ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಜವನರಿಯದ ಶರಣರು, ಲಿಂಗೈಕ್ಯರು, ಗಿರಿ ಗಗನ ಗಹ್ವರದೊಳಗಿದ್ದಲ್ಲಿ ಫಲವೇನೊ? ಮನವು ಲೇಸಾಗಿದ್ದಡೆ ಸಾಲದೆ? ಪರಮಸುಖಿಯಾಗಿರ್ಪ ಶರಣನ ಹೃದಯದಲ್ಲಿ ಸದಾಸನ್ನಹಿತನು ಸಕಳೇಶ್ವರದೇವ.
--------------
ಸಕಳೇಶ ಮಾದರಸ
ನವಸಾಸಾ ಅತಿಬಳನೆಂದಡೆ, ಒಂದು ಕೇಶವ ಕಿತ್ತನೆ ? ಶಿವನಿತ್ತ ಪಿಂಡವ, ಶ್ರೀರಾಮನು ಸೀತೆಗೆ ದಿಬ್ಯವನಿಕ್ಕಿಹೆನೆಂದು, ಹೋಮಕುಂಡಲದೊಳಗುರುಹಿದಡೆ, ಬ್ರಹ್ಮಾಂಡವನೊಡೆದು ಮರುಳುತಿದ್ದಲಿ ್ಲ, ಉರಿನಾಲಗೆಯ ಕೀಳನೆ ? ಪರಮನೊಲಿದ, ಪಶುಪತಿ ನಿರೂಪನೊಲಿದ, ಋಷಿಯನೊಂದು ವಾಕ್ಯದಿಂದ ಜಲ ಸಾಗರಂಗಳು ಬಂಧನಕ್ಕೆ ಬಾರವೆ, ನಳನೀಲರ ಕೈಯಲ್ಲಿ ? ಈಶ್ವರನ ಶರಣರ ಘಾಸಿಮಾಡನೆನೆಂದಡೆ, ನೊಸಲಕ್ಕರವ ತೊಡೆಯರೆ ? ಅಸುರನ ಪ್ರಹಾರವಿಡಿದು, ಹಿರಣ್ಯಾಕ್ಷನ ಕೊಂದು, ಶಿರವ ಹೋಗಾಡನೆ ನರಸಿಂಹನು? ಸ್ವತಂತ್ರನಯ್ಯಾ, ಸಕಳೇಶ್ವರದೇವ ನಿಮ್ಮ ಶರಣನು. ಸಿಡಿಲ ಸ್ವೀಕರಿಸನೆ ಶಿವಯೋಗಿ ಸಿದ್ಧರಾಮಯ್ಯನು?
--------------
ಸಕಳೇಶ ಮಾದರಸ
ನೀನೆನ್ನನೊಲ್ಲದಿದ್ದರೆ ನಾನಾರ ಸಾರಿ ಬದುಕಲಯ್ಯಾ? ಮೇಕುದೋರಿ ಗಂಡನ ಮಾಡಿಕೊಂಡವರುಂಟೆ? ನಿಮ್ಮಿಂದಲಧಿಕರುಂಟೆ ಹೇಳಾ? ತಲೆಯೂರಿ ತಪಿಸಿದಡೆ, ಅಲ್ಲಿ ಮೂರ್ತಿಯ ತೋರುವಾತ ನೀನೆ. ಕಣ್ಣಮುಚ್ಚಿ ಕಮರಿಯ ಹಾಯ್ದರೆಯೂ ಅಲ್ಲಿ ಪದವಿಯ ಕೊಡುವವನು ನೀನೆ. ನೀನು ಕರುಣಿಸುವನ್ನಕ್ಕ, ನಾನು ಹೀಗಿದೇನೆ ಹೇಳಾ, ಸಕಳೇಶ್ವರಾ.
