ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಪರಧನಕ್ಕೆ ಇಚ್ಫೈಸುವನ್ನಕ್ಕರ, ಪರಸ್ತ್ರೀಗೆ ಮೋಹಿಸುವನ್ನಕ್ಕರ, ಪರದೈವವ ಭಜಿಸುವನ್ನಕ್ಕರ, ಪರಪಾಕವ ಕೊಂಬನ್ನಕ್ಕರ, ಪರಹಿಂಸೆಗೆಡದನ್ನಕ್ಕರ ಮಹೇಶ್ವರನೆನಲಾಗದು. ಹುಸಿ ನಾಶವಾಗದನ್ನಕ್ಕರ, ಕಳವು ಕುಚೇಷ್ಟೆಯ ನೀಗದನ್ನಕ್ಕರ, ಉಪಾಧಿಯನುಸರಣೆಯ ದಾಟದನ್ನಕ್ಕರ ಮಹೇಶ್ವರನೆನಲಾಗದು. ಭವಿಯಸಂಪರ್ಕ ಬಿಚ್ಚದನ್ನಕ್ಕರ, ವೇಷಗಳ್ಳರ ಜರಿದು ನೂಕದನ್ನಕ್ಕರ, ಲೋಕಲೌಕಿಕಚರಿಯ ಹರಿಯದನ್ನಕ್ಕರ, ಸ್ವತಂತ್ರತ್ವಾನುಭಾವಿಯಾಗದನ್ನಕ್ಕರ ಮಹೇಶ್ವರನೆನಲಾಗದು. ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವೆಂದು ನಷ್ಟಬದ್ಧರಿಗೆರಗುವ ಭ್ರಷ್ಟಭವಿಗಳಿಗೊಮ್ಮೆ ಮಹೇಶ್ವರನೆಂದರೆ ಅಘೋರನರಕ ತಪ್ಪದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಮಥವೇದಿಗಳೆಲ್ಲರೂ ಗತಿಯಲೆ ಸಿಲುಕಿದರು. ಅತೀತ ಅನಾಗತವೆಂಬ ನುಡಿಯಲೆ ಸಿಲುಕಿದರು. ಶ್ರುತಿವಂತರೆಲ್ಲರೂ ಆಗಮದಲ್ಲಿ ಸಿಲುಕಿದರು. ಇಂಥವನೆ ಲಿಂಗೈಕ್ಯನು ? ನುಡಿದ ನುಡಿಯ ನಡೆಯನು, ನಡೆದ ನಡೆಯ ನುಡಿಯನು, ಬಂದಲ್ಲಿ ಬಾರನು, ನಿಂದಲ್ಲಿ ನಿಲ್ಲನು, ನಿಸ್ಸೀಮನು ಕೂಡಲಚೆನ್ನಸಂಗಾ ಲಿಂಗೈಕ್ಯನು.
--------------
ಚನ್ನಬಸವಣ್ಣ
ಪರತರವ ಸಾದ್ಥಿಸುವಡೆ ಪ್ರಪಂಚದ ವಿಷಯ ಅಳಿದಿರಬೇಕು. ರಾಜ್ಯವ ಸಾದ್ಥಿಸುವಡೆ ಪ್ರಾಣದಾಸೆಯ ಮರೆದಿರಬೇಕು. ವಿದ್ಯೆಯ ಸಾದ್ಥಿಸುವಡೆ ಅನ್ಯ ಆಸೆಯ ಮರೆದಿರಬೇಕು. ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವಡೆ ಸಂಶಯವಳಿದು ನಿಶ್ಚಿಂತನಾಗಬೇಕು.
--------------
ಸಿದ್ಧರಾಮೇಶ್ವರ
ಪಾಷಾಣದುದಕ ಏತರಿಂದ ದ್ರವ ? ಪಾಷಾಣದ ಪಾವಕ ಅದೇತರಿಂದ ಕ್ರೋಧ ? ಅಪ್ಪುವಿನ ಸಂಚಾರದ ರೂಪು ಅದೇತರ ಒಪ್ಪದಿಂದ ? ಅರಿದರುಹಿಸಿಕೊಂಬ ಅರ್ಕೇಶ್ವರಲಿಂಗನ ಇರವು ಅದೇತರಿಂದ?
