ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಈ ಪ್ರಕಾರದಲ್ಲಿ ಗುರುವಿನ ಹಸ್ತದಲ್ಲಿ ಹುಟ್ಟಿ ಲಿಂಗದೇಹಿಯೆನಿಸಿಕೊಂಡ ಜ್ಞಾನಿಪುರುಷನು ತನ್ನ ಜ್ಞಾನಸ್ವರೂಪವನರಿಯಬೇಕಯ್ಯ. ಆ ಜ್ಞಾನವೇ ಆರುತೆರನಾಗಿಪ್ಪುದು. ಅವಾವವೆಂದಡೆ: ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗವೆಂದು ಇಂತೀ ಆರುತೆರನಾಗಿಪ್ಪುದು. ಈ ಷಡ್ವಿಧವ್ರತವನರಿದು ಆಚರಿಸುವ ಕ್ರಮವೆಂತುಟಯ್ಯಯೆಂದಡೆ: ಆಧಾರಚಕ್ರಸ್ಥಾನದಲ್ಲಿ ನಾಲ್ಕೆಸಳಕಮಲದ ವ ಶ ಷ ಸಯೆಂಬ ನಾಲ್ಕು ಬೀಜಾಕ್ಷರದ ಪೃಥ್ವಿತತ್ವದ ಕೆಂಪುವರ್ಣದ ನೆಲೆಯನರಿಯಬೇಕಯ್ಯ. ಸ್ವಾಧಿಷಾ*ನಚಕ್ರದಲ್ಲಿ ಆರೆಸಳಕಮಲದ ಬ ಭ ಮ ಯ ರ ಲಯೆಂಬ ಆರು ಬೀಜಾಕ್ಷರ ಯುಕ್ತವಾದ ಅಪ್ಪುತತ್ವದ ನೀಲವರ್ಣದ ನೆಲೆಯನರಿಯಬೇಕಯ್ಯ. ಮಣಿಪೂರಕಚಕ್ರಸ್ಥಾನದಲ್ಲಿ ಹತ್ತೆಸಳಕಮಲದ ಡ ಢ ಣ ತ ಥ ದ ಧ ನ ಪ ಫ ಯೆಂಬ ಹತ್ತು ಬೀಜಾಕ್ಷರ ಸ್ವಾಯತವಾಗಿಪ್ಪ ಅಗ್ನಿತತ್ವದ ಕುಂಕುಮವರ್ಣದ ನೆಲೆಯನರಿಯಬೇಕಯ್ಯ. ಅನಾಹತಚತ್ರಸ್ಥಾನದಲ್ಲಿ ಹನ್ನೆರಡೆಸಳಕಮಲದ ಕ ಖ ಗ ಘ ಙ ಚ ಛ ಜ ರುsು ಞ ಟ ಠಯೆಂಬ ಹನ್ನೆರಡು ಬೀಜಾಕ್ಷರಯುಕ್ತವಾಗಿರ್ಪ ವಾಯುತತ್ವದ ಶ್ವೇತವರ್ಣದ ನೆಲೆಯನರಿಯಬೇಕಯ್ಯ. ವಿಶುದ್ಧಿಚಕ್ರಸ್ಥಾನದಲ್ಲಿ ಹದಿನಾರೆಸಳಕಮಲದ ಅ ಆ ಇ ಈ ಉ ಊ ಋ ಋೂ ಎ ಏ ಐ ಒ ಓ ಔ ಅಂ ಅಃ ಎಂಬ ಹದಿನಾರು ಬೀಜಾಕ್ಷರ ಸ್ವಾಯತವಾಗಿಪ್ಪ ಆಕಾಶತತ್ವದ ಸ್ಫಟಿಕವರ್ಣದ ನೆಲೆಯನರಿಯಬೇಕಯ್ಯ. ಆಜ್ಞಾಚಕ್ರಸ್ಥಾನದಲ್ಲಿ ಎರಡೆಸಳಕಮಲದ ಹಂ ಸ ಯೆಂಬ ಎರಡು ಬೀಜಾಕ್ಷರಯುಕ್ತವಾಗಿಪ್ಪ ಆತ್ಮತತ್ವದ ಮಾಣಿಕ್ಯವರ್ಣದ ನೆಲೆಯನರಿಯಬೇಕಯ್ಯ. ಇವೆಲ್ಲವಕ್ಕೂ ಮೇಲಣತತ್ವವೆನಿಸುವ ಬ್ರಹ್ಮರಂದ್ರದಲ್ಲಿ ಸಾವಿರೆಸಳಕಮಲದ, ಸಾವಿರ ಬೀಜಾಕ್ಷರ ಸರ್ವತೋಮುಖವಾಗಿಪ್ಪ ಭೇದವನರಿಯಬೇಕಯ್ಯ. ಇನ್ನೀ ಚಕ್ರಂಗಳಿಗೆ ಲಿಂಗಸ್ವಾಯತಯುಕ್ತವಾಗಿಪ್ಪ ಭೇದವ ಹೇಳಿಹೆನು: ಆಧಾರಚಕ್ರದ ನಾಲ್ಕೆಸಳಕಮಲದ ಮಧ್ಯದಲ್ಲಿ ಆಚಾರಲಿಂಗವ ಸ್ವಾಯತವ ಮಾಡಿ ಸ್ವಾಧಿಷಾ*ನಚಕ್ರದ ಆರೆಸಳಕಮಲದ ಮಧ್ಯದಲ್ಲಿ ಗುರುಲಿಂಗವ ಮೂರ್ತಿಗೊಳಿಸಿ ಮಣಿಪೂರಕಚಕ್ರದ ಹತ್ತೆಸಳಕಮಲದ ಮಧ್ಯದಲ್ಲಿ ಶಿವಲಿಂಗವ ಸಂಬಂಧಿಸಿ ಅನಾಹತಚಕ್ರದ ಹನ್ನೆರಡೆಸಳಕಮಲದ ಮಧ್ಯದಲ್ಲಿ ಪ್ರಸಾದಲಿಂಗವ ಮೂರ್ತಿಗೊಳಿಸಿ ಆಜ್ಞಾಚಕ್ರದ ಎರಡೆಸಳಕಮಲದ ಮಧ್ಯದಲ್ಲಿ ಮಹಾಲಿಂಗವ ನೆಲೆಗೊಳಿಸಿ ಪ್ರಾಣದಲ್ಲಿ ಆಚಾರಲಿಂಗವ ಸಂಬಂಧಿಸಿ ಜಿಹ್ವೆಯಲ್ಲಿ ಗುರುಲಿಂಗವ ಸ್ವಾಯತವಮಾಡಿ ನೇತ್ರದಲ್ಲಿ ಶಿವಲಿಂಗವ ಮೂರ್ತಿಗೊಳಿಸಿ ತ್ವಕ್ಕಿನಲ್ಲಿ ಜಂಗಮಲಿಂಗವ ನೆಲೆಗೊಳಿಸಿ ಶ್ರೋತ್ರದಲ್ಲಿ ಪ್ರಸಾದಲಿಂಗವ ಸಂಬಂಧಿಸಿ ಭಾವದಲ್ಲಿ ಮಹಾಲಿಂಗವ ನೆಲೆಗೊಳಿಸಿ ಬ್ರಹ್ಮರಂಧ್ರದಲ್ಲಿರ್ಪ ಪರಿಪೂರ್ಣಲಿಂಗವು ಸರ್ವಾಂಗದಲ್ಲಿಯು ಸ್ವಾಯತವಾಗಲು ಅಂಗಸಂಗಗಳೆಲ್ಲವು ಲಿಂಗಸಂಗಗಳಾಗಿ ಲಿಂಗ ದೃಕ್ಕೇ ನಿರಂತರ ಪ್ರಕಾಶಿಸುತಿಪ್ಪುದಯ್ಯ. ಲಿಂಗಪ್ರಭೆಯೊಳಗೆ ಶಿವಶಿವಾಯೆನುತಿರ್ದೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಈಶ! ನಿಮ್ಮ ಪೂಜಿಸಿದ ಬಳಿಕ ಅನ್ಯ ದೈವಂಗಳಿಗೆ ಹೇಸಲೇ ಬೇಕು. ಹೇಸದೆ ಅನ್ಯದೈವಕ್ಕೆ ಆಸೆ ಮಾಡಿದಡೆ ಅವ ನಮ್ಮ ಈಶ್ವರಂಗೆ ಹೊರಗು. ದೋಷರಹಿತ ಭಕ್ತರು ಅವಂಗೆ ಕುಲವೆಂದು ಕೂಸ ಕೊಟ್ಟು ಕೂಡುಂಡಡೆ ಮೀಸಲ ಬೋನವ ನಾಯಿ ಮುಟ್ಟಿದಂತೆ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಈರಾರುಮಣಿಯ ಲೆಕ್ಕಕ್ಕೆ ನಿಲುಕದು. ಮೂರಾರು ವೇಳೆಯಲ್ಲಿ ಮುಳುಗಿದರೆ ನಿಲುಕದು. ಒಂ¨ತ್ತು ಬಾಗಿಲವನಿಕ್ಕಿ ಕಣ್ಣುಮುಚ್ಚಿದಡೆ ನಿಲುಕದು. ಎರಡು ಮೂರುಳ್ಳನ್ನಕ್ಕ ನಿಲುಕದು. ಇಂತಲ್ಲದೆ ತಾನಳಿದು ನೀನೆಂಬುದ ಮರೆದವರಿಗೆ ನಿಲುಕುವುದು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಈ ವಿದ್ಯಾಂಗ ನಿರೂಪಣಾನಂತರದಲ್ಲಿ ಶಕ್ತ್ಯಂಗಮಂ ಪೇಳ್ವೆನೆಂತೆನೆ- ಆಧಾರ ಸಂಜ್ಞಿತವಾದ ಸಕಾರಂ ಶಕ್ತಿ ಬೀಜವಾದಕಾರವೇ ಸ್ತ್ರೀತ್ವವಿಷಯವಾಗಿಯಾಕಾರಮಾಗಲದರೊಡನೆ ನಾದ ಬಿಂದು ಸಂಜ್ಞಿತವಾದ ಸೊನ್ನೆ ಬಂದು ಕೂಡಲದು ಸಾಂ ಎಂಬ ಪ್ರಥಮ ಶಕ್ತಿಬೀಜವೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗ ಕಾರುಣ್ಯಸಾಗರಾಪಾಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಈಶ್ವರ ಲೀಲಾಮೂತಿಯಾಗಿ ಏಕಾದಶ ರುದ್ರಮೂರ್ತಿಯ ಭಾವಿಸುವಲ್ಲಿ ವಾದರುದ್ರನ ಕಳುಹಿದ ಬಿಜ್ಜಳನೆಂಬ ನಾಮವ ಕೊಟ್ಟು, ಕಾಲರುದ್ರನ ಕಳುಹಿದ ಭಕ್ತಿನಾಮವ ಕೊಟ್ಟು ಬಸವೇಶ್ವರನ, ಮಾಯಾಕೋಳಾಹಳನೆಂಬ ರುದ್ರನ ಕಳುಹಿದ ಪ್ರಭುನಾಮವ ಕೊಟ್ಟು, ಮತ್ಸರವೆಂಬ ನಾಮ ಗುಪ್ತಗಣೇಶ್ವರನೆಂಬ ನಾಮವ ತಾಳ್ದು ಬಪ್ಪುದಕ್ಕೆ ಮುನ್ನವೇ ಐಕ್ಯ. ಪ್ರಮಥರುಗಳು ಪ್ರಕಟವ ಮಾಡಲಿಕ್ಕೆ ಬಂದಿತ್ತು. ಎನಗೆ ಮತ್ರ್ಯದ ಭವ. ಭವ ಬಸವನಿಂದ ಹರಿವುದು. ನಾ ಬಿತ್ತಿದ ಬೆಳೆಯೆನಗೆ ಫಲಭೋಗವನಿತ್ತು ಎನ್ನ ಅವತಾರಭಕ್ತಿ ಇನ್ನೆಂದು ಮೀರವಪ್ಪುದು, ಅಚ್ಚುತಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಈರೇಳು ಭವನ ಹದಿನಾಲ್ಕು ಲೋಕಕ್ಕೆ ಶ್ರೀ ಮಹಾ ಸಾಂಬಶಿವನೇ ಘನವೆಂದು ನಾಲ್ಕು ವೇದಗಳು ಸಾರುತಿರ್ದವು. ಅಂತಪ್ಪ ಸಾಂಬಶಿವನು ತನ್ನ ಭಕ್ತನ ಏನೆನುತಿರ್ದನಯ್ಯಾ ? 