ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಯೋಗಿಯ ಹೊಲಬು ಯೋಗಿಯಾದವಂಗಲ್ಲದೆ, ಇತರ ನರರಿಂಗೆ ಸಾದ್ಥಿಸಬಾರದು ಕೇಳಯ್ಯಾ. ಧಾತುವಾದವದು ರಸವಾದಿಯಾದವಂಗಲ್ಲದೆ, ಇತರ ನರಂಗದು ಸಾದ್ಥಿಸಬಾರದು ಕೇಳಯ್ಯಾ. ನೋಡಿ ಮಾಡುವುದಾದಡೆ ಭವವೆಲ್ಲಿಹುದು, ದರಿದ್ರವೆಲ್ಲಿಹುದು ಹೇಳಯ್ಯಾ, ಕಪಿಲಸಿದ್ಧಯ್ಯಾ.
--------------
ಸಿದ್ಧರಾಮೇಶ್ವರ
ಯೋಗದ ಹೊಲಬ ನಾನೆತ್ತ ಬಲ್ಲೆನಯ್ಯಾ? ಯೋಗ ಶಿವಶಕ್ತಿ ಸಂಪುಟವಾಗಿಪ್ಪುದಲ್ಲದೆ, ಶಿವಶಕ್ತಿವಿಯೋಗವಪ್ಪ ಯೋಗವಿಲ್ಲವಯ್ಯಾ. ಹೃದಯಕಮಲದಲಿ ಇಪ್ಪಾತ ನೀನೆಯಲ್ಲದೆ, ಎನಗೆ ಬೇರೆ ಸ್ವತಂತ್ರವಿಲ್ಲ ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಯುಗ ಜುಗವ ಬಲ್ಲೆನೆಂಬವರು, ನಿಚ್ಚಕ್ಕೆ ನಿಚ್ಚ ಬಪ್ಪ ಚಿಕ್ಕುಟು ಸಾವನರಿಯರು. ಬಾಯ ಬಾಗಿಲ [ಉಲುಹು], ತಲೆಹೊಲದ ಹುಲ್ಲೊಣಗಿತ್ತು. ನಿಮ್ಮನುವಿನಲ್ಲಿರ್ದೆ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಯೋಗದಿಂದರಿದಿಹೆನೆಂಬಿರಿ, ಓದಿನಿಂದರಿದಿಹೆನೆಂಬಿರಿ. ವೇದದಿಂದರಿದಿಹೆನೆಂಬಿರಿ, ಶಾಸ್ತ್ರದಿಂದರಿದಿಹೆನೆಂಬಿರಿ. ಕೇಳಿರಣ್ಣಾ, ಯೋಗದಂತದು ಅಲ್ಲ, ಓದಿನಂತದು ಅಲ್ಲ, ವೇದದಂತದು ಅಲ್ಲ, ಶಾಸ್ತ್ರದಂತದು ಅಲ್ಲ. ಶರಣಸ್ಥಲ ಬೇರೆ, ಅದೆಂತೆಂದಡೆ :ಗಂಡಳಿದು ಹೆಣ್ಣಾಗಬೇಕು, ಹೆಣ್ಣಳಿದು ಗಂಡಾಗಬೇಕು. ಉಂಡೆನುಟ್ಟೆನೆಂಬ ಹಂಗಳಿದು, ಈ ಲೋಕದ ಸಂದೇಹವಳಿದ ಶರಣಂಗೆ ನಮೋ ನಮೋ ಎನುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಯೋಗೀಶ್ವರನಾದರೇನಯ್ಯ ? ಅಹಂಕಾರವನಳಿದು, ನಿರಹಂಕಾರವನಾಚರಿಸಬೇಕಯ್ಯ. ಜೋಗಿವೇಷವ ತೊಟ್ಟಿದ್ದರೇನಯ್ಯ ? ಸರ್ವಚಿಂತೆಯ ಬಿಟ್ಟು, ನಿಶ್ಚಿಂತವನಾಚರಿಸಬೇಕಯ್ಯ. ಪ್ರಣವಮತದಲ್ಲಿ ಇದ್ದರೇನಯ್ಯ ? ವ್ಯಾಕುಳವನಳಿದು, ನಿರಾಕುಳವನಾಚರಿಸಬೇಕಯ್ಯ. ಸನ್ಯಾಸಿಮತದಲ್ಲಿ ಇದ್ದರೇನಯ್ಯ ? ಆಸೆಯನಳಿದು, ನಿರಾಸೆಯನಾಚರಿಸಬೇಕಯ್ಯ. ಕಾಳಾಮುಖಮತದಲ್ಲಿದ್ದರೇನಯ್ಯ ? ಭ್ರಾಂತಿಯನಳಿದು ನಿಭ್ರಾಂತಿಯನಾಚರಿಸಬೇಕಯ್ಯ. ಪಾಶುಪತಮತದಲ್ಲಿ ಇದ್ದರೇನಯ್ಯ ? ಪರವನಳಿದು ಪರಕೆ ಪರವನಾಚರಿಸಬೇಕಯ್ಯ. ಶಿವಶರಣನಾದರೇನಯ್ಯ ? ಸರ್ವಗುಣಾದಿಗಳನಳಿದು, ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ ಕರಸ್ಥಲದಲ್ಲಿ ಪರಬ್ರಹ್ಮವನಾಚರಿಸಬೇಕಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಯೋಗಾಂಗ ಭೋಗಾಂಗ ಜ್ಞಾನಾಂಗ ಈ ತ್ರಿವಿಧವನು ಮರೆದು, ಭಕ್ತಿಯೋಗದ ಮೇಲೆ ನಿಂದು, ವೈರಾಗ್ಯಯೋಗದ ಮೇಲೆ ನಿಂದು, ನಡೆದು ನುಡಿದು ತೋರುವರು ಎಮ್ಮೆ ಶರಣರು, ಗುರುಲಿಂಗಜಂಗಮ ಈ ತ್ರಿವಿಧವನು. ಸುಖ ದುಃಖ ಚಿಂತೆ ಸಂತೋಷವೆಂಬುವಂ ಕಳೆದು, ಉತ್ಪತ್ತಿಸ್ಥಿತಿಲಯವೆಂಬುವ ಸುಟ್ಟು, ದೃಕ್ಕು, [ದರ್ಶನ], ದೃಶ್ಯವೆಂಬ ತ್ರಿಕರಣವ ಏಕವಮಾಡಿ, ಪಿಂಡಾಂಡವಾ ಬ್ರಹ್ಮಾಂಡವೊಂದೆಂಬುದ ಅರಿದು, ಸಂದ ಹರಿದು, ನಿಂದ ನಿಜಾನಂದದಲ್ಲಿ ಹಿಂದುಮುಂದೆಂಬುದನರಿಯದೆ, ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ ಎನ್ನ ಬಂಧನ ಹರಿಯಿತ್ತು, ನಾನು ಬಟ್ಟಬಯಲಾದೆನಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಯಾವಾದರೂ ತೀರ್ಗಡೆಯಂತ್ಯದಲ್ಲಿ ಜಪ ತಪ ಶಿವಾರಾಧನೆ ಫಲಪದವು. ತೇರ್ಗಡೆಯಾ[ಗ]ದಲ್ಲಿ ಫಸದು ಫಸದು ಪುಣ್ಯಪಾಪಗಳವು. ದೇಹಶುದ್ಧವಾದವಂಗೆ ರಸಸಿದ್ಧಿ ರಸಸ್ಧಿಯಾದವಂಗೆ ದೇಹಶ್ಧುದ್ಧಿ ದೇಹಶುದ್ಧವಿಲ್ಲದವಂಗೆ ರಸಸಿದ್ಧಿಯಾಗದು; ರೋಗ ಪರಿಹಾರ[ವಾಗದು] ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಯುಕ್ತಿಯ ಕೇಳಿದಡೆ ಭಕ್ತಿಯ ತೋರಿದ. ಭಕ್ತಿಯ ಕೇಳಿದಡೆ ಯುಕ್ತಿಯ ತೋರಿದ. ನಿತ್ಯವ ಬೆಸಗೊಂಡಡೆ ಅತ್ತತ್ತಲೋಸರಿಸಿದ. ಗುಹೇಶ್ವರನ ಶರಣ ಬಸವಣ್ಣ, ಮರೆಗೆ ಮರೆಯನೊಡ್ಡಿ ಜಾರಿದನು. ಬಸವಣ್ಣನ ಪರಿ ಎಂತು ಹೇಳಾ ಮಡಿವಾಳ ಮಾಚಯ್ಯಾ.
--------------
ಅಲ್ಲಮಪ್ರಭುದೇವರು
ಯತಿಗೆ ಲಾಂಛನವೇಕೆ? ಶುಚಿಗೆ ಮೂದಲೆಯೇಕೆ ? ಕಲಿಗೆ ಕಜ್ಜವೇಕೆ? ಒಲವಿಂಗೆ ರೂಹೇಕೆ ? ದಿಟವುಳ್ಳ ಮನಕ್ಕೆ ಆಚಾರವೇಕೆ ? ಸಜ್ಜನಸ್ತ್ರೀಗೆ ಬೇರೆ ನೋಂಪಿಯೇಕೆ? ಭೃತ್ಯಾಚಾರವಿಂಬುಗೊಂಡವರ ಮನವ, ಮಹಂತ ಸಕಳೇಶ್ವರದೇವನೆ ಬಲ್ಲ.
--------------
ಸಕಳೇಶ ಮಾದರಸ
ಯೋಗಾಂಗ ಭೋಗಾಂಗ ತ್ಯಾಗಾಂಗ ಈ ತ್ರಿವಿಧವನು ಮರೆದು, ಭಕ್ತಿಯೋಗದ ಮೇಲೆ ನಿಂದು, ರಾಜಯೋಗದ ಮೇಲೆ ನಿಂದು, ನಡೆದು ನುಡಿದು ತೋರುವರು ನಮ್ಮ ಶರಣರು. ಗುರು ಲಿಂಗ ಜಂಗಮ ಈ ತ್ರಿವಿಧವನು, ಸುಖ ದುಃಖ ಚಿಂತೆ ಸಂತೋಷವೆಂಬುವ ಕಳೆದು, ಉತ್ಪತ್ತಿ ಸ್ಥಿತಿಲಯವೆಂಬುವಂ ಸುಟ್ಟು, ದೃಕ್ಕು ದೃಶ್ಯ ನಿಜವೆಂಬ ತ್ರಿಕರಣವ ಏಕವ ಮಾಡಿ, ಪಿಂಡಾಂಡ ಬ್ರಹ್ಮಾಂಡ ಒಂದೆಂಬುದನರಿದು, ಸಂದಹರಿದು ನಿಂದ ನಿಜಾನಂದದಲ್ಲಿ ಹಿಂದುಮುಂದೆಂಬುದನರಿಯದೆ, ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ, ಎನ್ನ ಬಂಧನ ಹರಿದು, ನಾನು ಬಟ್ಟಬಯಲಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಯತಿಗಳು ಆಸೆರೋಷವ ಕಳೆಯಲರಿಯದೆ ಮತಿಭ್ರಷ್ಟರಾದರು. ಸಿದ್ಧರು ಆಸೆರೋಷವ ಕಳೆಯಲರಿಯದೆ ಬುದ್ಧಿಹೀನರಾದರು. ಯೋಗಿಗಳು ಆಸೆರೋಷವ ಕಳೆಯಲರಿಯದೆ ಹೆಗ್ಗರಾದರು. ಇಂತೀ ಯತಿ ಸಿದ್ಧ ಸಾಧ್ಯಯೋಗಿಗಳನರಿಯದ ಆಸೆಬದ್ಧವೆಂಬ ಮಾಯೆ ಕುರಿಮಾನವರನೆತ್ತ ಬಲ್ಲುದಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಯುಗಜುಗಂಗಳ ಅಳಿವು ಉಳಿವನರಿಯದೆ, ಹಗಲಿರುಳೆಂಬವ ನೆನಹಿನಲೂ ಅರಿಯದೆ, ಲಿಂಗದಲ್ಲಿ ಪರವಶವಾಗಿರ್ದ ಪರಮಪರಿಣಾಮಿಯನೇನೆಂದುಪಮಿಸುವೆನಯ್ಯಾ ? ಆಹಾ ! ಎನ್ನ ಮುಕ್ತಿಯ ಮುಕುರದ ಇರವ ನೋಡಾ. ಆಹಾ ! ಎನ್ನ ಸತ್ಯದಲ್ಲಿ ಸ್ವಾನುಭಾವದ ಕಳೆಯ ನೋಡಾ. ಆಹಾ ! ಅಷ್ಟತನುಗಳ ಪಂಗನಳಿದು, ನಿಬ್ಬೆರಗಾಗಿ ನಿಂದ ಚಿತ್ಸುಖಿಯ ನೋಡಾ. ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ, ಪರಮಪ್ರಸಾದಿ ಮರುಳಶಂಕರದೇವರ ನಿಲವ ಪ್ರಭು ಬಸವಣ್ಣನಿಂದ ಕಂಡು ಬದುಕಿದೆನು, ಬದುಕಿದೆನು.
