ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸ್ಥಾವರವೆಂತಂತೆ ಮನದಲ್ಲಿ ಭಾವಿಸಿ, ಸಕಲಜೀವದ ನಿಂದೆಯ ಮಾಬುದು. ಲಿಂಗಜಂಗಮವೊಂದೆಯೆಂದು ನಂಬೂದು. ಬಂದುದು ಲಿಂಗಾದ್ಥೀನವೆಂದು ಕಾಬುದು. ಸತ್ಯವ ನುಡಿವುದು, ಶುಚಿಯಾಗಿಪ್ಪುದು. ಎರಡುವಿಡಿಯದೆ, ಎರಡು ನಡೆಯದೆ, ಮುನ್ನಾದಿಯ ಪುರಾತರು ಕೂಡಿದ ಪಥವಿದು, ಸಕಳೇಶ್ವರದೇವರನೊಲಿಸಿಹೆನೆಂಬವಂಗೆ.
--------------
ಸಕಳೇಶ ಮಾದರಸ
ಸುಖವನನುಭವಿಸಿ, ಆನು ಸುಖದ ಹದನನು ಕಂಡೆ. ದುಃಖವನನುಭವಿಸಿ, ಆನು ದುಃಖದ ಹದನನು ಕಂಡೆ. ಸಾಕೆಂದು ನಿಂದೆ ನಿಃಭ್ರಾಂತನಾಗಿ, ಸಾಕೆಂದು ನಿಂದೆ ನಿಶ್ಚಿಂತನಾಗಿ. ಸಾಕೆಂದು ನಿಂದೆ ಸಕಳೇಶ್ವರದೇವನಲ್ಲದೆ ಪೆರತೇನೂ ಇಲ್ಲೆಂದು ಸಾಕೆಂದು ನಿಂದೆ.
--------------
ಸಕಳೇಶ ಮಾದರಸ
ಸಂಸಾರವ ಬಿಟ್ಟುದೇ ಆಚಾರವಯ್ಯಾ. ಕಾಯದಿಚ್ಛೆಗೆ ಕಂಡವರಿಗೆ ಕಾರ್ಪಣ್ಯಬಡದಿಪ್ಪುದೇ ಶೀಲ. ಲಿಂಗಾಣತಿಯಿಂದ ಬಂದುದ ಕೈಕೊಂಬುದೇ ವ್ರತ. ಮನ ಘನವನಗಲದಿಪ್ಪುದೇ ಭಕ್ತಿ. ಸಕಳೇಶ್ವರದೇವಾ, ನಿಮ್ಮನರಿದವನೆ ಶರಣ.
--------------
ಸಕಳೇಶ ಮಾದರಸ
ಸಮತೆಯಿಲ್ಲದ ಮಾಟವೆಂಬುದು, ಬಿತ್ತಿದ ಕೆಯ್ಯ ಕಸವು ಕೊಂಡಂತೆ. ಸಮತೆಯಿಲ್ಲದ ಶೀಲವೆಂಬುದು, ಒಟ್ಟಿದರಳೆಯನುರಿ ಕೊಂಡಂತೆ. ಇನ್ನಾರ ಮಾಟವಾದಡೇನು? ಆವ ಶೀಲವಾದಡೇನು? ಹೊರಗನೆ ತೋರಿ, ಒಳಗನೆ ಪೂಜಿಸುವ ಉಪಾಯದಲ್ಲಿ ಬದುಕುವರು, ಸಕಳೇಶ್ವರದೇವಂಗೆ ದೂರವಾಗಿಪ್ಪರು.
--------------
ಸಕಳೇಶ ಮಾದರಸ
ಸವಣನ ಮನದ ಕೊನೆಯ ಮೊನೆಯ ಮೇಲೆ ಹೊಲೆಯಿದ್ದಿತ್ತಾಗಿ ಜಿನನಿಲ್ಲ. ಸನ್ಯಾಸಿಯ ಮನದ ಕೊನೆಯ ಮೊನೆಯ ಮೇಲೆ ಹೆಣ್ಣಿದ್ದಿತ್ತಾಗಿ ವಿಷ್ಣುವಿಲ್ಲ. ಶೀಲವಂತನ ಮನದ ಕೊನೆಯ ಮೊನೆಯ ಮೇಲೆ ಬಯಕೆಯಿದ್ದಿತ್ತಾಗಿ ಲಿಂಗವಿಲ್ಲ. ಸಕಳೇಶ್ವರದೇವಾ, ಇವರೆಲ್ಲರೂ ಉಪಾಯವಂತರು.
