ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಓದಿನಲ್ಲಿ ಕಾಬಡೆ ಅಕ್ಷರಜ್ಞನಲ್ಲ, ಪಾಠದಲ್ಲಿ ಕಾಬಡೆ ಗಂಧರ್ವನಲ್ಲ. ಬಯಲಿನಲ್ಲಿ ಕಾಬಡೆ ಭೂಮಿಯಾಕಾಶ ಮಧ್ಯದಲ್ಲಿಪ್ಪವನಲ್ಲ. ಅರಸಿದಡೆ ಎಲ್ಲಿಯೂ ಇಲ್ಲ, ಅರಸದಿರ್ದಡೆ ಅಲ್ಲಿಯೇ ಇಹೆ. ನಿನ್ನ ಬಲ್ಲವರಾರೊ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಓದಿ ಓದಿ ವೇದ ವಾದಕ್ಕಿಕ್ಕಿತ್ತು. ಕೇಳೀ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು. ಅರಿದೆ ಅರಿದೆನೆಂದು ಆಗಮ ಅಗಲಕ್ಕೆ ಹರಿಯಿತ್ತು. ನೀನೆತ್ತ ನಾನೆತ್ತಲೆಂದು_ ಬೊಮ್ಮ ಬಕ್ಕಟ ಬಯಲು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ, ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ, ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ. ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ, ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ, ಕೂಡಲಸಂಗಮದೇವ ಶ್ವಪಚನ ಮೆರೆದಡೆ ಜಾತಿಭೇದವ ಮಾಡಲಮ್ಮವು.
--------------
ಬಸವಣ್ಣ
ಓಂ ನಮಃ ಶಿವಾಯ ಎಂಬುದೆ ವೇದ, ಓಂ ನಮಃ ಶಿವಾಯ ಎಂಬುದೆ ಶಾಸ್ತ್ರ, ಓಂ ನಮಃ ಶಿವಾಯ ಎಂಬುದೆ ಪುರಾಣ, ಓಂ ನಮಃ ಶಿವಾಯ ಎಂಬುದೆ ಆಗಮ, ಓಂ ನಮಃ ಶಿವಾಯ ಎಂಬುದೆ ಸಕಲಕಲೆ. ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದೆನಲು ಸರ್ವಜ್ಞ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಓಂಕಾರವೇ ಪಂಚಭೂತಾತ್ಮಮಯ ನೋಡ. ನಕಾರವೇ ದಶೇಂದ್ರಿಯ, ಮಃಕಾರವೇ ಮನಪಂಚಕಂಗಳು ನೋಡ. ಶಿಕಾರವೇ ಪ್ರಾಣಸ್ವರೂಪು, ವಾಕಾರವೇ ದಶವಾಯುಗಳಸ್ವರೂಪು, ಯಕಾರವೇ ತ್ರಿಗುಣಸ್ವರೂಪು ನೋಡ. ಓಂಕಾರವೇ ಪಾದಾದಿ ಮಸ್ತಕಪರಿಯಂತರ ಪರಿಪೂರ್ಣವಾಗಿ ತ್ವಗುಮಯವಾಗಿಪ್ಪುದು. ನಕಾರವೇ ರುದ್ಥಿರಮಯವಾಗಿಪ್ಪುದು. ಮಃಕಾರವೇ ಮಾಂಸಮಯವಾಗಿಪ್ಪುದು. ಶಿಕಾರವೇ ಮೇದಸ್ಸುಮಯವಾಗಿಪ್ಪುದು. ವಾಕಾರವೇ ಅಸ್ಥಿಮಯವಾಗಿಪ್ಪುದು. ಯಕಾರವೇ ಮಜ್ಜಾಮಯವಾಗಿಪ್ಪುದು. ಈ ಷಡಕ್ಷರಮಂತ್ರವೆಲ್ಲವು ಕೂಡಿ ಶುಕ್ಲಮಯವಾಗಿಪ್ಪುದು ನೋಡಾ. ಇದು ಕಾರಣ, ಶರಣನ ಸಪ್ತಧಾತು ಸರ್ವೇಂದ್ರಿಯ ವಿಷಯ ಕರಣಂಗಳೆಲ್ಲವು ಷಡಕ್ಷರಮಂತ್ರಮಯವಾಗಿಪ್ಪವು. ಇದು ಕಾರಣ, ಶರಣನ ಶರೀರವೆ ಶಿವನ ಶರೀರ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಓಹೋ ನಮಃ ಶಿವಾಯ,_ ಮಹದಾಕಾಶದ ಮರೆಯಲ್ಲಿರ್ದ ಶಾಂತ್ಯರ್ಕನ ನಿಲವೊ ! ದಶಮರುತನ ಹೊಯಿಲಿಲ್ಲದೆ, ತಾನೆ ಲಿಂಗದ ಜ್ಞಾನಜ್ಯೋತಿಯ ನಿಲವೊ ! ತನ್ನಿಂದ ತಾನಾಗಿ ಮುಕ್ತಿಯೆ ಕರಿಗೊಂಡ ಮುಕ್ತಿಯ ಮುತ್ತಿನ ಧವಳಕಾಂತಿಯ ನಿಲವೊ ! ರುದ್ರಾಕ್ಷಿಯ ಹಂಗು ಬೇಡವೆಂದು ಹೊದ್ದ ಚರ್ಮದ ಹೊದಿಕೆಯಂ ತೆಗೆದ ಗಿಟಿ ಗಿಟಿ ಜಂತ್ರದ ನಿಲವೊ ! ಅಲ್ಲ, ತನ್ನ ನಿಲವನರಿಯದೆ ವಾದಿಸುತ್ತಿರಲು ಉರಿಲಿಂಗೋದ್ಭವವಾದ ಉರಿಲಿಂಗದ ನಿಲವೋ ! ಆವ ನಿಲವೆಂದರಿಯಬಾರದು ! ಗುಹೇಶ್ವರನ ಕಂಗಳಿಗೆ ಒಂದಾಶ್ಚರ್ಯ ತೋರಿತ್ತು ಕಾಣಾ ಸಂಗನಬಸವಣ್ಣಾ !
--------------
ಅಲ್ಲಮಪ್ರಭುದೇವರು
ಓಡಲಾರದ ಮೃಗವು ಸೊಣಗಂಗೆ ಮಾಂಸವನೀವಂತೆ ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ, ಹಿರಿಯರು ನರಮಾಂಸವ ಭುಂಜಿಸುವರೆ ತನುವುಕ್ಕಿ ಮನವುಕ್ಕಿ ಮಾಡಬೇಕು ಭಕ್ತನು, ಮಾಡಿಸಿಕೊಳ್ಳಬೇಕು ಜಂಗಮ, ಕೂಡಲಸಂಗಮದೇವಾ. 230
--------------
ಬಸವಣ್ಣ
ಓಂ ನಮಃ ಶಿವಾಯ ಓಂ ನಮಃ ಶಿವಾಯ ಎನ್ನದಿದ್ದಡೆ ಬಂಧನ, ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದಡೆ ಮೋಕ್ಷ, ಅದೆಂತೆಂದಡೆ: ಷಡಕ್ಷರಜಪಾನ್ನಾಸ್ತಿ ಸರ್ವೇಷಾಂ ಬಂಧನಂ ತಥಾ ತನ್ಮಂತ್ರಜಪತೋ ಭಕ್ತ್ಯಾ ಸದ್ಯೋ ಮೋಕ್ಷೋ ನ ಸಂಶಯಃ ಎಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯಾ, ಬಂಧನ ಮೋಕ್ಷವು ಓಂ ನಮಃ ಶಿವಾಯ.
--------------
ಉರಿಲಿಂಗಪೆದ್ದಿ
ಓಂ ಎಂಬುದು ಬ್ರಹ್ಮಾಕ್ಷರ. ನ ಎಂಬುದು ನಾರಾಯಣಬೀಜ. ಮ ಎಂಬುದು ಮಹಾದೇವನ ಬೀಜಾಕ್ಷರ. ಇಂತೀ ತ್ರಿವಿಧ ಭೇದ ಕೂಡಿದಲ್ಲಿ ಈಶ್ವರತತ್ವ. ಇಂತೀ ಭೇದ : ಪಂಚವಿಂಶತ್ತತ್ವವಾಗಲಾಗಿ ಆಚಾರ್ಯನ ಅಂಗಭೇದ. ಇಂತೀ ಕ್ರೀಮಾರ್ಗದ ನಿಜ ಅರಿವಿನ ಆಚರಣೆ, ಉಭಯವು ಏಕವಾದಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಸಯರೂಪಾದಂಗ.
--------------
ಪ್ರಸಾದಿ ಭೋಗಣ್ಣ
ಓಂ ನಮಃ ಶಿವಾಯ ಎಂಬುದೆ ಋಷಿ, ಓಂ ನಮಃ ಶಿವಾಯ ಎಂಬುದೆ ಮಂತ್ರ, ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದೆನೆ ಸದ್ಯೋನ್ಮುಕ್ತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಓಂ ನಮಃ ಶಿವಾಯವೆಂಬ ಮೂಲಮಂತ್ರದಿಂದ ಗಿರಿಜೆ ಪಾದೋದಕವ ಮಾಡಿಕೊಂಡು ಬಂದು ನಿಂದು ಗೊಡ್ಡಿನ ಮೇಲೆ ತಳಿದಳು. ತಳಿಯಲು ಗೊಡ್ಡುಗಳು ಕಾಮಧೇನುಗಳಾಗಿ ಕರೆಯಲು, ಆ ಕಾಮಧೇನುಗಳು ಕರೆದ ಕಾರಣದಿಂದ ಅಲ್ಲಿ ಕ್ಷೀರಸಮುದ್ರ ಹುಟ್ಟಿತು ನೋಡಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಓಡ ಹಿಡಿದವನ ಕೈ ಮಸಿಯೆಂಬುದ ನಾಡೆಲ್ಲ ಬಲ್ಲರು. ಅವನ ಕೂಡೆ ಆಡಲಾಗದು ಅಯ್ಯಾ, ತನಗಾ ಮಸಿ ಹತ್ತೂದಾಗಿ. ಲಿಂಗವಿರೋಧಿಯ ಕೈವಿಡಿದಾಡುವವ ಮುನ್ನವೆ ವ್ರತಗೇಡಿ. ಅಂಥವನ ಸಂಗ ಬೇಡಯ್ಯಾ, ತನಗಾ ಭಂಗ ಬಂದುದಾಗಿ. ಅದೆಂತೆಂದಡೆ : ಜಗದ ಕರ್ತ ಶಿವನ ವಿರೋಧವ ಮಾಡಿ ದಕ್ಷನೊಬ್ಬ ಯಾಗವನಿಕ್ಕಲು, ತೆತ್ತೀಸಕೋಟಿದೇವರ್ಕಳೆಲ್ಲಾ ತೊತ್ತಳದುಳಿಸಿಕೊಂಡು, ನುಚ್ಚುನುರಿಯಾಗಿ ಹೋದರು ನೋಡಾ, ಅವನಂಗ ಸಂಗದಲ್ಲಿದ ಕಾರಣ. ಗೆಲ್ಲ ಸೋಲಕೆ ಇಕ್ಕು ಮುಂಡಿಗೆ, ಏರು ಮುಂಡಿಗೆಯೆಂಬ ಮಚ್ಚರಕ್ಕೆ ಮುಂದುವಿಡಿದು ಮುಡುಹಿಕ್ಕಿ ಕೆಲದಾಡುವರೆಲ್ಲಾ. ತಮ್ಮ ಮನದಲ್ಲಿ ತಾವರಿದು ಒಯ್ಯನೆ ತೊಲಗುವರು. ಮೇಲೆ ಲಿಂಗ ನಿರೂಪದಿಂದ ಬಂದ ಕಾರ್ಯಕ್ಕೆ ಅಂಜರು, ಏಕಾಂಗವೀರರು. ವಾಯದ ಹರೆಮಾತಿನ ಮಾಲೆಗೆ ಬೆದರಿ ಬೆಚ್ಚಿ ಓಡುವನಲ್ಲ, ಏಕೋಭಾವ ನಿಷೆ* ನಿಬ್ಬೆರಗು ಗಟ್ಟಿಗೊಂಡ ದೃಢಚಿತ್ತವುಳ್ಳ ಸದ್ಭಕ್ತ. ಇಂತಪ್ಪ ಉಲುಹಡಗಿದ ಶರಣರ ಸಂಗದಲ್ಲಿರಿಸಿ ಬದುಕುವಂತಿರಿಸಯ್ಯಾ, ವರದ ಶಂಕರೇಶ್ವರಾ.
