ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರು ಮೂರು ಕೂಡಿ ಗುರುವಾದಲ್ಲಿ, ಬಿಂದು ಅಯಿದು ಕೂಡಿ ಲಿಂಗವಾದಲ್ಲಿ, ವಿಂಶತಿ ಆರು ಕೂಡಿ ವಿಸರ್ಜನವಾದಲ್ಲಿ, ಜಂಗಮವಾಯಿತ್ತು. ಆ ಜಂಗಮ, ಜಾಯತೇ ಭಾವವಳಿದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಗಂಗೆವಾಳುಕ ರುದ್ರರೆಲ್ಲರು ಅಂಗವರತು ಲಿಂಗವನರಿದಲ್ಲದೆ, ಅಂಗಗುಣವರಿಯದೆ, ಲಿಂಗತ್ರಯವೆಂಬುದ ಸಂಘಟಿಸಲರಿಯದೆ, ನಿಂದು ಕಾಬ ನೆಲೆಯಿನ್ನೆಂತು ? ಮಾತ ಕಂಡಾಡಿದಲ್ಲಿ ವಾಗದ್ವೈತಿ. ಬಳಗನರಿದು ಪೂಜಿಸುವಲ್ಲಿ ಡಂಬಕಧಾರಿ. ಏನ ಮುಟ್ಟಿದಲ್ಲಿ ಕೇಡಿಲ್ಲಾ ಎಂದು ಮನ ಬ್ರಹ್ಮವನಾಡಿ, ಮನುಜರಂತೆ ಹರಿದಾಡುತ್ತ, ಗಂಪವ ಕೂಡಿಕೊಂಡು, ಶಂಕೆಯಿಲ್ಲಾಯೆಂದು ನಿಶ್ಶಂಕೆಯ ನುಡಿಯಬಹುದೆ ಅಯ್ಯಾ ? ನಡೆ ನುಡಿ ಸಿದ್ಧಾಂತವಾದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅವರಲ್ಲಿ ಪ್ರಸಿದ್ಧವಾಗಿಪ್ಪನು.
--------------
ಶಿವಲೆಂಕ ಮಂಚಣ್ಣ
ಗುರುವಿರೆ ಲಿಂಗಪ್ರಸಾದವ ಕೊಳಲಾಗದು. ಲಿಂಗವಿರೆ ಜಂಗಮಪ್ರಸಾದವ ಕೊಳಲಾಗದು. ಜಂಗಮವಿರೆ ಉಭಯಪ್ರಸಾದವ ಕೊಳಲಾಗದು. ಇಂತೀ ಪ್ರಸಾದದ ವಿವರವನರಿತಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಪ್ರಸನ್ನ ಪ್ರಸಾದವಾದ.
--------------
ಶಿವಲೆಂಕ ಮಂಚಣ್ಣ
ಗುರುಲಿಂಗ ಬ್ರಹ್ಮರೂಪವಾಯಿತ್ತು. ಚರಲಿಂಗ ವಿಷ್ಣುರೂಪಾಯಿತ್ತು. ಸ್ಥಾವರಲಿಂಗ ರುದ್ರರೂಪಾಯಿತ್ತು. ಗುರುಚರಲಿಂಗರೂಪು ತ್ರಿವಿಧಮಲ ಕಾರಣವಾಯಿತ್ತು. ಆ ಮಲಗುಣ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ನಾಮಕ್ಕೆ ಹೊರಗಾದ.
--------------
ಶಿವಲೆಂಕ ಮಂಚಣ್ಣ
ಗುರುಪ್ರಸಾದವ ಲಿಂಗಕ್ಕೆ ಕೊಡಲಿಲ್ಲ, ಜಂಗಮಪ್ರಸಾದವ ಲಿಂಗಕ್ಕೆ ಕೊಡಲಿಲ್ಲ. ಅದೆಂತೆಂಡಡೆ : ಆ ಗುರುವಿಗೂ ಲಿಂಗಪ್ರಾಣ, ಆ ಜಂಗಮಕ್ಕೂ ಲಿಂಗಪ್ರಾಣ. ಆ ಲಿಂಗಬಾಹ್ಯವಾಗಿ ಗುರುವಾಗಬಲ್ಲಡೆ, ಆ ಲಿಂಗಬಾಹ್ಯವಾಗಿ ಜಂಗಮವಾಗಬಲ್ಲಡೆ, ಉಭಯಪ್ರಸಾದವ ಲಿಂಗಕ್ಕೆ ಕೊಡಬಹುದು. ಇದನರಿಯದೆ ಉದೇಶಿಸಿ ನುಡಿವ ಭೇದಹೀನರಿಗೆ ತ್ರಿವಿಧವಿಲ್ಲಾ ಎಂದೆ. ಅವರು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ದೂರ.