--------------
ಮಧುವಯ್ಯ
ಪರಬ್ರಹ್ಮವೆಂಬ ಲಿಂಗದಿಂದ ಭಾವಲಿಂಗ ಉದಯವಾಯಿತ್ತು. ಆ ಭಾವಲಿಂಗದಿಂದ ಪ್ರಾಣಲಿಂಗ ಉದಯವಾಯಿತ್ತು. ಆ ಪ್ರಾಣಲಿಂಗದಿಂದ ಇಷ್ಟಲಿಂಗ ಉದಯವಾಯಿತ್ತು. ಆ ಇಷ್ಟಲಿಂಗಕ್ಕೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಅರ್ಪಿಸಬಲ್ಲಾತನೆ ನಿಮ್ಮ ಸದ್ಭಕ್ತ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪ್ರಣವವೆ ಸರ್ವವರ್ಣಂಗಳ ಕಾರ್ಯಕಾರಣವ್ಯಾಪ್ತಿ ಮೂಲವು, ಪ್ರಣವವೆ ಸರ್ವದೇವತಾಮಯವು, ಪ್ರಣವವೆ ಸರ್ವಮಂತ್ರಗಳೆಲ್ಲವಕ್ಕೂ ಪ್ರಾಣಕಳೆ. ಪ್ರಣವವೆ ಸರ್ವದೇವತಾಮಯ ಎಂದುದಾಗಿ ಸದ್ಗುರುವಿನುಪದೇಶದಿಂದವು ಪ್ರಣವಾದ್ಥಿಕವಪ್ಪ ಮಹಾಮಂತ್ರವ ಜಪಿಸುವ ಸದ್ಭಕ್ತನೆ ದೈವಜ್ಞನು, ಮಂತ್ರಜ್ಞನು. ಇಂತಪ್ಪ ಸದ್ಭಕ್ತದೇಹಿಕದೇವನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪರವನರಿದ ಸತ್ಪುರುಷರ ಸಂಗದಿಂದ ಶಿವಯೋಗದ ವಚನಾಮೃತವನು, ಸದ್ಭಕ್ತಿಯುಳ್ಳ ಮಹೇಶ್ವರನು ತನ್ನ ಶ್ರೋತ್ರಮುಖದಲ್ಲಿ ಕೇಳಿ, ಮನೋಮುಖದಲ್ಲಿ ಹಾರೈಸಿ, ತೃಪ್ತಿಮುಖದಲ್ಲಿ ಸಂತೋಷವನೆಯ್ದಬಲ್ಲಡೆ ಆ ಸುಖವು ಪರಿಣಾಮವನೊಡಗೂಡುವುದು ! ಹೀಂಗಲ್ಲದೆ, ಸಂಸಾರವಿಷಯರಸವ ತಮ್ಮ ಹೃದಯಕೂಪದಲ್ಲಿ ತುಂಬಿಕೊಂಡಿಪ್ಪ ಜೀವರು ಕಾಯದಲ್ಲಿ ವಚನಾಮೃತವ ತುಂಬಿದಡೆ, ಭಿನ್ನಘಟದಲ್ಲಿ ಉದಕವ ಹೊಯ್ದಂತೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪಂಚಮುಖದ ಸರ್ಪನ ತಲೆಯ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ. ಆ ಮಾಣಿಕ್ಯದ ಪ್ರಭೆಯಲ್ಲಿ ನಾನು ನೀನೆಂಬುದ ಮರೆದು ಸ್ವಾನುಭಾವ ಸಿದ್ಧಾಂತವನಳವಟ್ಟು ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಾವನವಾದೆನು ಬಸವಣ್ಣಾ, ನಿಮ್ಮ ಪಾವನಮೂರ್ತಿಯ ಕಂಡು. ಪರತತ್ವವನೈದಿದೆ ಬಸವಣ್ಣಾ, ನಿಮ್ಮ ಪರಮಸೀಮೆಯ ಕಂಡು. ಪದ ನಾಲ್ಕು ಮೀರಿದೆ ಬಸವಣ್ಣಾ, ನಿಮ್ಮ ಪರುಷಪಾದವ ಕಂಡು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದೆ; ಬಸವಣ್ಣಾ, ಬಸವಣ್ಣಾ, ಬಸವಣ್ಣಾ, ನೀನು ಗುರುವಾದೆಯಾಗಿ.
