ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಾಟ ಮದುವೆಯ ಮನೆ. ದಾನಧರ್ಮ ಸಂತೆಯ ಪಸಾರ, ಸಾಜಸಾಜೇಶ್ವರಿ ಸೂಳೆಗೇರಿಯ ಸೊಬಗು. ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ. ಭಕ್ತಿಯೆಂಬುದು ಬಾಜಿಗಾರರಾಟ. ಬಸವಣ್ಣಗೆ ತರ ; ನಾನರಿಯದೆ ಹುಟ್ಟಿದೆ, ಹುಟ್ಟಿ ಹುಸಿಗೀಡಾದೆ. ಹುಸಿ ವಿಷಯದೊಳಡಗಿತ್ತು, ವಿಷಯ ಮಸಿಮಣ್ಣಾಯಿತ್ತು. ನಿನ್ನ ಗಸಣೆಯನೊಲ್ಲೆ ಹೋಗಾ, ಚೆನ್ನಮಲ್ಲಿಕಾರ್ಜುನಾ,
--------------
ಅಕ್ಕಮಹಾದೇವಿ
ಮೂಲಾಧಾರದ ಬೇರ ಮೆಟ್ಟಿ, ಭ್ರೂಮಂಡಲವನೇರಿದೆ. ಆಚಾರದ ಬೇರ ಹಿಡಿದು ಐಕ್ಯದ ತುದಿಯನೇರಿದೆ. ವೈರಾಗ್ಯದ ಸೋಪಾನದಿಂದ ಶ್ರೀಗಿರಿಯನೇರಿದೆ. ಕೈವಿಡಿದು ತೆಗೆದುಕೊಳ್ಳಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಮರಹು ಬಂದಿಹುದೆಂದು ಗುರು ಕುರುಹನೆ ಕೊಟ್ಟ ; ಅರಿವಿಂಗೆ ಪ್ರಾಣಲಿಂಗ ಬೇರೆ ಕಾಣಿರಣ್ಣಾ. ನಿರ್ಣಯವಿಲ್ಲದ ಭಕ್ತಿಗೆ ಬರಿದೆ ಬಳಲಲದೇತಕೆ ? ಚೆನ್ನಮಲ್ಲಿಕಾರ್ಜುನಯ್ಯನನರಿದು ಪೂಜಿಸಿದಡೆ ಮರಳಿ ಭವಕ್ಕೆ ಬಹನೆ ?
--------------
ಅಕ್ಕಮಹಾದೇವಿ
ಮೂರು ತಪ್ಪ ಹೊರಿಸಿ ಬಂದವಳಿಗೆ ಇನ್ನಾರ ಕೊಂಡು ಕೆಲಸವೇತಕ್ಕೆ ? ಹೊಗದಿಹೆನೆ ಹೋಗಿಹೆನೆ, ಜ್ಞಾನಕ್ಕೆ ಹಾನಿ. ಅರೆಗೋಣ ಕೊಯ್ದವನಂತೆ ಇನ್ನೇವೆ ? ಈ ಗುಣವ ಬಿಡಿಸಾ ಎನ್ನ ತಂದೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಮಾಟಕೂಟದಲ್ಲಿ ಬಸವಣ್ಣನಿಲ್ಲ. ನೋಟಕೂಟದಲ್ಲಿ ಪ್ರಭುದೇವರಿಲ್ಲ. ಭಾವಕೂಟದಲ್ಲಿ ಅಜಗಣ್ಣನಿಲ್ಲ. ಸ್ನೇಹಕೂಟದಲ್ಲಿ ಬಾಚಿರಾಜನಿಲ್ಲ. ಇವರೆಲ್ಲರ ಕೂಟದಲ್ಲಿ ಚೆನ್ನಬಸವಣ್ಣನಿಲ್ಲ. ಎನಗಿನ್ನೇನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ ?
