ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಒಡಲ ಕಳವಳಕ್ಕೆ, ಬಾಯ ಸವಿಗೆ, ಬಯಸಿ ಉಂಡೆನಾದಡೆ ನಿಮ್ಮ ತೊತ್ತಿನ ಮಗನಲ್ಲ. ಬೇಡೆ, ಬೇಡೆ, ನಿಮ್ಮ ನಂಬಿದ ಸದ್ಭಕ್ತರ. ಅವರೊಕ್ಕುದನುಂಬೆನೆಂದಂತೆ ನಡೆವೆ. ಎನ್ನೊಡೆಯ ಕೂಡಲಸಂಗಮದೇವನೊಲ್ಲದವರ ಹಿಡಿದೆನಾದಡೆ ನಿಮ್ಮ ಪಾದದಾಣೆ.
--------------
ಬಸವಣ್ಣ
ಒಲ್ಲೆನಯ್ಯಾ, ಒಲ್ಲೆನಯ್ಯಾ, ನಿಮ್ಮವರಲ್ಲದವರ, ಒಲ್ಲೆನಯ್ಯಾ, ಒಲ್ಲೆನಯ್ಯಾ, ಜಗವೆಲ್ಲರಿಯಲು, ಒಲ್ಲೆನಯ್ಯಾ, ಒಲ್ಲೆನಯ್ಯಾ, ನೀ ಮುನಿದಡೆ ಮುನಿ. ಕೂಡಲಸಂಗಮದೇವಾ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
--------------
ಬಸವಣ್ಣ
ಒಳಗಣ ಕಲ್ಲು, ಮೇಲಣ ಮರ, ನಡುವಣ ಮಣ್ಣು, ಹೊಡೆವವನಂಗ ಹದನರಿದಡೆ ಕುಂಭ. ಇಂತೀ ಮೂವರೆದೆಯನರಿ, ಆಮಳ ಸಂದಿಗೆ ಒಡಗೂಡದಿರು. ಸಾಕು ಬಿಡು, ತೂತಿನ ಹಾದಿಯ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಒಂದು ಪದದೊಳಗೆ ಎರಡೆಂಬತ್ತೆಂಟುಕೋಟಿ ಪದ ಹುಟ್ಟಿದವು ನೋಡಾ. ಆ ಎರಡೆಂಬತ್ತೆಂಟು ಕೋಟಿ ಪದದೊಳಗೆ ಅನೇಕ ಕಾಲುಗಳು ಹುಟ್ಟಿದವು ನೋಡಾ. ಆ ಅನೇಕ ಕಾಲುಗಳ ಮುರಿದು, ಎರಡೆಂಬತ್ತುಕೋಟಿ ಪದಗಳನಳಿದು, ಒಂದೆ ಪದದಲಿ ನಿಲಬಲ್ಲರೆ ಆತನು ಪರಶಿವ ಪದಸ್ಥನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೊ? ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೆ ಭಂಗ. ಭಾವಿಸುವ ಭಾವನೆಗಿಂದ ಸಾವು[ದೆ]ಲೇಸು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಬ್ಬ ಸಹಜಗಳ್ಳನು ನಿಟಿಲಮುಂದಳ ಚಾವಡಿಯಲ್ಲಿ ನಿಂದು ರಾಜಿಸುತಿಪ್ಪನು ನೋಡಾ! ಆ ಕಳ್ಳನ ಹೆಜ್ಜೆಯ ಒಬ್ಬ ತಳವಾರ ಎತ್ತಿ ನೋಡಲು ಹೆಜ್ಜೆ ಹೋದವು. ಅಂಗಲಿಂಗಸಂಗಸಮರಸವೆಂಬ ಲಿಂಗದ ಗುಡಿಯಲ್ಲಿ ಅಡಗಿಪ್ಪವಯ್ಯ. ಆ ತಳವಾರನು ಹೆಜ್ಜೆಯನೆತ್ತಿ ಆ ಕಳ್ಳನ ಹೆಜ್ಜೆಯ ಹಿಡಿದ ಭೇದವ ನಿಮ್ಮ ಶರಣರೆ ಬಲ್ಲರಲ್ಲದೆ ಉಳಿದವರೆತ್ತ ಬಲ್ಲರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಡೆಯರ ಕಂಡಡೆ ಕಳ್ಳನಾಗದಿರಾ, ಮನವೆ. ಭವದ ಬಾರಿಯ ತಪ್ಪಿಸಿಕೊಂಬಡೆ ನೀನು ನಿಯತನಾಗಿ, ಭಯಭರಿತನಾಗಿ, ಅಹಂಕಾರಿಯಾಗದೆ ಶರಣೆನ್ನು, ಮನವೆ. ಕೂಡಲಸಂಗನ ಶರಣರಲ್ಲಿ ಭಕ್ತಿಯ ನೋನುವಡೆ ಕಿಂಕಿಲನಾಗಿ ಬದುಕು, ಮನವೆ. 275
--------------
ಬಸವಣ್ಣ
ಒಂದು ಮಣಿಪರೀಕ್ಷೆಗೆ ಮೂವತ್ತಾರು ಮಣಿ ನೋಡಿದೆನಯ್ಯಾ. ಮೂವತ್ತಾರು ಮಣಿ ಕೂಡಿ ಒಂದು ಮಣಿ ಪರೀಕ್ಷಿಸಿದಡೆ, ಮೂವತ್ತಾರು ಮಣಿ ಇಲ್ಲ ನೋಡಯ್ಯಾ. ಪರೀಕ್ಷೆಯಾಗದಿರೆ, ಆ ಮಣಿಗಳು ಮಣಿಮಣಿಗೆ ಸೇರ್ಪಡೆಯಾದವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಒಣಗಿದ ಮರವದು ಭೂಮಿಯಲ್ಲೇ ಲೀನ ನೋಡಾ, ಒಣಗದ ಮರವದು ಭೂಮಿಯಲ್ಲೇ ಲೀನ ನೋಡಾ, ತಿಳಿದ ಯೋಗಿಯ ಲಯವಿಲ್ಲೆ! ಸ್ವರ್ಗಕ್ಕೆ ಹೋದೆಹೆನೆಂಬುದು ಗೊಡ್ಡು-ಹುಸಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಒಕ್ಕುದು ಪ್ರಸಾದವೆಂಬರು, ಮಿಕ್ಕುದು ಪ್ರಸಾದವೆಂಬರು ಒಕ್ಕುದು ಮಿಕ್ಕುದನೆಲ್ಲ ಬೆಕ್ಕು ಕೊಳ್ಳದೆ ? ಒಕ್ಕುಮಿಕ್ಕು ಹೋಗುವ ಪಂಚಸಕೀಲವ ಬಲ್ಲಡೆ ಗುಹೇಶ್ವರಲಿಂಗದಲ್ಲಿ ಆತನೆ ಪ್ರಸಾದಿ
--------------
ಅಲ್ಲಮಪ್ರಭುದೇವರು
ಒಬ್ಬರುತ್ತಮರೆಂಬರು. ಒಬ್ಬರು ಕನಿಷ್ಠರೆಂಬರು. ಒಬ್ಬರು ಅಧಮರೆಂಬರು. ಒಬ್ಬರು ಕಷ್ಟನಿಷ್ಠೂರಿಯೆಂಬರು. ಅಂದರದಕೇನು ಯೋಗ್ಯ? ವಿನಯಕಂಪಿತ ಪರಮಾರ್ಥಕ್ಕೂ ಲೌಕಿಕಕ್ಕೂ ವಿರುದ್ಭ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಒಡಲಾಸೆಗೆ ಅನ್ಯರ ಸೇವೆಯ ಮಾಡುವ ಕಡುಪಾಪಿಮನವೆ ಕೇಳು. ದದ್ಥಿಯ ಮಥನವ ಮಾಡೆ ಪಂಚಾಮೃತವ ಕೊಡುವುದಲ್ಲದೆ, ಉದಕವ ಕಡೆಯಲೇನ ಕೊಡದ ತೆರದಲ್ಲಿ ಅನ್ಯರನಾಸೆಗೈದರೆ- ಪರುಷ ಮನೆಯೊಳಿರೆ ಪರರ ಹಣವ ಬೇಡಿ ಚಾಲಿವರಿವ ಮರುಳುಮಾನವನಂತೆ, ವರ ಅಮೃತಬಾವಿ ಗೃಹದೊಳಿರೆ ಸವುಳು ನೀರಿಂಗೆ ಚಾಲಿವರಿವ ಹೆಡ್ಡಮನುಜನಂತೆ, ಸರ್ವರ ಮನ ಧರ್ಮ ಕರ್ಮವನರಿವ ಪರಮಾತ್ಮ ನಿನ್ನ ಅಂಗೈಕರದೊಳಿರೆ ಪರರಾಸೆಗೈಯದಿರು, ಆಸೆಗೈಯದಿರು. ಆಸೆಗೈ ಆಸೆಗೈ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವನಾಸೆಗೈದರೆ ನಿನಗೆ ಮುಕ್ತಿಯುಂಟು ಕೇಳಲೆ ಮನುಜ.
