ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ರಣದಲ್ಲಿ ಧನು ಮುರಿದ ಮತ್ತೆ, ಸರವೇನ ಮಾಡುವುದು ? ಅಂಗ ಲಿಂಗವ ಮರೆದಲ್ಲಿ, ಅರಿವುದಕ್ಕೆ ಆಶ್ರಯ ಇನ್ನಾವುದು ಹೇಳಿರಣ್ಣಾ ? ಅರಿವಿಂಗೆ ಕುರುಹು, ಅರಿವು ಕುರುಹಿನಲ್ಲಿ ನಿಂದು, ಕಾಷ್ಠದಿಂದೊದಗಿದ ಅಗ್ನಿ ಕಾಷ್ಠವ ಸುಟ್ಟು, ತನಗಾಶ್ರಯವಿಲ್ಲದಂತಾಯಿತ್ತು. ಹಾಗಾಗಬೇಕು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ರುಚ್ಯರ್ಪಿತ ಪ್ರಸಾದಸ್ತು ಸ್ಪರ್ಶನಂ ಸುಖಮರ್ಪಿತಂ ಉಭಯಾರ್ಪಿತ ವಿಹೀನಂ ಚ ಪೂಜನಂ ನಿಷ್ಫಲಂ ಭವೇತ್ ಇಂತೆಂಬ ಶ್ರುತಿಯನೊಲ್ಲೆ. ರುಚಿಯ ಬಲ್ಲನೆ ಪ್ರಸಾದಿ ತಾ ಲಿಂಗಭೋಗೋಪಭೋಗಿಯಾಗಿ ? ಸುಖವ ಬಲ್ಲನೆ ಭಕ್ತ ತಾ ಜಂಗಮಭೋಗೋಪಭೋಗಿಯಾಗಿ ? ರುಚಿಯನರ್ಪಿಸುವಾತ ಪ್ರಸಾದಿಯಲ್ಲ, [ಸುಖವ]ನರ್ಪಿಸುವಾತ ಭಕ್ತನಲ್ಲ, ಇದನರಿದ ಶರಣಂಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ರಿಪುಗಳ ಕಾಳಗ ಕೊಳುಗುಳದನುಭಾವ ಅತಿಶಯದ ಬಾಣ ತಾಗಿದುದಕೆ ಹೋಗಿ ನಿಂದ ಮುಮ್ಮರಿಯಂತೆ ಜಗಕ್ಕೆಲ್ಲಾ ಕನ್ನಡಿಗೆ ನೋಡಾ! ಮಹಾಲಿಂಗ ಗಜೇಶ್ವರನ ಅರಿಯನೆ ಬಲ್ಲ ಕನ್ನಡಿಗೆ ಮರದೊಡಕು.
--------------
ಗಜೇಶ ಮಸಣಯ್ಯ
ರಾಜ್ಯ ಹೋದಲ್ಲಿ ರಾಯತನ ಉಂಟೆ? ಪೂಜೆ ಅಡಗಿದಲ್ಲಿ ಪುಣ್ಯದ ಹಂಗುಂಟೆ? ಮಾಟಕೂಟ ನಷ್ಟವಾದಲ್ಲಿ ಮಹಾಮನೆಯ ಎಡೆಯಾಟವುಂಟೆ? ಸಟ್ಟೆಯನೊಪ್ಪಿಸಿದವಂಗೆ ಮತ್ತೆ ಒಪ್ಪದ ಚೀಟುಂಟೆ? ಭಕ್ತನಾಗಿ ಮಾಡಿ ಕಂಡೆ, ಭೃತ್ಯನಾಗಿ ಕಾಯಿದು ಕಂಡೆ ಮತ್ತೆ ನೀ ನೀವೊಪ್ಪಿ ಕೊಟ್ಟಿರಿ. ಎನ್ನಂಗದಲ್ಲಿ ಮತ್ರ್ಯರೂಪನ ರೂಪ ನಿಮಗೆ ಒಪ್ಪಿಸಿದೆಯೆಂಬುದಕ್ಕೆ ಮೊದಲೇ ಬಚ್ಚಬಯಲಾಯಿತ್ತು. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ರುದ್ರ ದೈವವಾದಡೆ ಕಪಾಲವ ಹೊತ್ತು ತಿರುಗಲೇಕೆ? ವಿಷ್ಣು ದೈವವಾದಡೆ ದಶಾವತಾರಕ್ಕೊಳಗಾಗಲೇಕೆ? ಬ್ರಹ್ಮ ದೈವವಾದಡೆ ಶಿರವ ಹೋಗಾಡಲೇಕೆ? ಇಂತೀ ಮೂರು ಅಳಿವಿಂಗೊಳಗು. ಅನಾದಿ ಚಿಚ್ಛಕ್ತಿಯ ಅಂಶೀಭೂತ ಮಾಯಿಕ ಸಂಬಂಧ ದೇಹಿಕರು; ಅವತಾರಮೂರ್ತಿಗಳಾದ ರಣಜಗದ ದೈವಂಗಳಿವರು. ಇವರ ಭೇದ ದರ್ಪಣದ ಒಳ ಹೊರಗಿನಂತಪ್ಪ ಭೇದ. ನಿಶ್ಚಯವಂತರು ತಿಳಿದು ನೋಡಿರಣ್ಣಾ, ತಿಳಿದಡೆ ಇರವು ಉದಕದೊಳಗಣ ವಿಕಾರದಂತೆ ಬಯಲೊಳಗಣ ಮರೀಚಿಯಂತೆ ಹಿಂಗದ ವಸ್ತು ನಾರಾಯಣಪ್ರಿಯ ರಾಮನಾಥನಲ್ಲಿ ಗುಣವಿರಹಿತ ಶರಣಂಗೆ.
--------------
ಗುಪ್ತ ಮಂಚಣ್ಣ
ರೂಪಿಂಗೆ ಬಂದು ನಿಂದುದು ಮಾತಿಂಗೆ ಒಡಲಾಯಿತ್ತು. ಮಾತಿಂಗೆ ವೇಧಿಸಿದ ಮನ ರಾಟಾಳದ ಕುಂಭದಂತೆ. ಅದ ನೇತಿಗಳೆದು ನಿಂದಲ್ಲಿ ಗುಹೇಶ್ವರಲಿಂಗ ತಾನೆ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ರುದ್ಥಿರದಲ್ಲಿ ಆಚಾರಲಿಂಗವಿಹುದು. ಮಾಂಸದಲ್ಲಿ ಗುರುಲಿಂಗವಿಹುದು. ಮೇದಸ್ಸಿನಲ್ಲಿ ಶಿವಲಿಂಗವಿಹುದು. ಅಸ್ಥಿಯಲ್ಲಿ ಚರಲಿಂಗವಿಹುದು. ಮಜ್ಜೆಯಲ್ಲಿ ಪ್ರಸಾದಲಿಂಗವಿಹುದು. ಶುಕ್ಲದಲ್ಲಿ ಮಹಾಲಿಂಗವಿಹುದು ನೋಡಾ. ಇದಕ್ಕೆ ಈಶ್ವರ್ದೋವಾಚ : ``ಆಚಾರಂ ರುದ್ಥಿರಾಂಗೇತು ಮಾಂಸಾಂಗೇ ಗುರುಲಿಂಗಕಂ | ಮೇಧಾಂಗೇ ಶಿವಲಿಂಗಂ ಚ ಅಸ್ಥ್ಯಂಗೇ ಚರಂ ತಥಾ || ಮಜ್ಜೇ ಪ್ರಸಾದಲಿಂಗಂ ಚ ಶುಕ್ಲಾಂಗೇ ಮಹಾಲಿಂಗಕಂ | ಇತಿ ಲಿಂಗಸ್ಥಲಂ ಜ್ಞಾತುಂ ಸುಸೂಕ್ಷ್ಮಂ ಶ್ರುಣು ಪಾರ್ವತೀ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ರಂಜನಿಪುರದಲ್ಲಿ ಕಪಿ ಉಡವ ಕಚ್ಚಿ ತಿರುಗಾಡುವದ ಕಂಡೆನಯ್ಯ. ಆ ಉಡುವಿನ ಬಾಯೊಳಗೆ ಮೂರುಲೋಕವೆಲ್ಲ ಏಳುತ್ತ ಬೀಳುತ್ತ ಇರ್ಪುದ ಕಂಡೆ. ಆ ಕೋಡಗದಾಟವ ಕಂಡು ಈರೇಳುಲೋಕದ ಪ್ರಾಣಿಗಳು ಬೆರಗಾದುದ ಕಂಡೆ. ಅದಾರಿಗೂ ಸಾಧ್ಯವಲ್ಲ. ಅಷ್ಟರಲ್ಲಿಯೇ ಅರಸನ ಮನೆಯಲ್ಲಿ ಒಂದು ಎಳೆ ಶಿಶು ಹುಟ್ಟಿ, ಕಸ ನೀರು ಹೊರುವ ಗಾಡಿಯ ಕೊಂದು, ಕೋತಿಯ ತಿಂದು, ಉಡವ ನುಂಗಿ, ತ್ರೈಲೋಕದ ಬಂಧನವ ಬಿಡಿಸಿ, ತಂಗಿಯನೊಡಗೂಡಿ, ಅಕ್ಕನ ಸಂಗವ ಮಾಡಿ, ಅರಸಿನ ಅರಮನೆಯಲ್ಲಿ ಆರು ಕಾಣದೆ ಅಡಗಿಹೋಯಿತ್ತು. ಇದರಂದಚಂದವ ನಿಮ್ಮ ಶರಣ ಬಲ್ಲ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ರತಿಯಿಂದ ರತ್ನ, ಗತಿಯಿಂದ ವಾದ್ಯ, ಸದ್ಗತಿಯಿಂದ ಮುಕ್ತಿ, ನಿರ್ಗತಿಯಿಂದ ವಿರಕ್ತಿ. ಈ ನಾಲ್ಕರ ಮತಿಯ ತಿಳಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ರೂಪುವಿರಹಿತ ಲಿಂಗ ಕಂಡಾ ! ಗುರುವುಳ್ಳನ್ನಕ್ಕ ಶಿಷ್ಯನಲ್ಲಾ, ಲಿಂಗವುಳ್ಳನ್ನಕ್ಕ ಜಂಗಮವಲ್ಲಾ, ಪ್ರಸಾದವುಳ್ಳನ್ನಕ್ಕ ಭಕ್ತನಲ್ಲಾ. ಲಿಂಗೈಕ್ಯನಾದಡೆ; ಸ್ಥಾವರವಿರಹಿತ ಶರಣಭರಿತನಾಗಿರಬೇಕು. ಕಾಯಕ್ಕೆ ಸಾಹಿತ್ಯವೆಲ್ಲಿಯಾದಡೆಯು ಉಂಟು ಆತ್ಮಸಾಹಿತ್ಯವಪೂರ್ವ ನೋಡಾ ! ಆಚಾರ[ಸಾಹಿತ್ಯ]ವೆ ಲೋಕ, ಅನಾಚರ[ಸಾಹಿತ್ಯ]ವೆ ಶರಣ ಇದು ಕಾರಣ ಕೂಡಲಚೆನ್ನಸಂಗಯ್ಯಾ ಅನಾಚಾರಗಲ್ಲದೆ ಪ್ರಸಾದವಿಲ್ಲ.
--------------
ಚನ್ನಬಸವಣ್ಣ
ರಸದ ಬಾವಿಯ ತುಡುಕಬಾರದು, ಕತ್ತರಿವಾಣಿಯ ದಾಂಟಿದವಂಗಲ್ಲದೆ. ಪರುಷವಿದೆ ಕಬ್ಬುನವಿದೆ ಸಾಧಿಸಬಲ್ಲವಂಗೆ. ಶ್ರೀಶೈಲದುದಕವ ಧರಿಸಬಾರದು ಗುಹೇಶ್ವರಾ_ ನಿಮ್ಮ ಶರಣಂಗಲ್ಲದೆ.
--------------
ಅಲ್ಲಮಪ್ರಭುದೇವರು
ರೂಪಿಂಗೆ ಕೇಡುಂಟು ನಿರೂಪಿಂಗೆ ಕೇಡಿಲ್ಲ. ರೂಪು ನಿರೂಪನೊಡಗೂಡುವ ಪರಿ ಎಂತು ಹೇಳಾ ? ಅಸಂಬಂಧ ಸಂಬಂಧವಾಗಿ ಇದೆ. ದೇಹ ಇಂದ್ರಿಯವೆಂಬ ಜಾತಿಸೂತಕವಿರಲು ಗುಹೇಶ್ವರಲಿಂಗವ ಮುಟ್ಟಬಾರದು ಕೇಳವ್ವಾ.
--------------
ಅಲ್ಲಮಪ್ರಭುದೇವರು
ರಾತ್ರಿಯಲ್ಲಿ ಬಹುಕುಲದಲ್ಲಿ ಪುಟ್ಟಿದೆ. ಹಗಲಿನಲ್ಲಿ ಒಂದು ಕುಲದಲ್ಲಿ ಪುಟ್ಟಿದೆ. ಉಭಯವಿಲ್ಲದಕಾರಣ ಆವಲ್ಲಿ ನಾ ಪುಟ್ಟಿದೆನೆಂಬುದ ನೀ ಬಲ್ಲೆಯಲ್ಲದೆ ಇವರೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ರುಚಿಯಲ್ಲಿ ಸಂಹಾರ, ಸ್ಪರುಶನದಲ್ಲಿ ಸೃಷ್ಟಿ, ರೂಪಿನಲ್ಲಿ ಸ್ಥಿತಿ, ಇಂತು ಸಂಹಾರಕ್ಕೆ ನಾದವೇ ಮೂಲವು, ಸೃಷ್ಟಿಗೆ ಬಿಂದುವೇ ಮೂಲವು, ಸ್ಥಿತಿಗೆ ಕಳೆಯೇ ಮೂಲವು. ಸೃಷ್ಟಿಗೆ ಪೃಥ್ವಿಯೇ ಆಧಾರಮಾಯಿತ್ತು ; ಸ್ಥಿತಿಗೆ ಆತ್ಮನೇ ಆಧಾರಮಾಯಿತ್ತು. ಸೃಷ್ಟಿಮೂಲಮಪ್ಪ ಸ್ಪರುಶನದಲ್ಲಿ ಆನಂದವೂ ಸಂಹಾರಮೂಲಮಪ್ಪ ರುಚಿಯಲ್ಲಿ ಜ್ಞಾನವೂ ಸ್ಥಿತಿಮೂಲಮಪ್ಪ ರೂಪಿನಲ್ಲಿ ನಿಜವೂ ನೆಲೆಗೊಂಡು, ಸೃಷ್ಟಿಯೆ ಸ್ಥಿತಿಹೇತುವಾಗಿ, ಸ್ಥಿತಿಯೇ ಸಂಹಾರಹೇತುವಾಗಿ, ಸಂಹಾರವೇ ಸೃಷ್ಟಿಹೇತುವಾಗಿ, ರುಚಿಗೆ ಅಗ್ನಿಯೂ, ಸ್ಪರುಶನಕ್ಕೆ ಜಲವೂ, ರೂಪಿಗೆ ಪೃಥ್ವಿಯೂ ಕಾರಣಮಾಗಿ, ಇಂತು ಅವಸ್ತ್ರಮಾಗಿ ತಿರುಗುತ್ತಿರ್ಪ ಪರಶಿವನಾಜ್ಞಾಚಕ್ರವನ್ನು ಗುರುಮುಖದಿಂದ ವಿಚಾರಿಸಿ ತಿಳಿದ ಮಹಾಪುರುಷನು ಈ ಚಕ್ರಕ್ಕೆ ತಗಲಿರ್ಪ ಮನವೆಂಬ ಕೀಲನ್ನು ಗುರುವಿತ್ತ ಲಿಂಗವೆಂಬ ಪರಶುವಿನಿಂ ಭಾವವೆಂಬ ಹಸ್ತದಲ್ಲಿ ಪಿಡಿದು ಖಂಡಿಸಲು, ಆ ಚಕ್ರದ ಚಲನೆ ನಿಂದಿತ್ತು. ಸ್ಪರ್ಶನದಲ್ಲಿರ್ಪ ಆನಂದರಸಮಂಗದಲ್ಲಿ ಕೂಡಿ, ಸಂಹಾರಾಗ್ನಿಯಂ ನಂದಿಸಿತ್ತು. ಆ ಸಂಹಾರದೊಳಗಿರ್ಪ ಜ್ಞಾನಾಗ್ನಿಯು ಲಿಂಗದೊಳಗೆ ಬೆರದು, ಸೃಷ್ಟಿಸ್ಥಿತಿರೂಪಮಾದ ಪೃಥ್ವಿ ಅಪ್ಪುಗಳಂ ಸಂಹರಿಸಿತ್ತು. ಸ್ಥಿತಿಯಲ್ಲಿರ್ಪ ನಿಜಲಿಂಗದಲ್ಲಿ ನಿಜಮಾಯಿತ್ತು. ಇಂತು ಆ ಚಕ್ರವಳಿಯೆ, ಆತ್ಮಭ್ರಮೆಯಳಿದು, ಆತ್ಮವೇ ಲಿಂಗಮಾಗಿ, ಆಕಾಶವೇ ಅಂಗವಾಗಿ, ವಾಯುವೇ ಆ ಎರಡರ ಸಂಗದಲ್ಲಿ ಬೆರದು ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ರೂಪನರಿದು ರುಚಿಯನುಂಡು ಅವರ ನಿಹಿತಂಗಳ ಕಂಡು ಮತ್ತೆ ಲಿಂಗಕ್ಕೆ ಅರ್ಪಿಸಿ ಪ್ರಸಾದ ಮುಂತಾಗಿ ಕೊಂಡೆಹೆನೆಂಬ ವರ್ತಕಭಂಡರ ನೋಡಾ. ಕಟ್ಟಿ ಹುಟ್ಟದ ರತ್ನ, ಸುಗುಣ ಅಪ್ಪು ತುಂಬದ ಮುತ್ತು ಕಳೆ ತುಂಬದ ಬೆಳಗು, ಹೊಳಹುದೋರದ ಸೂತ್ರ ಲವಲವಿಕೆಯಿಲ್ಲದ ಚಿತ್ತ, ಇದಿರಗುಣವನರಿಯದ ಆತ್ಮ. ಇಂತಿವು ಫಲಿಸಬಲ್ಲವೆ ? ಕ್ರೀಯನರಿದು ಅರ್ಪಿಸಬೇಕು. ಅರ್ಪಿಸುವಲ್ಲಿ ದೃಷ್ಟಾಂತದ ಸಿದ್ಧಿ ಪ್ರಸಿದ್ಧವಾಗಬೇಕು. ಕಾಣದವಗೆ ತಾ ಕಂಡು ಕುರುಹಿನ ದಿಕ್ಕ ಅರುಹಿ ತೋರುವನ ತೆರನಂತೆ ತಾ ಲಕ್ಷಿಸಿದಲ್ಲಿ, ತಾ ದೃಷ್ಟಿಸಿದಲ್ಲಿ, ತಾ ಮುಟ್ಟಿದಲ್ಲಿ ಅರ್ಪಿತವಾದ ಪ್ರಸಾದಿಯ ಕಟ್ಟು. ದಹನ ಚಂಡಿಕೇಶ್ವರಲಿಂಗವು ತಾನಾದ ಚಿತ್ತದವನ ಮುಟ್ಟು.
--------------
ಪ್ರಸಾದಿ ಲೆಂಕಬಂಕಣ್ಣ

ಇನ್ನಷ್ಟು ...
-->