ಅಥವಾ
(52) (19) (6) (1) (11) (4) (0) (0) (26) (0) (1) (12) (1) (0) ಅಂ (10) ಅಃ (10) (56) (0) (14) (1) (0) (6) (0) (6) (0) (0) (0) (0) (0) (0) (0) (21) (0) (5) (2) (26) (16) (1) (20) (10) (28) (0) (2) (0) (13) (10) (8) (0) (24) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅರಿದೆನೆಂದಡೆ ಅರಿಯಬಾರದು ನೋಡಾ. ಘನಕ್ಕೆ ಘನ ತಾನೆ ನೋಡಾ. ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆ ಸೋತೆನು.
--------------
ಅಕ್ಕಮಹಾದೇವಿ
ಅಕ್ಕಟಕ್ಕಟಾ, ಸಂಸಾರದ ಹಗರಣ ಬಂದಾಡಿತ್ತಲ್ಲಾ ? ಅಪ್ಪಾ ಬೊಪ್ಪಾ ಎಂಬ ಚೋಹವು ಅದು ಮೊಟ್ಟಮೊದಲಲ್ಲಿ ಬಂದಾಡಿತ್ತು. ತುಪ್ಪುಳು ತೊಡೆದಂತೆ ಮೀಸೆಯ ಚೋಹವು ಅದು ನಟ್ಟನಡುವೆ ಬಂದಾಡಿತ್ತು. ಮುಪ್ಪು ಮುಪ್ಪು ಎಂಬ ಚೋಹವು ಅದು ಕಟ್ಟಕಡೆಯಲಿ ಬಂದಾಡಿತ್ತು. ನಿಮ್ಮ ನೋಟವು ತೀರಲೊಡನೆ ಜಗದಾಟವು ತೀರಿತ್ತು ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಷ್ಟದಳಕಮಲದ ಆತ್ಮನೊಳಗೆ ಸೃಷ್ಟಿ ಜನಿಸಿ, ಕೂರುಮ ದಿಗುದಂತಿ ದಿಗುವಳಯವ ನುಂಗಿ, ನಿಜಶೂನ್ಯ ತಾನಾದ ಬಳಿಕ, ತನ್ನ ತಾನರಿದ ನಿಜಪದ ಭಿನ್ನಯೋಗಕ್ಕೆ ಬಹುದೆ? ಕಂಗಳ ನೋಟದಲ್ಲಿ ಮನದ ಸೊಗಸಿನಲ್ಲಿ, ಅನಂಗನ ದಾಳಿಯನಗಲಿದೆನಣ್ಣಾ. ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಯೊಳಗಹುದೆ? ಎನ್ನದೇವ ಚೆನ್ನಮಲ್ಲಿಕಾರ್ಜುನನಲ್ಲದೆ ಪರಪುರುಷರು ನಮಗಾಗದಣ್ಣಾ.
--------------
ಅಕ್ಕಮಹಾದೇವಿ
ಅಸನದಿಂದ ಕುದಿದು, ವ್ಯಸನದಿಂದ ಬೆಂದು, ಅತಿ ಆಸೆಯಿಂದ ಬಳಲಿ, ವಿಷಯಕ್ಕೆ ಹರಿವ ಜೀವಿಗಳು ನಿಮ್ಮನರಿಯರು. ಕಾಲಕಲ್ಪಿತ ಪ್ರಳಯ ಜೀವಿಗಳೆಲ್ಲ ನಿಮ್ಮನೆತ್ತ ಬಲ್ಲರಯ್ಯ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಅರಲುಗೊಂಡ ಕೆರೆಗೆ ತೊರೆಬಂದು ಹಾಯ್ದಂತಾಯಿತ್ತು. ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ. ಇಹದ ಸುಖ ಪರದ ಗತಿ ನಡೆದು ಬಂದಂತಾಯಿತ್ತು ನೋಡಾ ಎನಗೆ. ಚೆನ್ನಮಲ್ಲಿಕಾರ್ಜುನಯ್ಯಾ, ಗುರುಪಾದವ ಕಂಡು ಧನ್ಯಳಾದೆ ನೋಡಾ.