'ಭಕ್ತಂ ಮಹೇಶಗಿನ್ನಧಿಕ', 'ನನಗಿಂತಾ ನನ್ನ ಭಕ್ತನೇ ದೊಡ್ಡವನೆ'ಂದು ಸಾಂಬಶಿವನು ಹೇಳುತ್ತಿಹನು. 'ಭಕ್ತಂ ಮಹೇಶಗಿನ್ನಧಿಕ'ವೆಂಬ ನಾಮಾಂಕಿತ ಎಂತಪ್ಪ ಭಕ್ತಂಗೆ ಸಲುವದೆಂದರೆ : ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಇಂತೀ ಆರು ಗುಣಂಗಳಳಿದು, ಅಷ್ಟಮದಂಗಳ ತುಳಿದು, ತ್ರಿವಿಧ ಪದಾರ್ಥವನ್ನು ತ್ರೈಮೂರ್ತಿಗಳಿಗೆ ಕೊಟ್ಟು, ಇಷ್ಟಲಿಂಗನಿಷಾ*ಪರರಾಗಿ, ಜಂಗಮವೇ ಮತ್ಪ್ರಾಣವೆಂದು ನಂಬಿ, ಪೂಜಿಸುವ ಸದ್ಭಕ್ತಂಗೆ 'ಭಕ್ತಂ ಮಹೇಶಗಿನ್ನಧಿಕ'ವೆಂಬ ನಾಮಾಂಕಿತ ಸಲುವದು. ಬರಿದೆ ಡಂಬಾಚಾರಕ್ಕೆ ಪ್ರಾತಃಕಾಲಕ್ಕೆ ಎದ್ದು, ಮೇಕೆ ಹೋತಿನ ಬಂಧುಗಳಾಗಿ ಆಡಿನ ಬೀಗಪ್ಪಗಳಾಗಿ ಪತ್ರೆಗಿಡಕೆ ಹಿಡಿಯ ತೊಪ್ಪಲನ ತೆರಕೊಂಡು ಬಂದು ಲಿಂಗದ ಮಸ್ತಕದ ಮೇಲೆ ಇಟ್ಟು, ಮಧ್ಯಾಹ್ನ ಕಾಲದಲ್ಲಿ ಒಂದು ಶಿವಜಂಗಮಮೂರ್ತಿ ಹಸಿದು ಬಂದು 'ಭಿಕ್ಷಾಂದೇಹಿ' ಎಂದರೆ 'ಅಯ್ಯ ಕೈಯಿ ಅನುವು ಆಗಿಯಿಲ್ಲ', 'ಮನೆಯಲ್ಲಿ ಹಿರಿಯರು ಇಲ್ಲ', 'ಮುಂದಲಮನೆಗೆ ದಯಮಾಡಿರಿ' ಎಂಬ ಹಂದಿಮುಂಡೇಮಕ್ಕಳಿಗೆ 'ಭಕ್ತಂ ಮಹೇಶನಿಂದಧಿಕ'ವೆಂಬ ನಾಮಾಂಕಿತ ಸಲ್ಲದೆಂದಾತನಾರು ? ನಮ್ಮ ಕೂಡಲಾದಿ ಚನ್ನಸಂಗಮದೇವ.
--------------
ಕೂಡಲಸಂಗಮೇಶ್ವರ
ಈ ಕೈಯಲೆ ಸುಖವು, ಈ ಕೈಯಲೆ ದುಃಖವು. ಏಕಯ್ಯಾ, ನೀ ನಮ್ಮ ಬರಿದೆ ಬಳಲಿಸುವೆ ನಾನಾರ ಸೇರುವೆನಯ್ಯಾ ಆರೂ ಇಲ್ಲದ ದೇಸಿಗ ನಾನು, ಕೂಡಲಸಂಗಮದೇವಾ.
