ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಹಿರಿದುಂಟೆಂಬ ನುಡಿ ಚೋದ್ಯವಪ್ಪುದು ಶರಣಂಗೆ. ಅದೇನು ಕಾರಣವೆಂದೊಡೆ, ತನ್ನಿಂದ ತೋರಿದ ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶ ಆತ್ಮ ಸೂರ್ಯ ಚಂದ್ರ ತನ್ನಿಂದೆ ತೋರಿದ ಸಕಲಾರಂಭ. ಇದು ಕಾರಣ, ತಾನೊಂದರಿಂದ ತೋರಿದವನಲ್ಲ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ಕಾರಣನಹುದು ಕಾರ್ಯನಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೊರಗನೆ ಹಾರೈಸಿ ಹೊರಗಣ ಸದಾಚಾರ ಕ್ರಿಯೆಗಳ, ಮನಮುಟ್ಟಿ ಮಾಡುತ್ತಿರಲು; ಇದೆಲ್ಲಿಯ ಹೊರಗಣಸುಖವೆಂದು, ಸುವಿಚಾರ ಕಣ್ದೆರೆದು ನೋಡಲು ಕನ್ನಡಿಯೊಳಗಣ ರೂಪ ತಾನೆಂದರಿವಂತೆ ಮೆಲ್ಲಮೆಲ್ಲನೆ ಒಳಗೆ ಅಡಗಿತ್ತಯ್ಯಾ. ಲಿಂಗಸುಖದ ಸುಗ್ಗಿಯಲ್ಲಿ ಎನ್ನ ಪ್ರಾಣ ಮನ ಕರಣಂಗಳು ಮೇರೆದಪ್ಪಿದ ಸುಖಸಮುದ್ರದೊಳಗೋಲಾಡಿದಂತಾದೆನಯ್ಯಾ ! ಮುಳುಗಿದೆನಯ್ಯಾ, ಸ್ವಾನುಭಾವವೆಂಬ ಗುರುವಿನ ಕರುಣದಲ್ಲಿ. ಇಂತಾದ ಬಳಿಕ ಕೂಡಲಚೆನ್ನಸಂಗಯ್ಯನೆ ಪ್ರಾಣವಾಗಿದ್ದನಯ್ಯಾ.
--------------
ಚನ್ನಬಸವಣ್ಣ
ಹೊನ್ನು ಹೆಣ್ಣು ಮಣ್ಣನಾವರಿಸಿಕೊಂಡು, ಒಡವೆ ಆಭರಣಂಗಳ ಹಲ್ಲಣಿಸಿಕೊಂಡು ಬಂದು, ಸರ್ವರಿಗೆ ಶಾಸ್ತ್ರೋಪದೇಶವ ಹೇಳುವರು ವೇಷಧಾರಿಗಳು. ಸೂಳೆಯರಂತೆ ತಮ್ಮ ಉಪಾದ್ಥಿಕೆಗೆ ಒಡಲಾಸೆಗೆ ಹಿತವಚನ ನುಡಿವರು. ಇಂತಪ್ಪ ಪ್ರಪಂಚಿನ ವೇಷಡಂಭಕ ಧೂರ್ತಲಾಂಛನಧಾರಿಗಳಿಗೆ ಮಹಂತಿನ ದೇವರೆನ್ನಬಹುದೆ ? ಎನಲಾಗದು. ಅದೇನು ಕಾರಣವೆಂದಡೆ, ತಮ್ಮಾದಿಯ ನಿಲುವ ತಾವರಿಯರು. ಷಟ್‍ಸ್ಥಲದ ನಿರ್ಣಯವ ಏನೆಂದರಿಯರು. ಆಚಾರದನುಭಾವದಂತರಂಗದ ಮೂಲವ ಮುನ್ನವೇ ಅರಿಯರು. ಇಂತಿದನರಿಯದ ಪಶುಪ್ರಾಣಿಗಳಿಗೆ ಜಂಗಮವೆನ್ನಬಹುದೆ ? ಎನ್ನಲಾಗದಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹೊನ್ನು ಸಂಸಾರವಲ್ಲ, ಹೆಣ್ಣು ಸಂಸಾರವಲ್ಲ, ಮಣ್ಣು ಸಂಸಾರವಲ್ಲ, ಈ ಮೂರರ ಮೇಲಣ ಮೋಹವೆರಸಿದ ಮನವು ಸಂಸಾರ ನೋಡಾ ! ಆ ಮನವನು ಸಂಸಾರ ಮೋಹವನು ಬೇರ್ಪಡಿಸಿ, ತನ್ನ ಕೂಡಿ ನಡೆವ ಗತಿಮತಿಗಳನಾರನು ಕಾಣೆನಯ್ಯಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹರಗುರುವಾಕ್ಯ ಪ್ರಮಾಣವರಿಯದೆ ಅಜ್ಞಾನವಾವರಿಸಿ ವಾರ ತಿಥಿಯೆಂದು, ಸಂಕ್ರಾಂತಿ ಅಮವಾಸ್ಯೆಯೆಂದು ನೇಮಿಸಿ, ಮಾಡಿ ನೀಡಿ ಕರ್ಮ ಕಳೆದೆನೆಂಬ ವರ್ಮಗೇಡಿಗಳ ನೋಡಾ! ಮತ್ತೊಂದು ವೇಳೆ ಜಂಗಮ ಮನೆಗೆ ಬಂದರೆ ಅಡ್ಡಮೋರೆಯಿಕ್ಕುವ ಗೊಡ್ಡು ಮಾದಿಗರ ಶಿವಭಕ್ತರೆಂದರೆ ಅಘೋರ ನರಕವೈ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಗಲೆನ್ನೆ ಇರುಳೆನ್ನೆ ಉದಯವೆನ್ನೆ ಅಸ್ತಮಾನವೆನ್ನೆ ; ಹಿಂದೆನ್ನ ಮುಂದೆನ್ನ, ನೀನಲ್ಲದೆ ಪೆರತೊಂದಹುದೆನ್ನೆ. ಮನ ಘನವಾದುದಿಲ್ಲವಯ್ಯಾ. ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯಾ. ನಿಮ್ಮ ಶರಣ ಬಸವಣ್ಣನ ತೇಜದೊಳಗಲ್ಲದೆ ಆನಿನ್ನೆಂದು ಕಾಂಬೆನು ಹೇಳಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಹಸಿಯ ಸೊಪ್ಪು ಮುರಿದು ತರುವಾಗ ನೀವೇನು ಆಡಿನ ಮಕ್ಕಳೆ? ಹಸಿಯ ಸೊಪ್ಪು ತಂದು ಬಿಸಿ ಮಾಡಿ ಶಶಿಧರನೆಂಬ ಜಂಗಮಕ್ಕೆ ನೀಡಲು, ಆ ಲಿಂಗದ ಹಸಿವು ಹೋಯಿತ್ತೆಂದಾತ ನಮ್ಮಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಹೊಲದೊಳಗೊಂದು ಹುಲ್ಲೆ ಮರಿಯನೀದು, ಲಲ್ಲೆಯಿಂದ ನೆಕ್ಕುತ್ತಿರಲಾಗಿ, ಅದು ಹುಲಿಯ ಮರಿಯಂತಾಯಿತ್ತೆಂದು ತನ್ನ ಹೊಲಬಿಗೆ ತೋರಿ ಲಲ್ಲೆಯ ಬಿಟ್ಟಿತ್ತು. ಬಿಟ್ಟುದನರಿದು, ಆ ಮರಿ ಹುಲಿಯಾಗಿ ಹುಲ್ಲೆಯ ತಿಂದಿತ್ತು. ಬಂಕೇಶ್ವರಲಿಂಗ, ಎನ್ನಯ ಶಂಕೆಯ ಹೇಳಯ್ಯಾ.
--------------
ಸುಂಕದ ಬಂಕಣ್ಣ
ಹರಿದ ನೀರಿನ ಅಡಿಯ ಕಾಣಬಹುದಲ್ಲದೆ ನಿಂದ ಇಂಗಡಲಿನ ಅಡಿಯ ಕಂಡವರುಂಟೆ? ಚಲನೆಯಿಂದ ತೋರುವ ತೋರಿಕೆಯ ಕಾಣಬಹುದಲ್ಲದೆ ಶಬ್ದ ಮುಗ್ಧವಾದ ಶರಣನ ಚಿತ್ತವ ಭೇದಿಸಬಹುದೆ? ಅದು ಸರಿಹರಿದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 99 ||
--------------
ದಾಸೋಹದ ಸಂಗಣ್ಣ
ಹುತ್ತವ ಕಂಡಲ್ಲಿ ಹಾವಾಗಿ, ನೀರ ಕಂಡಲ್ಲಿ [ಒಳ್ಳೆ]ಯಾದವನ ಮಚ್ಚುವನೆ ಬಾರದ ಭವಂಗಳಲ್ಲಿ ಬರಿಸುವನಲ್ಲದೆ ಮಚ್ಚುವನೆ ಅಘೋರನರಕವನುಣಿಸುವನಲ್ಲದೆ, ಮಚ್ಚುವನೆ ಅಟಮಟದ ಭಕ್ತರ ಕಂಡಡೆ, ಕೋಟಲೆಗೊಳಿಸುವ ಕೂಡಲಸಂಗಮದೇವ.