--------------
ಅಕ್ಕಮಹಾದೇವಿ
ಮುತ್ತು ನೀರಲಾಯಿತ್ತು, ವಾರಿಕಲ್ಲು ನೀರಲಾಯಿತ್ತು, ಉಪ್ಪು ನೀರಲಾಯಿತ್ತು. ಉಪ್ಪು ಕರಗಿತ್ತು, ವಾರಿಕಲ್ಲು ಕರಗಿತ್ತು, ಮುತ್ತು ಕರಗಿದುದನಾರೂ ಕಂಡವರಿಲ್ಲ. ಈ ಸಂಸಾರಿಮಾನವರು ಲಿಂಗವಮುಟ್ಟಿ ಭವಭಾರಿಗಳಾದರು. ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ.
--------------
ಅಕ್ಕಮಹಾದೇವಿ
ಮೊಲೆಮುಡಿಯಿದ್ದಡೇನು ಮೂಗಿಲ್ಲದವಳಿಂಗೆ ? ತಲೆಯ ಮೇಲೆ ಸೆರಗೇತಕ್ಕೆ ಸಹಜಸಂಕಲ್ಪವಿಲ್ಲದವಳಿಂಗೆ ? ಜಲದೊಳಗೆ ಹುಟ್ಟಿ ಗುಳ್ಳೆ ಜಾತಿಸ್ಮರತ್ವವರಿದಿತ್ತು. ಹಲವರ ಹಾದಿಯೊಳು ಹರಿಸುರರ್ಗೆ ನಿಮ್ಮ ನೆಲೆಯ ತೋರಿದೆ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಮಾಟಕೂಟ ಬಸವಣ್ಣಂಗಾಯಿತ್ತು. ನೋಟಕೂಟ ಪ್ರಭುದೇವರಿಗಾಯಿತ್ತು. ಭಾವಕೂಟ ಅಜಗಣ್ಣಂಗಾಯಿತ್ತು. ಸ್ನೇಹಕೂಟ ಬಾಚಿರಾಜಂಗಾಯಿತ್ತು. ಇವರೆಲ್ಲರ ಕೂಟ ಚೆನ್ನಬಸವಣ್ಣಂಗಾಯಿತ್ತು. ಎನಗಿನ್ನಾವ ಕೂಟವಿಲ್ಲವಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ.
--------------
ಅಕ್ಕಮಹಾದೇವಿ
ಮುಡಿಬಿಟ್ಟು ತೊಂಗವಾರಿದವು ಕೇಳು ತಂದೆ. ಉಡಿ ಜೋಲಿ ಅಡಿಗಿಕ್ಕಿ ಹೋಯಿತ್ತು ಶಿವಶಿವಾ. ನಡೆಗೆಟ್ಟು ನಿಧಿ ನಿಂದಿತ್ತು ಕೇಳಾ ಎನ್ನ ತಂದೆ. ಪ್ರಾಣದೊಡೆಯಾ, ಕರುಣದಿಂದೊಪ್ಪುಗೊಳ್ಳಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ. ಎಚ್ಚಡೆ ಗರಿದೋರದಂತಿರಬೇಕು. ಅಪ್ಪಿದಡೆ ಅಸ್ಥಿಗಳು ನಗ್ಗುನುಸಿಯಾಗಬೇಕು. ಬೆಚ್ಚಡೆ ಬೆಸುಗೆಯರಿಯದಂತಿರಬೇಕು. ಮಚ್ಚು ಒಪ್ಪಿತ್ತು, ಚೆನ್ನಮಲ್ಲಿಕಾರ್ಜುನನ ಸ್ನೇಹ ತಾಯೆ.
--------------
ಅಕ್ಕಮಹಾದೇವಿ
ಮನ ಬೀಸರವಾದಡೆ ಪ್ರಾಣ ಪಲ್ಲಟವಹುದವ್ವಾ. ತನು ಕರಣಂಗಳು ಮೀಸಲಾಗಿ ಮನ ಸಮರಸವಾಯಿತ್ತು ನೋಡಾ ಅನ್ಯವನರಿಯೆ ಭಿನ್ನವನರಿಯೆ. ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ ಬಳಿಯವಳಾನು ಕೇಳಾ ತಾಯೆ ?