--------------
ಬಸವಣ್ಣ
ಈಶ್ವರಗಂಗೆ ಗುಹೇಶ್ವರದೇವರು ಹೇಳುತಿರ್ದ, ಸಾಕ್ಷಿ : ಶ್ಲೋಕ-ಏಕವೃಕ್ಷ ತವೇವರ್ಣಥೌ ನವೇಫಲ ಸೇವಿತಂ | ಮುಖ ಪದ್ಮದೃಷ್ಟಂ ದೇವ ಸರ್ವಪಾಪಂ ವಿನಶ್ಯತಿ (?) || ಇನ್ನು ಈಶ್ವರ ಲಿಂಗಾರ್ಪಿತವಂ ಮಾಡಬೇಕೆಂದು ಕೇಳಲು ಹೇಳಿದ ಪ್ರಸ್ತಾವದ ವಚನ : ಷಡುವರ್ಗವೆಂಬ ಸಮ್ಮಾರ್ಜನೆಯಂ ಮಾಡಿ, ಅಷ್ಟಮದಂಗಳ ಹಿಟ್ಟುಗುಟ್ಟಿ ರಂಗವಾಲಿಯನಿಕ್ಕಿ, ಸಪ್ತವ್ಯಸಗಳೆಂಬ ಉಪಕರಣಂಗಳ ಲಿಂಗಸೋಹಕ್ಕೆ ತಂದು, ತನುವೆಂಬ ಅಟ್ಟಣೆಯಲ್ಲಿ ಮನವೆಂಬ ಹಸ್ತದಿಂದ ಮಜ್ಜನಕ್ಕೆರೆದು ಮೂಲಗುಂಡಿಗೆಯೊಳಗಣ ಜ್ಯೋತಿಯನೆಬ್ಬಿಸಿ ಸಗುಣವೆಂಬ ಶ್ರೀಗÀಂಧವನಿಟ್ಟು, ಪ್ರಣಮಮೂಲವೆಂಬ ಅಕ್ಷತೆಯ ಧರಿಸಿ ಅಷ್ಟದಳದಲ್ಲಿ ಪೂಜೆಯ ಮಾಡಿ, ಸುಖಸದ್ವ್ಯಸನವೆಂಬ ಧೂಪವನ್ನು ಅಳವಡಿಸಿ ಪಂಚತತ್ವಗಳೆಂಬ ಪಂಚಾರತಿಯ ಬೆಳಗಿ ಸುಷುಮ್ನವೆಂಬ ಹರಿವಾಣದಲ್ಲಿ ಪರಮಭೋಜನವೆಂಬ ಬೋನವಂ ಗಡಣಿಸಿ, ಸರ್ವಶುದ್ಧವೆಂಬ ತುಪ್ಪವಂ ನೀಡಿ, ನಿರ್ಮಳಾತ್ಮಕವೆಂಬ ಬೆಳ್ಳಿಯ ನಿರ್ಮಿಸಿ, ಶುಚಿರ್ಭೂತವೆಂಬ ಹಸ್ತದಲ್ಲಿ ಮಹಾಲಿಂಗಕ್ಕೆ ನೈವೇದ್ಯವಂ ಕೊಟ್ಟು ಅರಿವು ಮರವೆಂಬ ಅಡಕೆಯನೊಡದು, ಶತಶಾಂತವೆಂಬ ಎಲೆಯಂ ಕೊಯಿದು, ನಿರ್ಗುಣವೆಂಬ ಸುಣ್ಣವಂ ನೀಡಿ, ಲಿಂಗಾರ್ಪಿತವಂ ಮಾಡಿ, ಪ್ರಸಾದವ ಸವಿವ ಲಿಂಗಾರ್ಚಕರ ಚರಣವ ತೋರಿ ಎನ್ನ ಸಲಹಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಈರೈದು ಸೀಮೆಯಿಂದಾರಯ್ಯ ಬಂದಾರೆ, ಓರಂತೆ ಅವರುವನು ನೀನೆಂಬೆನು; ಕಾರುಣ್ಯಕರ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಅವರ ದ್ವಾರಕಿಂಕರನಾಗಿಯಾನಿಪ್ಪೆನು.