--------------
ಹೇಮಗಲ್ಲ ಹಂಪ
ಒಡೆಯರು ದೇವರಿಗೆ ಕೊಟ್ಟಲ್ಲದೆ, ಕೊಳ್ಳೆನೆಂಬ ಮೃಡನ ಭಕ್ತರ ನೋಡಾ. ಒಡೆಯರಿಗೊಂದು ಪರಿ, ತನಗೊಂದು ಪರಿ ಮಾಡುವ ಸಡಗರವ ನೋಡಾ. ಒಡೆಯಂಗೆ ಭೆಟ್ಟಿ, ಮನೆಯೊಡಯಂಗೆ ತುಪ್ಪ ಕಟ್ಟು ಮೊಸರು ಮೃಷ್ಟಾನ್ನ. ಒಡೆಯರಿಗೆ ಕುರುಹ ತೋರಿ, ತಾ ಹಿರಿದಾಗಿ ಉಂಬ ಕಡುಗಲಿಯ ನೋಡಾ. ಇವರಡಿಯಲ್ಲಿ ಬಂದಡೆ, ಇವರನೊಡಗೂಡಿ ನುಡಿದೆನಾದಡೆ, ಜೇನಗಡಿಗೆಯಲ್ಲಿ ಬಿದ್ದ ಗುದಿಮಕ್ಷಿಕನಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಂದ ಮಾಡಹೋದಡೆ ಮತ್ತೊಂದಾಯಿತ್ತೆಂಬುದು, ಎನಗಾಯಿತ್ತು ನೋಡಾ ಬಸವಣ್ಣಾ ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ ನಿನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ನಿನ್ನ ಪೂರ್ವಾಪರಸಂಗವ ಮಾಡಬಂದಡೆ ಎನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ಮಹಾಜ್ಞಾನಿಗಳ ಸಂಗದಿಂದ ಉಭಯ ಸಂಗಸಿದ್ಧಿಯೆಂಬುದು ದಿಟವಾಯಿತ್ತು ನೋಡಾ ಬಸವಣ್ಣಾ. ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಒಳಗಿನ ಮಾಟ ಸಿಕ್ಕಲರಿಯದಿರ್ದಡೆ ಹೊರಗೆ ಕಾಣಿಸುವ ತನು, ತನುವಿಡಿದ ಮನ, ಮನವಿಡಿದ ಭಾವ, ಈ ತ್ರಿವಿಧದಿಂದೆ ನಿರ್ವಂಚಕನಾಗಿ ಷಟ್ಕ್ರಿಯಾವ್ಯಾಪಾರವನೈಯ್ದಿ ಷಟ್‍ಸ್ಥಲಗತಿಮತಿಯಿಂದೆ ಗುರುಲಿಂಗಾಚಾರಭಕ್ತಿಯ ಮಾಡಿ ಸುಖಿಸಿ ಸುಖಮಯನಾದ ಸತ್ಯಭಕ್ತನೇ ಭಕ್ತನಲ್ಲದೆ ಉಳಿದವೆಲ್ಲ ಒಡಲುಪಾದ್ಥಿ. ಈ ನಿಲುವಿಗೆ ನಡೆಗಡಿಯದು ಬಂಧನವಗಲದು ಬಯಲಗಾಣದು ತ್ರಿವಿಧ ವಾಕ್ಯದಲ್ಲರಿದು ನೋಡು ನೀನಾಗಬಲ್ಲರೆ ಗುರುನಿರಂಜನ ಚನ್ನಬಸವಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...
-->