ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಆತ್ಮಂಗೆ ಕಾಯವೆ ರೂಪು. ಆ ಕಾಯಕ್ಕೆ ಆತ್ಮನೆ ಹಾಹೆ. ಆ ಹಾಹೆಗೆ ಅರಿವೇ ಬೀಜ. ಆ ಬೀಜಕ್ಕೆ ಗೋಪತಿನಾಥ ವಿಶ್ವೇಶ್ವರಲಿಂಗವೆ ನಿರ್ವೀಜ.
--------------
ತುರುಗಾಹಿ ರಾಮಣ್ಣ
ಆನು ಭಕ್ತ, ಆನು ಶರಣ, ಆನು ಲಿಂಗೈಕ್ಯನೆಂದೊಡೆ ಲಿಂಗವು ನಗದೆ? ಪಂಚೇಂದ್ರಿಯಂಗಳು ನಗವೆ? ಅರಿಷಡ್ವರ್ಗಂಗಳು ನಗವೆ? ಎನ್ನ ತನುವಿನೊಳಗಣ ಸತ್ವರಜತಮೋ ಗುಣಂಗಳು ನಗವೆ? ಹೇಳಯ್ಯಾ ಉಳಿಯುಮೇಶ್ವರಾ?
--------------
ಉಳಿಯುಮೇಶ್ವರ ಚಿಕ್ಕಣ್ಣ
ಆಕಳ, ಕಳ್ಳರು ಕೊಂಡೊಯ್ದರೆನ್ನದಿರಿಂ ಭೋ, ನಿಮ್ಮ ಧರ್ಮ ! ಬೊಬ್ಬಿಡದಿರಿಂ ಭೋ, ನಿಮ್ಮ ಧರ್ಮ ! ಅರರಸಾಡದಿರಿಂ ಭೋ, ನಿಮ್ಮ ಧರ್ಮ ! ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ, ಕೂಡಲಸಂಗಮದೇವ ಏಕೋಭಾವ.
--------------
ಬಸವಣ್ಣ
ಆನೆ ಕುದುರೆ ಭಂಡಾರವಿರ್ದಡೇನೊ? ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ. ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ. ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ? ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ. ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆರು ಶಿಲೆಯ ಮಂಟಪದೊಳಗೆ ಮೂವರು ಪುರುಷರು ಕೂಡಿ ಮಹಾಲಿಂಗದ ಧ್ಯಾನವಂ ಮಾಡಿ, ಪರಿಪೂರ್ಣದೇಶಕೆ ಹೋಗಿ ನಿಸ್ಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಚಾರಲಿಂಗಾನುಭಾವದಿಂದ ಪೃಥ್ವಿಯ ಪೂರ್ವಾಶ್ರಯವನಳಿದ ಸದಾಚಾರನಿಷ್ಠನ ನೋಡಾ! ಸದ್ಗುರುರತಿಯಿಂದ ಅಪ್ಪುತತ್ವದ ಪೂರ್ವಾಶ್ರಯವನಳಿದು ಸದ್ಗುರುನಿಷ್ಠನ ನೋಡಾ! ಶಿವಲಿಂಗದ ಸಂಗದಿಂದ ಅಗ್ನಿಯ ಪೂರ್ವಾಶ್ರಯವನಳಿದ ಶಿವಲಿಂಗಪ್ರೇಮಿಯಾದ ಶಿವಾಚಾರನಿಷ್ಠನ ನೋಡಾ! ಚರಲಿಂಗದ ಸಂಗದಿಂದ ವಾಯುವಿನ ಪೂರ್ವಾಶ್ರಯವನಳಿದ ಜಂಗಮಲಿಂಗಗ್ರಾಹಕನ ನೋಡಾ! ಪ್ರಸಾದಲಿಂಗದ ಸೇವಕತ್ವದಿಂದ ಕರ್ಮತ್ರಯವನಳಿದ ನಿರ್ಮಲ ನಿರಾವರಣನ ನೋಡಾ! ಮಹಾಲಿಂಗದ ಸಂಗದಿಂದ ಜೀವಭಾವವಳಿದ ಮಹಾಮಹಿಮನ ನೋಡಾ! ಲಿಂಗನಿಷ್ಠೆಯಿಂದ ಅಂಗಗುಣಂಗಳೆಲ್ಲವ ಕಳೆದುಳಿದ ನಿರಂಗಸಂಗಿಯ ನೋಡಾ! ಇಂತಪ್ಪ ಮಹೇಶ್ವರಂಗೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಚಾರಲಿಂಗ ನಾಸ್ತಿಯಾದಲ್ಲದೆ ಭಕ್ತನಲ್ಲ. ಗುರುಲಿಂಗ ನಾಸ್ತಿಯಾದಲ್ಲದೆ ಮಾಹೇಶ್ವರನಲ್ಲ. ಶಿವಲಿಂಗ ನಾಸ್ತಿಯಾದಲ್ಲದೆ ಪ್ರಸಾದಿಯಲ್ಲ. ಜಂಗಮಲಿಂಗ ನಾಸ್ತಿಯಾದಲ್ಲದೆ ಪ್ರಾಣಲಿಂಗಿಯಲ್ಲ. ಪ್ರಸಾದಲಿಂಗ ನಾಸ್ತಿಯಾದಲ್ಲದೆ ಶರಣನಲ್ಲ, ಇಂತೀ ಷಡಂಗಗಳು ಕೆಟ್ಟಲ್ಲದೆ ಸೌರಾಷ್ಟ್ರ ಸೋಮೇಶ್ವರನಲ್ಲಿ ಲಿಂಗೈಕ್ಯನಲ್ಲ.
--------------
ಆದಯ್ಯ
ಆರೂ ಇಲ್ಲದವಳೆಂದು ಆಳಿಗೊಳಲುಬೇಡ ಕಂಡೆಯಾ ಏನ ಮಾಡಿದಡೂ ಆನಂಜುವಳಲ್ಲ. ತರಗೆಲೆಯ ಮೆಲಿದು ಆನಿಹೆನು, ಸರಿಯ ಮೇಲೊರಗಿ ಆನಿಹೆನು. ಚೆನ್ನಮಲ್ಲಿಕಾರ್ಜುನಯ್ಯಾ, ಕರ ಕೇಡನೊಡ್ಡಿದಡೆ ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು.
--------------
ಅಕ್ಕಮಹಾದೇವಿ
ಆ ಅನಾಹತಚಕ್ರದ ದ್ವಾದಶದಳದ ಪದ್ಮವ ಪೊಕ್ಕು ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಕುಂಕುಮವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ, ಅಗ್ನಿಯ ಪಟುಮಾಡಿ,ಮನ ಪವನ ಬಿಂದು ಸಂಯೋಗದಿಂದ ವಿಶುದ್ಧಿಚಕ್ರದ ಷೋಡಶದಳದ ಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆಡಿ ಅಳುಪದಿರಾ, ಲೇಸಮಾಡಿ ಮರುಗದಿರಾ, ಎಲೆ ಮನವೆ. ಕೂಡಿ ತಪ್ಪದಿರಾ, ಬೇಡಿದವರಿಗಿಲ್ಲೆನ್ನದಿರು ಕಂಡಾ. ನಾಡ ಮಾತು ಬೇಡ, ಸೆರಗೊಡ್ಡಿ ಬೇಡು ಕೂಡಲಸಂಗನ ಶರಣರ. 279
--------------
ಬಸವಣ್ಣ
