ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕುರುಹಿನ ರೂಹಿನ ಕೈಯಲ್ಲಿ ದರ್ಪಣವಿದ್ದಲ್ಲಿ ಫಲವೇನು ? ಒಂದಕ್ಕೆ ಜೀವವಿಲ್ಲ , ಒಂದಕ್ಕೆ ತೇಜವಿಲ್ಲ . ಕಾರಣವರಿಯದ ನಿಃಕಾರಣ ಮನುಜರ ಕೈಯಲ್ಲಿ ಲಿಂಗವಿದ್ದು ಫಲವೇನು ? ಅಂಗರಹಿತವಾದ ಸಂಗವನರಿಯರು. ಸಂಗರಹಿತವಾದ ಸುಖವನರಿಯರು. ನಿಸ್ಸಂಗಿ ನಿಂದ ನಿಲವ, ಸಕಳೇಶ್ವರದೇವಾ, ನಿಮ್ಮ ಶರಣ ಬಲ್ಲ .
--------------
ಸಕಳೇಶ ಮಾದರಸ
ಕಲಿಯಬಾರದು ಕಲಿತನವನು, ಕಲಿಯಬಾರದು ವಿವೇಕಸಹಜವನು, ಕಲಿಯಬಾರದು ದಾನಗುಣವನು, ಕಲಿಯಬಾರದು ಸತ್ಪಥವನು, ಸಕಳೇಶ್ವರದೇವಾ, ನೀ ಕರುಣಿಸಿದಲ್ಲದೆ.
--------------
ಸಕಳೇಶ ಮಾದರಸ
ಕಾಮಿಸಿ ಕಲ್ಪಿಸಿ ಭಾವಿಸಿ ಬರಿದೆ ಬಳಲಿದೆ. ಚಿಂತೆ ಮರುಳುತನಂ ಅದೆಂತು ಬಂದುದನಂತೆ ಕಾಬುದು. ಚಿಂತೆ ಮರುಳುತನಂ ಅಚಿಂತ್ಯ ಸಕಳೇಶ್ವರ ಮಾಡಿದಂತೆ. ಅಂತೆಯಲ್ಲದೆ ಎಂತೂ ಆಗದು ಚಿಂತೆ ಮರುಳುತನಂ.
--------------
ಸಕಳೇಶ ಮಾದರಸ
ಕಾಯಕಕ್ಕಾರದೆ, ಮೈಸೋಂಬತನದಿಂದ ಬೇರೆ ಕೂಳ ಗಳಿಸಲಾರದೆ ಹಸಿದಿಪ್ಪರಯ್ಯಾ. ಉಡಲು ಸೀರೆಯ ಗಳಿಸಲಾರದೆ, ಕಚ್ಚುಟವ ಕಟ್ಟಿಕೊಂಡಿಪ್ಪರಯ್ಯಾ. ಮೀಯಲೆಣ್ಣೆಯ ಗಳಿಸಲಾರದೆ, ಮಂಡೆ ಬೋಳಾಗಿಪ್ಪರಯ್ಯಾ. ದಿಟದಿಂದ ಬಿಡಿಸದೆ, ನಿಸ್ಸಂಸಾರದ ಸಟೆಯನವಧರಿಸಿಕೊಂಡಿಪ್ಪವರಿಗೆ ಆನಂಜುವೆ, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಕಿವಿಯಲ್ಲಿ ಕೀಟಕ, ಕೊರಳಲೊಂದೊದರು. ತಲೆಯಲ್ಲಿ ಹುಳಿತದೊಂದೇರು. ನೋವರಿಯದೆ ವಿಷಯಕ್ಕೆ ಹರಿವುದು ಸೊಣಗನು. ಬೆನ್ನಹೇರು ನೆಲಕ್ಕೆ ನೂಕಲು, ಬರವೆಯ ಕಾಗೆ ಬಂದಿರಿಯಲು, ನೋವನರಿಯದೆ ವಿಷಯಕ್ಕೆ ಹರಿವುದು ಗಾರ್ದಭನು. ಹರೆಯ ಶಬುದಕ್ಕೆ, ಬೊಬ್ಬೆಯ ರಭಸಕ್ಕೆ ತೊಟ್ಚಂಬು ತೊಟ್ಟುರ್ಚಿ ಬೀಳಲು, ನೋವನರಿಯದೆ ವಿಷಯಕ್ಕೆ ಹರಿವುದು ಹರಿಣನು. ಸಕಳೇಶ್ವರದೇವಾ, ನೀ ಮಾಡಿದ ಮಾಯೆ, ಆರಾರನಾಯತಗೆಡಿಸದೊ ?