--------------
ಅಕ್ಕಮಹಾದೇವಿ
ಅಪಾರ ಘನಗಂಭೀರದ ಅಂಬುಧಿಯಲ್ಲಿ ತಾರಾಪಥವಂ ನೋಡಿ ನಡೆಯೆ, ಭೈತ್ರದಿಂದ ದ್ವೀಪ ದ್ವೀಪಾಂತರಕ್ಕೆ ಸಕಲ ಪದಾರ್ಥವನೆಯ್ದಿಸುವುದು, ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ ಸಮೀಪ ತೂರ್ಯಸಂಭಾಷಣೆಯನರಿದಡೆ ಮುನ್ನಿನಲ್ಲಿಗೆಯ್ದಿಸುವುದು.
--------------
ಅಕ್ಕಮಹಾದೇವಿ
ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ತನು ಶುದ್ಧವಾಯಿತ್ತು. ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ಮನ ಶುದ್ಧವಾಯಿತ್ತು. ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ಪ್ರಾಣ ಶುದ್ಧವಾಯಿತ್ತು. ಅಯ್ಯಾ, ನಿಮ್ಮ ಅನುಭಾವಿಗಳು ಎನ್ನ ಒರೆದೊರೆದು ಆಗುಮಾಡಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗಾನು ತೊಡಿಗೆಯಾದೆನು.
--------------
ಅಕ್ಕಮಹಾದೇವಿ
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು, ದೇವಾಂಗವನುಟ್ಟೆನೆಲೆ ಪುರುಷ ಬಾರಾ, ಪುರುಷ ರತ್ನವೆ ಬಾರಾ. ನಿನ್ನ ಬರವೆನ್ನ ಅಸುವಿನ ಬರವಾದುದೀಗ, ಬಾರಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ, ನೀನು ಬಂದಹನೆಂದು ಬಟ್ಟೆಯ ನೋಡಿ ಬಾಯಾರುತಿರ್ದೆನು.
--------------
ಅಕ್ಕಮಹಾದೇವಿ
ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ. ಅಯ್ಯಾ, ನಿಮ್ಮ ಶರಣರಿದ್ದ ಪುರವೆ ಕೈಲಾಸಪುರವಯ್ಯಾ. ಅಯ್ಯಾ, ನಿಮ್ಮ ಶರಣರು ನಿಂದುದೆ ನಿಜನಿವಾಸವಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ, ಆನು ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಕ್ಕಮಹಾದೇವಿ
ಅಲ್ಲದವರೊಡನಾಡಿ ಎಲ್ಲಾ ಸಂಗವ ತೊರೆದೆ ನಾನು. ನಾರಿ ಸಂಗವತೊರೆದೆ, ನೀರ ಹೊಳೆಯ ತೊರೆದೆ ನಾನು. ಎನ್ನ ಮನದೊಡೆಯ ಚೆನ್ನಮಲ್ಲಿಕಾರ್ಜುನನ ಕೂಡುವ ಭರದಿಂದ ಎಲ್ಲಾ ಸಂಗವ ತೊರೆದೆ ನಾನು.
--------------
ಅಕ್ಕಮಹಾದೇವಿ
ಅಯ್ಯಾ, ನಿಮ್ಮ ಸಜ್ಜನ ಸದ್ಭಕ್ತರ ಕಂಡೆನಾಗಿ, ಎನ್ನ ಕಂಗಳ ಪಟಲ ಹರಿಯಿತ್ತಿಂದು. ಅಯ್ಯಾ, ನಿಮ್ಮ ಸಜ್ಜನಸದ್ಭಕ್ತರ ಶ್ರೀಚರಣಕ್ಕೆರಗಿದೆನಾಗಿ, ಎನ್ನ ಹಣೆಯ ಲಿಖಿತ ತೊಡೆಯಿತ್ತಿಂದು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಸಂಗನಬಸವಣ್ಣನ ಪಾದವ ಕಂಡು ಮಿಗೆ ಮಿಗೆ ನಮೋ ನಮೋ ಎನುತಿರ್ದೆನಯ್ಯಾ.