--------------
ಸಕಳೇಶ ಮಾದರಸ
ಸದಾಚಾರದ ಬೆಂಬಳಿವಿಡಿದು ನಿಯತತ್ವದಲ್ಲಿ ನಡೆಯಬಹುದಲ್ಲದೆ, ಭಕ್ತನೆನಿಸಿಕೊಳಲುಬಾರದು. ಜ್ಞಾನದ ಉದಯದ ಸೌಕರ್ಯದ ನುಡಿಯ ನುಡಿಯಬುಹುದಲ್ಲದೆ, ಭಕ್ತನೆನಿಸಿಕೊಳಲುಬಾರದು. ಅತಿಶೀಲಸಂಬಂಧಿಯೆನಿಸಿಕೊಳಲುಬಹುದಲ್ಲದೆ, ಭಕ್ತನೆನಿಸಿಕೊಳಲುಬಾರದು. ಈ ತ್ರಿವಿಧವೂ ನಿಮ್ಮಲ್ಲಿ ಹೊದ್ದದೆ, ಬಸವಾ ಶರಣೆಂದು ಬದುಕಿದೆನಯ್ಯಾ, ಸಕಳೇಶ್ವದೇವಾ.
--------------
ಸಕಳೇಶ ಮಾದರಸ
ಸಕಲಜೀವಕ್ಕೆಲ್ಲಕ್ಕೂ ಜೀವವೆ ಆಧಾರ. ಜೀವವ ತಪ್ಪಿಸಿ ಜೀವಿಸಲಿಕ್ಕಾರಿಗೆಯೂ ಬಾರದು. ವಿಕೃತಿಯಿಂದ ನೋಡಿದಡಾರೂ ಸ್ವತಂತ್ರರಿಲ್ಲ. ಸಕಳೇಶ್ವರದೇವಂಗುಪಹಾರ ಕೊಡಲು ಅದು ಶುದ್ಧಭಕ್ತಿಪ್ರಸಾದ.
--------------
ಸಕಳೇಶ ಮಾದರಸ
ಸರ್ವಸಂಗಪರಿತ್ಯಾಗಿಯೆಂದಡೆ ಭೋಗಕ್ಕೆ ಮರುಗಿಸುವೆ. ಪಾಕನೇಮಿಯೆಂದಡೆ ಷಡುರಸಾನ್ನಕ್ಕೆರಗಿಸುವೆ. ಮೌನವ್ರತಿಯೆಂದಡೆ ಸನ್ನೆಯಲ್ಲಿ ಬೇಡಿಸುವೆ. ಬ್ರಹ್ಮಚಾರಿಯೆಂದಡೆ ಅಂಗನೆಯರಿಗೆರಗಿಸುವೆ. ಸಕಳೇಶ್ವರದೇವಾ, ಎನ್ನನಾಳವಾಡಿ ಕಾಡುವೆ.
--------------
ಸಕಳೇಶ ಮಾದರಸ
ಸರ್ಪದಷ್ಟವಾದವರು ತಮ್ಮ ತಾವರಿಯರು. ಕಾಮದಷ್ಟವಾದವರು ಲಜ್ಜೆ ನಾಚಿಕೆಯ ತೊರೆವರು. ಸಂಸಾರದಷ್ಟವಾದವರು ಪರಮಾರ್ಥವನರಿಯರು. ಲಿಂಗದಷ್ಟವಾದಡೆ ಅಂಗವೆನಲಿಲ್ಲ, ಆರಾಧ್ಯಪ್ರಿಯ ಸಕಳೇಶ್ವರದೇವನಲ್ಲಿ ಸುಖಿಯಾಗಿದ್ದರು.
--------------
ಸಕಳೇಶ ಮಾದರಸ
ಸದ್ಭಕ್ತರು ಲಿಂಗಾರ್ಚನೆಯ ಮಾಡುವ ಕಾಲದಲ್ಲಿ, ಕದವಂ ಮುಚ್ಚಿ, ಸಮಾಧಾನದಲ್ಲಿ ಲಿಂಗಾರ್ಚನೆಯ ಮಾಡುವದು. ಶಿವಪೂಜೆಯ ಗುಪ್ತದಲ್ಲಿ ಮಾಡಬೇಕಾಗಿ ತೆರೆಯ ಕಟ್ಟುವದು. ಪಾಪಿಯು ಕೋಪಿಯು, ಶಿವಾಚಾರಭ್ರಷ್ಟನು, ಆಳಿಗೊಂಬವನು, ವೈದಿಕವಿಪ್ರನು,ಹೊಲ್ಲಹ ದೃಷ್ಟಿಯವನು, ಅನಾಚಾರಿಯು, ಮೂರ್ಖನು, ತನ್ನ ಗುರುವನು ನಿಂದಿಸುವಾತನು, ಇಂತಪ್ಪವರುಗಳ ಪ್ರಮಾದದಿಂದಾದಡೆಯೂ ಕಂಡಡೆ, ತಾ ಮಾಡಿದ ಲಿಂಗಾರ್ಚನೆ ನಿಷ್ಫಲವಹುದು. ಇದನರಿದು, ಸಕಳೇಶ್ವರಲಿಂಗವ ಏಕಾಂತದಲ್ಲಿ ಭಜಿಸುವ ಭಕ್ತಂಗೆ ನಮೋ ನಮಃ ಎಂದು ಬದುಕಿದೆನಯ್ಯಾ.
