ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನಗೆ ಇಲ್ಲಿ ಏನು ಬಸವ ಬಸವಾ ? ಎನಗೆ ಅದರ ಕುರುಹೇನು ಬಸವಾ ? ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು, ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು, ನಾನು ಬಸವನ ಶ್ರೀಪಾದದಲ್ಲಿ ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ ?
--------------
ನೀಲಮ್ಮ
ಎಡೆಯ ಮಾಡಿದ ಎಡೆ ಏಕವಾರಕ್ಕೆ ಮುನ್ನವೇ (ತೀ)ರಿತ್ತು. ತೀರಿದ ಪ್ರಸಾದವನುಣಹೋದರೆ ಉಂಡವರೆಲ್ಲಾ ನನ್ನ ಗಂಡರಾದರು. ಅವರ ಕಂಡು ನಾನು ಮರುಳುಗೊಂಡರೆ ಮಹದನುಭವದಲ್ಲಿ ಕೂಟವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಎಲೆ ಅಯ್ಯಾ ಬಸವಾ ಎಲೆ ಪ್ರಣವ ಬಸವಾ ಏನಯ್ಯಾ ಸಂಗಯ್ಯಾ, ಬಸವಾ.
--------------
ನೀಲಮ್ಮ
ಎಲೆಯಿಲ್ಲದೆ ಮರ ಕಾಯಾಯಿತ್ತು, ಆ ಮರ ಫಲವಾಯಿತ್ತು, ಆ ಫಲ ನಿಃಫಲವಾಯಿತ್ತು ಆ ನಿಃಫಲವನುಂಡೀಗ ನನಗೆ ಸುಖಸಂಯೋಗವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಎಡದೆರಹಿಲ್ಲದ ಪ್ರತಿರೂಪ ಕಂಡೆ. ಎಡದೆರಹಿಲ್ಲದ ಪ್ರತಿರೂಪನೆ ಅರಿದು, ಪ್ರಸನ್ನ ಪ್ರಸನ್ನ ಪ್ರಸಾದವ ಕಂಡು ಪ್ರಸಾದಿಯಾನಾದೆನಯ್ಯ. ಪ್ರಸಾದ ಸಂಬಂಧದಲ್ಲಿ ಪ್ರಸಾದಮೂರ್ತಿಯಾನಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಎಸಳ ಕರಣವ ಕಂಡು, ಆ ಎಸಳೆಂದು ಹೆಸರುವಿಡಿಯಲು ಎಸಳೆಸಳಿಂಗೆ ಎನಗೆ ಚೋದ್ಯವಾಯಿತ್ತಯ್ಯ. ಆ ಎಸಳಕ್ಷರವ ಕಂಡು ವಿಶುದ್ಧಿದಳವ ಮುಟ್ಟಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಎರಡಿಲ್ಲದ ವಸ್ತುವೆ ನೀನೆರಡಾದೆಯಲ್ಲ ಬಸವಯ್ಯ. ಎರಡನೇಕೀಕರಿಸಿ ಭ್ರಮೆಯ ಬಿಡಿಸಿದೆಯಲ್ಲ ಬಸವಯ್ಯ. ಭ್ರಮೆಯನಳಿದು ಪರಿಣಾಮದ ಸಂಗವ ಮಾಡಿದೆಯಲ್ಲ ಬಸವಯ್ಯ. ತೆರಹಿಲ್ಲದ ವಸ್ತುವಾದೆಯಲ್ಲಾ ಬಸವಯ್ಯ ಗುರುವೆ. ಸಂಗಯ್ಯನಲ್ಲಿ ಸದುಹೃದಯನಾದೆಯಲ್ಲ ಬಸವಯ್ಯ.
--------------
ನೀಲಮ್ಮ
ಎಸಳೆಸಳಹೊಸದು ನೋಡುವ ಯೋಗಿಗಳು ಬಸವನೈಕ್ಯವನು ಕಾಣದಾದರು. ರೂಪ ನಿರೀಕ್ಷಿಸುವ ಯೋಗಿಗಳು ಬಸವನೈಕ್ಯವ ಕಾಣದಾದರು. ಸಂಗಯ್ಯಾ, ನಿಮ್ಮ ಬಸವನೈಕ್ಯವ ಬಲ್ಲಾತ ಚೆನ್ನಬಸವಣ್ಣನು.
--------------
ನೀಲಮ್ಮ
ಎಸೆವಾಕ್ಷರದ ಕುರುಹ ಕಂಡು ಆನು ಬಸವಾ ಬಸವಾ ಬಸವಾ ಎನುತಿರ್ದೆನಯ್ಯಾ. ಬ್ರಹ್ಮವನರಿದು ಮೂರ್ತಿಯ ಇರವನರಿದೆನಯ್ಯಾ. ಸಂಗಯ್ಯನಲ್ಲಿ ಕುರುಹನಳಿದೆನು.
--------------
ನೀಲಮ್ಮ
ಎಡಬಲನ ಕಾಯವ ತಿಳಿದು, ಎಡಬಲನ ಅರಿವನರಿದು ಏಕತತ್ತ್ವ ಸಂಬಂಧವಯ್ಯ. ಸಂಗಯ್ಯ, ಸರ್ವಜೀವ ದಯಾಪರವನರಿದು ನಾನು ಬದುಕಿದೆನಯ್ಯ
--------------
ನೀಲಮ್ಮ
ಎಡೆಯಿಲ್ಲದೂಟವನುಂಡು ತಡವಳಿದು ತನು ಮನ ಧನಂಗಳನಳಿದು ನಾನು ನಿಃಪ್ರಪಂಚಿಯಾದೆನಯ್ಯ. ನಿರಂಗ ಸಂಗವಾಗಿ ನಿಯಮನಳಿದುಳಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಎಲೆ ಅಯ್ಯಾ ಎಲೆ ಅಯ್ಯಾ ಏಕಾಕ್ಷರ ರೂಪ ಬಸವಾ, ಎಲೆ ಅಯ್ಯಾ ಎಲೆ ಅಯ್ಯಾ ನಿರಕ್ಷರರೂಪ ಬಸವಾ, ಎಲೆ ಅಯ್ಯಾ ಎಲೆ ಅಯ್ಯಾ ಮುನಿಮಾರ್ಗಶೀಲ ಬಸವಾ, ಸಂಗಯ್ಯಾ, ಎಲೆಯಿಲ್ಲದ ವೃಕ್ಷವಾದ ಬಸವಯ್ಯನು.
--------------
ನೀಲಮ್ಮ
ಎನಗೆ ಲಿಂಗವು ನೀವೆ ಬಸವಯ್ಯಾ, ಎನಗೆ ಸಂಗವು ನೀವೆ ಬಸವಯ್ಯಾ, ಎನಗೆ ಪ್ರಾಣವು ನೀವೆ ಬಸವಯ್ಯಾ, ಎನಗೆ ಪ್ರಸಾದವು ನೀವೆ ಬಸವಯ್ಯಾ, ಎನಗೆ ಪ್ರಭೆಯಮೂರ್ತಿಯು ನೀವೆ ಬಸವಯ್ಯಾ. ಎನಗೆ ಸಂಗಯ್ಯನು ನೀವೆ ಬಸವಯ್ಯಾ.
--------------
ನೀಲಮ್ಮ
ಎಪ್ಪತ್ತೈದು ಸಾವಿರದಲ್ಲಿ ಇಪ್ಪತ್ತೊಂದು ಪ್ರಾಣ ಆ ಪ್ರಾಣದ ಮಧ್ಯದಲ್ಲಿ ಮನೋಹರಮೂರ್ತಿ ಇರವಿರಲು, ಆ ಇರದ ಸುಖವ ನೋಡ ಹೋದರೆ ನೋಡ ನೋಡಲು ಬಯಲಾಯಿತ್ತು ಸಂಗಯ್ಯ ಆ ರೂಪು.
--------------
ನೀಲಮ್ಮ
ಎಂಟೆಸಳ ಹೂವೆಂಬರು; ಆ ಹೂವಿಂಗೆ ರೂಪಿಲ್ಲ, ಆ ರೂಪಿಂಗೆ ಕಾಯವಿಲ್ಲ. ಆ ಕಾಯವಿಲ್ಲದ ಹೂವನುಂಬಶಕ್ತಿ ಬಯಲಾದನಯ್ಯ ಸಂಗಯ್ಯ
--------------
ನೀಲಮ್ಮ
ಎಲೆ ಅಯ್ಯಾ ಬಸವಾ, ಕರಸ್ಥಲ ಬಯಲಾಯಿತ್ತೆನಗೆ, ಕರಸ್ಥಲ ಮನಸ್ಥಲವಾಯಿತ್ತು ಬಸವಾ. ಸಂಗಯ್ಯಾ, ಬಸವ ಹೋದನತ್ತ ನಾನಡಗಿದೆನಯ್ಯಾ ನಿಮ್ಮಲಿತ್ತ.
--------------
ನೀಲಮ್ಮ
ಎಡೆಯಿಲ್ಲ ಕಡೆಯಿಲ್ಲ ಎನಗೆ ಎಲೆ ಅಯ್ಯ. ಪ್ರಾಣಲಿಂಗದ ಸಂಬಂಧದ ನೆಲೆಯ ಕಂಡಿಹೆನೆಂದರೆ, ಆ ಪ್ರಾಣಲಿಂಗ ಸಂಬಂಧ ಸಮರಸದಿರವ ನಾನೆತ್ತ ಬಲ್ಲೆನಯ್ಯ ? ಮರುಳು ಹೆಣ್ಣು ಪ್ರಣವ ಪ್ರಕಾಶದಿರವನರಿದು ಪರಮಸುಖಮೂರ್ತಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಎತ್ತಳ ಸುಖ ಬಂದು ಎತ್ತಲಡಗಿತ್ತು ಎತ್ತಳ ಪ್ರಸಾದ ಬಂದು ಎತ್ತಲಡಗಿತ್ತು ಎತ್ತಳ ಮನವನತ್ತತ್ತಲಡಗಿಸಿದೆ ಬಸವಾ. ನೀನತ್ತಲಡಗಿದರೇನು, ನಾನತ್ತಲಡಗಿದಳೆಂಬ ಸಂಶಯವೆನಗಿಲ್ಲವಯ್ಯ. ಸಂಶಯ ಸಂಬಂಧವ ತಿಳಿದು ಸದಾಚಾರವನರಿದು ಬದುಕಿದೆನು. ನಿಮ್ಮರಿವಿನಲ್ಲಿ ಸಂಗಯ್ಯ.
--------------
ನೀಲಮ್ಮ
ಎಸಳದಳವನಳಿದು ನಿಂದ ಬಸವಾ, ದಳರೂಪಿತದಲ್ಲಿ ಕುರುಹಡಗಿದ ಬಸವಾ, ಕುರುಹಿನ ರೂಪ ಕಂಡು ದೃಢ ಸ್ವರೂಪನರಿದು ಅನುಭಾವಿಯಾಗಿ ಅನುಭಾವದಿಂದ ಮುಕ್ತಿಯ ಕಂಡು ಮುಖವಿಕಸಿತವನೆಯ್ದಿ ನಿಂದನಯ್ಯ ಸಂಗಯ್ಯನಲ್ಲಿ ಬಸವಯ್ಯನು
--------------
ನೀಲಮ್ಮ
ಎಡೆಯಲ್ಲಿ ಹುಟ್ಟಿದ ಭಕ್ತಿ ಎಡೆಯಲ್ಲಿಯೆ ಅಡಗಿತ್ತು. ಕಡೆಮುಟ್ಟಿ ನಡೆಯಲು ಆ ಕಡೆಯಳ ಸುಖವನರಿದು ಅರಿವನರಿದೆನಯ್ಯ. ಆವಾವ ಕಾಲವೂ ಆವಾವ ವಸ್ತುವೆನಗೆ ಹೃದಯವೆ ಕಂಡು ಮೂರ್ತಿ ಅನಿಮಿಷವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಎನಗೇನೂ ತೋರದಂದು ನಮ್ಮವ್ವೆಯ ಮಗನಾಗಿದ್ದ ನಮ್ಮ ಬಸವಯ್ಯನು. ಎನಗೇನೂ ಕಾಣಿಸದಂದು ಹುಟ್ಟಿಸುವ ಕರ್ತನಾಗಿದ್ದ ನಮ್ಮ ಬಸವಯ್ಯನು. ಸಂಗ ನಿಸ್ಸಂಗವಿಲ್ಲದಂದು ಸಮಯಾಚಾರಿಯಾಗಿದ್ದ ನಮ್ಮ ಬಸವಯ್ಯನು. ತನುಮನಧನವಿಲ್ಲದಂದು ನಿರೂಪ ರೂಪಮಾಡಿದನಯ್ಯಾ ಸಂಗಯ್ಯಾ, ನಿಮ್ಮ ಬಸವಯ್ಯನು.
--------------
ನೀಲಮ್ಮ
ಎಲೆ ಅಯ್ಯಗಳಿರಾ, ಎಲೆಗಳೆದ ವೃಕ್ಷವ ಕಂಡಿರೆ ಬಸವನ ? ಎಲೆ ಅಯ್ಯಗಳಿರಾ, ರೂಹಿಲ್ಲದ ಚೋಹವ ಕಂಡಿರೆ ಬಸವನ ? ಎಲೆ ಸ್ವಾಮಿಗಳಿರಾ, ನಿಮ್ಮ ನಿಲವಿನ ದರ್ಪಣವ ಕಂಡಿರೆ ಬಸವನ ? ಸಂಗಯ್ಯನಲ್ಲಿ ಸ್ವಯವಳಿದ ಬಸವನ ಕುರುಹ ಕಂಡಿರೆ ?
--------------
ನೀಲಮ್ಮ
ಎಲೆಗಳೆದ ಮರದಲ್ಲಿ ನೆಳಲನರಸಲಿಲ್ಲ. ಕಳೆಯರತ ದೀಪದಲ್ಲಿ ಬೆಳಗನರಸಲಿಲ್ಲ. ಕುರುಹಳಿದ ಮೂರ್ತಿಯಲ್ಲಿ ರೂಪನರಸಲಿಲ್ಲ. ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವನರಸಲಿಲ್ಲ. ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು.
--------------
ನೀಲಮ್ಮ
ಎಡೆಯಿಲ್ಲದ ಭಕ್ತಿಯ ಮಾಡಹೋದರೆ ಆ ಭಕ್ತಿ ನಿಷ್ಫಲವಾಯಿತ್ತಯ್ಯ. ಭಕ್ತಿ ನಿಷ್ಫಲವನೈದಲು ಪ್ರಸಾದ ಸೂತಕವ ಕಾಣದೆ ಹೋದೆನಯ್ಯ. ಎಡೆಯಿಲ್ಲದ ಕಡೆಯಿಲ್ಲದ ಮೂರ್ತಿಯನರಸಲು ಏಕಪ್ರಸನ್ನ ವದನವಾಯಿತ್ತಯ್ಯ. ಹಿಪ್ಪೆಯನಳಿದು ಸಪ್ಪೆಯನುಂಡು ನಾನು ಪ್ರಸಾದಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಎಲ್ಲವನರಿಯೆನೆಂದರೆ ಎನಗೆ ಎಲ್ಲರಲ್ಲಿಯ ಪರಿಣಾಮ ಕಾಣಿಸಿತ್ತಯ್ಯ. ಪರಿಣಾಮವಡಗಿ ಪರಂಜ್ಯೋತಿರ್ಲಿಂಗವ ಕಂಡು ನಾನು ಸುಖಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ

ಇನ್ನಷ್ಟು ...