--------------
ಅಕ್ಕಮಹಾದೇವಿ
ಅಗ್ನಿ ಸರ್ವವ್ಯಾಪಕನಾಗಿರುವಂತೆ, ಚಿದ್ವಹ್ನಿರೂಪನಾದ ಶಿವನು ಸರ್ವವ್ಯಾಪಕನಾಗಿರ್ಪನು. ಹೃದಯಕಮಲವು ಮುಕುರದೋಪಾದಿಯಲ್ಲಿ ಪ್ರಕಾಶಿಸುತಿರ್ದಪುದು. ಆ ಕನ್ನಡಿಯೋಪಾದಿಯ ಹೃದಯಕಮಲದಲ್ಲಿ ವ್ಯಾಪಕನಾದ ಶಿವನು, ಆತ್ಮನೆನಿಸಿಕೊಂಡು ಪ್ರತಿಬಿಂಬಿಸುತಿರ್ದಪನು. ವೇದೋಪನಿಷದ್ಗಾಯತ್ರಿ ಪ್ರಸಿದ್ಧವಾದೀ ರಹಸ್ಯವ ಗುರೂಪದೇಶದಿಂ ತಿಳಿವುದಯ್ಯ ಶ್ರೀ ಚೆನ್ನಮಲ್ಲಿಕಾರ್ಜುನದೇವಾ.
--------------
ಅಕ್ಕಮಹಾದೇವಿ
ಅಂಗದಲ್ಲಿ ಆಚಾರವ ತೋರಿದ ಆ ಆಚಾರವೇ ಲಿಂಗವೆಂದರುಹಿದ. ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ; ಅರಿವೆ ಜಂಗಮವೆಂದು ತೋರಿದ. ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯ ಪ್ರಭುವೆ.
--------------
ಅಕ್ಕಮಹಾದೇವಿ
ಅಂಗವಿಕಾರಸಂಗವ ಮರೆದು, ಲಿಂಗವನೊಡಗೂಡುತಿಪ್ಪವರ ತೋರಾ ಎನಗೆ. ಕಾಮವಿಕಾರಕತ್ತಲೆಯಳಿದು, ಭಕ್ತಿಪ್ರಾಣವಾಗಿಪ್ಪವರ ತೋರಾ ಎನಗೆ. ತ್ರಿಕರಣ ಶುದ್ಧವಾಗಿ ನಿಮ್ಮ ನೆರೆ ನಂಬಿದ ಸದ್ಭಕ್ತರ ತೋರಾ ಎನಗೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅತ್ತೆ ಮಾಯೆ, ಮಾವ ಸಂಸಾರಿ, ಮೂವರು ಮೈದುನರು ಹುಲಿಯಂತವದಿರು, ನಾಲ್ವರು ನಗೆವೆಣ್ಣು ಕೇಳು ಕೆಳದಿ. ಐವರು ಭಾವದಿರನೊಯ್ವ ದೈವವಿಲ್ಲ. ಆರು ಪ್ರಜೆಯತ್ತಿಗೆಯರ ಮೀರಲಾರೆನು. ತಾಯೆ, ಹೇಳುವಡೆ ಏಳು ಪ್ರಜೆ ತೊತ್ತಿರ ಕಾಹು. ಕರ್ಮವೆಂಬ ಗಂಡನ ಬಾಯ ಟೊಣೆದು, ಹಾದರವನಾಡುವೆನು ಹರನಕೊಡೆ. ಮನವೆಂಬ ಸಖಿಯ ಪ್ರಸಾದದಿಂದ ಅನುಭಾವವ ಕಲಿತೆನು ಶಿವನೊಡನೆ ಕರಚೆಲುವ ಶ್ರೀಶೈಲ ಚೆನ್ನಮಲ್ಲಿಕಾರ್ಜುನನೆಂಬ ಸಜ್ಜನ ಗಂಡನ ಮಾಡಿಕೊಂಡೆ.
--------------
ಅಕ್ಕಮಹಾದೇವಿ
ಅಯ್ಯಾ, ನೀನೆನ್ನ ಮೊರೆಯನಾಲಿಸಿದಡಾಲಿಸು, ಆಲಿಸದಿರ್ದಡೆ ಮಾಣು. ಅಯ್ಯಾ, ನೀನೆನ್ನ ದುಃಖವ ನೋಡಿದಡೆ ನೋಡು, ನೋಡದಿರ್ದಡೆ ಮಾಣು. ನಿನಗಿದು ವಿಧಿಯೆ! ನೀನೊಲ್ಲದಡೆ ಆನೊಲಿಸುವ ಪರಿಯೆಂತಯ್ಯಾ ? ಮನವೆಳಸಿ ಮಾರುವೋಗಿ ಮರೆವೊಕ್ಕಡೆ ಕೊಂಬ ಪರಿಯೆಂತಯ್ಯಾ ಚೆನ್ನಮಲ್ಲಿಕಾರ್ಜುನಾ ? ಆಲಿಸದಿರ್ದಡೆ ಮಾಣು. ಅಯ್ಯಾ, ನೀನೆನ್ನ ದುಃಖವ ನೋಡಿದಡೆ ನೋಡು, ನೋಡದಿರ್ದಡೆ ಮಾಣು. ನಿನಗಿದು ವಿಧಿಯೆ ? ನೀನೊಲ್ಲದಡೆ ಆನೊಲಿಸುವ ಪರಿಯೆಂತಯ್ಯಾ ? ಮನವೆಳಸಿ ಮಾರುವೋಗಿ ಮರೆವೊಕ್ಕಡೆ ಕೊಂಬ ಪರಿಯೆಂತಯ್ಯಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಅಯ್ಯಾ, ನಿನ್ನ ಮುಟ್ಟಿ ಮುಟ್ಟದೆನ್ನ ಮನ ನೋಡಾ. ಬಿಚ್ಚಿ ಬೀಸರವಾಯಿತ್ತೆನ್ನ ಮನ. ಹೊಳಲ ಸುಂಕಿಗನಂತೆ ಹೊದಕುಳಿಗೊಂಡಿತ್ತೆನ್ನ ಮನ. ಎರಡೆಂಬುದ ಮರೆದು ಬರಡಾಗದೆನ್ನ ಮನ. ನೀನು ಆನಪ್ಪ ಪರಿಯೆಂತು ಹೇಳಾ, ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ. ಮನದೊಳಗೆ ಮನವಾಗಿ, ಮನವ ಲಿಂಗೈಕ್ಯವ ಮಾಡಿದೆ. ಭಾವದೊಳಗೆ ಭಾವವಾಗಿ, ಭಾವವ ಲಿಂಗೈಕ್ಯವ ಮಾಡಿದೆ. ಅರಿವಿನೊಳಗೆ ಅರಿವಾಗಿ, ಅರಿವ ಲಿಂಗೈಕ್ಯವ ಮಾಡಿದೆ. ಜ್ಞಾನದೊಳಗೆ ಜ್ಞಾನವಾಗಿ, ಜ್ಞಾನವ ಲಿಂಗೈಕ್ಯವ ಮಾಡಿದೆ. ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ, ನಿಃಪತಿ ಲಿಂಗೈಕ್ಯವ ಮಾಡಿದೆ. ನಾನೆಂಬುದ ನಿಲಿಸಿ, ನೀನೆಂಬುದ ಕೆಡಿಸಿ, ಉಭಯವ ಲಿಂಗೈಕ್ಯವ ಮಾಡಿದೆ. ಚೆನ್ನಮಲ್ಲಿಕಾರ್ಜುನಯ್ಯನೊಳಗೆ ನಾನಳಿದೆನಾಗಿ, ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು ಕಾಣಾ ಸಂಗನಬಸವಣ್ಣಾ.
--------------
ಅಕ್ಕಮಹಾದೇವಿ
ಅಯ್ಯಾ, ನಿಮ್ಮ ಶರಣರ ಬರವಿಂಗೆ ಗುಡಿ ತೋರಣವ ಕಟ್ಟುವೆ. ಅಯ್ಯಾ, ನಿಮ್ಮ ಶರಣರ ಬರವಿಂಗೆ ಮುಡುಹಿನಲ್ಲಿ ಪಟ್ಟವ ಕಟ್ಟುವೆ. ಅಯ್ಯಾ, ನಿಮ್ಮ ಶರಣರೆನ್ನ ಮನೆಗೆ ಬಂದಡೆ, ಅವರ ಶ್ರೀಪಾದವನೆನ್ನ ಹೃದಯದಲ್ಲಿ ಬಗೆದಿಟ್ಟುಕೊಂಬೆ, ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅನುತಾಪದೊಡಲಿಂದೆ ಬಂದ ನೋವನುಂಬವರು ಒಡಲೊ, ಪ್ರಾಣವೊ, ಆರು ಹೇಳಾ ಎನ್ನೊಡಲಿಂಗೆ ನೀನು ಪ್ರಾಣವಾದ ಬಳಿಕ ಎನ್ನ ಒಡಲ ಸುಖ ದುಃಖವಾರ ತಾಗುವುದು ಹೇಳಯ್ಯಾ ? ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ನೊಂದ ನೋವು, ಬೆಂದ ಬೇಗೆ, ನಿಮ್ಮ ತಾಗದೆ ಹೋಹುದೆ ಅಯ್ಯಾ
