಳಿಕ ಕಾಯದ ಸುಖವ ನಾನೇನೆಂದರಿಯೆನು. ಆರು ಸೋಂಕಿದರೆಂದರಿಯೆನು. ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚತವಾದ ಬಳಿಕ ಹೊರಗೇನಾಯಿತ್ತೆಂದರಿಯೆನು.
--------------
ಅಕ್ಕಮಹಾದೇವಿ
ಎನ್ನ ಅಂಗದಲ್ಲಿ ಆಚಾರವ ತೋರಿದನಯ್ಯಾ ಬಸವಣ್ಣನು. ಆ ಆಚಾರವನೆ ಲಿಂಗವೆಂದರುಹಿದನಯ್ಯಾ ಬಸವಣ್ಣನು. ಎನ್ನ ಪ್ರಾಣದಲ್ಲಿ ಅರಿವ ತೋರಿದನಯ್ಯಾ ಬಸವಣ್ಣನು. ಆ ಅರಿವೆ ಜಂಗಮವೆಂದರುಹಿದನಯ್ಯಾ ಬಸವಣ್ಣನು. ಚೆನ್ನಮಲ್ಲಕಾರ್ಜುನಯ್ಯಾ, ಎನ್ನ ಹೆತ್ತತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯಾ ಪ್ರಭುವೆ.
--------------
ಅಕ್ಕಮಹಾದೇವಿ

ಇನ್ನಷ್ಟು ...