ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಂದೆನ್ನ ಮನೆಗೆ ಒಡೆಯರು ಬಂದಡೆ ತನುವೆಂಬ ಕಳಶದಲುದಕವ ತುಂಬಿ, ಕಂಗಳ ಸೋನೆಯೊಡನೆ ಪಾದಾರ್ಚನೆಯ ಮಾಡುವೆ. ನಿತ್ಯ ಶಾಂತಿಯೆಂಬ ಶೈತ್ಯದೊಡನೆ ಸುಗಂಧವ ಪೂಸುವೆ. ಅಕ್ಷಯ ಸಂಪದವೆಂದರಿದು ಅಕ್ಷತೆಯನೇರಿಸುವೆ. ಹೃದಯಕಮಲ ಪುಷ್ಪದೊಡನೆ ಪೂಜೆಯ ಮಾಡುವೆ. ಸದ್ಭಾವನೆಯೊಡನೆ ಧೂಪವ ಬೀಸುವೆ. ಶಿವಜ್ಞಾನ ಪ್ರಕಾಶದೊಡನೆ ಮಂಗಳಾರತಿಯನೆತ್ತುವೆ. ನಿತ್ಯತೃಪ್ತಿಯೊಡನೆ ನೈವೇದ್ಯವ ಕೈಕೊಳಿಸುವೆ. ಪರಿಣಾಮದೊಡನೆ ಕರ್ಪೂರ ವೀಳೆಯವ ಕೊಡುವೆ. ಪಂಚಬ್ರಹ್ಮದೊಡನೆ ಪಂಚಮಹಾವಾದ್ಯವ ಕೇಳಿಸುವೆ. ಹರುಷದೊಡನೆ ನೋಡುವೆ, ಆನಂದದೊಡನೆ ಕುಣಿಕುಣಿದಾಡುವೆ, ಪರವಶದೊಡನೆ ಹಾಡುವೆ, ಭಕ್ತಿಯೊಡನೆ ಎರಗುವೆ, ನಿತ್ಯದೊಡನೆ ಕೂಡಿ ಆಡುವೆ. ಚೆನ್ನಮಲ್ಲಿಕಾರ್ಜುನಾ, ನಿಮ್ಮ ನಿಲವ ತೋರಿದ ಗುರುವಿನಡಿಯಲ್ಲಿ ಅರನಾಗಿ ಕರಗುವೆ.
--------------
ಅಕ್ಕಮಹಾದೇವಿ
ಇಂದೆನ್ನ ಮನೆಗೆ ಗಂಡ ಬಂದಹನೆಲೆಗವ್ವಾ. ನಿಮನಿಮಗೆಲ್ಲಾ ಶೃಂಗಾರವ ಮಾಡಿಕೊಳ್ಳಿ. ಚೆನ್ನಮಲ್ಲಿಕಾರ್ಜುನನೀಗಳೆ ಬಂದಹನು, ಇದಿರುಗೊಳ್ಳಿ ಬನ್ನಿರವ್ವಗಳಿರಾ.
--------------
ಅಕ್ಕಮಹಾದೇವಿ
ಇದನಾರಯ್ಯ ಬಲ್ಲರು ಹಮ್ಮಳಿದ ಶರಣರ ಮೇಲಿಹ ಪರವ ಬಲ್ಲ ಶರಣ. ಪಂಚೇಂದ್ರಿಯದ ಇಂಗಿತವ ಬಲ್ಲ ಶರಣ. ಒಡಲ ಬಿಟ್ಟ ಶರಣನಲ್ಲದೆ, ಉಳಿದ ಪ್ರಾಣಘಾತಕ ಪಾತಕರಿವರೆತ್ತಲು, ಶ್ರೀಶೈಲ ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣ ಬಸವಣ್ಣಂಗಲ್ಲದೆ.
--------------
ಅಕ್ಕಮಹಾದೇವಿ
ಇಂದ್ರನೀಲದ ಗಿರಿಯನೇರಿಕೊಂಡು ಚಂದ್ರಕಾಂತದ ಶಿಲೆಯನಪ್ಪಿಕೊಂಡು ಕೊಂಬ ಬಾರಿಸುತ್ತ ಎಂದಿಪ್ಪೆನೊ ಶಿವನೆ ? ನಿಮ್ಮ ನೆನೆವುತ್ತ ಎಂದಿಪ್ಪೆನೊ ? ಅಂಗಭಂಗ ಮನಭಂಗವಳಿದು ನಿಮ್ಮನೆಂದಿಂಗೊಮ್ಮೆ ನೆರೆವೆನಯ್ಯಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಇಂದ್ರಿಯವ ಬಿಟ್ಟು ಕಾಯವಿರದು ; ಕಾಯವ ಬಿಟ್ಟು ಇಂದ್ರಿಯವಿರದು. ಎಂತು ನಿಃಕಾಮಿಯೆಂಬೆ, ಎಂತು ನಿರ್ದೋಷಿಯೆಂಬೆ ನೀನೊಲಿದಡೆ ಸುಖಿಯಾಗಿಪ್ಪೆ, ನೀನೊಲ್ಲದಿರೆ ದುಃಖಿಯಾಗಿಪ್ಪೆನಯ್ಯಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಇಹಕ್ಕೊಬ್ಬ ಗಂಡನೆ ಪರಕ್ಕೊಬ್ಬ ಗಂಡನೆ ? ಲೌಕಿಕಕ್ಕೊಬ್ಬ ಗಂಡನೆ ಪಾರಮಾರ್ಥಕ್ಕೊಬ್ಬ ಗಂಡನೆ ? ಎನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ ಮಿಕ್ಕಿನ ಗಂಡರೆಲ್ಲ ಮುಗಿಲಮರೆಯ ಬೊಂಬೆಯಂತೆ.
--------------
ಅಕ್ಕಮಹಾದೇವಿ