ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಲ್ಯಾಣಕೈಲಾಸವೆಂಬ ನುಡಿ ಹಸನಾಯಿತ್ತು. ಒಳಗೂ ಕಲ್ಯಾಣ ಹೊರಗೂ ಕಲ್ಯಾಣ. ಇದರಂತುವನಾರು ಬಲ್ಲರಯ್ಯಾ ? ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ. ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಕಾಮವುಳ್ಳವರಿಗೆ ಕಾಯಸಂಗ ಮಚ್ಚು ನೋಡಾ. ಕಾಮವಿಲ್ಲದವರಿಗೆ ಲಿಂಗಸಂಗ ಮಚ್ಚು ನೋಡಾ. ಕಾಮವಿಕಾರಿ ಕಾಯದತ್ತ ಮುಂತಾದಡೆ, ನಾ ನಿಮ್ಮತ್ತ ಮುಂತಾದೆ. ಚೆನ್ನಮಲ್ಲಿಕಾರ್ಜುನಯ್ಯಾ, ಕಾಮವಿಕಾರಿಯ ಸಂಗವ ಹೊದ್ದಿದಡೆ ನಿಮ್ಮಾಣೆ.
--------------
ಅಕ್ಕಮಹಾದೇವಿ
ಕಳವಳದ ಮನ ತಲೆಕೆಳಗಾದುದವ್ವಾ ; ಸುಳಿದು ಬೀಸುವ ಗಾಳಿ ಉರಿಯಾದುದವ್ವಾ ; ಬೆಳುದಿಂಗಳು ಬಿಸಿಯಾಯಿತ್ತು ಕೆಳದಿ. ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವಾ ; ತಿಳುಹಾ, ಬುದ್ಧಿಯ ಹೇಳಿ ಕರೆತಾರೆಲಗವ್ವಾ ; ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವಾ.
--------------
ಅಕ್ಕಮಹಾದೇವಿ
ಕಾಮ ಬಲ್ಲಿದನೆಂದಡೆ ಉರುಹಿ ಭಸ್ಮವ ಮಾಡಿದ. ಕಾಲ ಬಲ್ಲಿದನೆಂದಡೆ ಕೆಡಹಿ ತುಳಿದ. ಎಲೆ ಅವ್ವಾ, ನೀನು ಕೇಳಾ ತಾಯೆ. ಬ್ರಹ್ಮ ಬಲ್ಲಿದನೆಂದಡೆ ಶಿರವ ಚಿವುಟಿಯಾಡಿದ. ಎಲೆ ಅವ್ವಾ ನೀನು ಕೇಳಾ ತಾಯೆ. ವಿಷ್ಣು ಬಲ್ಲಿದನೆಂದಡೆ ಆಕಳ ಕಾಯ್ದಿರಿಸಿದ. ತ್ರಿಪುರದ ಕೋಟೆ ಬಲ್ಲಿತ್ತೆಂದಡೆ ನೊಸಲಕಂಗಳಲುರುಹಿದನವ್ವಾ. ಇದು ಕಾರಣ, ಚೆನ್ನಮಲ್ಲಿಕಾರ್ಜುನ ಗಂಡನೆನಗೆ, ಜನನ ಮರಣಕ್ಕೊಳಗಾಗದ ಬಲುಹನೇನ ಬಣ್ಣಿಪೆನವ್ವಾ.
--------------
ಅಕ್ಕಮಹಾದೇವಿ
ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು. ಕರ್ಣಕ್ಕೆ ಶೃಂಗಾರ ಪುರಾತನರ ಸುಗೀತಂಗಳ ಕೇಳುವುದು. ವಚನಕ್ಕೆ ಶೃಂಗಾರ ಸತ್ಯವ ನುಡಿವುದು. ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ. ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು. ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕಡೆಂತಹುದಯ್ಯಾ ? ಬೆಟ್ಟದ ತುದಿಯ ಮೆಟ್ಟಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಹುದಯ್ಯಾ ? ನೀನಿಕ್ಕಿದ ಸಯದಾನವನೊಲ್ಲದೆ ಬೇರೆ ಬಯಸಿದೊಡೆಂತಹುದಯ್ಯಾ ? ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು ಕಿರುಕುಳಕ್ಕೆ ಸಂದಡೆಂತಹುದಯ್ಯಾ ? ಕತ್ತಲೆಯ ಹೊಕ್ಕಡೆಂತಹುದಯ್ಯಾ ?
