ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಾತಕ ಹೊಲೆಯೆಂದರಿದು ಬಿಟ್ಟಲ್ಲಿ, ಮತ್ತಾ ಗುಣ ಸ್ವೀಕರಿಸಬಹುದೆ ? ಇವೆಲ್ಲ ಅಲ್ಲಾ ಎಂದು ಬಲ್ಲತನವ ತಾನರಿದು, ಮತ್ತೆಲ್ಲರಲ್ಲಿ ಬೆರಸಬಹುದೆ ? ಒಡೆದ ಹಂಚಿಂಗೆ, ಹಿಡಿದು ಬಿಟ್ಟ ವ್ರತಕ್ಕೆ, ಮತ್ತಿವ ಒಡಗೂಡಬಹುದೆ ? ಇಂತೀ ಬಿಡುಗಡೆಯನರಿದಲ್ಲಿ, ಅನುಸರಣೆಯ ಮಾಡಿದಡೆ, ಎನ್ನೊಡೆಯ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ ಹರಶರಣರಿಗೆ ದೂರ.
--------------
ಶಿವಲೆಂಕ ಮಂಚಣ್ಣ
ಪಿಪೀಲಿಕ ಮಧುರವ ಕಾಂಬಂತೆ, ಮರ್ಕಟ ಲಂಘನವ ಕಾಂಬಂತೆ, ವಿಹಂಗ ಆಕಾಶವನಡರುವಂತೆ, ತ್ರಿವಿಧದ ಭೇದ. ಜ್ಞಾನವನರಿತು, ಕಾಯಬಿಂದು, ಜೀವಬಿಂದು, ಜ್ಞಾನಬಿಂದು, ತ್ರಿವಿಧಬಿಂದುವಿನಲ್ಲಿ ನಿಂದು ಕಂಡು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ, ಸ್ವಯಂಭುವನರಿಯಬೇಕು.
--------------
ಶಿವಲೆಂಕ ಮಂಚಣ್ಣ
ಪೂಜೆ ಅರತಲ್ಲಿ, ಎಲೆ ಉದುರಿದ ವೃಕ್ಷ ಉಲುಹಡಗಿದಂತಿರಬೇಕು. ಜಲವಿಲ್ಲದ ತಟಾಕದ ಕೆಳೆಯಲ್ಲಿ, ಬೆಳೆಯ ಬಿತ್ತಿದಂತಿರಬೇಕು. ವಾರಣಸಿದ ಕುಂಭದಲ್ಲಿ, ವಾರಿಯ ತುಂಬಿಸಿದಂತಿರಬೇಕು. ಬಯಲ ಬಡಿವಡೆದ ಪಾಣಿ ಅಸಿಯಂತಿರಬೇಕು. ಸುರಚಾಪದಂತೆ, ಮಾರುತ ಧ್ವನಿಯಂತೆ, ನಾಮರೂಪಿಂಗೆ ಹೊರಗಾದ ಮತ್ತೆ, ಏನೂ ಎನಲಿಲ್ಲ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂದೆನಲಿಲ್ಲ.
--------------
ಶಿವಲೆಂಕ ಮಂಚಣ್ಣ
ಪಾದತೀರ್ಥವ ಕೊಂಡಲ್ಲಿ ತೃಷೆಯರತು. ಪ್ರಸಾದವ ಕೊಂಡಲ್ಲಿ ಹಸಿವರತು, ಭೃತ್ಯಭಾವವಾದಲ್ಲಿ ಪ್ರತ್ಯುತ್ತರವಿಲ್ಲದೆಯಿಪ್ಪುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಲೆಂಕತ್ವಭಾವ.
--------------
ಶಿವಲೆಂಕ ಮಂಚಣ್ಣ
ಪ್ರಸಾದವ ನೆಮ್ಮಿದ ಭಕ್ತನಲ್ಲಿ, ಪರಶಿವನು ಪ್ರಸನ್ನನಾಗಿರ್ಪನು. ಪಾದತೀರ್ಥವನರಿದು ವಿಶ್ವಾಸಿಸಿಕೊಂಬ ಭಕ್ತನಲ್ಲಿ, ಆ ಪರಶಿವನು ಪರಂಜ್ಯೋತಿ ಪ್ರಕಾಶವಾಗಿಪ್ಪನು. ಸಲುವ ಸೈದಾನದ ತೆರಪನರಿದು ಬಹ ಗುರುಚರದ ಅನುವನರಿದು, ಬಂದುದಕ್ಕೂ ಸಂದುದಕ್ಕೂ ಸಂದಿಲ್ಲದೆ ನಿಂದ ಭಕ್ತನ ಅಂಗಳವೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನನ ಮಂಗಳವಾಸ.