--------------
ಸಕಳೇಶ ಮಾದರಸ
ಕಾಯದಿಂದ ಗುರುವ ಕಂಡೆ, ಕಾಯದಿಂದ ಲಿಂಗವ ಕಂಡೆ, ಕಾಯದಿಂದ ಜಂಗಮವ ಕಂಡೆ, ಕಾಯದಿಂದ ಪ್ರಸಾದವ ಕಂಡೆ. ಕಾಯದಿಂದ ಸಕಳೇಶ್ವರದೇವರ ಪೂಜಿಸುವಲ್ಲಿ, ಉತ್ತರಸಾಧಕನಾದೆಯಲ್ಲಾ, ಎಲೆ ಕಾಯವೆ.
--------------
ಸಕಳೇಶ ಮಾದರಸ
ಕಸವ ಬೋಹರಿಸಿ ದೇಹಾರಕ್ಕೆಡೆಮಾಡಿ. ಕಸವಿರಲು ದೇಹಾರ ಶುಚಿಗೆ ಶೋಭಿತವಲ್ಲ. ಪರದೈವವುಳ್ಳವಂಗೆ ಗುರುಲಿಂಗವಿಲ್ಲ. ಪರಕೆ ಮೀಸಲ ಹಿಡಿಯಲು, ಲಿಂಗಕ್ಕೋಗರವಿಲ್ಲ. ಇದು ಕಾರಣ, ಇಪ್ಪತ್ತಿನ ಬಿಳಿ ನೀರು. ನನ್ನೀ ಪರಮಾರ್ಥಕ್ಕೆ ಸಲ್ಲರು, ಹರಭಕ್ತರು ಬಲ್ಲರು. ಸಕಳೇಶ್ವರದೇವ, ಅವರ ಮೆಚ್ಚ.
--------------
ಸಕಳೇಶ ಮಾದರಸ
ಕಾಮನೆಂಬ ಬಿಲ್ಲಾಳವುಂಟೆಂಬುದ, ನಾವು ಕೇಳಿ ಬಲ್ಲೆವೈಸೆ ! ಅವನೆಲ್ಲರನೆಸೆವ ಅವ ನಮ್ಮ ಕಂಡಡೆ, ಬೆಟ್ಟೆಮ್ಮ ನಿಟ್ಟೈಸದೆ ಸರಿವ. ಸಕಳೇಶ್ವರದೇವರನರಿಯದ ನಿರ್ಭಾಗ್ಯರನೆಸೆವಾ.
--------------
ಸಕಳೇಶ ಮಾದರಸ
ಕರ್ತನೊಬ್ಬನೆ ದೇವ, ಸತ್ಯವೆ ಸುಭಾಷೆ, ಭೃತ್ಯಾಚಾರವೆ ಆಚಾರವಯ್ಯಾ. ಮತ್ತೆ ದೇವರಿಲ್ಲ , ಮತ್ತೆ ಆಚಾರವಿಲ್ಲ , ಮತ್ತೆ ಸುಭಾಷೆಯೆಂಬುದಿಲ್ಲ . ಮಹಂತ ಸಕಳೇಶ್ವರದೇವರನೊಲಿಸಿದ ಪುರಾತರ ಪಥವಿದು. ಅವಿತಥವಿಲ್ಲದೆ ನಂಬುವದು.