--------------
ಅಕ್ಕಮಹಾದೇವಿ
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ? ಧನವಿದ್ದು ಫಲವೇನು ದಯವಿಲ್ಲದನ್ನಕ್ಕ ? ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ ? ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ ? ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ ? ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಮೊಲೆ ಬಿದ್ದು, ಮುಡಿ ಸಡಲಿ, ಗಲ್ಲ ಬತ್ತಿ, ತೋಳು ಕಂದಿದವಳ ಎನ್ನನೇಕೆ ನೋಡುವಿರಿ ಎಲೆ ಅಣ್ಣಗಳಿರಾ ? ಕುಲವಳಿದು ಛಲವಳಿದು ಭವಗೆಟ್ಟು ಭಕ್ತೆಯಾದವಳ, ಎನ್ನನೇಕೆ ನೋಡುವಿರಿ ಎಲೆ ತಂದೆಗಳಿರಾ ? ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದು ಛಲವಳಿದವಳನು.
--------------
ಅಕ್ಕಮಹಾದೇವಿ
ಮನ ಮುನ್ನ ಮುನ್ನವೆ ಗುರುವಿನೆಡೆಗೆಯಿದಿತ್ತು. ತನುವಿನಲ್ಲಿ ಡಿಂಬ ನೋಡಾ ? ಮನ ಬೇರಾದವರ ತನುವನಪ್ಪುವನೆಗ್ಗ ನೋಡಾ. ಚೆನ್ನಮಲ್ಲಿಕಾರ್ಜುನನ ನೋಡಿ ಕೂಡಿ ಬಂದೆಹೆನಂತಿರುವಂತಿರು.
--------------
ಅಕ್ಕಮಹಾದೇವಿ
ಮರ್ತ್ಯಲೋಕದ ಭಕ್ತರ ಮನವ ಬೆಳಗಲೆಂದು ಇಳಿತಂದನಯ್ಯಾ ಶಿವನು ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ. ಚಿತ್ತದ ಪ್ರಕೃತಿಯ ಹಿಂಗಿಸಿ, ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ ಗಣಂಗಳಿಗೆ. ತನುವೆಲ್ಲ ಸ್ವಯಲಿಂಗ, ಮನವೆಲ್ಲ ಚರಲಿಂಗ. ಭಾವವೆಲ್ಲ ಮಹಾಘನದ ಬೆಳಗು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಸಮ್ಯಕ್‍ಜ್ಞಾನಿ ಚೆನ್ನಬಸವಣ್ಣನ ಶ್ರೀ ಪಾದಕ್ಕೆ ಶರಣೆಂದು ಎನ್ನ ಭವಂ ನಾಸ್ತಿಯಾಯಿತ್ತಯ್ಯಾ ಪ್ರಭುವೆ.
--------------
ಅಕ್ಕಮಹಾದೇವಿ
ಮುನ್ನ ಮಾಡಿತ್ತನಾರು ಕಳೆಯಬಾರದು. ಅದು ಬೆನ್ನ ಹಿಂದೆ ಬರುತ್ತಿಪ್ಪುದು. ಅದನಿನ್ನು ಕಳದೆಹೆನೆಂದಡೆ ಎನ್ನಿಚ್ಚೆಯುಂಟೆ ಅಯ್ಯಾ ? ಚೆನ್ನಮಲ್ಲಿಕಾರ್ಜುನನೆನಗೆ ಕಟ್ಟಿದ ಕಟ್ಟಳೆಯ ನನ್ನಿಂದ ನಾನೆ ಅನುಭವಿಸಿ ಕಳೆವೆನು.