--------------
ಅಕ್ಕಮಹಾದೇವಿ
ಕರಣ ಮೀಸಲಾಗಿ ನಿಮಗರ್ಪಿತವಾಯಿತ್ತು. ಆನೊಂದರಿಯೆನಯ್ಯಾ. ಎನ್ನ ಗತಿ ನೀನಾಗಿ, ಎನ್ನ ಮತಿ ನೀನಾಗಿ, ಪ್ರಾಣ ನಿನಗರ್ಪಿತವಾಯಿತ್ತು. ನೀನಲ್ಲದೆ ಪೆರತೊಂದ ನೆನೆದಡೆ ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು ? ಹೊಗಬಾರದು, ಅಸಾಧ್ಯವಯ್ಯಾ. ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು. ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು. ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು. ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು.
--------------
ಅಕ್ಕಮಹಾದೇವಿ
ಕಾಯದ ಕಾರ್ಪಣ್ಯವರತಿತ್ತು, ಕರಣಂಗಳ ಕಳವಳವಳಿದಿತ್ತು. ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು. ಇನ್ನೇವೆನಿನ್ನೇವೆನಯ್ಯಾ ? ನಿಮ್ಮ ಶರಣ ಬಸವಣ್ಣನ ಶ್ರೀಪಾದವ ಕಂಡಲ್ಲದೆ ಬಯಕೆ ಬಯಲಾಗದು. ಇನ್ನೇವೆನಿನ್ನೇವೆನಯ್ಯಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಕೆಚ್ಚಿಲ್ಲದ ಮರನ ಕ್ರಿಮಿ ಇಂಬುಗೊಂಬಂತೆ, ಒಡೆಯನಿಲ್ಲದ ಮನೆಯ ಶುನಕ ಸಂಚುಗೊಂಬಂತೆ, ನೃಪತಿಯಿಲ್ಲದ ದೇಶವ ಮನ್ನೆಯರಿಂಬುಗೊಂಬಂತೆ, ನಿಮ್ಮ ನೆನಹಿಲ್ಲದ ಶರೀರವ ಭೂತ ಪ್ರೇತ ಪಿಶಾಚಿಗಳಿಂಬುಗೊಂಬಂತೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ ನೋಡವ್ವಾ. ಕೇಳುತ್ತ ಕೇಳುತ್ತ ಮೈಮರೆದೊರಗಿದೆ ನೋಡವ್ವಾ. ಹಾಸಿದ ಹಾಸಿಗೆಯ ಹಂಗಿಲ್ಲದೆ ಹೋಯಿತ್ತು ಕೇಳವ್ವಾ. ಚೆನ್ನಮಲ್ಲಿಕಾರ್ಜುನದೇವರದೇವನ ಕೂಡುವ ಕೂಟವ ನಾನೇನೆಂದರಿಯದೆ ಮರೆದೆ ಕಾಣವ್ವಾ.
--------------
ಅಕ್ಕಮಹಾದೇವಿ
ಕಳನೇರಿ ಇಳಿವುದು ವೀರಂಗೆ ಮತವಲ್ಲ. ಶಿವಶರಣಂಗೆ ಹಿಮ್ಮೆಟ್ಟುವುದು ಪಥವಲ್ಲ. ಮನದೊಡೆಯ ಮನವನಿಂಬುಗೊಂಬನಯ್ಯಾ. ಏರಲಾಗದು ಶ್ರೀಪರ್ವತವ ಇಳಿದಡೆ ವ್ರತಕ್ಕೆ ಭಂಗ. ಕಳನೇರಿ ಕೈದು ಮರೆದಡೆ ಮಾರಂಕ ಚೆನ್ನಮಲ್ಲಿಕಾರ್ಜುನನಿಮ್ಮೈಗಾಣಲಿರಿವನು.
--------------
ಅಕ್ಕಮಹಾದೇವಿ
ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ. ಏರಿಲ್ಲದ ಗಾಯದಲ್ಲಿ ನೊಂದೆನವ್ವಾ. ಸುಖವಿಲ್ಲದೆ ಧಾವತಿಗೊಂಡೆನವ್ವಾ. ಚೆನ್ನಮಲ್ಲಿಕಾರ್ಜುನದೇವಂಗೊಲಿದು ಬಾರದ ಭವಂಗಳಲ್ಲಿ ಬಂದೆನವ್ವಾ.