--------------
ಸಕಳೇಶ ಮಾದರಸ
ಕಾಡಪತ್ರೆಯ ನಾಡಕೀಡೆ ತಿಂದಿರವೆ ? ಉಡು ಏಕಾಂತ ನಿವಾಸಿಯೆ ? ತೋಳ ದಿಗಂಬರಿಯೇ ? ಎತ್ತು ಬ್ರಹ್ಮಚಾರಿಯೇ? ಬಾವುಲ ತಲೆಕೆಳಗಾಗಿದ್ದಡೆ ತಪಸ್ವಿಯೇ ? ಸಕಳೇಶ್ವರದೇವಾ, ನಿಮ್ಮ ನಿಜವನರಿಯದ ಶರಣರು ಹೊರಹಂಚೆ ಒಳಬೊಳ್ಳೆ, ಒಲ್ಲದು ಲಿಂಗೈಕ್ಯರು.
--------------
ಸಕಳೇಶ ಮಾದರಸ
ಕುಭಾಷೆ ಸುಭಾಷೆಯ ಕೇಳದಂತಿರಬೇಕು. ಮೃದುಕಠಿಣಂಗಳನಾರಯ್ಯದಂತಿರಬೇಕು. ರಸಗಂಧಂಗಳ ಅರಯದಂತಿರಬೇಕು ಲಿಂಗವಲ್ಲದೆ ಮತ್ತೊಂದ ಕಾಣದಂತಿರಬೇಕು ಇಂದ್ರಿಯಂಗಳ ಬಳಿ ಸಂದಲ್ಲದೆ ದೇವ ಸಕಳೇಶ್ವರದೇವನನೊಲಿಸಬಾರದು.
--------------
ಸಕಳೇಶ ಮಾದರಸ
ಕರ್ತನಿದ್ದೆಡೆಗೆ ಭೃತ್ಯ ಬಂದಡೆ, ಭೃತ್ಯಾಚಾರವ ಮಾಡಿಸಿಕೊಂಬ ಕರ್ತಂಗೆ ಕರ್ತೃತ್ವವಲ್ಲದೆ ಭೃತ್ಯನಿದ್ದೆಡೆಗೆ ಕರ್ತನೆಯ್ತಂದು, ಭೃತ್ಯಾಚಾರವ ಮಾಡಿಸಿಕೊಂಬ ಕರ್ತಂಗೆ ಕರ್ತೃತ್ವವೆಲ್ಲಿಯದು ? ಜಗದ ಕರ್ತನ ವೇಷವ ಧರಿಸಿ ಕರ್ತನಾದ ಬಳಿಕ, ಭಕ್ತನಿದ್ದೆಡೆಗೆ ಭಕ್ತಿಯ ಬಂದು ಮಾಡೆಂದಡೆ, ಎನ್ನ ಕರ್ತತನಕ್ಕೆ ಅದೇ ಹಾನಿ ನೋಡಾ. ಲಿಂಗಾಣತಿಯಿಂದ ಬಂದ ಪದಾರ್ಥವ ಲಿಂಗಾರ್ಪಿತವ ಮಾಡುವದಲ್ಲದೆ, ಅಂಗದಿಚ್ಛೆಗೆ ಅಂಗವಿಸಿ ಬೇಡಿದೆನಾದಡೆ, ಎನ್ನ ಲಿಂಗಾಭಿಮಾನತನಕ್ಕೆ ಅದೇ ಹಾನಿ ನೋಡಾ. ದೇಹ ಮನ ಪ್ರಾಣ ನಿಮ್ಮದಾಗಿ, ನಾ ಹೊರೆಯಬೇಕೆಂಬ ಭ್ರಾಂತೆನಗಿಲ್ಲ . ಬಡಮನವ ಮಾಡಿ ಒಂದಡಿಯ ನಡೆದೆನಾದಡೆ, ಮನದೊಡೆಯ ಸಕಳೇಶ್ವರದೇವಾ, ನಿಮ್ಮಾಣೆ.
