ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಚಿನ್ನದಿಂದಾದ ಬಂಗಾರ ಚಿನ್ನದ ರೂಪಲ್ಲದೆ ಮತ್ತೊಂದು ರೂಪಾಗಬಲ್ಲುದೆ ಹೇಳಾ? ಲಿಂಗಮುಖದಿಂದ ಉದಯವಾದ ಶರಣರು ಲಿಂಗದ ರೂಪಲ್ಲದೆ, ಮತ್ತೊಂದು ರೂಪೆಂದೆನಬಹುದೇ? ಎನಲಾಗದು ನೋಡ. ಶಿವನ ಅಂಶವಾದ ಶರಣರಿಗೆ ಮಲಿನಭಾವ ಕಲ್ಪಿಸುವ ಮಹಾಪಾತಕರಿಗೆ ನಾಯಕನರಕ ತಪ್ಪದು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿತ್ರದ ಬೊಂಬೆಯ ಹಾಹೆ ಎಲ್ಲಕ್ಕೂ ಆತ್ಮನಿಂದ ಚೇತನಿಸಿ ನಡೆಯುತ್ತಿಹವೆ ? ಅವು ಸೂತ್ರಾಧಿಕನ ಭೇದ, ಎನ್ನ ಶಕ್ತಿಜಾತಿಯ ಲಕ್ಷಣ. ನಿಮ್ಮ ಭಕ್ತಿಸೂತ್ರದಿಂದ ಎನ್ನ ಸ್ತ್ರೀಜಾತಿ ನಿಮ್ಮ ಶ್ರೀಪಾದದಲ್ಲಿ ಅಡಗಿತ್ತು. ಎನಗೆ ಭಿನ್ನದ ಮಾತಿಲ್ಲ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನೆಂಬವರು ನೀವೆ ?
--------------
ಮೋಳಿಗೆ ಮಹಾದೇವಿ
ಚಿದ್ಬಿಂದುಮುಖದಿಂದ ಭಾವಿಸಿ ಮಾಡುವುದು, ಚಿನ್ನಾದ ಮುಖದಿಂದ ಭಾವಿಸಿ ನೋಡುವುದು, ಚಿತ್ಕಲಾಮುಖದಿಂದ ಭಾವಿಸಿ ಕೂಡುವುದು, ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗವನು ಅರಿವರಿತರಸುವಣ್ಣಗಳು ಸುಯಿಧಾನಭಕ್ತಿ ಸುಲಭರಿದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಂದ್ರಬಲ ತಾರಾಬಲವೆಂಬಿರಿ ಎಲೆ ಅಣ್ಣಗಳಿರಾ ! ಚಂದ್ರಂಗೆ ಯಾರ ಬಲ ? ಇಂದ್ರಂಗೆ ಯಾರ ಬಲ ? ಇಂದ್ರಂಗೆ, ಮುಕುಂದಂಗೆ, ಬ್ರಹ್ಮಂಗೆ, ಚಂದ್ರಶೇಖರ ದೇವಸೊಡ್ಡಳನ ಬಲವು, ಕೇಳಿರಣ್ಣಾ.
