ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಪೂರ್ವದಂದುಗವನಳಿದು ಪುನರ್ಜಾತನಾದ ಶರಣನು ತನ್ನ ತ್ರಿವಿಧಮುಖಭಕ್ತಿಯ ಮಾಡುವಲ್ಲಿ ಪೂರ್ವದಂದುಗ ಬೆರಸಿದರೆ ತಿರುಗ ಬಟ್ಟೆ ಸವೆಯದು. ಮೇಲುಗತಿಮತಿಗಳಸುಖ ದೊರೆಯದು. ಬಿಟ್ಟುದ ಬೆರೆಸಿದರೆ, ಹಿಡಿದು ಹರಿಸದೆ ದಾರಿಕಾರರ ಹೆಜ್ಜೆಗೆ ಶಿರಬಾಗದೆ ತಾನಿಲ್ಲದೆ ಮಾಡುವ ಮಾಟ ಸಕಲರ ಸಂಬೇಟ ನಿಜತತ್ವದ ಕೂಟ ಗುರುನಿರಂಜನ ಚನ್ನಬಸವಲಿಂಗ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಮಗುರು ಲಿಂಗಜಂಗಮವ ನಿಜವಿಶ್ವಾಸ ನೈಷ್ಠೆಯೊಳ್ ಮೂರ್ತಿಗೊಳಿಸಿ ಅರ್ಚಿಸುವ ಸುಚಿತ್ತಕಮಲದಳಂಗಳೆಲ್ಲ ಒಂದೊಡಲಾಗಿ, ಭಕ್ತನ ಕರಕಮಲ, ಜಂಗಮದ ಚರಣಕಮಲ, ಈ ನಾಲ್ಕರಲ್ಲಿ ಸಂಬಂಧವಾದ ಪ್ರಣಮದೊಳ್ ಕೂಡಿದ ನೇತ್ರಕಮಲ ಒಂದಾದ, ಸಮರಸೈಕ್ಯವಾಗಿ ಕೂಡಿದ ತ್ರಿಕೂಟಸಂಗಮಸ್ಥಾನವಿದೆ. ಅಷ್ಟಾಷಷ್ಟಿವರಕೋಟಿ ತೀರ್ಥಸ್ಥಾನವಿದೆ. ದೇವಗಂಗೆ ನೀಲಗಂಗೆ ಶಿವಗಂಗಾ ಸರಸ್ವತಿ ಯಮುನಾಸ್ಥಾನವಿದೆ. ಚಿತ್ಸೂರ್ಯ ಚಂದ್ರಾಗ್ನಿಮಂಡಲವಿದೆ. ಜ್ಯೋತಿರ್ಮಂಡಲ ಅಖಂಡಜ್ಯೋತಿರ್ಮಂಡಲ ಅಖಂಡಮಹಾಪರಿಪೂರ್ಣಜ್ಯೋತಿರ್ಮಂಡಲ ಸ್ಥಾನವಿದೆ. ರೋಷವೆಂಬ ಕಾಲರತಿಕ್ರೀಡಾಭ್ರಾಂತೆಂಬ ಕಾಮ ಆಸೆ ಆಮಿಷ ಲೋಭ ಮೋಹ ಮದ ಮತ್ಸರವೆಂಬ ಮಾಯಾ ಸಂಸಾರಸಂಕಲ್ಪ ವಿಕಲ್ಪಂಗಳ ಹಿಂದುಳಿದು, ಆದ್ಯರು ಭೇದ್ಯರು ವೇದ್ಯರು ಸಾಧ್ಯರುಯೆಂದವತರಿಸಿ, ಜಿಹ್ವಾತುರ ಗುಹ್ಯಾತುರ ಅರ್ಥಾತುರ ತ್ಯಾಗಾತುರ ಭೋಗಾತುರ ಯೋಗಾತುರ ಕಡೆಯಾದ ಅನಂತ ಆತುರಗಳೆಂಬ ಷಡಿಂದ್ರೀಕರಣ ವಿಷಯವ್ಯಾಪಾರಂಗಳ ಜೊಳ್ಳುಮಾಡಿ ತೂರಿ, ಜಗದಾದಿ ಗಟ್ಟಿಬೀಜವಾಗಿ, ನಿಂದ ನಿಲುಕಡೆಯ ಉಳಿದ ಉಳುವೆಯ ಮಹಾಘನದುನ್ಮನಿಸ್ಥಾನವಿದೆ. ಎನ್ನ ಭಕ್ತಿ-ಜಾÕನ-ವೈರಾಗ್ಯ-ಕ್ರಿಯಾಚಾರ ಸತ್ಯಶುದ್ಧ ನಿಜನಡೆನುಡಿಗಳ ಕರುಣಿಸಿ, ಅಂಗ-ಮನ-ಪ್ರಾಣ-ಭಾವ-ಕರಣೇಂದ್ರಿಗಳ ಪಾವನವೆನಿಸಿ ಸಲಹಿದ ಪರಮಾಮೃತಸುಧೆಯಿದೆ. ಭಕ್ತಸ್ಥಲ ವಿರಕ್ತಸ್ಥಲ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ ಶರಣಸ್ಥಲ ಐಕ್ಯಸ್ಥಲ ನಿಃಕಳಂಕಸ್ಥಲ ನಿರ್ಮಾಯಸ್ಥಲ ನಿರಾಲಂಬಸ್ಥಲ ನಿಃಪ್ರಪಂಚಸ್ಥಲ ನಿಜಾನಂದಸ್ಥಲ ನಿರೂಪಾದ್ಥಿಕಸ್ಥಲ ನಿರ್ನಾಮಕಸ್ಥಲ ನಿರ್ಗುಣಸ್ಥಲ ಸಗುಣಸ್ಥಲ ನಿತ್ಯತೃಪ್ತಸ್ಥಲ ಕಾಯಾರ್ಪಣಸ್ಥಲ ಕರಣಾರ್ಪಣಸ್ಥಲ ಭಾವಾರ್ಪಣಸ್ಥಲ ಪರಿಪೂರ್ಣಾರ್ಪಣಸ್ಥಲ ನಿರವಯಸ್ಥಲವೆ ಕಡೆಯಾದ ಏಕವಿಂಶತಿ ದೀಕ್ಷಾನುಭಾವ ಏಕವಿಂಶತಿ ಯುಗಂಗಳನೊಳಗೊಂಡು ಅಣುವಿಂಗೆ ಪರಮಾಣುವಾಗಿ, ಮಹತ್ತಿಂಗೆ ಘನಮಹತ್ತಾಗಿ, ಸೃಷ್ಟಿ ಸ್ಥಿತಿಲಯಂಗಳಿಗೆ ಕಾರಣಾರ್ಥ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಪರಮಾನಂದ ಪಂಚಪರುಷದ ಖಣಿಯಿದೆಯೆಂದು ಪೂರ್ಣಾನುಭಾವಭರಿತವಾದ ನಿರ್ದೇಹಿಗಳೆ ನಿರವಯಪ್ರಭು ಮಹಾಂತಘನವೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪರಮಚೈತನ್ಯ ಜಂಗಮವ ನೆರೆಯರಿದು ಇರವಿನೊಳು ಹಿರಿದು ಹೆಚ್ಚಿ ನಿತ್ಯಕಾಲದಿಂದಿತ್ತು ಕೊಂಬ ಪರಿಣಾಮಿಯ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಡುವ ಕಚ್ಚಿದ ನಾಯಿ ಒಡೆಯನ ಕುರುಹ ಬಲ್ಲುದೆ? ಹೊನ್ನು ಹೆಣ್ಣು ಮಣ್ಣ ಕಚ್ಚಿದ ಮನುಜರು ನಿಮ್ಮನೆತ್ತ ಬಲ್ಲರಯ್ಯ? ನಿಮ್ಮನರಿಯದ ಮನುಜರು ನಾಯಕುನ್ನಿಗಿಂದಲೂ ಕರಕಷ್ಟ ನೋಡಾ ನಿತ್ಯವ ಹಿಡಿಯದೆ, ಅನಿತ್ಯವ ಹಿಡಿದು, ವ್ಯರ್ಥಕ್ಕೆ ಸತ್ತವರ ನೋಡಿ ಹೇಸಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪರಮಾರ್ಥವ ನುಡಿದು ಪರರ ಕೈಯಾಂತು ಬೇಡುವುದು ಕರಕಷ್ಟವಯ್ಯ. ಪುರಾತರಂತೆ ನುಡಿಯಲೇಕೆ? ಕಿರಾತರಂತೆ ನಡೆಯಲೇಕೆ? ಆಸೆಯಿಚ್ಛೆಗೆ ಲೇಸ ನುಡಿವಿರಿ. ಇಚ್ಛೆಯ ನುಡಿವುದು ಉಚ್ಚೆಯ ಕುಡಿವುದು ಸರಿ ಕಾಣಿರೋ. ಇಚ್ಛೆಯ ನುಡಿವನೆ ಶಿವಶರಣನು? ಮಾತಿನಲ್ಲಿ ಬೊಮ್ಮವ ನುಡಿದು ಮನದಲ್ಲಿ ಆಸೆಯ ಸೋನೆ ಕರೆವುತಿಪ್ಪುದು. ಈ ವೇಷವ ಕಂಡೆನಗೆ ಹೇಸಿಕೆಯಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪೃಥ್ವಿಯ ಮರೆಯ ಸುವರ್ಣದಂತೆ ಚಿಪ್ಪಿನ ಮರೆಯ ಮುತ್ತಿನಂತೆ ಅಪ್ಪುವಿನ ಮರೆಯ ಅಗ್ನಿಯಂತೆ ಒಪ್ಪದೊಳಗಣ ಮಹಾಪ್ರಕಾಶದಂತೆಯಿಪ್ಪ ಘನಲಿಂಗವನರಿಯೆ. ರುದ್ರ ಬ್ರಹ್ಮ ವಿಷ್ಣ್ವಾವದಿಗಳು ತಮ್ಮ ಆತ್ಮಜ್ಞಾನ [ನಿಶ್ಚಿಂ]ತೆಯೆಂಬ ನಿಜವ ನೀಗಾಡಿಕೊಂಡರು. ಇದನರಿಯದೆ ಆಚರಿಸುವರು, ಆರಿಗೂ ಅಳವಲ್ಲವಯ್ಯಾ. ಇಷ್ಟಪ್ರಾಣಭಾವಸಂಬಂದ್ಥಿಗಳಪ್ಪ ಸದ್ಭಾವಾಚಾರವೆಡೆಗೊಂಡ ಶರಣಂಗಲ್ಲದೆ ಮಿಕ್ಕಿನ ದುರಾಚಾರಿಗಳಿಗೆ ಸಾಧ್ಯವಲ್ಲ, ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು.
--------------
ಬಾಚಿಕಾಯಕದ ಬಸವಣ್ಣ
ಪುಣ್ಯವೆಂದರಿಯೆ, ಪಾಪವೆಂದರಿಯೆ, ಸ್ವರ್ಗವೆಂದರಿಯೆ ನರಕವೆಂದರಿಯೆ, ಹರಹರ ಮಹಾದೇವ ಶಿವಶರಣೆಂದು ಶುದ್ಧ ನೋಡಯ್ಯಾ, ಹರಹರ ಮಹಾದೇವ ಶಿವಶರಣೆಂದು ಧನ್ಯ ನೋಡಯ್ಯಾ. ಕೂಡಲಸಂಗಮದೇವಯ್ಯಾ, ನಿಮ್ಮನರ್ಚಿಸಿ, ಪೂಜಿಸಿ ನಿಶ್ಚಿಂತನಾದೆ.