ಆರು ಇಲ್ಲದ ಅರಣ್ಯದಲ್ಲೊಂದು ಬೀಜವಿಲ್ಲದ ವೃಕ್ಷ ಪುಟ್ಟಿತ್ತು. ಆ ವೃಕ್ಷಕ್ಕೆ ಹೂವಿಲ್ಲದೆ ಕಾಯಿಯಾಯಿತ್ತು; ಕಾಯಿಯಿಲ್ಲದೆ ಹಣ್ಣಾಗಿತ್ತು. ಗಾಳಿಯಿಲ್ಲದೆ ಗಂಧವ ತೋರಿತ್ತು. ಆ ವಾಸನಕ್ಕೆ ಪಕ್ಕವಿದಲ್ಲದ ಹಕ್ಕಿ ಹಾರಿಹೋಗಿ ಹಣ್ಣನೆ ಕಚ್ಚಿತ್ತು. ಆ ಹಣ್ಣಿನ ರಸ ಭೂಮಿಯಮೇಲೆ ಸುರಿಯಲು ಭೂಮಿ ಬೆಂದು, ಸಮುದ್ರ ಬತ್ತಿ, ಅರಸನ ಮಾರ್ಬಲವೆಲ್ಲ ಪ್ರಳಯವಾಗಿ, ಅರಸು ಪ್ರಧಾನಿ ಸತ್ತು ಅರಸಿ ಅರಮನೆಯಲ್ಲಿ ಬಯಲಾಗಿ, ಎತ್ತ ಹೋದರೆಂದರಿಯಬಲ್ಲರೆ ಗುಹೇಶ್ವರಲಿಂಗವು ತಾನೆಯೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಯಷ್ಟವಿಧದೊಳಗಾರಾರ್ಕೂಡಿ ಮೂವತ್ತಾರಾಗಲ್ ಅರ್ಪಿತದಾಪ್ರಸಾದದಾರಿಂತಿರಾರ್ಕೂಡೆ ಪದಿನೆರಡಾಗಲೊಡಂ ಎಂದಿನಂತೆ ನಾಲ್ವತ್ತೆಂಟಾಯ್ತಯ್ಯಾ, ಪರಮ ಶಿವಲಿಂಗೇಶ್ವರ ಸಕಲ ಭುವನೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಆದಿಯಲ್ಲಿ ಒಬ್ಬ ದೇವನು ಮೂವರ ಕೂಡಿಕೊಂಡು ಆರು ಕೇರಿಗಳ ಪೊಕ್ಕು ನೋಡಲು ಆ ಕೇರಿಗಳಲ್ಲಿ ಆರು ಶಕ್ತಿಯರು ನಿಶಿಧ್ಯಾನವ ಮಾಡಿ ಒಳಹೊರಗೆ ಪರಿಪೂರ್ಣವಾಗಿಹರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಡಾಡಿ ಉಂಡುಹೋಗುವರ ನಾಡಸಂಪನ್ನರ ಮಾಡಿಟ್ಟರೆ ನೋಡ ಬಂದವರನುವನವರೆತ್ತ ಬಲ್ಲರಯ್ಯಾ? ಬಾ ಎನ್ನ ಕೂಡಿ ಉಂಡು ಕುಲವ ನೋಡಯ್ಯಾ ನಿಮ್ಮಲ್ಲಿ ಗುರುನಿರಂಜನ ಚನ್ನ ಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆದಿಯಲ್ಲಿ ಹುಟ್ಟಿತ್ತಲ್ಲ, ಅನಾದಿಯಲ್ಲಿ ಬೆಳೆಯಿತ್ತಲ್ಲ; ಮೂರ್ತಿಯಲ್ಲಿ ನಿಂದುದಲ್ಲ, ಅಮೂರ್ತಿಯಲ್ಲಿ ಭಾವಿಯಲ್ಲ; ಅರಿವಿನೊಳಗೆ ಅರಿದುದಲ್ಲ, ಮರಹಿನೊಳಗೆ ಮರೆದುದಿಲ್ಲ; ಎಂತಿರ್ದಡಂತೆ ಬ್ರಹ್ಮ ನೋಡಾ ! ಮನ ಮನ ಲೀಯವಾಗಿ ಘನ ಘನ ಒಂದಾದಡೆ ಮತ್ತೆ ಮನಕ್ಕೆ ವಿಸ್ಮಯವೇನು ಹೇಳಾ ? ಕೂಡಲಚೆನ್ನಸಂಗನ ಶರಣರು ಕಾಯವೆಂಬ ಕಂಥೆಯ ಕಳೆಯದೆ ಬಯಲಾದಡೆ ನಿಜವೆಂದು ಪರಿಣಾಮಿಸಬೇಕಲ್ಲದೆ ಅಂತಿಂತೆನಲುಂಟೆ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ

ಇನ್ನಷ್ಟು ...
-->