ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಶುದ್ಧಪ್ರಸಾದಿಯಾದಡೆ ತನು ಸತ್ಕ್ರಿಯಾ ಸನ್ನಿಹಿತನಾಗಿ, ಅಣುಮಾತ್ರ ದ್ವೈತಿಯಾಗದೆ ಚರಿಸಬೇಕು. ಸಿದ್ಧಪ್ರಸಾದಿಯಾದಡೆ ಮನ ಜ್ಞಾನಸನ್ನಿಹಿತನಾಗಿ, ಕಿಂಚಿತ್ತು ಮಲವಿಷಯಕ್ಕೆ ಜಿನುಗದೆ ಚರಿಸಬೇಕು. ಪ್ರಸಿದ್ಧಪ್ರಸಾದಿಯಾದಡೆ ಭಾವ ಮಹಾನುಭಾವಸನ್ನಿಹಿತನಾಗಿ, ಒಂದಿನಿತು ಭ್ರಾಂತನಾಗದೆ ಚರಿಸಬೇಕು. ಈ ಭೇದವನರಿಯದೆ ಅವರವರಂತೆ, ಇವರಿವರಂತೆ, ತಾನು ತನ್ನಂತೆ ನಡೆನುಡಿ ಕೊಡುಕೊಳ್ಳಿಯುಳ್ಳರೆ ಕಡೆ ಮೊದಲಿಲ್ಲದೆ ನರಕವನೈಯ್ದುವ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಬ್ದಿಯಾದಾತ ತರುಗಳ ಹೋತ, ನಿಶ್ಶಬ್ದಿಯಾದಾತ ಪಾಷಾಣವ ಹೋತ. ಕೋಪಿಯಾದಾತ ಅಗ್ನಿಯ ಹೋತ, ಶಾಂತನಾದಾತ ಜಲವ ಹೋತ. ಬಲ್ಲೆನೆಂಬಾತ ಇಲ್ಲವೆಯ ಹೋತ, ಅರಿಯೆನೆಂಬಾತ ಪಶುವ ಹೋತ. ಇದು ಕಾರಣ_ಅರಿಯೆನೆನ್ನದೆ ಬಲ್ಲೆನೆನ್ನದೆ ಅರುಹಿನ ಕುರುಹನಳಿದುಳಿದು ಗುಹೇಶ್ವರನೆಂಬ ಲಿಂಗವ ಹೋತವರನಾರನೂ ಕಾಣೆ.
--------------
ಅಲ್ಲಮಪ್ರಭುದೇವರು
ಶ್ರದ್ಧೆ ತೋರಿದಲ್ಲಿ ಆಚಾರಲಿಂಗವ ಕಾಣುವನು. ನೈಷ್ಠೆದೋರಿದಲ್ಲಿ ಗುರುಲಿಂಗವ ಕಾಣುವನು. ಸಾವಧಾನ ತೋರಿದಲ್ಲಿ ಶಿವಲಿಂಗವ ಕಾಣುವನು. ಅನುಭಾವ ತೋರಿದಲ್ಲಿ ಜಂಗಮಲಿಂಗವ ಕಾಣುವನು. ಆನಂದದೋರಿದಲ್ಲಿ ಪ್ರಸಾದಲಿಂಗವ ಕಾಣುವನು. ಸಮರಸ ತೋರಿದಲ್ಲಿ ಮಹಾಲಿಂಗವ ಕಾಣುವನು. ಇಂತು ಷಡ್ವಿಧಭಕ್ತಿ ನಿಷ್ಪತ್ತಿಯಾದಲ್ಲಿ ಗುರುನಿರಂಜನ ಚನ್ನಬಸವಲಿಂಗವ ಕಾಣದೆ ತಾನು ತಾನಾಗಿಹನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶೈವಸಿದ್ಧಾಂತಿಗಳಪ್ಪ ಕರ್ಮಕಾಂಡಿಗಳು ಸ್ಥಾವರಲಿಂಗದೆಡೆಯಲ್ಲಿ, ಹವನ ಹೋಮಾದಿ ಪವಿತ್ರಕಾರ್ಯವ ಕೈಕೊಂಡೆಡೆಯಲ್ಲಿ, ಉಚ್ಛಿಷ್ಟಾದಿ ಪಂಚಸೂತಕಗಳಂಟಿದಡೆ ಅವರು ಆ ಸೂತಕವ ಮಾನಿಸದೆ ಪರಿಶುದ್ಧಭಾವದಿಂದಿರ್ಪರು. ದೇವದೇವನಪ್ಪ ಮಹಾದೇವನನು ಲಿಂಗರೂಪದಿಂದ ಅಂಗದಲ್ಲಿ ಧರಿಸಿ ಪರಿಶುದ್ಧರಾದೆವೆಂದು ತಿಳಿಯದೆ ಸೂತಕವನಾಚರಿಸುವ ವ್ರತಗೇಡಿಗಳ ಎನಗೆ ತೋರದಿರಯ್ಯಾ_ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಶಮೆ ದಮೆ ತಿತಿಕ್ಷೆ ಉಪರತಿ ಶ್ರದ್ಧೆ ಸಮಾಧಿ ಸಾಧನಸಂಪನ್ನನಾಗಿ ಸದ್ಗುರುವನರಸುತ್ತ ಬಪ್ಪ ಶಿಷ್ಯನ ಸ್ಥೂಲತನುವಿನ ಕಂಗಳ ಕೊನೆಯಲ್ಲಿ ಇಷ್ಟಲಿಂಗವ ಧರಿಸಿ; ಸೂಕ್ಷ್ಮತನುವಿನ ಮನದ ಕೊನೆಯಲ್ಲಿ ಪ್ರಾಣಲಿಂಗವ ಧರಿಸಿ; ಕಾರಣ ತನುವಿನ ಭಾವದ ಕೊನೆಯಲ್ಲಿ ತೃಪ್ತಿಲಿಂಗವ ಧರಿಸಿ, `ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ, ಎಂಬ ಕಂಗಳ ಇಷ್ಟಲಿಂಗಕ್ಕೆ ಸಮರ್ಪಿಸಿ, `ಇಂದ್ರಿಯಾಣಾಂ ಮನೋನಾಥಃ? ಎಂಬ ಮನವನು ಪ್ರಾಣಲಿಂಗಕ್ಕೆ ಸಮರ್ಪಿಸಿ; ಪ್ರಾಣ ಭಾವವ ತೃಪ್ತಿಲಿಂಗಕ್ಕೆ ಸಮರ್ಪಿಸಿ `ಮನೋದೃಷ್ಟ್ಯಾ ಮರುನ್ನಾಶಾದ್ರಾಜಯೋಗಫಲಂ ಭವೇತ್, ಎಂಬ ರಾಜಯೋಗ ಸಮರಸವಾದಲ್ಲಿ_ ಅಂಗ ಲಿಂಗ, ಲಿಂಗವಂಗವಾಗಿ ಶಿಖಿ ಕರ್ಪೂರಯೋಗದಂತೆ ಪೂರ್ಣಾಪೂರ್ಣ ದ್ವೈತಾದ್ವೈತ ಉಭಯ ವಿನಿರ್ಮುಕ್ತವಾಗಿ `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ, ಎಂಬ ನಿಜದಲ್ಲಿ ನಿವಾಸಿಯಾದರು, ಕೂಡಲಚೆನ್ನಸಂಗಾ ನಿಮ್ಮ ಶರಣರು.
--------------
ಚನ್ನಬಸವಣ್ಣ
ಶರಣನ ಬರವದು ಸಕಲಸನ್ನಿಹಿತ, ಶರಣ ನಿಂದುದು ಸಕಲನಿಃಕಳ, ಶರಣು ಶರಣಸಂಬಂಧವಾದುದು ಗುರುನಿರಂಜನ ಚನ್ನಬಸವಲಿಂಗೈಕ್ಯ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶರಣಂಗೆ ಉತ್ಪತ್ಯವಿಲ್ಲಾಗಿ ಸ್ಥಿತಿಯಿಲ್ಲ, ಸ್ಥಿತಿಯಿಲ್ಲವಾಗಿ ಲಯವಿಲ್ಲ, ಲಯವಿಲ್ಲವಾಗಿ ದೇಹನಾಮ ಪ್ರವರ್ತನೆಯಿಲ್ಲ, ಇವಾವುದೂ ಇಲ್ಲದ ಕಾರಣ, ಗುಹೇಶ್ವರಯ್ಯಾ, ನಿಮ್ಮ ಶರಣ ಬಚ್ಚಬರಿಯ ಬೆಳಗು.