--------------
ಸೊಡ್ಡಳ ಬಾಚರಸ
ಚಿತ್ಕಾಯದ ತಿರುಳ ಲಿಂಗದಲ್ಲಿ ಅರಿದು ಸಂಗಸಂಯೋಗಿ ನೋಡಾ, ಚಿನ್ಮಾನಸದ ತಿರುಳ ಲಿಂಗದಲ್ಲರಿದು ಕೂಟಸಂಯೋಗಿ ನೋಡಾ, ಚಿದ್ಭಾವದ ತಿರುಳ ಲಿಂಗದಲ್ಲರಿದು ಸಮರಸಸಂಯೋಗಿ ನೋಡಾ, ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಲಿಂಗಪ್ರಾಣೈಕ್ಯನ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಿತ್ತದೊಳಗಣ ವಸ್ತು ಮುತ್ತಿನಂತಿಪ್ಪುದಯ್ಯಾ. ಚಿತ್ತೇ ಚಿಪ್ಪು, ಮುತ್ತೇ ವಸ್ತುವೆಂಬ ಯುಕ್ತಿಯನಾರೂ ತಿಳಿಯರಲ್ಲಾ. ಚಿಪ್ಪಳಿದು ಮತ್ತೆ ಬೆರೆಸಲಾಗಿ ನಿತ್ಯತ್ವ ಪದವಾಯಿತ್ತೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿತ್ರವನರಿಯದವರು ಕೋಟಲೆಯಗೊಂಡು ಬರುವರು. ಚಿತ್ರವನರಿದು ನುಂಗಿದವರು ಕೋಟಲೆಯನಳಿದು ಬಾರದೆ ಪೋದರು. ಈ ಉಭಯದ ಭೇದವನರಿದು ನುಂಗಿದವರು ಹಾಂಗಾದರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಚಂದ್ರಮನ ಕಂಡು ಮಂಡೆಯ ಬಿಟ್ಟು ಏಳು ಬಂಧವ ತೋರಿ ಬೆದರಿಸಿದನವ್ವಾ. ಮಗಳ ಕುಂಕುಮ ತಿಲಕವ ಕಂಡು ನಿನ್ನ ನೊಸಲಲ್ಲಿ ಎಸೆಯಬಂದ ಕಾಮ ಕೈಮರೆದನವ್ವಾ. ಸಟ್ಟುಪದಿಯ ಸಂಗ ಮಹಾಲಿಂಗ ಗಜೇಶ್ವರನ ಸಂಪಗೆಯ ವನಕ್ಕೆ ಬಂದು ಶರಣೆನ್ನು ಮಗಳೆ.
--------------
ಗಜೇಶ ಮಸಣಯ್ಯ
ಚಿನ್ನದೊಳಗಣ ಬಣ್ಣವ ಆ ಚಿನ್ನ ತನ್ನ ತಾನರಿವುದೆ? ಕಬ್ಬು ರುಚಿಸಬಲ್ಲುದೆ ತನ್ನ ತಾನೆ? ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನ ಭೇದವ?ರಾಮನಾಥ.
--------------
ಜೇಡರ ದಾಸಿಮಯ್ಯ
ಚಂದ್ರನ ಶೈತ್ಯದಲು ಬೆಳೆವ ಕಾಯಕ್ಕೆ ಬೆಳುದಿಂಗಳು ಬಯಸುವ ಹಂಗೇಕಯ್ಯಾ ಶರಣರ ಸಂಗದಲಿರ್ದು ಶಿವನ ಬೇಡುವ ಹಂಗೇಕಯ್ಯಾ ಕೂಡಲಸಂಗನ ಶರಣರು ಬಂದು ತಮ್ಮವನೆಂದಡೆ ಸಾಲದೆ ಅಯ್ಯಾ 443
--------------
ಬಸವಣ್ಣ