--------------
ಬಸವಣ್ಣ
ಪೃಥ್ವಿಯಲ್ಲಿ ಗಂಧವಿಹುದು, ಅಪ್ಪುವಿನಲ್ಲಿ ರಸವಿಹುದು, ತೇಜದಲ್ಲಿ ರೂಪವಿಹುದು, ವಾಯುವಿನಲ್ಲಿ ಸ್ಪರ್ಶವಿಹುದು, ಆಕಾಶದಲ್ಲಿ ಶಬ್ದವಿಹುದು, ತೃಪ್ತಿಯಲ್ಲಿ ಆತ್ಮನೆಂಬ ಮಹಾಭೂತಾಶ್ರಯವಾಗಿಹುದು ನೋಡಾ. ಇದಕ್ಕೆ ಶಿವಪ್ರಕಾಶಾಗಮೇ : ``ಸುಗಂಧಃ ಪೃಥ್ವೀಮಾಶ್ರಿತ್ಯ ಸುರಸೋ ಜಲಮಾಶ್ರಿತಾಃ | ರೂಪ ತೇಜ ಆಶ್ರಿತ್ಯ ಸ್ಪರ್ಶನಂ ವಾಯುಮಾಶ್ರಿತಂ || ಶಬ್ದಮಾಕಾಶಮಾಶ್ರಿತ್ಯ ಆತ್ಮಾ ಚ ತೃಪ್ತಿ ಆಶ್ರಯಾಃ | ಇತಿ ಷಡಿಂದ್ರಿಯಂ ದೇವಿ ಸ್ಥಾನೇ ಸ್ಥಾನೇ ಸಮಾಚರೇತ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರಮಸುಖದ ಪರಿಣಾಮದ ಇರವ ಬಲ್ಲವರಾರೊ? ಅದು ದೊರಕೊಳ್ಳದು ನೋಡಾ ! ತನತನಗೆ ತನ್ನ ಇರವ ಲಿಂಗದಲ್ಲಿರಿಸಿ, ಪರವ ಮನದಲ್ಲಿ ಹಿಡಿದು ಇಹ ಪರವೆಂಬುದೊಂದು ಭ್ರಾಂತಳಿದು, ನಿರತಿಶಯ ಸುಖದೊಳಗೆ ನಿಜವಾಗಿರಬಲ್ಲ ನಿಮ್ಮ ಶರಣನನುಪಮಪ್ರಸಾದಿ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಆಕಾಶಗಂಗೆಯಲ್ಲಿ ಮಜ್ಜನ. ಹೂವಿಲ್ಲದ ಪರಿಮಳದ ಪೂಜೆ! ಹೃದಯಕಮಳದಲ್ಲಿ `ಶಿವಶಿವಾ' ಎಂಬ ಶಬ್ದ_ ಇದು, ಅದ್ವೈತ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪ್ರಣಮ:ಪ್ರಾಣವಾಯುವಿನ ನೆಲೆಯನರಿದು ಬಿಡಬಲ್ಲರೆ, ಪ್ರಣಮ:ಓಂಕಾರದ ಶ್ರುತಿಯ ಮೂಲಾಂಕುರವನರಿಯಬಲ್ಲರೆ ಪ್ರಣಮ:ಐವತ್ತೆರಡಕ್ಷರದ ಲಿಪಿಯ ತಿಳಿದುನೋಡಿ ಓದಬಲ್ಲರೆ, ಪ್ರಣಮ, ನಾದಬಿಂದು ಕಲಾತೀತನಾಗಬಲ್ಲರೆ_ ಇದು ಕಾರಣ, ಕೂಡಲಚೆನ್ನಸಂಗಾ, ನಿಮ್ಮ ಶರಣರು ಸಹಸ್ರವೇದಿಗಳಾದ ಕಾರಣ ಪ್ರಣಮಪ್ರತಿಷ್ಠಾಚಾರ್ಯರು. ಅವರಿಗೆ ಮಿಗೆ ಮಿಗೆ ನಮೋ ನಮೋ ಎಂಬೆನು.