--------------
ಅಕ್ಕಮಹಾದೇವಿ
ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯಶರಣರ ಪರಿಯನೇನೆಂಬೆನಯ್ಯಾ ಘನವನೊಳಕೊಂಡ ಮನದ ಮಹಾನುಭಾವಿಗಳ ಬಳಿವಿಡಿದು ಬದುಕುವೆನಯ್ಯಾ. ಅಯ್ಯಾ, ನಿನ್ನಲ್ಲಿ ನಿಂದು ಬೇರೊಂದರಿಯದ ಲಿಂಗಸುಖಿಗಳ ಸಂಗದಲ್ಲಿ ದಿನವ ಕಳೆಯಿಸಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅನ್ನವ ನೀಡುವವರಿಂಗೆ ಧಾನ್ಯವೆಸೆವ ಲೋಕ. ಅರ್ಥವ ಕೊಡುವವರಿಂಗೆ ಪಾಷಾಣವೆಸೆವ ಲೋಕ. ಹೆಣ್ಣು ಹೊನ್ನು ಮಣ್ಣು ಮೂರನೂ ಕಣ್ಣಿನಲಿ ನೋಡಿ, ಕಿವಿಯಲಿ ಕೇಳಿ, ಕೈಯಲಿ ಮುಟ್ಟಿ, ಮಾಡುವ ಭಕ್ತಿ ಸಣ್ಣವರ ಸಮಾರಾಧನೆಯಾಯಿತ್ತು. ತನ್ನನಿತ್ತು ತುಷ್ಟಿವಡೆವರನೆನಗೆ ತೋರಾ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಯ್ಯಾ, ನಿಮ್ಮ ಶರಣರ ಕೂಡಿದ ಸುಖವನುಪಮೆಗೆ ತರಬಾರದಯ್ಯಾ. ಅಯ್ಯಾ, ನಿಮ್ಮ ಮಹಂತರ ಕೂಡಿ ಅಗಲುವ ಧಾವತಿಗಿಂತ ಸಾವುದೇ ಕರಲೇಸಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನರುಹಿದ ಮಹಿಮರನಗಲಿ ಆನು ನಿಲ್ಲಲಾರೆನಯ್ಯಾ.
--------------
ಅಕ್ಕಮಹಾದೇವಿ
ಅಕ್ಕಿಯಿಲ್ಲದ ತುಷಕ್ಕೆ ಅಗ್ಗವಣಿಯನೆರೆದಡೆ ಅದೆಂದಿಂಗೆ ಬೆಳೆದು ಫಲವಪ್ಪುದಯ್ಯಾ ಅರಿವಿಲ್ಲದವರಿಗೆ ಆಚಾರವಿದ್ದಡೆ ಅರಕೆಗೆಟ್ಟು ಸುಖವೆಂದಪ್ಪುದಯ್ಯಾ ಹೊರೆದ ಪರಿಮಳ ಸ್ಥಿರವಾಗಬಲ್ಲುದೆ ಎನ್ನದೇವ ಚೆನ್ನಮಲ್ಲಿಕಾರ್ಜುನನನರಿಯದವರಿಗೆ ಆಚಾರವಿಲ್ಲ ಕಾಣಿರಣ್ಣಾ
--------------
ಅಕ್ಕಮಹಾದೇವಿ
ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು. ಮನ, ಲಿಂಗವ ವೇಧಿಸಿ, ಮನ ಲಿಂಗದೊಳಗಾಯಿತ್ತು. ಭಾವ, ಲಿಂಗವ ವೇಧಿಸಿ, ಭಾವ ಲಿಂಗದೊಳಗಾಯಿತ್ತು. ಚೆನ್ನಮಲ್ಲಿಕಾರ್ಜುನಾ, ನಿಮ್ಮ ಒಲುಮೆಯ ಸಂಗದಲ್ಲಿರ್ದು ಸ್ವಯಲಿಂಗವಾಯಿತ್ತು.
--------------
ಅಕ್ಕಮಹಾದೇವಿ

ಇನ್ನಷ್ಟು ...