--------------
ಸಂಗಮೇಶ್ವರದ ಅಪ್ಪಣ್ಣ
ಯತ್ರ ಜೀವಸ್ತ್ರ ಶಿವನೆಂಬ ಬಾಲಭಾಷೆಯ ಕೇಳಲಾಗದು ಶಿವಶಿವಾ ಯತ್ರಜೀವಸ್ತತ್ರ ಶಿವನಾದರೆ ಜೀವಂಗೆ ಮರಣವೇಕೋ? ಯತ್ರ ಜೀವಸ್ತತ್ರ ಶಿವನಾದರೆ ಜನನ ಸ್ಥಿತಿ ಮರಣ ರುಜೆ ಸಂಸಾರ ಬಂಧನವೇಕೋ? ಯತ್ರ ಜೀವಸ್ತತ್ರ ಶಿವನಾದರೆ ಪುಣ್ಯಪಾಪ ಪ್ರಳಯಕಾಲ ಕಲ್ಪಿತವೇಕೊ? ಇದು ಕಾರಣ ಯತ್ರ ಜೀವಸ್ತತ್ರ ಶಿವನಲ್ಲ, ಉತ್ಪತ್ತಿ ಸ್ಥಿತಿ ಪ್ರಳಯರಹಿತನು ಸದ್ಭಕ್ತರಲ್ಲಿಪ್ಪನಲ್ಲದೆ ಮತ್ತೆಲ್ಲಿಯೂ ಇಲ್ಲ, ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಯೋಗ ಶಿವಯೋಗವೆಂಬರು, ಯೋಗದ ಹೊಲಬನಾರು ಬಲ್ಲರಯ್ಯಾ ? ಹೃದಯಕಮಲ ಮಧ್ಯದಲ್ಲಿ ಭ್ರಮಿಸುವನ ಕಳೆದಲ್ಲದೆ ಯೋಗವೆಂತಪ್ಪುದೊ ? ಐವತ್ತೆರಡಕ್ಷರದ ಲಿಪಿಯ ಓದಿ ನೋಡಿ ತಿಳಿದಲ್ಲದೆ ಯೋಗವೆಂತಪ್ಪುದೊ ? ಆರುನೆಲೆಯ ಮೇಲಿಪ್ಪ ಮಣಿಮಾಡದೊಳಗೆ ಇರಬಲ್ಲಡೆ ಅದು ಯೋಗ ! `ಸ್ಯೋಹಂ' ಎಂಬಲ್ಲಿ ಸುಳುಹಡಗಿ ಮನ ನಷ್ಟವಾಗಿರಬಲ್ಲ ಕಾರಣ, ಗುಹೇಶ್ವರಲಿಂಗದಲ್ಲಿ ನೀನು ಸ್ವತಂತ್ರಧೀರನೆಂಬುದು ಕಾಣಬಂದಿತ್ತು ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಯೋಗಿನಾಥನ ಒಲುಮೆ ಯೋಗಿಯಾದವಂಗಲ್ಲದೆ, ಭೋಗಿಯಾದಾತಂಗೆಲ್ಲಿಹುದಯ್ಯಾ? ಪಂಚಮಸ್ವರದಾಯತ ಕೋಗಿಲೆಗಲ್ಲದೆ ಕಾಗೆಗೆಲ್ಲಿಹುದೊ? ಕಪಿಲಸಿದ್ಧಮಲ್ಲಿಕಾರ್ಜುನ ಯೋಗಿನಾಥಾ
--------------
ಸಿದ್ಧರಾಮೇಶ್ವರ

ಇನ್ನಷ್ಟು ...
-->