ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಹರತೇರು ಬಿತ್ತಿದ ಗಿಡವಿನ ಹೂವ್ವ ಕೊಯ್ದು ಊರೆಲ್ಲ ಕಟ್ಟಿದ ಕೆರೆ ನೀರ ತಂದು ನಾಡೆಲ್ಲ ನೋಡಿರಿಯೆಂದು ಪೂಜಿಸುವ ಪುಣ್ಯ ನೀರಿಗೊ ಹುವ್ವಿಗೊ ನಾಡೆಲ್ಲಕ್ಕೊ ಪೂಜಿಸಿದಾತಗೊ ಇದ ನಾನರಿಯೆ ನೀ ಹೇಳೆಂದಾತ ನಮ್ಮ ದಿಟ್ಟ ವೀರಾದ್ಥಿವೀರ ನಿಜ ಭಕ್ತ ಅಂಬಿಗರ ಚವುಡಯ್ಯನು
--------------
ಅಂಬಿಗರ ಚೌಡಯ್ಯ
ಹದಿನಾರಂಗುಲದುದ್ದ ಸರ್ಪನ ವಿಷ ಕೆಟ್ಟು ಎರಡು ಕಾಲನಾಕಾಶದಲೂರಿ ನಿಂದಿತ್ತು. ಬಹುಮುಖದ ಪಕ್ಷಿ ಏಕಮುಖವಾಗಿ ಚಂಚುಪುಟದಲ್ಲಿರ್ದ ರತ್ನಪಕ್ಷಿಯ ನುಂಗಿ ರತ್ನ ಕೆಟ್ಟಿತ್ತು. ಸೌರಾಷ್ಟ್ರ ಸೋಮೇಶ್ವರನಲ್ಲಿ ಅರಸುವ ಬನ್ನಿರೆ, ಸುಜ್ಞಾನಭರಿತರು.
--------------
ಆದಯ್ಯ
ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ, ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ. ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ ತೊತ್ತಾಗಿಪ್ಪುದು. ಕೋಪವೆಂಥದೆಂದರಿಯ, ತಾಪತ್ರಯಂಗಳು ಮುಟ್ಟಲಮ್ಮವು, ವ್ಯಾಪ್ತಿಗಳಡಗಿದವು. ಲಿಂಗವನೊಳಕೊಂಡ ಪರಿಣಾಮಿ. ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು. ತನಗೊಮ್ಮೆಯು ಲಿಂಗಧ್ಯಾನ, ಲಿಂಗಕೊಮ್ಮೆಯು ತನ್ನ ಧ್ಯಾನ. ಘನಘನಮಹಿಮೆಯ ಹೊಗಳಲೆನ್ನಳವಲ್ಲ. ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ, ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ.
--------------
ಅಗ್ಘವಣಿ ಹಂಪಯ್ಯ
ಹೃದಯಕಮಲಮಧ್ಯದಲ್ಲಿ ಅಷ್ಟದಳ ಕಮಲವ ಮೆಟ್ಟಿಪ್ಪ ಹಂಸನ ಕಟ್ಟಬೇಕೆಂಬರು. ಈ ಹೊಟ್ಟೆಯ ಕೂಳ ಅಣ್ಣಗಳೆಲ್ಲರೂ ಕಟ್ಟಬಲ್ಲರೆ ನಿಜಹಂಸನ ? ಬೆಟ್ಟಬೆಟ್ಟವನೇರಿದ ಭೃಗು ದದ್ಥೀಚಿ ಅಗಸ್ತ್ಯ ಕಶ್ಯಪ ರೋಮಜ ಕೌಂಡಿಲ್ಯ ಚಿಪ್ಪಜ ಮುಂತಾದ ಸಪ್ತ ಋಷಿಗಳೆಲ್ಲರೊಳಗಾದ ಋಷಿಜನಂಗಳು, ಬೆಟ್ಟವನೇರಿ ಕಟ್ಟಿದುದಿಲ್ಲ. ಮತ್ತೆಯೂ ಬಟ್ಟೆಗೆ ಬಂದು ಮತ್ತರಾದರಲ್ಲದೆ, ಸುಚಿತ್ತವನರಿದುದಿಲ್ಲ. ವಿಷರುಹಕುಸುಮಜನ ಕಪಾಲವ ಹಿಡಿದಾತನ ಕೈಯಲ್ಲಿ ಗಸಣೆಗೊಳಗಾದರು. ಆತ್ಮನ ರಸಿಕವನರಿಯದೆ, ಈ ಹುಸಿಗರ ನೋಡಿ ದೆಸೆಯ ಹೊದ್ದೆನೆಂದೆ, ಪಶುಪತಿದೂರ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೊಸ ಮದುವೆ ಹಸೆಯುಡುಗದ ಮುನ್ನ, ಹೂಸಿದ ಅರಿಸಿನ ಬಿಸಿಲಿಂಗೆ ಹರಿಯದ ಮುನ್ನ, ತನು ಸಂಚಲವಡಗಿ ಮನವು ಗುರುಕಾರುಣ್ಯವ ಪಡೆದು ಹುಸಿಯಿಲ್ಲದಿರ್ದಡೆ ಭಕ್ತನೆಂಬೆ! ಹಿಡಿಹಿಂಗಿಲ್ಲದಿರ್ದಡೆ ಮಾಹೇಶ್ವರನೆಂಬೆ! ತನುವಿಲ್ಲದಿರ್ದಡೆ ಪ್ರಸಾದಿಯೆಂಬೆ! ಜೀವವಿಲ್ಲದಿರ್ದಡೆ ಪ್ರಾಣಲಿಂಗಿಯೆಂಬೆ! ಆಶೆಯಿಲ್ಲದಿರ್ದಡೆ ಶರಣನೆಂಬೆ! ಈ ಐದರ ಸಂಪರ್ಕ ನಿರ್ಭೋಗವಾದಡೆ ಐಕ್ಯನೆಂಬೆ! ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯನೆಂಬೆ! ಈ ಹೀಂಗಾದ ದೇಹವನಿರಿದಡರಿಯದು ತರಿದಡರಿಯದು. ಬೈದಡರಿಯದು; ಹೊಯ್ದಡರಿಯದು. ನಿಂದಿಸಿದಡರಿಯದು; ಸ್ತುತಿಸಿದಡರಿಯದು. ಸುಖವನರಿಯದು; ದುಃಖವನರಿಯದು. ಇಂತಿವರ ತಾಗು ನಿರೋಧವನರಿಯದಿರ್ದಡೆ ಅವರ ಮಹಾಲಿಂಗ ಗಜೇಶ್ವರನೆಂಬೆ.
--------------
ಗಜೇಶ ಮಸಣಯ್ಯ
ಹರಿಯ ಕೈಯೊಳಗಣ ಗಿಳಿಗೆ, ಬೆಕ್ಕಿನ ಭಯ. ಗಿಳಿಯೆದ್ದೋಡಿ ಹಾಲ ಕುಡಿಯಲು, ಹರಿಯ ಕೈ ಮುರಿದು, ಮಾರ್ಜಾಲಗೆ ಮರಣವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೊನ್ನು ಪ್ರಾಣನಾಯಕ, ಹೆಣ್ಣು ಜೀವರತ್ನ, ಮಣ್ಣು ಮೈಸಿರಿಯ ಕೇಡು. ಈ ಮೂರು, ಮಹಾಲಿಂಗ ಚೆನ್ನರಾಮಯ್ಯಂಗೆ ಸಲ್ಲಲಿತವಲ್ಲ.
--------------
ಮೈದುನ ರಾಮಯ್ಯ
ಹರನ ಕರುಣವ ಪಡೆದ ಸಾಮರ್ಥ್ಯವ ಬಲುಹಿಂದ, ಶಿವಶರಣರೊಡನೆ ಸೆಣಸಿದಡೆ ಲೇಸುಂಟೆ ? ಅಘಟಿತಘಟತರಿಗೆ ಅಘಟಿತರುಂಟು ನೋಡಾ ! ನೊಸಲಲೊಬ್ಬ ಕಣ್ಣ ತೆಗೆದಡೆ, ಅಂಗಾಲಲೊಬ್ಬ ಕಣ್ಣ ತೆಗೆವನು. ಗುಹೇಶ್ವರನ ಶರಣರು ಉಪಮಾತೀತರು.