--------------
ಸಿದ್ಧರಾಮೇಶ್ವರ
ಈಡಾ ಪಿಂಗಳೆಯಲ್ಲಿ ತುಂಬಿ ಸೂಸುವ ಹಂಸರೂಪವಾದ ಪ್ರಕೃತಿಪ್ರಾಣವಾಯುವನು ಸೋಹಂಭಾವದಿಂದೆ ವೈಕೃತಪ್ರಾಣನಂ ಮಾಡಿ ಧ್ಯಾನಮೂರ್ತಿಯಲಾದಡೂ ಪ್ರಾಣಾತ್ಮಕವಾದ ಸುನಾದದಲಾದಡೂ ಲಕ್ಷ್ಯಂಗಳಲಾದಡೂ ಮನೋಮಾರುತಂಗಳೊಳಗೂಡಿ ಲಯಿಸುವುದೆ ಲಯಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಈಶನ ಶರಣರು ವೇಶಿಯ ಹೋದಡೆ ಮೀಸಲೋಗರವ ಹೊರಗಿರಿಸಿದಡೆ ಹಂದಿ ಮೂಸಿ ನೋಡಿದಂತೆ ರಾಮನಾಥ.
--------------
ಜೇಡರ ದಾಸಿಮಯ್ಯ
ಈ ಆಸೆಯೆಂಬವಳು ನೋಡಾ ಜಲ ಸಮುದ್ರಂಗಳಂ ಕಟ್ಟಿಸುವಳು, ಕ್ಷಣ ಬೇಗ ಮೂಷೆಗಳಂ ಮಾಡಿ ರಸಂಗಳಂ ಪಡೆವಳು. ಈ ಆಸೆಯೆಂಬವಳಿಂದವೆ ನಿಮ್ಮೆಡೆಗಾಣದಿಪ್ಪೆನು. ಈ ಆಸೆಯೆಂಬವಳನೆಂದಿಂಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದೆಂದಿನೊ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಈಶನಿಂದತ್ತ ಹಿರಿಯರಿಲ್ಲ, ಆಸೆಯಿಂದತ್ತ ಕಿರಿಯರಿಲ್ಲ. ದೆಸೆಯಿಂದತ್ತ ದಿಕ್ಕಿಲ್ಲ, ಜಪದಿಂದತ್ತ ಪುಣ್ಯವಿಲ್ಲ. ಸಚರಾಚರದೊಡೆಯ ಸಕಳೇಶ್ವರದೇವ, ವಿಚಾರದಿಂದತ್ತ ಸಹಾಯವಿಲ
--------------
ಸಕಳೇಶ ಮಾದರಸ
ಈ ಹಠಯೋಗಕ್ಕೆ ನಿಜದಂಗವಾಗಿರ್ಪ ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಗಳೆಂಬ ಅಷ್ಟಾಂಗಯೋಗದೊಳಗೆ ಮೊದಲು ಯಮಯೋಗದ ಲಕ್ಷಣವೆಂತೆಂದೊಡೆ : ಪರಸ್ತ್ರೀಯರ ಸಂಗವಿರಹಿತವಾಗಿಹುದು. ಪರದ್ರವ್ಯವನಪಹರಿಸದಿಹುದು. ಪರಹಿಂಸೆಯ ಮಾಡದಿಹುದು. ದುಃಖಿತರಿಗೆ ಹಿತವ ಚಿಂತಿಸುವುದು. ಶೋಕಭೀತಿಗಳಿಲ್ಲದಿಹುದು, ಅಲ್ಪಾಹಾರಿಯಾಗಿಹುದು. ಕುಟಿಲತೆಯಿಲ್ಲದಿಹುದು, ಕಾರ್ಪಣ್ಯವಿಲ್ಲದಿಹುದು. ಸತ್ಯವಚನವ ನುಡಿವುದು. ಜಲಸ್ನಾನ ಭಸ್ಮಸ್ನಾನಾದಿಗಳನಾಚರಿಸುವುದು. ಯಮಯೋಗವೆನಿಸುವುದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಈ ಷಡ್ವಿಧದಿಂದವೆ ಅನೇಕ ವೇದಂಗಳೆಸಗಿತ್ತು. ಈ ಷಡ್ವಿಧದಿಂದವೆ ಅನೇಕ ಶಾಸ್ತ್ರಂಗಳೆಸಗಿತ್ತು. ಈ ಷಡ್ವಿಧದಿಂದವೆ ಅನೇಕ ಪುರಾಣಂಗಳೆಸಗಿತ್ತು. ಈ ಷಡ್ವಿಧದಿಂದವೆ ಅನೇಕಾಗಮಂಗಳೆಸಗಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ

ಇನ್ನಷ್ಟು ...
-->