--------------
ಸಕಳೇಶ ಮಾದರಸ
ಸಕೃತು ಸಂಸಾರದಲ್ಲಿ ಜನಿಸಿ, ಪ್ರಕೃತಿಗುಣವಳಿಯದೆ, ವಿಕೃತವೇಷವ ಧರಿಸಿ, ಸುಕೃತ ಮನುಜರ ಬೇಡುವ ಯಾಚಕನಲ್ಲ. ಲಿಂಗಾಭಿಮಾನಿಗಳನಲ್ಲದೆ, ತ್ರಿಭುವನ ಅಭವನ ಮುಖದಲ್ಲಿ ಬಂದುದನಲ್ಲದೆ ಕೈಕೊಳ್ಳ. ಕೂರ್ಮನ ಶಿಶುವಿನ ಆಪ್ಯಾಯನದಂತೆ, ಆರಾಧ್ಯ ಸಕಳೇಶ್ವರದೇವರಲ್ಲಿ, ದಯಾಮೃತವನುಂಬ ಶರಣನು.
--------------
ಸಕಳೇಶ ಮಾದರಸ
ಸ್ಥಾವರ ಜಂಗಮ ಒಂದೆಯೆಂದು ಬಸವರಾಜದೇವರು ಹೇಳಿತ್ತ ಕೇಳದೆ, ಪಾದೋದಕವೆಂಬೆ, ಪ್ರಸಾದೋದಕವೆಂಬೆ, ಲಿಂಗೋದಕವೆಂಬೆ. ಮತ್ತೆಯೂ ಕ್ರೀಯ ನೆನೆಯುವೆ, ಸಂದೇಹವ ಹತ್ತಿಸಿ; ಸಕಳೇಶ್ವರದೇವ, ಎನ್ನ ಮರುಳುಮಾಡಿದ.
--------------
ಸಕಳೇಶ ಮಾದರಸ
ಸರ್ವಸಂಗಪರಿತ್ಯಾಗವ ಮಾಡಿ, ಲಿಂಗ ಗೂಡಾಗಿ, ತನು ಪರಿಣಾಮವನೈದಿ, ಪೆರತನರಿಯದೆ ಇರದು. ಮೇಣಲ್ಲಿ ಜಂಗಮಕ್ಕೆ ತಕ್ಕ ಉಚಿತವೆ ಮಾಡಿ, ನಿಮ್ಮ ಕರುಣವ ಹಡೆಯದ ಪಾಪಿ ನಾನಯ್ಯಾ. ಇಂತೆರಡಕ್ಕಲ್ಲದ ಉಭಯಭ್ರಷ್ಟ ನಾನು. ಸಕಳೇಶ್ವರದೇವನೊಲಿಯೆಂದರೆಂತೊಲಿವ?
--------------
ಸಕಳೇಶ ಮಾದರಸ
ಸರವರದ ಮಂಡೂಕನು ತಾವರೆಯ ನೆಳಲ ಸಾರಿದಡೆ ಪರಿಮಳವದಕೆ ಅಯ್ಯಾ? ಆ ಅರಿಯಬಾರದು. ಪರಿಮಳವದಕೆ ಅಯ್ಯಾ? ಆ ಅರಿಯಬಾರದು, ಮದಾಳಿಗಲ್ಲದೆ. ಸಕಳೇಶ್ವರದೇವಾ, ನಿಮ್ಮ ವೇದಿಸಿದ ವೇದ್ಯಂಗಲ್ಲದೆ, ನಿಮ್ಮ ನಿಲವನರಿಯಬಾರದು.
--------------
ಸಕಳೇಶ ಮಾದರಸ
ಸದ್ಭಕ್ತರಲ್ಲಿಗೆ ಹೋಗಿ, ಸಮಯೋಚಿತವ ಮಾಡುವನ, ಸದ್ಭಕ್ತರಿಗೆ ಉಣಲಿಕ್ಕಿ, ತನ್ನ ಹಸಿವ ಮರೆದಿಪ್ಪವನ, ಸದ್ಭಕ್ತರಿಗೆ ಉಳ್ಳುದೆಲ್ಲವ ಕೊಟ್ಟು, ಎಯ್ದದೆಂದು ಮರುಗುವ ಏಕೋಗ್ರಾಹಿ ನೆಟ್ಟನೆ ಶರಣ. ತೊಟ್ಟನೆ ತೊಳಲಿ, ಅರಸಿ ಕಾಣದೆ, ಮೂರು ತೆರನ ಮುಕ್ತಿಯ, ಹದಿನಾರುತೆರನ ಭಕ್ತಿಯ. ಇಂತಪ್ಪ ವರವ ಕೊಟ್ಟಡೆ ಒಲ್ಲೆನು. ಸಕಳೇಶ್ವರದೇವಾ, ನಿಮ್ಮ ಶರಣರ ತೋರಾ ಎನಗೆ.
--------------
ಸಕಳೇಶ ಮಾದರಸ