--------------
ಅಕ್ಕಮಹಾದೇವಿ
ಮರಮರ ಮಥನಿಸಿ ಕಿಚ್ಚು ಹುಟ್ಟಿ ಸುತ್ತಣ ತರುಮರಾದಿಗಳ ಸುಡಲಾಯಿತ್ತು. ಆತ್ಮ ಆತ್ಮ ಮಥನಿಸಿ ಅನುಭಾವ ಹುಟ್ಟಿ ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು. ಇಂತಪ್ಪ ಅನುಭಾವರ ಅನುಭಾವವ ತೋರಿ ಎನ್ನ ಒಡಲನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಮಡಿವಾಳಯ್ಯನ ಪ್ರಸಾದವ ಕೊಂಡು ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ. ಸಿದ್ಧರಾಮಯ್ಯನ ಪ್ರಸಾದವ ಕೊಂಡು ಎನ್ನ ಕರಣಂಗಳು ಶುದ್ಧವಾಯಿತ್ತಯ್ಯಾ. ಬಸವಣ್ಣನ ಪ್ರಸಾದವ ಕೊಂಡು ಭಕ್ತಿಸಂಪನ್ನನಾದೆನಯ್ಯಾ. ಚೆನ್ನಬಸವಣ್ಣನ ಪ್ರಸಾದವ ಕೊಂಡು ಜ್ಞಾನಸಂಪನ್ನನಾದೆನಯ್ಯಾ. ನಿಜಗುಣನ ಪ್ರಸಾದವ ಕೊಂಡು ನಿಶ್ಚಿಂತನಾದೆನಯ್ಯಾ. ಅಜಗಣ್ಣನ ಪ್ರಸಾದವ ಕೊಂಡು ಆರೂಢನಾದೆನಯ್ಯಾ. ಘಟ್ಟಿವಾಳಯ್ಯನ ಪ್ರಸಾದವ ಕೊಂಡು ನಿರಾಕಾರ ಪರಬ್ರಹ್ಮ ಸ್ವರೂಪನಾದೆನಯ್ಯಾ. ಪ್ರಭುದೇವರ ಪ್ರಸಾದವ ಕೊಂಡು ಚೆನ್ನಮಲ್ಲಿಕಾರ್ಜುನಯ್ಯನ ಕೂಡಿ ಸುಖಿಯಾದೆನು.
--------------
ಅಕ್ಕಮಹಾದೇವಿ
ಮನೆ ಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ ? ಬೇಡಿದಡೆ ಇಕ್ಕದಂತೆ ಮಾಡಯ್ಯ ? ಇಕ್ಕಿದಡೆ ನೆಲಕ್ಕೆ ಬೀಳುವಂತೆ ಮಾಡಯ್ಯ ? ನೆಲಕ್ಕೆ ಬಿದ್ದಡೆ ನಾನೆತ್ತಿಕೊಂಬುದಕ್ಕೆ ಮುನ್ನವೆ ಸುನಿಯೆತ್ತಿಕೊಂಬಂತೆ ಮಾಡಾ ಚೆನ್ನಮಲ್ಲಿಕಾರ್ಜುನಯ್ಯ
--------------
ಅಕ್ಕಮಹಾದೇವಿ
ಮುಡಿಬಿಟ್ಟು ಮೊಗಬಾಡಿ ತನುಕರಗಿದವಳ ಎನ್ನನೇಕೆ ನುಡಿಸುವಿರಿ ? ಎಲೆ ತಂದೆಗಳಿರಾ, ಬಲುಹಳಿದು ಭವಗೆಟ್ಟು ಛಲವಳಿದು ಭಕ್ತೆಯಾಗಿ ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದವಳ ¯
--------------
ಅಕ್ಕಮಹಾದೇವಿ
ಮೋಹವುಳ್ಳಲ್ಲಿ ಮಚ್ಚುವಂತೆಮಾಡಯ್ಯಾ. ಮೋಹವುಳ್ಳಲ್ಲಿ ಕರುಳುವ ಕೊಯ್ಯಯ್ಯಾ. ಮೋಹವುಳ್ಳಲ್ಲಿ ಬೆರಳುವ ಕಡಿಯಯ್ಯಾ. ಚೆನ್ನಮಲ್ಲಿಕಾರ್ಜುನದೇವಯ್ಯಾ, ನೊಂದೆನೆಂದಡೆ ಮನಕತಮಾಡಯ್ಯಾ.