--------------
ಶಿವಲೆಂಕ ಮಂಚಣ್ಣ
ಗುರು ವೈಭವಕ್ಕೆ ಸಿಕ್ಕಿದಾಗಲೆ ಶಿಷ್ಯಂಗೆ ನರಕ ಪ್ರಾಪ್ತಿ . ಲಿಂಗ ಭಜನೆಗೆ ಸಿಕ್ಕಿದಾಗಲೆ ಮರಣಕ್ಕೊಳಗು. ಜಂಗಮ ಜಂಗುಳಿಯಾಗಿ, ಕಂಡಕಂಡವರಂಗಳಕ್ಕೆ ಜಂಘೆಯನಿಕ್ಕಲಾಗಿ, ನಿರಂಗಕ್ಕೆ ಹೊರಗು. ಇಂತೀ ಇವರು ನಿಂದುದಕ್ಕೆ ಬಂಧವಿಲ್ಲದಿರಬೇಕು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
--------------
ಶಿವಲೆಂಕ ಮಂಚಣ್ಣ
ಗುರುಸೇವೆಯಲ್ಲಿ ತನು ಕರಗಿ, ಲಿಂಗಸೇವೆಯಲ್ಲಿ ಮನ ಕರಗಿ, ಜಂಗಮಸೇವೆಯಲ್ಲಿ ಧನ ಕರಗಿ, ಮಹಾಘನವನರಿದಲ್ಲಿ ಪ್ರಕೃತಿ ಕರಗಿ, ನಿಜ ನಿಶ್ಚಯವಾಗಿ ನಿಂದಾತನೆ ಸದ್ಭಕ್ತನು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ.
--------------
ಶಿವಲೆಂಕ ಮಂಚಣ್ಣ
ಗುರುವೆಂದಡೂ ಕಾಯವುಳ್ಳನ್ನಕ್ಕ, ದೋಷಕ್ಕೆ ಹೊರಗಾಗಬೇಕು. ಲಿಂಗವೆಂದಡೂ ಪೀಠಕ್ಕೆ ಸಿಕ್ಕಹನ್ನಕ್ಕ, ಜಗದ ಆಗುಚೇಗೆಯನರಿಯಬೇಕು. ಜಂಗಮವೆಂದಡೂ ಸುಖದುಃಖವುಳ್ಳನ್ನಕ್ಕ, ಕಾಯವಿಡಿದು ಇಹ ಕಾರಣ, ಪಾಪ ತಾಪಕ್ಕೆ ಹೊರಗಾಗಬೇಕು. ಶೂನ್ಯವಾದಡೂ ಆ ಕುರುಹುಳ್ಳನ್ನಕ್ಕ, ಸುಖದುಃಖಕ್ಕೊಳಗು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ ಮರೆದಲ್ಲಿ ಭವಕ್ಕೆ ಬೀಜ.
--------------
ಶಿವಲೆಂಕ ಮಂಚಣ್ಣ
ಗುರುವೆಂಬ ಅಂಗವ ಧರಿಸಿದಡೇನು? ಚಿತ್ರದ ಸತಿಯ ಕೈಯ ದೀಪಕ್ಕೆ ಮೊತ್ತದ ತಮ ಹರಿದುದುಂಟೆ? ನಿಃಕಳೆಯ ಲಿಂಗವ ಧರಿಸಿದಲ್ಲಿ ಫಲವೇನು? ಮೃತ್ತಿಕೆಯ ಬೊಂಬೆಯ ಕೈಯಲ್ಲಿ ನಿಶ್ಚಯದ ಖಂಡೆಯವಿರೆ, ಕುಟ್ಟಬಲ್ಲುದೆ? ವಿಧಾಂತ ರೂಪು ಲಾಂಛನದ ತೊಟ್ಟು, ಬಹುರೂಪಿಯಾದಲ್ಲಿ ನೆರೆ ಈಶನ ಯುಕ್ತಿಯ ವಿರಕ್ತಿ ಜಂಗಮವಾಗಬಲ್ಲನೆ? ಇಂತೀ ಮಾತಿನ ಬಳಕೆಯ ವೇಷವ ಬಿಟ್ಟು, ನಿಜತತ್ವದ ಸಾಕಾರವೆ ಮೂರ್ತಿಯಾದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