ಚಿಕ್ಕಟು ಕಡಿದಡೇನು ಮನಕ್ಕತಿಯರಿಯದು. ಹೊಕ್ಕು ಹರಿದಡೇನು ಹೊಲನ ಮೇಯಲರಿಯದು. ಮಕ್ಕಳ ಹಡೆದಡೇನು ಒಕ್ಕಲೂರಾಗದು. ಲೆಕ್ಕಕ್ಕೊಂದೈನೂರಿದ ಡೇತಕೆ ಬಾತೆಯಯ್ಯಾ ! ಮಿಕ್ಕ ಕುಕವಿಗಳ ಅರೆವಚನ, ಹೊಲದ ಕುಕ್ಕತೆನೆಯಾದಂತೆ ಕಾಣಾ, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಚಂದ್ರ ಮೂಡಿದನಂತೆ, ಚಂದ್ರಿಕೆಯೊಳು ನಿಂದು ನೋಡಿದನಂತೆ, ಎಮ್ಮೊಡೆಯನ ಕುತ್ತಿಗೆಯ ಕೊಯ್ದನಂತೆ, ಎಮ್ಮೊಡತಿಯ ಮೊಲೆ ಮೂಗ ಹರಿದು ಹಾಕಿದನಂತೆ, ಗಾರುಡಿಗನಾಟವ ಕಲಿತುಕೊಂಡನಂತೆ, ನಮ್ಮೆಲ್ಲರ ಕೊಂದು ಕೊಂಬುವನಂತೆ, ನಿರಂಜನ ಚನ್ನಬಸವಲಿಂಗನಂತೆ, ಬಲ್ಲಕಡೆಗೆ ಹೋಗುವ ಬನ್ನಿರತ್ತತ್ತ ಅರಿಯದಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚರಿಸುವ ಚರನಿಗೆ ಚರ್ಚೆಯೆ ಭೂಷಣ. ಸುಂದರ ನಾರಿಗೆ ಗಂಬ್ಥೀರ ಪುರುಷನೆ ಭೂಷಣ. ಕೊಳನಲ್ಲಿಯ ನೀರಿಗೆ ಕಲಹಂಸೆಯೆ ಭೂಷಣ. ವನದಲ್ಲಿಯ ವಸಂತಕ್ಕೆ ಕೋಕಿಲನಾದವೆ ಭೂಷಣ. ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಶರಣರಿಗೆ ನಿರ್ಮಲ ನಿಜಾನಂದವೆ ಭೂಷಣ.
--------------
ಸಿದ್ಧರಾಮೇಶ್ವರ
ಚಿತ್ತ ನಿರ್ಮಲವಾದಾತ್ಮನು ಭಕ್ತಿಯಿಂದೆ ಸತ್ಯಶರಣರಲ್ಲಿ ತತ್ವಾನುಭಾವವ ಬೆಸಗೊಂಡರೆ ನಿತ್ಯ ಶಿವಪದ ಘಟಿಸುವುದಕ್ಕೆ ತಡವಿಲ್ಲವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಚಕ್ರೋದ್ಧರಣದ ಬಹಿರಾವರಣದ ತಮೋಗುಣದಲ್ಲಿ ಏಕಾಕ್ಷರವದೆ, ತೃತೀಯಾವರಣದಲ್ಲಿ ಸತ್ವಗುಣದಲ್ಲಿ ನಾಲ್ಕಕ್ಷರವವೆ, ಇಂತೀ ಪಂಚಾಕ್ಷರವೆ ಶಿವನ ಪಂಚಮುಖದಲ್ಲಿ ಅವೆ. ಅಂಗೋದ್ಧರಣದ ಬಹಿರಂಗದಲ್ಲಿ ಅವೆ, ಲಿಂಗೋದ್ಧರಣದ ಅಂತರಂಗದಲ್ಲಿ ಅವೆ, ಲಿಂಗಾಂಗಸಂಗದಿಂದೊಳಹೊರಗೆ ತೆರಹಿಲ್ಲದವೆ. ತವರ್ಗದ ಕಡೆಯಿಲ್ಲದೆ, ಪವರ್ಗದಂತ್ಯದಲ್ಲಿದೆ, ಶವರ್ಗದ ಮೊದಲಲ್ಲದೆ, ಯವರ್ಗದ ತುದಿಮೊದಲಲ್ಲವೆ. ಸೌರಾಷ್ಟ್ರ ಸೋಮೇಶ್ವರಲಿಂಗವಿದೆ, ಅರಿತು ಜಪಿಸಿರಯ್ಯಾ ಪಂಚಾಕ್ಷರವ.
--------------
ಆದಯ್ಯ

ಇನ್ನಷ್ಟು ...
-->