ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಯ ಲಿಂಗದರುಶನವನರಿದಲ್ಲಿ, ಮನವನರಿದು ತನುವೊಪ್ಪುವಂತೆ, ತನು ಸೋಂಕಿದ ಸುಖವ, ಆತ್ಮನರಿದು ಅರ್ಪಿಸುವಂತೆ, ಜಾಹೆಯಲ್ಲಿ ಮರೆದೊರಗಿರಲಾಗಿ, ತನುವ ತಟ್ಟಿದಡೆ, ಆತ್ಮನೆಚ್ಚರುವಂತೆ ಇಪ್ಪುದು, ಇಷ್ಟಪ್ರಾಣಸಂಬಂಧಯೋಗ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದಲ್ಲಿ.
--------------
ಶಿವಲೆಂಕ ಮಂಚಣ್ಣ
ಕಾಯವಿದಲ್ಲದೆ ಜೀವಕ್ಕೆ ಬೆಲೆಯಿಲ್ಲ, ಜೀವವಿದ್ದಲ್ಲದೆ ಜ್ಞಾನಕ್ಕೆ ಕುರುಹಿಲ್ಲ. ಜ್ಞಾನವಿದ್ದಲ್ಲದೆ ಬೆಳಗಿಗೆ ಒಡಲಿಲ್ಲ. ಒಂದಕ್ಕೊಂದ ಹಿಂಗಿ ಕಾಬ ಠಾವ ಹೇಳಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ
ಕಾಲಿನಲ್ಲಿ ನಡೆವುದು, ಕೈಯಲ್ಲಿ ಮುಟ್ಟುವುದು, ಕಣ್ಣಿನಲ್ಲಿ ನೋಡುವುದು, ಕಿವಿಯಲ್ಲಿ ಕೇಳುವುದು, ಮೂಗಿನಲ್ಲಿ ವಾಸಿಸುವುದು. ಬಾಯಲ್ಲಿ ಉಂಬ ಭೇದದಿಂದ ಅಯಿದರಾಟಿ, ಆರರ ಕೂಟ, ಏಳರ ಬೇಟ, ಎಂಟರ ಮದ, ಹದಿನಾರರ ಕಳೆ. ಇಂತಿವೆಲ್ಲವು ಮೂರ ಮರೆದಲ್ಲಿ ನಿಂದವು. ಮೂರನರಿದಲ್ಲಿ ಸಂದವು. ಇಂತಿವು ಉಳ್ಳನ್ನಕ್ಕ ಪೂಜಿಸಬೇಕು. ನಾ ನೀನೆಂಬನ್ನಕ್ಕ ಅರ್ಪಿಸಬೇಕು. ಅದಳಿಯೆ ಮತ್ತೇನೂ ಎನಲಿಲ್ಲ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬದಕ್ಕೆ ಎಡೆಯಿಲ್ಲ.
--------------
ಶಿವಲೆಂಕ ಮಂಚಣ್ಣ
ಕಂಡು ತವಕ ಸಂಗದಿಂದಳಿವಂತೆ, ನಿನ್ನ ನೋಡುವ ನೋಟ, ಎನ್ನಯ ಮನದ ಕೂಟದಿಂದ ಹರಿಯಿತ್ತು. ಮತ್ತೆ ನಿಮ್ಮಾಸೆ ಮುಟ್ಟುವ ಭೇದ ಬಿಡದು. ನೀವು ರೂಪಾಗಿ, ನಾ ಸಾಕಾರವಾಗಿ ಉಭಯವುಳ್ಳನ್ನಕ್ಕ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ವಾಸ ರೂಪಾದೆ.
--------------
ಶಿವಲೆಂಕ ಮಂಚಣ್ಣ
ಕಾಯಕವೆಂದು ಕಾಯವ ಬಳಲಿಸದೆ, ತನು ಕರಗದೆ, ಮನ ನೋಯದೆ, ಕಾಡಿ ಬೇಡಿ ಮಾಡುವುದು ದಾಸೋಹವೆ ? ಆವ ಕಾಯಕವು ಪ್ರಾಣವೆ ಕಡೆಯಾಗಿ, ದ್ರವ್ಯ ಮೊದಲಾಗಿ, ಚಿತ್ತ ಶುದ್ಧದಲ್ಲಿ ಗುರುಚರಕ್ಕೆ ಮುಯ್ಯಾಂತು ಬಂದುದಕ್ಕೆ ಸರಿಗಂಡು, ಲಿಂಗದೇಹಿಗಳಿಗೆಲ್ಲಾ ಒಂದೇ ಪ್ರಮಾಣದಲ್ಲಿ ಸಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ತೃಪ್ತಿ.