--------------
ಸಕಳೇಶ ಮಾದರಸ
ನರರನುಪಧಾವಿಸಿ ಅವರಿಚ್ಛೆಗೆ ನುಡಿದು, ಬಂದ ಒಡಲ ಹೊರೆದು, ಹಿರಿಯರೆನಿಸಿಕೊಂಬ ಡಂಬಕತನಕಾನಂಜುವೆನಯ್ಯಾ. ಹಿರಿದಡವಿಯ ಗಿರಿಗಹ್ವರದೊಳಗೆ ಪರಿಪರಿಯ ಹೂಪತ್ರೆಯ ತಂದು, ಬಿಡದೆ ಲಿಂಗದೇವನ ಪೂಜಿಸುತ, ನೋಡುವ ಸುಖವೆಂದಪ್ಪುದೊ ಎನಗೆ ? ಸಕಳೇಶ್ವರದೇವಾ, ಶರಣೆಂದು ವೀಣಾವಾದ್ಯವ ಬಾರಿಸುತ, ಆಡಿ ಹಾಡುವ ಸುಖವೆನಗೆಂದಪ್ಪುದೊ ಶ್ರೀಶೆಲೈದಲ್ಲಿ ?
--------------
ಸಕಳೇಶ ಮಾದರಸ
ನಿನ್ನ ಹಂಗೇನು ಹರಿಯೇನು, ಅಂಜದೆ ನುಡಿವೆನು. ನೀ ಹೊರೆವ ಜಗದ ಜೀವರಾಸಿಗಳೊಳಗೆ, ಆಸೆಗೆ ಬೇರೆ ಕೊಟ್ಟುದುಳ್ಳಡೆ ಹೇಳು ದೇವಾ. ಅರ್ಚಿಸಿ ಪೂಜಿಸಿ, ನಿಮ್ಮ ವರವ ಬೇಡಿದೆನಾದಡೆ ಬಾರದ ಭವಂಗಳಲ್ಲಿ ಎನ್ನ ಬರಿಸು, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ನಡೆ ನುಡಿ ಚೈತನ್ಯಹರಣವುಳ್ಳನ್ನಕ್ಕ ಕ್ರೀಯೆಂತಂತೆ ನಡೆವುದು. ಉರವಣೆ ಬೇಡ ಕಂಡಾ ಮನವೆ. ಹೂಮಿಡಿ ಹರಿದಡೆ, ಹಣ್ಣಹವೆ, ಎಲೆ ಮರುಳೆ? ಲಿಂಗದಲ್ಲಿ ಮನ ಲೀಯವಾಗದನ್ನಕ್ಕ ಸಕಳೇಶ್ವರದೇವ ಮೆಚ್ಚುವನೆ?
--------------
ಸಕಳೇಶ ಮಾದರಸ
ನೇಮಿಯ ನೇಮ, ಲಿಂಗಾರ್ಚನೆಯ ಕೆಡಿಸಿತ್ತಲ್ಲಾ . ಮತಿಗೆಟ್ಟ ಕುಂಬಾರ ಮಣ್ಣಸೂಜಿಯ ಮಾಡಿ, ಕಮ್ಮಾರಗೇರಿಗೆ ಮಾರಹೋದಂತೆ, ಸಕಳ್ವೇರದೇವಾ, ನಿಮ್ಮ ಶರಣರು ಶೃಂಗಾರದಲ್ಲಿ ಲಿಂಗವ ಮರೆದರಲ್ಲಾ.
--------------
ಸಕಳೇಶ ಮಾದರಸ
ನೇಮವೆಂದಡೆ ಕಡೆಮುಟ್ಟ ಸಲ್ಲದಯ್ಯಾ. ಸಮಯಾಚಾರದ ಮಾಡುವುದೆ ಉಚಿತವಯ್ಯಾ. ತನ್ನ ನೇಮವನಿದಿರಿಂಗೆ ತೋರಿದಡೆ, ಅದೇ ವ್ರತಕ್ಕೆ ಭಂಗವಯ್ಯಾ. ತನ್ನಲಿಂಗಕ್ಕೆ ಬೇಕೆಂಬ ಉಪಜೀವಿಗಳನು ಸಕಳೇಶ್ವರದೇವರು ಮೆಚ್ಚರು.
--------------
ಸಕಳೇಶ ಮಾದರಸ