--------------
ಚನ್ನಬಸವಣ್ಣ
ಪಾದಪೂಜೆಯ ಮಾಡಿ ಪಾದತೀರ್ಥವ ಪಡೆದುಕೊಂಬ ಕ್ರಮವು ಎಂತೆಂದಡೆ : 'ದೇಶಿಕಸ್ಯ ಪದಾಂಗುಷ್ಠೇ ಲಿಖಿತಾ ಪ್ರಣವಂ ತತಃ | ಪಾದಪೂಜಾವಿಧಿಂ ಕೃತ್ವಾ ವಿಶೇಷಂ ಶೃಣು ಪಾರ್ವತಿ ||' ಎಂದುದಾಗಿ, ಭಯಭಕ್ತಿ ಕಿಂಕುರ್ವಾಣದಿಂದೆ ಜಂಗಮಕ್ಕೆ ಪಾದಾರ್ಚನೆಯಂ ಮಾಡಿ ಗದ್ದುಗೆಯನಿಕ್ಕಿ ಮೂರ್ತವ ಮಾಡಿಸಿ ತನ್ನ ಕರಕಮಲವಂ ಮುಗಿದು ಅಯ್ಯಾ, ಹಸಾದ ಮಹಾಪ್ರಸಾದ ಪೂರ್ವಜನ್ಮ ನಿವಾರಣಂ ದೀಕ್ಷಾಗುರು ಶಿಕ್ಷಾಗುರು ಮೋಕ್ಷಗುರು ಗುರುವಿನಗುರು ಪರಮಗುರು ಪರಮಾರಾಧ್ಯ ಶ್ರೀಪಾದಗಳಿಗೆ ಶರಣು ಶರಣಾರ್ಥಿಯೆಂದು 'ಪ್ರಣಮ್ಯ ದಂಡವದ್ಭೂಮೌ ಇಷ್ಟಮಂತ್ರಂ [ಸದಾಜಪೇತ್] ಶ್ರೀ ಗುರೋಃ ಪಾದಪದ್ಮಂ ಚ ಗಂಧಪುಷ್ಪಾsಕ್ಷತಾದಿಭಿಃ ||' ಎಂದುದಾಗಿ, ದೀರ್ಘದಂಡ ನಮಸ್ಕಾರವಂ ಮಾಡಿ ಪಾದಪೂಜೆಗೆ ಅಪ್ಪಣೆಯಂ ತಕ್ಕೊಂಡು ಮೂರ್ತವಂ ಮಾಡಿ ಲಿಂಗವ ನಿರೀಕ್ಷಿಸಿ ತನ್ನ ಅಂಗೈಯಲ್ಲಿ ಓಂಕಾರ ಪ್ರಣವಮಂ ವಿಭೂತಿಯಲ್ಲಿ ಬರೆದು ಆ ಜಂಗಮದ ಎರಡು ಪಾದಗಳ ತನ್ನ ಕರಕಮಲದಲ್ಲಿ ಲಿಂಗೋಪಾದಿಯಲ್ಲಿ ಪಿಡಿದುಕೊಂಡು ಎರಡು ಅಂಗುಷ್ಠಗಳಲ್ಲಿ ಪ್ರಣವಮಂ ಬರೆದು, ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ ನಮಸ್ಕರಿಸಿ, ಆ ಪೂಜೆಯಂ ಇಳುಹಿ ಬಟ್ಟಲೊಳಗೆ ಪ್ರಣವಮಂ ಬರೆದು ಬ್ರಹ್ಮರಂಧ್ರದಲ್ಲಿರ್ದ ಸತ್ಯೋದಕವೆಂದು ಭಾವಿಸಿ, ಆ ಉದಕದ ಬಲದಂಗುಷ್ಠದ ಮೇಲೆ ನೀಡುವಾಗ ಆಱುವೇಳೆ ಷಡಕ್ಷರವ ನುಡಿದು ಇಷ್ಟಲಿಂಗವೆಂದು ಭಾವಿಸಿ, ಎಡದಂಗುಷ್ಠದ ಮೇಲೆ ನೀಡುವಾಗ ಐದುವೇಳೆ ಪಂಚಾಕ್ಷರವ ನುಡಿದು ಪ್ರಾಣಲಿಂಗವೆಂದು ಭಾವಿಸಿ, ಎರಡಂಗುಷ್ಠದ ಮಧ್ಯದಲ್ಲಿ ಉದಕವ ನೀಡುವಾಗ ಒಂದು ವೇಳೆ 'ಓಂ ಬಸವಲಿಂಗಾಯನಮಃ' ಎಂದು ಸ್ಮರಿಸಿ, ಭಾವಲಿಂಗವೆಂದು ಭಾವಿಸಿ ದ್ರವನೆಲ್ಲವ ತೆಗೆದು ಮತ್ತೆ ಪೂಜೆಯ ಮಾಡಿ ನಮಸ್ಕರಿಸಿ ಶರಣಾರ್ಥಿಯೆಂದು ಆ ಜಂಗಮವು ಸಲ್ಲಿಸಿದ ಮೇಲೆ ತಾನು ಪಾದತೀರ್ಥವ ಸಲ್ಲಿಸುವುದು. ಪಂಚಾಂಗುಲಿ ಪಂಚಾಕ್ಷರಿಯಿಂದಲಿ ಲಿಂಗಕರ್ಪಿಸಿ ಆ ಪಂಚಾಂಗುಲಿಯುತ ಜಿಹ್ವೆಯಿಂದ ಸ್ವೀಕರಿಸುವುದು ಗುರುಪಾದೋದಕ. ಲಿಂಗವನೆತ್ತಿ ಅಂಗೈಯಲ್ಲಿರ್ದ ತೀರ್ಥವ ಸಲ್ಲಿಸಿದುದು ಲಿಂಗಪಾದೋದಕ. ಬಟ್ಟಲೊಳಗಿರ್ದ ತೀರ್ಥವ ಸಲಿಸಿದುದು ಜಂಗಮಪಾದೋದಕ. ಈ ತ್ರಿವಿಧ ಪಾದೋದಕ ಒಂದೇ ಎಂದರಿವುದು. ಹೀಗೆ ಕ್ರಮವರಿದು ಸಲಿಸುವರ್ಗೆ ಮುಕ್ತಿಯಾಗುವುದಕ್ಕೆ ತಡವಿಲ್ಲವೆಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಪೃಥ್ವಿ, ಸದ್ಯೋಜಾತನ ಹಂಗು. ಜಲ, ವಾಮದೇವನ ಹಂಗು. ಅಗ್ನಿ, ಅಘೋರನ ಹಂಗು. ವಾಯು, ತತ್ಪುರುಷನ ಹಂಗು. ಆಕಾಶ, ಈಶಾನ್ಯನ ಹಂಗು. ಪಂಚಬ್ರಹ್ಮನ ಮರೆದು, ಓಂಕಾರ ಬ್ರಹ್ಮವನರಿ, ಐಘಟದೂರ ರಾಮೇಶ್ವರಲಿಂಗವ.
--------------
ಮೆರೆಮಿಂಡಯ್ಯ
ಪಂಕವ ಮೆಟ್ಟಿದ ಅಡಿ, ಉಭಯಕ್ಕೆ ಶಂಕೆದೋರದಿಹುದೆ ? ತ್ರಿವಿಧವ ಕೂಡಿ ಆಡುವ ಮನ, ಅವರೊಳು ಒಡಗೂಡದಿಹುದೆ ? ಅದರ ತೊಡಿಗೆಯನರಿತಡೆ ಗಡಿಗೆಯನೊಡಗೂಡಿದ ಜಲದಂತಿರಬೇಕು. ಕಾರ್ಯ ಕೂಡಿದಲ್ಲಿ ಗಡಿಗೆಯಾಗಿ, ಮತ್ತೆ ವಾರಿಯ ಬೆರಸದಂತಿರಬೇಕು. ಇದು ಕರತಳಾಮಳಕ, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
ಪಾಯು ಗುಹ್ಯ ಪಾದ ಪಾಣಿ ವಾಕ್ ಅಂತರ ಈ ಆರು ಕರ್ಮಾಂಗವು ಕ್ರಿಯಾಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಪಾಯುಶ್ಚ ಗುಹ್ಯಪಾದಾಶ್ಚ ಹಸ್ತಂ ವಾಗಂತರಂ ತಥಾ | ಷಟ್ಕರ್ಮಾಂಗಮಿದಂ ಪ್ರೋಕ್ತಂ ಕ್ರಿಯಾಶಕ್ತಿಸ್ತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ

ಇನ್ನಷ್ಟು ...
-->