--------------
ಶಿವಲೆಂಕ ಮಂಚಣ್ಣ
ಪೃಥ್ವಿ ಸಾಕಾರವ ಮಾಡಿದಲ್ಲಿ, ಅಪ್ಪು ಆಸ್ತಿಕವಾದಲ್ಲಿ,
--------------
ಶಿವಲೆಂಕ ಮಂಚಣ್ಣ
ಪರಶಿವಮೂರ್ತಿಯ ರೂಪತಾಳಿ, ಎನ್ನ ಶಿವಭಕ್ತರ ಕುಲ ಬಳಗಂಗಳ ಪವಿತ್ರವ ಮಾಡಿಹೆನೆಂದು ನೀ ಬಂದು, ಅಪವಿತ್ರವ ಮುಟ್ಟಲೇತಕ್ಕೆ ? ನಿನ್ನ ಕೃಪೆ ಎನಗೆ, ಎನ್ನ ಹೃತ್ಕಮಲಮಧ್ಯ ನಿನಗೆ. ಎನಗೂ ನಿನಗೂ ತ್ರಿವಿಧದ ಹಂಗಿಲ್ಲ. ನಾ ನೀನಲ್ಲದೆ ಬೇರೊಂದ ಎಣಿಸಿದಡೆ, ನೀ ನಾನಲ್ಲದೆ ಬೇರೊಂದ ಮುಟ್ಟಿದಡೆ, ನಿನ್ನ ಸತ್ಯಕ್ಕೆ, ಎನ್ನ ಭಕ್ತಿಗೆ, ಉಭಯಕ್ಕೂ ನೀನೆ ಮುಂಡಿಗೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ
ಪರಸ್ತ್ರೀಯರ ಬಿಟ್ಟಾಗಲೆ ಗುರುವಿನ ಇರವು ಸಾಧ್ಯವಾಯಿತ್ತು. ಪರಧನವ ಬಿಟ್ಟಾಗಲೆ ಲಿಂಗದ ಇರವು ಅಂಗದಲ್ಲಿ ಸಲೆ ಸಂದಿತ್ತು. ನಿಂದೆಯೆಂಬುದು ನಿಂದಾಗಲೆ, ಜಂಗಮಭಕ್ತಿ ಸಾಧ್ಯವಾಯಿತ್ತು. ಇಂತೀ ತ್ರಿವಿಧದಲ್ಲಿ ತಟ್ಟದಿಪ್ಪಾತನು, ಈಶಾನ್ಯಮೂರ್ತಿ ಮಲ್ಲಿಕಾರ್ಜು ಲಿಂಗವ ಮುಟ್ಟಿಪ್ಪನು.
--------------
ಶಿವಲೆಂಕ ಮಂಚಣ್ಣ
ಪರಧನವನೊಲ್ಲದಿಪ್ಪುದೆ ವ್ರತ, ಪರಸ್ತ್ರೀಯರ ಕೂಡದಿಪ್ಪುದೆ ಶೀಲ. ಸರ್ವಜೀವವ ಕೊಲ್ಲದಿಪ್ಪುದೆ ನೇಮ. ತಥ್ಯಮಿಥ್ಯವನಳಿದಿಪ್ಪುದೆ ನೇಮ. ಇದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಂದೇಹವಿಲ್ಲದ ವ್ರತ.
--------------
ಶಿವಲೆಂಕ ಮಂಚಣ್ಣ
ಪೂಜಿಸಿ ಕಾಬುದು ಗುರುವಿನ ಭೇದ, ಧ್ಯಾನಿಸಿ ಕಾಬುದು ಲಿಂಗದ ಭೇದ, ಉಭಯದಲ್ಲಿ ನಿಂದು ವಿಚಾರಿಸಿ ಕಾಬುದು ಜಂಗಮದ ಭೇದ. ಜ ಎಂದಲ್ಲಿ ಜನನ ನಾಸ್ತಿ , ಗ ಎಂದಲ್ಲಿ ಗಗನ ನಾಸ್ತಿ , ಮ ಎಂದಲ್ಲಿ ಮರಣ ನಾಸ್ತಿ . ತ್ರಿವಿಧ ನಾಸ್ತಿಯಾಗಿ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ನಿಂದ ನಿಲವು.
--------------
ಶಿವಲೆಂಕ ಮಂಚಣ್ಣ
ಪೃಥ್ವಿ ರೂಪಾದಲ್ಲಿ ಸದ್ಯೋಜಾತನಾದ, ಅಪ್ಪು ರೂಪಾದಲ್ಲಿ ವಾಮದೇವನಾದ ಅಗ್ನಿ ರೂಪಾದಲ್ಲಿ ಅಘೋರನಾದ, ವಾಯು ರೂಪಾದಲ್ಲಿ ತತ್ಪುರುಷನಾದ, ಗಗನ ರೂಪಾದಲ್ಲಿ ಈಶಾನ್ಯನಾದ. ಇಂತೀ ಪಂಚಕೋಶಂಗಳಲ್ಲಿ ನಿಂದು, ಜಗಕ್ಕೆ ಶಾಂತಿಯನಿತ್ತು, ತಾ ಸ್ವಯಂಜ್ಯೋತಿಯಾಗಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
--------------
ಶಿವಲೆಂಕ ಮಂಚಣ್ಣ