--------------
ಸಕಳೇಶ ಮಾದರಸ
ಕಾಯದ ಕಳವಳದಲ್ಲಿ ಹುಟ್ಟಿ, ಸಂಸಾರವನೆ ತೊರೆದು, ಲಿಂಗಮುಖವರಿಯದವರೆಲ್ಲಾ ಅಂತಿರಲಿ ಅಂತಿರಲಿ. ಬ್ರಹ್ಮೋಪದೇಶವನೆ ಕೊರಳಲ್ಲಿರಿಸಿಕೊಂಡು, ವಿಷಯಾದಿಗಳ ಕೊಂಡಾತನಂತಿರಲಿ, ಅಂತಿರಲಿ. ಪಂಚಮಹಾವೇದಶಾಸ್ತ್ರವನೋದಿ, ಲಿಂಗವುಂಟು ಇಲ್ಲಾಯೆಂಬ ಶ್ವಾನರಂತಿರಲಿ, ಅಂತಿರಲಿ. ತನುವ ಹೊತ್ತು ತೊಳಲಿ ಬಳಲುವ ಕಾಲವಂಚಕ ಯೋಗಿಗಳೆಲ್ಲಾ ಅಂತಿರಲಿ, ಅಂತಿರಲಿ. ಪಂಚಮಹಾಶೈವರು ಭ್ರಷ್ಟರಾಗಿಹೋದರು. ಎಂತು ಲಿಂಗವಂತಂಗೆ ಸರಿಯೆಂಬೆ ? ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು, ಬುದ್ಧಿ ತಪ್ಪಿ, ಗಮನಗೆಟ್ಟುಹೋದರು. ಅದೃಶ್ಯಂ ಭಾವನೋ ನಾಸ್ತಿ ದೃಶ್ಯಮೇವ ವಿನಶ್ಯತಿ | ಸದ್ಬ್ರಹ್ಮಂ ತು ನಿರಾಕಾರಂ, ತಥ್ಯಂ ಧ್ಯಾಯಂತಿ ಯೋಗಿನಃ || ಎಂದುದಾಗಿ, ಬ್ರಾಹ್ಮಣನೆಂದಡೆ ಬ್ರಹ್ಮನ ಶಿರವ ದಂಡವ ಕೊಂಡರು. ಬ್ರಹ್ಮವಾದಿಗಳು ಲಿಂಗಕ್ಕೆ ದೂರವಾಗಿ ಹೋದರು. ಅಹಮಿಲ್ಲದ ಕಾರಣ, ಸಕಳೇಶ್ವರದೇವಯ್ಯಾ, ನಿಮ್ಮ ಶರಣರು ಜಗವಂದಯರಾದರು.
--------------
ಸಕಳೇಶ ಮಾದರಸ
ಕಂಡುದ ನುಡಿದಡೆ ಕಡುಪಾಪಿಯೆಂಬರು. ಸುಮ್ಮನಿದ್ದಡೆ ಮುಸುಕುರ್ಮಿಯೆಂಬರು. ಎನಲುಬಾರದು, ಎನದಿರಲುಬಾರದು. ಸಟೆ ಕುಹಕಪ್ರಪಂಚಿಂಗಲ್ಲದೆ ಭಜಿಸರು. ಸಕಳೇಶ್ವರದೇವಾ, ನಿಮ್ಮಾಣೆ
--------------
ಸಕಳೇಶ ಮಾದರಸ
ಕಾಲವಶದಿಂದ ಕಾಲನೆಡಹಿದಡೆ, ಹಾಲುಗುಡಿದಂತೆ ಪರಿಣಾಮಿಸಬೇಕು. ಕಾಲಕ್ಕೆ ಬೇಸತ್ತು ಬೆಂಬೀಳಲಾಗದು. ಕಾಲ ಮುನ್ನಾದಿಯಲ್ಲಿ ಬಂದುದಯ್ಯ ! ಕಾಲನ ಬಾಯಿಗೆ ಒಳಗಾಗದ ಮುನ್ನ, ಕಾಲಾಂತಕ ಸಕಳೇಶ್ವರದೇವ ಶರಣೆಂದು ಬದುಕಿರಯ್ಯಾ.
--------------
ಸಕಳೇಶ ಮಾದರಸ