--------------
ವರದ ಸಂಕಣ್ಣ
ಓಂ ನಮಃ ಶಿವಾಯವೆಂಬ ಷಡಕ್ಷರಮಂತ್ರವ ಮಹಾಜ್ಞಾನದಿಂದ ತಿಳಿದು, ನಿರಪೇಕ್ಷಲಿಂಗದೊಳು ಕೂಡಿ ನಿಸ್ಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಂ ನಮೋ ಶಿವಾಯವೆಂಬ ಮಂತ್ರವು ನೆನಹಿಂಗೆ ಬಾರದಂದು. ತಾನುತಾನೆಂಬುದು ಭಾವಕೆ ತೋರದಂದು. ಎಂತಿರ್ದ ಬ್ರಹ್ಮವು ತಾನೇ ನೋಡಾ ! ಆ ಬ್ರಹ್ಮದ ಚಿದ್ವಿಲಾಸದಿಂದ ಚಿದಾತ್ಮನಾದ. ಆ ಚಿದಾತ್ಮನ ಭಾವದಿಂದ ಜ್ಞಾನಾತ್ಮನಾದ. ಆ ಜ್ಞಾನಾತ್ಮನ ಭಾವದಿಂದ ಆಧ್ಯಾತ್ಮನಾದ. ಆ ಆಧ್ಯಾತ್ಮನ ಭಾವದಿಂದ ನಿರ್ಮಲಾತ್ಮನಾದ. ಆ ನಿರ್ಮಲಾತ್ಮನ ಭಾವದಿಂದ ಶುದ್ಧಾತ್ಮನಾದ. ಆ ಶುದ್ಧಾತ್ಮನ ಭಾವದಿಂದ ಬದ್ಧಾತ್ಮನಾದ. ಆ ಬದ್ಧಾತ್ಮನ ಭಾವಕೆ ಭಕ್ತನಾದ. ಆ ಶುದ್ಧಾತ್ಮನ ಭಾವಕೆ ಮಹೇಶ್ವರನಾದ. ಆ ನಿರ್ಮಲಾತ್ಮನ ಭಾವಕೆ ಪ್ರಸಾದಿಯಾದ ಆ ಆಧ್ಯಾತ್ಮನ ಭಾವಕೆ ಪ್ರಾಣಲಿಂಗಿಯಾದ. ಆ ಜ್ಞಾನಾತ್ಮನ ಭಾವಕೆ ಶರಣನಾದ. ಆ ಚಿದಾತ್ಮನ ಭಾವಕೆ ಐಕ್ಯನಾದ. ಆ ಐಕ್ಯನ ಕರಕಮಲಕೆ ಮಹಾಲಿಂಗನಾದ. ಆ ಶರಣನ ಕರಕಮಲಕೆ ಪ್ರಸಾದಲಿಂಗನಾದ. ಆ ಪ್ರಾಣಲಿಂಗಿಯ ಕರಕಮಲಕೆ ಜಂಗಮಲಿಂಗನಾದ. ಆ ಪ್ರಸಾದಿಯ ಕರಕಮಲಕೆ ಶಿವಲಿಂಗನಾದ. ಆ ಮಹೇಶ್ವರನ ಕರಕಮಲಕೆ ಗುರುಲಿಂಗನಾದ. ಆ ಭಕ್ತನ ಕರಕಮಲಕೆ ಆಚಾರಲಿಂಗನಾದ. ಆ ಆಚಾರಲಿಂಗಕೆ ಕ್ರಿಯಾಶಕ್ತಿ, ಆ ಗುರುಲಿಂಗಕೆ ಜ್ಞಾನಶಕ್ತಿ, ಆ ಶಿವಲಿಂಗಕೆ ಇಚ್ಫಾಶಕ್ತಿ, ಆ ಜಂಗಮಲಿಂಗಕೆ ಆದಿಶಕ್ತಿ, ಆ ಪ್ರಸಾದಲಿಂಗಕೆ ಪರಾಶಕ್ತಿ, ಆ ಮಹಾಲಿಂಗಕೆ ಚಿಚ್ಭಕ್ತಿ. ಆ ಚಿಚ್ಫಕ್ತಿಸಂಗದಿಂದ ಚಿದ್ಬ್ರಹ್ಮವ ಕೂಡಿ ಚಿದಾನಂದಸ್ವರೂಪವಾದನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಂಕಾರದಲ್ಲಿ ಉಗ್ಘಡಿಸುತ್ತಿರಲಾಗಿ, ಕೆಲಬಲದವರು ಓಡರಿನ್ನೆಂತೊ ? ಅದು ಎನ್ನಾಜ್ಞೆಯಲ್ಲ; ಎನ್ನೊಡೆಯನ ಹಂದೆತನ. ಸುಮ್ಮನಿರ್ದಡೆ ಎನ್ನ ಕೇಡು, ಹೇಳಿದಡೆ ಒಡೆಯಂಗೆ ಹಾನಿ. ಕೂಡಲಸಂಗಮದೇವರಲ್ಲಿ ಬಸವಣ್ಣಾ ಹಿಂಗದಿರು ನಿನ್ನ ಭೃತ್ಯನೆಂದು.
--------------
ಉಗ್ಘಡಿಸುವ ಗಬ್ಬಿದೇವಯ್ಯ

ಇನ್ನಷ್ಟು ...
-->