--------------
ಅಕ್ಕಮಹಾದೇವಿ
ಮಧ್ಯಾಹ್ನದಿಂದ ಮೇಲೆ ಹಿರಿಯರಿಲ್ಲ. ಅಸ್ತಮಾನದಿಂದ ಮೇಲೆ ಜಿತೇಂದ್ರಿಯರಿಲ್ಲ. ವಿಧಿಯ ಮೀರುವ ಅಮರರಿಲ್ಲ. ಕ್ಷುಧೆ ವಿಧಿ ವ್ಯಸನಕ್ಕಂಜಿ, ನಾ ನಿಮ್ಮ ಮರೆಹೊಕ್ಕು ಬದುಕಿದೆನು ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಮುತ್ತು ಒಡೆದಡೆ ಬೆಸೆಯಬಹುದೆ ? ಮನ ಮುರಿದಡೆ ಸಂತಕ್ಕೆ ತರಬಹುದೆ ? ಅಪ್ಪುಗೆ ಸಡಲಿದ ಸುಖವ ಮರಳಿ ಅರಸಿದರುಂಟೆ ? ಸಾಧಕನೊಯಿದ ನಿಧಾನದ ಕುಳಿಯಂತೆ ಅಲ್ಲಿ ಏನುಂಟು ? ಮಚ್ಚು ಪಲ್ಲಟವಾಗಿ, ನೋಟದ ಸುಖವ ಹಿಂಗಿದರೊಳವೆ ? ನೋಡದಿರು, ಕಾಡದಿರು, ಮನಬಳಸದಿರು. ಭಾಷೆಗೆ ತಪ್ಪಿದರೆ ಮುಳ್ಳುಮೊನೆಯ ಕಿಚ್ಚಿನಂತೆ. ಲೇಸು ಬೀಸರವೋಗದ ಮುನ್ನ ಚೆನ್ನಮಲ್ಲಿಕಾರ್ಜುನನ ಕೂಡಿ ಧಾತುಗೆಟ್ಟ ಬಳಿಕ ಒಳವೆ ?
--------------
ಅಕ್ಕಮಹಾದೇವಿ
ಮರೆದೊರಗಿ, ಕನಸ ಕಂಡು ಹೇಳುವಲ್ಲಿ ಸತ್ತ ಹೆಣ ಎದ್ದಿತ್ತು. ತನ್ನ ಋಣ ನಿಧಾನ ಎದ್ದು ಕರೆಯಿತ್ತು. ಹೆಪ್ಪಿಟ್ಟ ಹಾಲು ಗಟ್ಟಿತುಪ್ಪಾಗಿ ಸಿಹಿಯಾಯಿತ್ತು. ಇದಕ್ಕೆ ತಪ್ಪ ಸಾಧಿಸಲೇಕೆ ಚೆನ್ನಮಲ್ಲಿಕಾರ್ಜುನದೇವರ ದೇವನಣ್ಣಗಳಿರಾ ?
--------------
ಅಕ್ಕಮಹಾದೇವಿ
ಮದನಾರಿಯೆಂಬ ಮಳೆ ಹೊಯ್ಯಲು, ಶಿವಯೋಗವೆಂಬ ತೊರೆ ಬರಲು, ಕಾಮನೆ ಅಂಬಿಗನಾದ ನೋಡಾ ? ಕರ್ಮದ ಕಡಲೆನ್ನನೆಳದೊಯ್ವಾಗ ಕೈಯ ನೀಡು ತಂದೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ

ಇನ್ನಷ್ಟು ...