--------------
ಅಲ್ಲಮಪ್ರಭುದೇವರು
ಹುಟ್ಟು ಹೊಂದುಗಳರಿಯದೆ ನೆಟ್ಟನೆ ಹುಟ್ಟಿ ಬಂದವನೆಂದು ಕಾರ್ಯದಲ್ಲಿ ಕರಿದು ಬಿಳಿದು ಕೂಡಿ ಮಾಡಿಕೊಂಡೆನೆಂದರೆ ನಿಜವಾಗಲರಿಯದು. ಭೂಪ ಧನಿಕರು ಕೊಲ್ಲಿಸಿ ಹಾಕುವರು ಗುರುನಿರಂಜನ ಚನ್ನಬಸವಲಿಂಗಾ ನೀ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೃದಯದ ಬಾವಿಯ ತಡಿಯಲ್ಲಿ ಒಂದು ಬಾಳೆ ಹುಟ್ಟಿತ್ತು ! ಆ ಬಾಳೆಯ ಹಣ್ಣ ಮೆಲಬಂದ ಸರ್ಪನ ಪರಿಯ ನೋಡಾ. ಬಾಳೆ ಬೀಗಿ ಸರ್ಪನೆದ್ದೆಡೆ_ನಿರಾಳವು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹರಹರ ಶಿವಶಿವ ಜಯಜಯ ಹರಗಣಂಗಳಾಚರಿಸಿದ ಸತ್ಕಾಯಕದಿಂದ ಬಹುಜನ್ಮದ ದೋಷ ತೊಲಗುವುದಯ್ಯ. ಸತ್ಕಿøಯದಿಂದ ಕಾಲಕಾಮರ ಭಯ ಹರಿವುದಯ್ಯ. ಸಮ್ಯಜ್ಞಾನದಿಂದ ಮಾಯಾಪಾಶ ಹಿಂದಾಗುವುದಯ್ಯ. ಸದ್ಭಕ್ತಿಯಿಂದ ಪಾವನಸ್ವರೂಪರಾಗುವುರಯ್ಯ. ಲಿಂಗಾಚಾರದಿಂದ ತನು ಶುದ್ಧವಾಗುವುದಯ್ಯ. ಸದಾಚಾರದಿಂದ ಮನ ಸಿದ್ಧವಾಗುವುದಯ್ಯ. ಶಿವಾಚಾರದಿಂದ ಧನ ಪ್ರಸಿದ್ಧವಾಗುವುದಯ್ಯ. ಗಣಾಚಾರದಿಂದ ನಡೆ ಪರುಷವಾಗುವುದಯ್ಯ. ಭೃತ್ಯಾಚಾರದಿಂದ ನುಡಿ ಪರುಷವಾಗುವುದಯ್ಯ. ಕ್ರಿಯಾಚಾರದಿಂದ ಕರ್ಮೇಂದ್ರಿಯಂಗಳು ಪವಿತ್ರವಾಗುವವಯ್ಯ. ಜ್ಞಾನಾಚಾರದಿಂದ ಜ್ಞಾನೇಂದ್ರಿಯಂಗಳು ಪಾವನವಾಗುವವಯ್ಯ. ಭಾವಾಚಾರದಿಂದ ಕರಣಂಗಳು ನಿಜಸ್ವರೂಪವಾಗುವವಯ್ಯ. ಸತ್ಯಾಚಾರದಿಂದ ವಿಷಯಂಗಳು ಲಿಂಗಮುಖವಾಗುವವಯ್ಯ. ನಿತ್ಯಾಚಾರದಿಂದ ವಾಯುಗಳು ಮಹಾಪ್ರಸಾದವಾಗುವವಯ್ಯ. ಧರ್ಮಾಚಾರದಿಂದ ಲಿಂಗಾಂಗ ಏಕವಾಗುವುದಯ್ಯ. ಸರ್ವಾಚಾರದಿಂದ ಸರ್ವಾಂಗ ಜ್ಞಾನಜ್ಯೋತಿಯಪ್ಪುದು ತಪ್ಪದು ನೋಡ. ಸತ್ಕಾಯಕ ಮೊದಲಾದ ಷೋಡಶ ಕಲೆನೆಲೆಗಳೆ ಸದ್ಗುರುಮುಖದಿಂ ಚಿದಂಗವ ಮಾಡಿಕೊಂಡು, ಷೋಡಶವರ್ಣವೆ ಸದ್ಗುರುಮುಖದಿಂ ಚಿದ್ಘನಲಿಂಗವ ಮಾಡಿಕೊಂಡು ಸದ್ಗುರುಮುಖದಿಂ ಎರಡಳಿದು ಏಕಸ್ವರೂಪದಿಂದ ಜ್ಯೋತಿಜ್ಯೋತಿ ಬೆರದಂತೆ ಬಸವ ಮೊದಲಾದ ಪ್ರಮಥಗಣಂಗಳೆಲ್ಲ ಬಯಲೊಳಗೆ ಮಹಾಬಯಲಾದರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹಿಂದಣಜನ್ಮದ ಸಂಸಾರವ ಮರೆದು, ಮುಂದಣ ಭವಬಂಧನಂಗಳ ಜರಿದು, ಸಂದೇಹ ಸಂಕಲ್ಪಗಳ ಹರಿದು, ನಿಮ್ಮ ಅವಿರಳಭಕ್ತಿಯ ಬೆಳಗಿನಲ್ಲಿ ಬೆರೆದು ಓಲಾಡುವ ಮಹಾಮಹಿಮರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹೂವಿನ ಮೇಲೊಂದು ಚಿಕ್ಕ ಬೆಟ್ಟ ಹುಟ್ಟಿ, ಬೆಕ್ಕಿನ ಮೇಲಾರು ಬೆಟ್ಟ ಹುಟ್ಟಿದವು. ಬೆಟ್ಟದ ಮೇಲಣವರು ಕಲ್ಲನಿರಿಸಿ ಆರೂ ಕಾಣರು ! ಒಂದು ಗಿರಿ ನೂರನಾಲ್ವತ್ತೆಂಟು ಲಕ್ಷ ಮುಖವು. ನಾನೊಂದು ಮುಖದಲಿ ಇದ್ದೇನೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹರಹರ, ಶಿವಶಿವ, ಜಯಜಯ ಶ್ರೀಗುರುಲಿಂಗಜಂಗಮ ಶರಣಗಣಂಗಳಲ್ಲಿ ಕಿಂಕರ ಭೃತ್ಯಭಾವಸದ್ಭಕ್ತಿಯೆ ನಿಜಶಿವಯೋಗವಯ್ಯ. ಸದ್ಭಕ್ತಿಯೆ ನಿಜಕೈವಲ್ಯಪದವಯ್ಯ. ಸದ್ಭಕ್ತಿಯೆ ಪರಮಕೈ¯oಸವಯ್ಯ. ಸದ್ಭಕ್ತಿಯೆ ನಿಜಮೋಕ್ಷಮಂದಿರವಯ್ಯ. ಸದ್ಭಕ್ತಿಯೆ ರುದ್ರಲೋಕವಯ್ಯ. ಸದ್ಭಕ್ತಿಯೆ ಶಿವಲೋಕ ಶಾಂಭವಲೋಕವಯ್ಯ. ಸದ್ಭಕ್ತಿಯೆ ನಾಗಲೋಕ ದೇವಲೋಕವಯ್ಯ. ಸದ್ಭಕ್ತಿಯೆ ಕಾಮಧೇನು - ಕಲ್ಪವೃಕ್ಷ - ಚಿಂತಾಮಣಿಯಯ್ಯ. ಸದ್ಭಕ್ತಿಯೆ ಸಂಜೀವನ ಪರಮಾಮೃತವಯ್ಯ. ಸದ್ಭಕ್ತಿಯೆ ನಿತ್ಯತ್ವ ಪರಮಪದವಯ್ಯ. ಸದ್ಭಕ್ತಿಯೆ ಚಿದೈಶ್ವರ್ಯ ಚಿದಾಭರಣವಯ್ಯ. ಸದ್ಭಕ್ತಿಯೆ ಮಹಾತೀರ್ಥವಯ್ಯ. ಸದ್ಭಕ್ತಿಯೆ ಮಹಾಶಿವಕ್ಷೇತ್ರವಯ್ಯ. ಸದ್ಭಕ್ತಿಯಿಂದ ಮಹಾಪಾಪಂಗಳು ಕುಸಿದು ಹೋಹವಯ್ಯ. ಸದ್ಭಕ್ತಿಯಿಂದ ಸಕಲಲೋಕಪಾವನವಯ್ಯ. ಸದ್ಭಕ್ತಿಯಿಂದ ಸದ್ಯೋನ್ಮುಕ್ತಿಯಯ್ಯ. ಸದ್ಭಕ್ತಿಯಿಂದ ಅನಂತರು ಮುಕ್ತರಾದರಯ್ಯ. ಸದ್ಭಕ್ತಿಯೆ ಮಹಾಜ್ಞಾನದರ್ಪಣ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹೋಗುತ್ತ ಹೋಗುತ್ತ ಹೊಟ್ಟೆಯಡಿಯಾಯಿತ್ತು; ಬಟ್ಟಬಯಲಾಯಿತ್ತು. ತುಟ್ಟತುದಿಯನೇರಿ ತೂರ್ಯಾತೀತನಾಗಿ, ಇಷ್ಟ ಪ್ರಾಣ ಭಾವ ಬಯಲಾಯಿತ್ತು. ಬಯಲಲ್ಲಿ ನಿಂದುಕೊಂಡು ನೋಡುತ್ತಿರಲು, ಬ್ರಹ್ಮವೆಯಾಯಿತ್ತು, ಕರ್ಮ ಕಡೆಗೋಡಿತ್ತು. ಅರಿವರತು ಮರಹು ನಷ್ಟವಾಯಿತ್ತು. ತೆರನಳಿದು ನಿರಿಗೆ ನಿಃಪತಿಯಾಗಿ ಮಿರುಗುವ ದೃಷ್ಟಿಯಲ್ಲಿ ನೋಡುತ್ತಿರಲು, ನೋಟ ತ್ರಾಟಕವ ದಾಂಟಿ ಕೂಟದಲ್ಲಿ ಕೂಡಿ, ಬೆರಸಿ ಬೇರಾಗದಿಪ್ಪ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ

ಇನ್ನಷ್ಟು ...
-->