--------------
ಅಲ್ಲಮಪ್ರಭುದೇವರು
ಶಿವಾನುಭಾವಿಗಳ ಸಂಗದಿಂದ ಲಿಂಗಾನುಭಾವವ ಕಂಡೆನಯ್ಯ. ಲಿಂಗಾನುಭಾವದಿಂದ ಪರಮಸುಖವ ಕಂಡೆನಯ್ಯ. ಆ ಪರಮಸುಖದಿಂದ ನಿಮ್ಮ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶ್ರೀರುದ್ರಾಕ್ಷಿಯ ಹಸ್ತ ತೋಳು ಉರ ಕಂಠ ಮೊದಲಾದ ಸ್ಥಾನಂಗಳಲ್ಲಿ ಧರಿಸಿ, ಶಿವಾರ್ಚನೆಯ ಮಾಡುವುದು ಸದಾಚಾರ, ಅದೇ ಸದ್ಯೋನ್ಮುಕ್ತಿ. ಅದು ಕಾರಣ, ಆ ಮಹಾರುದ್ರಾಕ್ಷಿಯ ಧರಿಸಿ, ಎನ್ನ ಭವಂ ನಾಸ್ತಿಯಾತಿತ್ತು. ಮಹಾಲಿಂಗ ಕಲ್ಲೇಶ್ವರಾ, ರುದ್ರಾಕ್ಷಿಯಿಂದೆ ಕೃತಾರ್ಥನಾದೆನು.
--------------
ಹಾವಿನಹಾಳ ಕಲ್ಲಯ್ಯ
ಶ್ರೀಗುರು ಲಿಂಗ ಜಂಗಮ ಪ್ರಸಾದ ಒಂದೇ ಪರಶಿವಮೂರ್ತಿ ಮಹಾವಸ್ತುಗಳು ಕೇಳಿರಣ್ಣಾ. ಅರಿದು ಧ್ಯಾನಿಸಿ ಪೂಜಿಸಿ ಸೇವಿಸಿ ಅರ್ಚಿಸಿ ಅರ್ಪಿಸಿ ಧರಿಸಿ, ಧರ್ಮ ಅರ್ಥ ಕಾಮ ಮೋಕ್ಷ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಈ ಚತುರ್ವಿಧ ಪದವಿಯನೂ ಕೂಡುವರೆ, ಗುರು ಲಿಂಗ ಜಂಗಮ ಪ್ರಸಾದವ ನಂಬುವುದು. ಇದು ಸತ್ಯ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶ್ರೀಮತ್ಸಜ್ಜನ ಶುದ್ಧಶಿವಾಚಾರರಾಗಿ ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ, ಬಸವೇಶ್ವರದೇವರ ಸಾಂಪ್ರದಾಯಕರೆಂದು ನುಡಿದು ನಡೆದರೆ ಭಕ್ತರೆಂಬೆ, ಪುರಾತನರೆಂಬೆ. ಅಂತಪ್ಪ ಭಕ್ತಂಗೆ ಈ ಮೂಜಗವೆಲ್ಲ ಸರಿಯಲ್ಲವೆಂಬೆ. ಆ ಭಕ್ತಂಗೆ ಶಿವನ ಗದ್ದುಗೆಯೆ ಕೈಲಾಸವಾಗಿಪ್ಪುದು ನೋಡಾ. ಈ ಶಿವಾಚಾರದ ಪಥವನರಿಯದೆ ಇರುಳು ಹಗಲು ಅನಂತ ಸೂತಕಪಾತಕಂಗಳೊಳಗೆ ಮುಳುಗಾಡಿ ಮತಿಗೆಟ್ಟು ಪಂಚಾಂಗವ ಬೊಗಳುವ ಭ್ರಷ್ಟ ಮಾದಿಗರ ಮಾತು ಅಂತಿರಲಿ. ಪಂಚಾಂಗ ಕೇಳಿದ ದಕ್ಷಬ್ರಹ್ಮನ ತಲೆಯೇಕೆ ಹೋಯಿತು ? ಪಂಚಾಂಗ ಕೇಳಿದ ಪಂಚಪಾಂಡವರು ದೇಶಭ್ರಷ್ಟರಾದರೇಕೆ ? ಪಂಚಾಂಗ ಕೇಳಿದ ಶ್ರೀರಾಮನ ಹೆಂಡತಿ ರಾವಣಗೆ ಸೆರೆಯಾದಳೇಕೆ ? ಪಂಚಾಂಗ ಕೇಳಿದ ಇಂದ್ರನ ಶರೀರವೆಲ್ಲ ಯೋನಿಮಂಡಲವೇಕಾಯಿತು ? ಪಂಚಾಂಗ ಕೇಳಿದ ದ್ವಾರಾವತಿ ಪಟ್ಟಣದ ನಾರಾಯಣನ ಹೆಂಡಿರು ಹೊಲೆಮಾದಿಗರನ್ನು ಕೂಡಿದರೇಕೆ ? ಪಂಚಾಂಗ ಕೇಳಿದ ಸರಸ್ವತಿಯ ಮೂಗು ಹೋಯಿತೇಕೆ ? ಪಂಚಾಂಗ ಕೇಳಿದ ಕಾಮ ಸುಟ್ಟು ಭಸ್ಮವಾದನೇಕೆ ? ಪಂಚಾಂಗ ಕೇಳಿದ ಬ್ರಹ್ಮ ವಿಷ್ಣು ಇಂದ್ರ ಮೊದಲಾದ ಮೂವತ್ತುಮೂರುಕೋಟಿ ದೇವರ್ಕಳು ತಾರಕಾಸುರನಿಂದ ಬಾಧೆಯಾಗಿ ಕಂಗೆಟ್ಟು ಶಿವನ ಮೊರೆಯ ಹೊಕ್ಕರೇಕೆ ? ಕುರುಡ ಕುಂಟ ಹಲ್ಲುಮುರುಕ ಗುರುತಲ್ಪಕನ ಬಲವ ಕೇಳಲಾಗದು. ಶುಭದಿನ ಶುಭಲಗ್ನ ಶುಭವೇಳೆ ಶುಭಮುಹೂರ್ತ ವ್ಯತಿಪಾತ ದಗ್ಧವಾರವೆಂದು ಸಂಕಲ್ಪಿಸಿ ಬೊಗಳುವರ ಮಾತ ಕೇಳಲಾಗದು. ಗುರುವಿನಾಜ್ಞೆಯ ಮೀರಿ, ಸತ್ತರೆ ಹೊಲೆ, ಹಡೆದರೆ ಹೊಲೆ, ಮುಟ್ಟಾದರೆ ಹೊಲೆ ಎಂದು ಸಂಕಲ್ಪಿಸಿಕೊಂಬುವಿರಿ. ನಿಮ್ಮ ಮನೆ ಹೊಲೆಯಾದರೆ ನಿಮ್ಮ ಗುರುಕೊಟ್ಟ ಲಿಂಗವೇನಾಯಿತು ? ವಿಭೂತಿ ಏನಾಯಿತು ? ರುದ್ರಾಕ್ಷಿ ಏನಾಯಿತು ? ಮಂತ್ರವೇನಾಯಿತು ? ಪಾದೋದಕ ಪ್ರಸಾದವೇನಾಯಿತು ? ನಿಮ್ಮ ಶಿವಾಚಾರವೇನಾಯಿತು ? ನೀವೇನಾದಿರಿ ಹೇಳಿರಣ್ಣಾ ? ಅರಿಯದಿದ್ದರೆ ಕೇಳಿರಣ್ಣಾ. ನಿಮ್ಮ ಲಿಂಗ ಪೀತಲಿಂಗ; ನೀವು ಭೂತಪ್ರಾಣಿಗಳು. ನಿಮ್ಮ ಮನೆಯೊಳಗಾದ ಪದಾರ್ಥವೆಲ್ಲ ಹೆಂಡಕಂಡ ಅಶುದ್ಧ ಕಿಲ್ಬಿಷವೆನಿಸಿತ್ತು. ಇದ ಕಂಡು ನಾಚದೆ, ಮತ್ತೆ ಮತ್ತೆ ಶುಭಲಗ್ನವ ಕೇಳಿ, ಮದುವೆಯಾದ ಅನಂತ ಜನರ ಹೆಂಡಿರು ಮುಂಡೆಯರಾಗಿ ಹೋದ ದೃಷ್ಟವ ಕಂಡು ಪಂಚಾಂಗವ ಕೇಳಿದವರಿಗೆ ನಾಯಿ ಮಲವ ಹಂದಿ ಕಿತ್ತುಕೊಂಡು ತಿಂದಂತಾಯಿತ್ತು ಕಾಣಾ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಶಿವ ಶಿವ! ಮಹಾದೇವ ಶಿವನೇ ನೀನು ಸರ್ವಜ್ಞನಾಗಿ ಎನ್ನನೂ ನೀನು ಬಲ್ಲೆ. ಈ ಪರಿಯನು ಹರಿಬ್ರಹ್ಮದೇವದಾನವಮಾನವರು ಅರಿಯದೆ ಭ್ರಮಿಸುತ್ತಮಿಪ್ಪರು. ಈ ವಿದ್ಥಿಯನು ತಾತ್ಪಯ್ರ್ಯವೆಂದರಿದೆನಾಗಿ ಸದ್ಯೋನ್ಮುಕ್ತನು, ನಿರಂತರ ಪರಿಣಾಮಿ, ಪರಮಸುಖಸ್ವರೂ[ಪಿ] ನಾನೇ ಅಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶಿವತತ್ವದ ವಾಯುವಿನ ಮೇಲೆ ನಿರಾಳ ಅನಾಹತಚಕ್ರ. ಅಲ್ಲಿಯ ಪದ್ಮ ಇನ್ನೂರಾ ಎಪ್ಪತ್ತು ದಳದ ಪದ್ಮ. ಆ ಪದ್ಮ ವರ್ಣವಿಲ್ಲದೆ ಅಪ್ರಮಾಣ ಅಗೋಚರವಾಗಿಹುದು. ಅಲ್ಲಿಯ ಅಕ್ಷರ ಇನ್ನೂರಾ ಎಪ್ಪತ್ತಕ್ಷರ ; ಆ ಅಕ್ಷರ ನಿರೂಪಾತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಳ ಉಪಮಾಶಕ್ತಿ. ಅಮಲಾನಂದಬ್ರಹ್ಮವೇ ಅದ್ಥಿದೇವತೆ. ಅಲ್ಲಿಯ ನಾದ ಸುನಾದ. ಅಲ್ಲಿಯ ಬೀಜಾಕ್ಷರ ಆದಿಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶಶಿಮುಖಿಯರ ಸಂಗಕ್ಕೆ ಎಣಿಸುವ ಪಶುಪ್ರಾಣಿಗಳು ಪಶುಪತಿಯ ಸಂಗಸುಖಕ್ಕೆ ಯಾಕೆ ಎಣಿಸಲೊಲ್ಲರಯ್ಯ? ಶಿವ ಶಿವಾ! ನೀ ಮಾಡಿದ ವಿಷಯದ ವಿದ್ಥಿ, ಈರೇಳುಲೋಕವನಂಡಲೆವುತ್ತಿದೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶುದ್ಧ ಪದ್ಮಾಸನದೊಳು ಕುಳ್ಳಿರ್ದು ಅರ್ಧೋದಯವನೆತ್ತುತೈದಾನೆ, ಹ್ದೊರ್ದ ಪ್ರಪಂಚುಗಳನೆಲ್ಲವ ಸುಟ್ಟು ಅರ್ಧೋದಯವನೆತ್ತುತ್ತೈದಾನೆ, ಅರ್ಧೋದಯಾಗ್ನಿ ಶುಚಿ ತನ್ನ ಪ್ರವೇಶಿಸಲು ಮುಗ್ಧತ್ವ ಹೋಯಿತ್ತು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...
-->