--------------
ಸಿದ್ಧರಾಮೇಶ್ವರ
ಪುರಜನಂಗಳ ಮೆಚ್ಚಿಸುವಾಗ ಪುರುಷಾರ್ಥಿಯೆ ಶರಣ? ಪರಿಜನಂಗಳ ಮೆಚ್ಚಿಸುವಾಗ ಪಾದರಗಿತ್ತಿಯೆ ಶರಣ? ಸರ್ವರ ಮೆಚ್ಚಿಸುವಾಗ ಸಂತೆಯ ಸೂಳೆಯೇ ಶರಣ? ತನ್ನ ಲಿಂಗದ ನಚ್ಚು ಮಚ್ಚು ಪರಬ್ರಹ್ಮದಚ್ಚು. ನಿಂದಕರ ಸುಡುವ ಎದೆಗಿಚ್ಚು ನೋಡ. ಕೆಂಡವ ಕೊಂಡು ಮಂಡೆಯ ತುರಿಸುವಂತೆ ಕೆಂಡಗಣ್ಣನ ಶರಣರ ಇರವನರಿಯದೆ ದೂಷಣೆಯ ಮಾಡುವ ನರಕಿಜೀವಿಗಳ ನರಕದಲ್ಲಿಕ್ಕದೆ ಮಾಬನೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಗುರುವಾರೂ ಇಲ್ಲ ಚೋಳ ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಭಕ್ತರಾರೂ ಇಲ್ಲ ಬಸವಣ್ಣ ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ನಿರ್ವಾಣಿಗಳಾರೂ ಇಲ್ಲ ಅಕ್ಕಗಳು ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಹಿರಿಯರಾರೂ ಇಲ್ಲ ಚೀಲಾಳ ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಗಂಭೀರರಾರೂ ಇಲ್ಲ ಅಜಗಣ್ಣ ತಪ್ಪಿಸಿ. ಇಂತೀ ಐದು ತೆರದನುವು ಆರಿಗೂ ಇಲ್ಲವೆಂದೆನಬೇಡ. ಅವರ ಕರುಣ ಉಳ್ಳವರಿಗೆ ಆ ಮುಕ್ತಿಯುಂಟು. ಆ ಐವರ ಕಾರುಣ್ಯದ ಪ್ರಸಾದವ ಕೊಂಡು ನಾನು ಬಯಲಾದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪುರುಷನಿಂದ ಸತಿ ಹಿರಿಯಳಾದರೂ ಆಗಲಿ, ಹಸೆಹಂದರವನಿಕ್ಕಿ ಮದುವೆಯ ಮಾಡಿದ ಮೇಲೆ ಪುರುಷನಿಂದ ಕಿರಿಯಳು ನೋಡಾ. ಗುರುವಿಗಿಂದ ಶಿಷ್ಯ ಅರುಹುಳ್ಳಾತನಾದರೂ ಆಗಲಿ, ಶಿಷ್ಯನ ಭಾವಕ್ಕೆ ಗುರು ಅದ್ಥಿಕ ನೋಡಾ. ನಾನರುಹುಳ್ಳಾತ, ಗುರುವಿಗರುಹುವಿಲ್ಲೆಂದು ಜರೆದು ನುಡಿವ ನುಡಿ ಅಂಗದೊಳು ಹೊಳೆದರೆ ಕುಂಬ್ಥಿನಿಯ ಪಾಪದೊಳಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪೃಥ್ವಿ ಅಪ್ಪುಗಳಿಲ್ಲದಂದು, ತೇಜ ವಾಯುಗಳಿಲ್ಲದಂದು, ಆಕಾಶ ಆತ್ಮವಿಲ್ಲದಂದು, ರವಿ ಶಶಿಗಳಿಲ್ಲದಂದು, ಸಪ್ತೇಳುಸಾಗರವಿಲ್ಲದಂದು, ಅಷ್ಟಕುಲಪರ್ವತಂಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ನಿಶ್ಚಿಂತ ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು. ಓಗರವನರ್ಪಿಸಬಹುದಲ್ಲದೆ, ಪ್ರಸಾದವನರ್ಪಿಸಬಾರದು. ಗುಹೇಶ್ವರಾ ನಿಮ್ಮ ಶರಣರು, ಹಿಂದ ನೋಡಿ ಮುಂದನರ್ಪಿಸುವರು.
--------------
ಅಲ್ಲಮಪ್ರಭುದೇವರು
ಪರಸ್ತ್ರೀ ಪರಾರ್ಥ ಪರಾನ್ನಕ್ಕೆ ಸುಳಿವ ಅಣ್ಣಗಳು ನೀವು ಕೇಳಿರೆ. ಪರಸ್ತ್ರೀಗೆ ಚಕ್ಷುದಗ್ಧವಾಗಿರಬೇಕು ಕೇಳಿರಣ್ಣಾ . ಪರಾರ್ಥಕ್ಕೆ ಹಸ್ತದಗ್ಧವಾಗಿರಬೇಕು ಕೇಳಿರಣ್ಣಾ . ಪರಾನ್ನಕ್ಕೆ ಜಿಹ್ವೆದಗ್ಧವಾಗಿರಬೇಕು ಕೇಳಿರಣ್ಣಾ . ನಿಂದೆಸ್ತುತಿಗೆ ಕಿವುಡನಾಗಿರಬೇಕು ಕೇಳಿರಣ್ಣಾ . ಬಯಲಬ್ರಹ್ಮವ ನುಡಿವ ತರ್ಕಿಗಳ ಕಂಡಡೆ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು ಶರಣನು ಕೇಳಿರಣ್ಣಾ , ಇವರಿಂಗೆ ಭವನಾಸ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ

ಇನ್ನಷ್ಟು ...
-->