--------------
ಅಕ್ಕಮಹಾದೇವಿ
ಕುಲಮದವೆಂಬುದಿಲ್ಲ ಅಯೋನಿಸಂಭವನಾಗಿ, ಛಲಮದವೆಂಬುದಿಲ್ಲ ಪ್ರತಿದೋರನಾಗಿ, ಧನಮದವೆಂಬುದಿಲ್ಲ ತ್ರಿಕರಣ ಶುದ್ಭನಾಗಿ, ವಿದ್ಯಾಮದವೆಂಬುದಿಲ್ಲ ಅಸಾಧ್ಯವ ಸಾಧಿಸಿದನಾಗಿ. ಮತ್ತಾವ ಮದವೆಂಬುದಿಲ್ಲ ನೀನವಗ್ರಹಿಸಿದ ಕಾರಣ, ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣನು ಅಕಾಯ ಚರಿತ್ರನಾಗಿ.
--------------
ಅಕ್ಕಮಹಾದೇವಿ
ಕಾಯದ ಕಳವಳವ ಕೆಡಿಸಿ, ಮನದ ಮಾಯೆಯ ಮಾಣಿಸಿ, ಎನ್ನ ಹರಣವ ಮೇಲೆತ್ತಿ ಸಲಹಿದೆಯಯ್ಯಾ. ಶಿವಶಿವಾ, ಎನ್ನ ಭವಬಂಧನವ ಬಿಡಿಸಿ, ನಿಮ್ಮತ್ತ ತೋರಿದ ಘನವನುಪಮಿಸಬಾರದಯ್ಯಾ. ಇರುಳೋಸರಿಸಿದ ಜಕ್ಕವಕ್ಕಿಯಂತೆ ನಾನಿಂದು ನಿಮ್ಮ ಶ್ರೀಪಾದವನಿಂಬುಗೊಂಡು ಸುಖದೊಳೋಲಾಡುವೆನಯ್ಯಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಕೈಸಿರಿಯ ದಂಡವ ಕೊಳಬಹುದಲ್ಲದೆ, ಮೈಸಿರಿಯ ದಂಡವ ಕೊಳಲುಂಟೆ ? ಉಟ್ಟಂತಹ ಉಡಿಗೆ ತೊಡಿಗೆಯನೆಲ್ಲ ಸೆಳೆದುಕೊಳಬಹುದಲ್ಲದೆ, ಮುಚ್ಚಿರ್ದ ಮುಸುಕಿರ್ದ ನಿರ್ವಾಣವ ಸೆಳೆದುಕೊಳಬಹುದೆ ? ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ ಉಡುಗೆ ತೊಡುಗೆಯ ಹಂಗೇಕೋ ಮರುಳೆ ?
--------------
ಅಕ್ಕಮಹಾದೇವಿ
ಕೇಳವ್ವಾ ಕೇಳವ್ವಾ ಕೆಳದಿ ನಾನೊಂದು ಕನಸಕಂಡೆ. ಗಿರಿಯಮೇಲೊಬ್ಬ ಗೊರವ ಕುಳ್ಳಿರ್ದುದ ಕಂಡೆ. ಗಿರಿಯೆಂಬುದು ಸಿರಿಶೈಲ ಗೊರವನೆ ಚೆನ್ನಮಲ್ಲಿಕಾರ್ಜುನನು.
--------------
ಅಕ್ಕಮಹಾದೇವಿ
ಕೈಯ ಸಂಕಲೆಯ ಕಳೆದೆಯಲ್ಲಾ ! ಕಾಲ ಸುತ್ತಿದ ಪಾಶವ ಹರಿದೆಯಲ್ಲಾ ! ಸುತ್ತಿ ಮುತ್ತಿರ್ದ ಬಲೆಯ ಕುಣಿಕೆಯಿಂದ ಹೊರವಡಿಸಿದೆಯಲ್ಲಾ ! ಚೆನ್ನಮಲ್ಲಿಕಾರ್ಜುನಾ, ನೀನು ಕೊಟ್ಟವಧಿ ತುಂಬುವ ಮುನ್ನ ಮುಟ್ಟುವೆ ನಿಮ್ಮನು.
--------------
ಅಕ್ಕಮಹಾದೇವಿ
ಕಾಯ ಮೀಸಲಾಗಿ ನಿನಗರ್ಪಿತವಾಯಿತ್ತು. ಕರಣ ಮೀಸಲಾಗಿ ನಿನಗರ್ಪಿತವಾಯಿತ್ತು. ಆನೊಂದರಿಯೆನಯ್ಯಾ. ಎನ್ನ ಗತಿ ನೀನಾಗಿ, ಎನ್ನ ಮತಿ ನೀನಾಗಿ, ಪ್ರಾಣ ನಿನಗರ್ಪಿತವಾಯಿತ್ತು. ನೀನಲ್ಲದೆ ಪೆರತೊಂದ ನೆನೆದಡೆ ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಕಾಯ ಕರ್ರನೆ ಕಂದಿದಡೇನಯ್ಯಾ ? ಕಾಯ ಮಿರ್ರನೆ ಮಿಂಚಿದಡೇನಯ್ಯಾ ? ಅಂತರಂಗ ಶುದ್ಧವಾದ ಬಳಿಕ ಚೆನ್ನಮಲ್ಲಿಕಾರ್ಜುನಯ್ಯಾ ನೀನೊಲಿದ ಕಾಯವು ಹೇಗಿದ್ದಡೇನಯ್ಯಾ ?