--------------
ಶಿವಲೆಂಕ ಮಂಚಣ್ಣ
ಕಾಮವೆಂಬುದು ಕಂಗಳ ಮುಂದೆ ಸುಳಿದಾಡುತ್ತಿದೆ. ಕ್ರೋಧವೆಂಬುದೆ ಮನದ ಮುಂದೆ ಇಕ್ಕಿ ಹರಿದಾಡುತ್ತಿದೆ. ಲೋಭವೆಂಬುದೆ ಸರ್ವವೆಲ್ಲರಲ್ಲಿ ಬೆರಸಿ ಕುಕ್ಕುಳಗುದಿವುತ್ತಿದೆ. ಆಮಿಷ ತಾಮಸ ರಾಗದಿಂದ ಬರಿಹೊರೆ ಹೋಗುತ್ತಿದೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿಯದೆ.
--------------
ಶಿವಲೆಂಕ ಮಂಚಣ್ಣ
ಕಾಯವ ಮರೆದು ಜೀವವನರಿಯಬೇಕು. ಜೀವವ ಮರೆದು ಜ್ಞಾನವನರಿಯಬೇಕು. ಜ್ಞಾನವ ಮರೆದು ಬೆಳಗನರಿಯಬೇಕು. ಬೆಳಗಿನ ಮರೆಯ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿಯಬೇಕು.
--------------
ಶಿವಲೆಂಕ ಮಂಚಣ್ಣ
ಕಾಯ ಜೀವವನರಿದಲ್ಲಿ , ಇಷ್ಟ ಪೂಜೆಯ ಮರೆದಿರಬೇಕು. ದಿವದಲ್ಲಿ ನಡೆಯದೆ, ರಾತ್ರಿಯಲ್ಲಿ ಒರಗದೆ, ಉಭಯವನಳಿದಿದ್ದಲ್ಲಿ, ಅರ್ಪಿತವಿಲ್ಲದಿರಬೇಕು. ಸ್ತುತಿ ನಿಂದೆಗೆ ಹೊರಗಾದಲ್ಲಿ, ಋತು ಕಾಲವ ಮರೆದಿರಬೇಕು. ಮಾತಿನಲ್ಲಿ ಶೂನ್ಯ, ಆತ್ಮನಲ್ಲಿ ಆಸೆಯ ಪಾಶ. ಇಂತೀ ವೇಷದ ಚೋರರನೊಪ್ಪ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.
--------------
ಶಿವಲೆಂಕ ಮಂಚಣ್ಣ
ಕಂಗಳ ಮುಂದೆ ಬಂದು ನಿಂದು, ಕಂಡುದೆಲ್ಲವು ಲಿಂಗಾರ್ಪಿತವೆ ? ಫಲಾದಿಗಳಲ್ಲಿ ಪಾಕವಾದ ಕಡ್ಡಿ ತೊಟ್ಟು ಬಿತ್ತು ಮೊದಲಾದ ತುಷ ಪಾಷಾಣ ಬೋನದೊಳಗಾದ ಸಮೂಹವೆಲ್ಲವು, ಲಿಂಗನೈವೇದ್ಯ ಸಮರ್ಪಣವೆ ? ಸಾರೂಪ ದ್ರವ್ಯಂಗಳಲ್ಲಿ ಅರೋಚಕವ ಕಳೆದು, ಮನದಲ್ಲಿ ನೇಮಿಸಿ, ಇಷ್ಟಲಿಂಗಕ್ಕೆ ಇದಿರಿಟ್ಟು, ಪದಾರ್ಥವ ಕೊಡುವಲ್ಲಿ, ಪ್ರಾಣಲಿಂಗಕ್ಕೆ ನಾನಾ ರಸಂಗಳ ಸಾಗಿಸುವಲ್ಲಿ, ಅರ್ಪಿತ ಅನರ್ಪಿತವೆಂಬ ಉಭಯದ ಗೊತ್ತ ಮುಟ್ಟಿ ಅರ್ಪಿಸಬಲ್ಲಡೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಅರ್ಪಿತವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಕಾರುಕನ ಕೈ ಮುಟ್ಟುವುದಕ್ಕೆ ಮುನ್ನವೆ, ಗುರುವಿನ ಕರ ಮುಟ್ಟುವುದಕ್ಕೆ ಮುನ್ನವೆ, ಮನಸಿಜನ ಮನ ಮುಟ್ಟುವುದಕ್ಕೆ ಮುನ್ನವೆ, ನಾಮ ರೂಪು ಬಹುದಕ್ಕೆ ಮುನ್ನವೆ, ಅದಾವ ರೂಪು ಎಂದರಿತಡೆ, ಆ ವಸ್ತು ಪ್ರಮಾಣಕ್ಕೆ ರೂಪಹ ಪರಿಯಿನ್ನೆಂತುಂಟು ? ಅದು ಭಾವಕ್ಕೆ ಅಗೋಚರ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.