--------------
ಬಸವಣ್ಣ
ಹೆಂಡಿರು_ಮಕ್ಕಳಿಗೆ ಕುಲದೈವ ಮನೆದೈವವಲ್ಲದೆ ಎನಗೆ ಕುಲದೈವ ಮನೆದೈವವಿಲ್ಲೆಂಬ ಭಂಡನ ಭಕ್ತಿಯ ಪರಿಯ ನೋಡಾ. [ಆ] ಯುಕ್ತಿಶೂನ್ಯಂಗೆ ಮುಂದೆ ದೃಷ್ಟವ ಹೇಳಿಹೆನು: ತನ್ನ ಹೆಂಡತಿ ಮತ್ತೊಬ್ಬನ ಮೆಚ್ಚಿಕೊಂಡು ಹೋಗುತ್ತಿರೆ, ಹೋದರೆ ಹೋಗಲಿ ಎಂದು ಸೈರಿಸಬಲ್ಲಡೆ ತಾನವರೊಳಗಲ್ಲ. ಅಕಟಕಟಾ ಲೌಕಿಕಕ್ಕೆ ಆಜ್ಞೆಯುಂಟು ಪಾರಮಾರ್ಥಕ್ಕೆ ಆಜ್ಞೆಯಿಲ್ಲವೆ ! ಇದು ಕಾರಣ_ಕೂಡಲಚೆನ್ನಸಂಗಯ್ಯಾ ಭಕ್ತನಾಗಿ ಭವಿಯ ಬೆರಸುವ ಅನಾಚಾರಿಯ ತೋರದಿರಯ್ಯಾ.
--------------
ಚನ್ನಬಸವಣ್ಣ
ಹಣ್ಣ ಹಿಡಿದ ಬಾಲಕಂಗೆ ಬೆಲ್ಲವ ಕೊಟ್ಟೇನು ಹಣ್ಣ ತಾ ಎಂಬಂತೆ, ಮಣ್ಣು ಮೂರನು ಹಿಡಿದ ಭಕ್ತಂಗೆ ಮುಕ್ಕಣ್ಣನ ಪದವಿ ಕೊಟ್ಟೇವೆಂಬ ತೆರನಂತೆ, ಗುರು-ಲಿಂಗ-ಜಂಗಮರು ಬೇಡುವರಲ್ಲದೆ, ತಮ್ಮಿಚ್ಛೆಗೆ ಕೈಯಾನುವರೆ ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ಹಸಿಯ ಜವ್ವನೆಯರ ರಸನೆಯ ನವೀನ ಚಾತುರ್ಯಕ್ಕಂಗ ಮನ ಭಾವವಿತ್ತು, ಆದಿ ಮಧ್ಯ ಅವಸಾನವ ಮರೆದು ಅತ್ತಿತ್ತ ಬಿದ್ದು ಬಳಲುವ ಕತ್ತೆ ನಾಯಿಯ ಕರ್ಮ ಭವಿಗಳಿಗಿನ್ನೆತ್ತಣ ಜ್ಞಾನವಯ್ಯಾ ನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಹೋತನ ಹೊಡದು, ಆಡ ಕೂಡಿ, ಕುರಿಯ ನಿಲಿಸಿ, ತಗರ ತಡದು, ಹಿಂಡನೊಬ್ಬುಳಿತೆಮಾಡಿ, ಹುಲಿ ತೋಳ ಚೋರ ಭಯಮಂ ಕಳೆದು, ಹಿಂಡಿಗೊಡೆಯನಾಗಿ ಕಾವ ಗೊಲ್ಲಾಳ ನೀನೆ, ವೀರಬೀರೇಶ್ವರಾ.
--------------
ವೀರ ಗೊಲ್ಲಾಳ/ಕಾಟಕೋಟ
ಹಗಲು ಮನಸಿಂಗಂಜಿ ಇರುಳು ಕನಸಿಂಗಂಜಿ ಧ್ಯಾನ ಮೋನಿಯಾಗಿರ್ದಳವ್ವೆ. ಸಖಿ ಬಂದು ಬೆಸಗೊಂಡಡೆ, ಏನೆಂದು ಹೇಳುವಳವ್ವೆ ಏನೆಂದು ನುಡಿವಳವ್ವೆ? ಸಾಕಾರದಲ್ಲಿ ಸವೆಸವೆದು ನಿರಾಕಾರದಲರ್ಪಿಸಿದಡೆ ಮಹಾಲಿಂಗ ಗಜೇಶ್ವರನುಮೇಶ್ವರನಾಗಿರ್ದನವ್ವೆ.
--------------
ಗಜೇಶ ಮಸಣಯ್ಯ

ಇನ್ನಷ್ಟು ...
-->