--------------
ಅಕ್ಕಮಹಾದೇವಿ
ಕೈಯ ಧನವ ಕೊಂಡಡೆ, ಮೈಯ ಭಾಷೆಯ ಕೊಳಬಹುದೆ ? ಉಟ್ಟ ಉಡುಗೆಯ ಸೆಳೆದುಕೊಂಡರೆ, ಮುಚ್ಚಿ ಮುಸುಕಿದ ನಿರ್ವಾಣವ ಸೆಳೆಯಬಹುದೆ ? ನೋಡುವಿರಿ ಎಲೆ ಅಣ್ಣಗಳಿರಾ, ಕುಲವಳಿದು ಛಲವಳಿದು ಭವಗೆಟ್ಟು ಭಕ್ತೆಯಾದವಳ. ಎನ್ನನೇಕೆ ನೋಡುವಿರಿ ಎಲೆ ತಂದೆಗಳಿರಾ, ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದು ಛಲವುಳಿದವಳನು.
--------------
ಅಕ್ಕಮಹಾದೇವಿ
ಕೆಂಡದ ಶವದಂತೆ, ಸೂತ್ರ ತಪ್ಪಿದ ಬೊಂಬೆಯಂತೆ, ಜಲವರತ ತಟಾಕದಂತೆ, ಬೆಂದ ನುಲಿಯಂತೆ ಮತ್ತೆ ಹಿಂದಣಂಗವುಂಟೆ ಅಣ್ಣಾ, ಚೆನ್ನಮಲ್ಲಿಕಾರ್ಜುನನಂಗವೆ ಆಶ್ರಯವಾದವಳಿಗೆ?
--------------
ಅಕ್ಕಮಹಾದೇವಿ
ಕಿರಿಯರಹುದರಿದಲ್ಲದೆ, ಹಿರಿಯರಹುದರಿದಲ್ಲ ನೋಡಾ ! [ಭವಿಯಹುದರಿದಲ್ಲದೆ] ಭಕ್ತನಹುದರಿದಲ್ಲ ನೋಡಾ. ಕುರುಹಹುದರಿದಲ್ಲದೆ, ನಿರಾಳವಹುದರಿದಲ್ಲ ಚೆನ್ನಮಲ್ಲಿಕಾರ್ಜುನಯ್ಯಾ ?
--------------
ಅಕ್ಕಮಹಾದೇವಿ
ಕಾಮನ ತಲೆಯ ಕೊರೆದು, ಕಾಲನ ಕಣ್ಣ ಕಳೆದು, ಸೋಮ ಸೂರ್ಯರ ಹುರಿದು ಹುಡಿಮಾಡಿ ತಿಂಬವಳಿಂಗೆ ನಾಮವನಿಡಬಲ್ಲವರಾರು ಹೇಳಿರೆ! ನೀ ಮದವಳಿಗನಾಗೆ ನಾ ಮದವಳಿಗಿತ್ತಿಯಾಗೆ ಯಮನ ಕೂಡುವ ಮರುತನಂತೆ ನೋಡಾ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಕಟಿಹಾದ ಬಿದಿರಿನಲ್ಲಿ ಮರಳಿ ಕಳಲೆ ಮೂಡಬಲ್ಲುದೆ ? ೆಸುಟ್ಟ ಮಡಕೆ ಮುನ್ನಿನಂತೆ ಮರಳಿ ಧರೆಯನಪ್ಪಬಲ್ಲುದೆ ? ತೊಟ್ಟ ಬಿಟ್ಟು ಬಿದ್ದ ಹಣ್ಣು ಮರಳಿ ತೊಟ್ಟನಪ್ಪಬಲ್ಲುದೆ ? ಕಷ್ಟಕರ್ಮಿ ಮನುಜರು ಕಾಣದೆ ಒಂದ ನುಡಿದಡೆ, ನಿಷ್ಠೆಯುಳ್ಳ ಶರಣರು ಮರಳಿ ಮರ್ತ್ಯಕ್ಕೆ ಬಪ್ಪರೆ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ

ಇನ್ನಷ್ಟು ...