ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೆಸರಿಲ್ಲದ ರೂಪ ಕಂಡು ಹೆಸರಳಿದು ಹೆಣ್ಣು ರೂಪ ತಾಳಿದೆ ನಾನು. ಕುರುಹಿಲ್ಲದ ಮೂರ್ತಿಯ ಕಂಡು ಅದ್ವೈತಾನಂದಿಯಾದೆ ನಾನು. ಪ್ರಣವ ಜ್ಯೋತಿಷ್ಟವರ್ಣವ ತಿಳಿದು ಪರಂಜ್ಯೋತಿಲಿಂಗವಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಹೆಚ್ಚನರಿದು ಪ್ರಣವವ ಕೂಡಲು ಅಚ್ಚುಗ ಸಿದ್ಧಿಯಾಯಿತ್ತೆನಗೆ. ಸಂಗಯ್ಯನಲ್ಲಿ ಬಸವನಳಿದು ಬಯಲಾಗಲು ಆನು ಪರಮಪ್ರಸಾದಿಯಾದೆನಯ್ಯಾ.
--------------
ನೀಲಮ್ಮ
ಹೃದಯಮಧ್ಯದಲೊಂದು ಜ್ಯೋತಿಯಮನೆ ಹುಟ್ಟಿತ್ತು. ಆ ಜ್ಯೋತಿಯ ಮಧ್ಯದಲ್ಲಿ ಸ್ಫಟಿಕದ ತನು ಬೆಳಗಿತ್ತು. ಆ ಬೆಳಗಿನ ತನುಮಧ್ಯದಲ್ಲಿ ಮರುಜವಣಿಯ ಕುಡಿ. ಹೆಸರಿಲ್ಲದ ರೂಪಾಯಿತ್ತು ಬಸವಂಗೆ, ಸಂಗಯ್ಯಾ ನಿಮ್ಮಲ್ಲಿ.
--------------
ನೀಲಮ್ಮ
ಹೆಸರಳಿಯಿತ್ತು ಬಸವಾ, ಇಂದಿಂಗೆ ಭಕ್ತಿಯಿಲ್ಲದ ಕಾರಣ. ಕುರುಹಳಿಯಿತ್ತು ಬಸವಾ, ಇಂದಿಂಗೆ ಬಸವನ ರೂಪು ನಿರೂಪಾಯಿತ್ತಯ್ಯಾ. ಭ್ರಮೆಯಳಿದು ಭ್ರಮರಕೀಟನ್ಯಾಯದಂತಾದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಹಿರಿಯತನಕ್ಕೆ ಹೆಣ್ಣೆಂದು ಕರೆದರೆ ಆ ಹೆಣ್ಣುರೂಪಾದ ನಾಮವು ನಿರ್ನಾಮವಯ್ಯ. ಅರಿವನರಿದು ಅಪ್ರತಿಮ ಘನವ ಕಂಡುಳಿದು ಹೆಣ್ಣುತನದ ಮಾತನಳಿದು ಏಕೋದೇವನ ಕೃಪೆಯನು ಕಂಡು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಹುಟ್ಟುಗೆಟ್ಟೆ ನಾನು, ತೊಟ್ಟ ಬಿಟ್ಟ ನಾನು, ಕಟ್ಟಕ್ಕರಿನ ಸುಖವನಂಗವಿಸಿ ನಿರಂಗಿಯಾದೆ ನಾನು. ನಿನ್ನ ಬಯಲುಹನಳಿದೆ ನಾನು; ನನ್ನ ಕುರುಹ ಕಳೆದೆ ನಾನು. ಎಸೆವ ಬಸವನ ಬೆಸುಗೆಯ ಬಿಟ್ಟೆ ಸಂಗಯ್ಯನಲ್ಲಿ ರೂಪವಳಿದ ಹೆಣ್ಣು ನಾನು.
--------------
ನೀಲಮ್ಮ
ಹುಟ್ಟಿಲ್ಲದ ಭೂಮಿಯಲ್ಲಿ ಹುಟ್ಟಿದೆ ನಾನು. ನಾ ಹುಟ್ಟಿ ಕಾಯವಸ್ಥಿರವಾಗಿ ಅಸ್ಥಿರ ಸುಸ್ಥಿರವಾಗಿ ಆನು ಅನುಭವದಾಯಕಳಾದೆನು. ಆನು ಸುಖದುಃಖವ ಕಳೆದು ಅನುಭವಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಹಂದೆಯಲ್ಲ ನಾನು, ಹರುಷದ ಧೈರ್ಯವುಳ್ಳ ಹೆಣ್ಣು ನಾನು. ಕಾಮವನಳಿದವಳಾನಾದ ಕಾರಣ ಬಸವನ ಹಂಗೆನಗಿಲ್ಲವಯ್ಯ. ಭ್ರಮೆಯಡಗಿ ಕಲೆನಷ್ಟವಾಗಿ ಮುಖವರತು ಮನವಿಚಾರವ ಕಂಡೆನಯ್ಯ ಸಂಗಯ್ಯ.
--------------
ನೀಲಮ್ಮ
ಹೊಲಬರಿಯೆ ನಾನು, ಆ ಹೊಲಬರಿಯದಿರುತಿರಲು, ನಾನು ಹೊಲಬಿಗಳಲ್ಲವೆಂದು ಬಸವಯ್ಯ ಹೊಲಬನರಿದು ನಿಜಪದಸಂಬಂಧಿಯಾದನಯ್ಯಾ ಸಂಗಯ್ಯನಲ್ಲಿ ನಮ್ಮ ಬಸವಯ್ಯನು.
--------------
ನೀಲಮ್ಮ