--------------
ಶಿವಲೆಂಕ ಮಂಚಣ್ಣ
ಕಾಯದಲ್ಲಿ ಪರಿಪೂರ್ಣನಾಗಿ ಜೀವನಿಪ್ಪ ಭೇದವ, ಜೀವದಲ್ಲಿ ಜ್ಞಾನಪರಿಪೂರ್ಣವಾಗಿಪ್ಪ ಭೇದವ, ಜ್ಞಾನದಲ್ಲಿ ಬೆಳಗು ಬಿಂಬಿಸುತಿಪ್ಪ ಭೇದವ [ಅರಿಯಬೇಕು.] ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಜ್ಯೋತಿರ್ಮಯವಾಗಿಪ್ಪುದು.
--------------
ಶಿವಲೆಂಕ ಮಂಚಣ್ಣ
ಕ್ರೀಯ ಮರೆದಲ್ಲಿ, ಅರಿವು ಹೀನವಾಗಿಪ್ಪುದು. ಅರಿವ ಮರೆದಲ್ಲಿ, ಜ್ಞಾನ ಹೀನವಾಗಿಪ್ಪುದು. ಜ್ಞಾನವ ಮರೆದಲ್ಲಿ, ಬೆಳಗಿನ ಕಳೆ ಹೋಯಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅವರಿಗೆ ಮರೆಯಾಗಿ ತೊಲಗಿದ.
--------------
ಶಿವಲೆಂಕ ಮಂಚಣ್ಣ
ಕಾಯಭ್ರಮೆಯಿಂದ ಮಾಡುವುದು ದೇವಪೂಜೆಯಲ್ಲ. ಜೀವಭ್ರಮೆಯಿಂದ ಅರ್ಪಿಸುವುದು ಲಿಂಗಾರ್ಪಿತವಲ್ಲ. ಕಾಯದ ಸೂತಕವನಳಿದು ಪೂಜಿಸಿ, ಜೀವನ ಪ್ರಕೃತಿಯ ಮರೆದರ್ಪಿಸಿ, ಉಭಯವನರಿಯಬಲ್ಲಡೆ, ಕಾಯವೆ ಒಡೆಯ, ಪ್ರಾಣವೆ ಲೆಂಕ. ಇಂತೀ ಉಭಯ ಲೇಪವಾದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಕಾಮದಿಂದ ಕಾಬುದೆಲ್ಲವು ಗುರುವಿಂಗೊಳಗಾಗಿ. ಮೋಹದಿಂದ ಕಾಬುದೆಲ್ಲವು ಲಿಂಗಕ್ಕೊಳಗಾಗಿ. ಲೋಭದಿಂದ ಕಾಬುದೆಲ್ಲವು ಜಂಗಮಕ್ಕೊಳಗಾಗಿ. ಇಂತೀ ತ್ರಿವಿಧದಲ್ಲಿ ಮುಟ್ಟಿಪ್ಪನ ಸತ್ಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದ ಉಭಯವಳಿದ ಕುರುಹಿನ ಗೊತ್ತು.
--------------
ಶಿವಲೆಂಕ ಮಂಚಣ್ಣ
ಕಲ್ಲ ತಾಗಿದ ಕಠಿಣಸರದಂತೆ, ವಲ್ಲಭನೊಲ್ಲದ ಸತಿಯಂತೆ, ಬಲ್ಲವರು ಹೇಳಿದ ಮಾತ, ಕಲ್ಲೆದೆಯವ ಕಾಣದಂತೆ, ಮಾತು ಮನಸ್ಸು ಸಿಕ್ಕಿ, ಭವವ್ಯಾಕುಲದಲ್ಲಿ ಅದೇತರ ಪೂಜೆ ? ಅದೇತರ ಅರ್ಪಿತ ? ಅದೇತರ ಯಾಚಕತ್ವ ? ಅವ ನೇತಿಗಳೆದಲ್ಲಿ , ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದುದು.
--------------
ಶಿವಲೆಂಕ ಮಂಚಣ್ಣ
ಕಾಯವೆ ದೇಗುಲವಾಗಿ, ಕುರುಹಿಟ್ಟು ಕೊಟ್ಟ ಕುರುಹೆ ದೇವರಾಗಿ, ನೋಡುವ ಕಣ್ಣೆ ಪೂಜಿಸುವ ಹೂವಾಗಿ, ಆನಂದಾಶ್ರುಗಳೆ ಸಕಲಭೋಗ ಅಷ್ಟವಿಧಾರ್ಚನೆ ಷೋಡಶೋಪಚರಿಯವಾಗಿ, ಅರತುದೆ ಅಡ್ಡವಣಿಗೆ ಪರಿಯಾಣವಾಗಿ, ಪರಿಣಾಮವೆ ನೈವೇದ್ಯವಾಗಿ, ಅಖಂಡಭಕ್ತಿರತಿಯೆ ತಾಂಬೂಲವಾಗಿ ಪೂಜಿಸುತಿರ್ದೆನಯ್ಯಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ ಎನ್ನ ಪ್ರಾಣಪೂಜೆಯ ನಿಮಗೆ.
--------------
ಶಿವಲೆಂಕ ಮಂಚಣ್ಣ
ಕಂಡೆಹೆನೆಂಬನ್ನಕ್ಕ ಆತುರ ಕಂಡು ಮನ ನಿಂದಲ್ಲಿ, ಹಿಂದಣ ಇರುವ, ಮುಂದಣ ಬಯಲ, ಉಭಯದ ಸಂದನಳಿಯಬೇಕು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
--------------
ಶಿವಲೆಂಕ ಮಂಚಣ್ಣ
ಕಾಯವಿದ್ದು ಕಾಬುದು ಗುರುಸ್ಥಲ, ಜೀವವಿದು ಕಾಬುದು ಲಿಂಗಸ್ಥಲ, ಭಾವವಿದ್ದು ಕಾಬುದು ಜಂಗಮಸ್ಥಲ, ತ್ರಿವಿಧವ ಒಡಗೂಡಿ ಕಾಬುದು ಭಕ್ತಿಸ್ಥಲ. ಭಕ್ತಿ ನಿಶ್ಚಯವಾಗಿ ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ ನಿಶ್ಚಯವಾದ ಸ್ಥಲ.
--------------
ಶಿವಲೆಂಕ ಮಂಚಣ್ಣ
ಕಾರುಕ ಮುಟ್ಟಿ ಗುರುವಿನ ಕೈಗೆ ಬಂದುದಲ್ಲ. ಮನಮುಟ್ಟಿ ನೆನಹಿಂಗೆ ಈಡಾದುದಲ್ಲ. ಅರಿದರುಹಿಸಿಕೊಂಬುದಲ್ಲ, ಮರೆದು ನೆನಹಿಸಿಕೊಂಬುದಲ್ಲ. ಪರುಷರಸದಂತೆ ಮಾಟಕ್ಕೊಳಗಲ್ಲ. ಅದು ಮುಟ್ಟಿ ಲೋಹ ಶುದ್ಧವಲ್ಲದೆ ಪುನರಪಿ ಶುದ್ಧವಾದುದಿಲ್ಲ. ಇಂತೀ ಭೇದಂಗಳಲ್ಲಿ ನಿಂದು ನಿಶ್ಚಯವಾದುದು ಜೀವನ್ಮುಕ್ತಿಲಿಂಗ. ಅದು, ಈಶಾನ್ಯ ಮೂರ್ತಿ ಮಲ್ಲಿಕಾರ್ಜುನಲಿಂಗ ಸ್ವಯಂಭುವಾಗಿಹುದು
--------------
ಶಿವಲೆಂಕ ಮಂಚಣ್ಣ