ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆದಿ ಅನಾದಿ ತತ್ವವ ಭೇದಿಸಿಕೊಟ್ಟ ಗುರುವೆ, ಅಪ್ರಮಾಣದ ಬೆಳಗ ಭೇದಿಸಿಕೊಟ್ಟ ಗುರುವೆ, ಅಕಾರ ಉಕಾರ ಮಕಾರ ಕಳೆಯನರುಹಿಸಿಕೊಟ್ಟ ಗುರುವೆ, ಇಷ್ಟ ಪ್ರಾಣ ಭಾವವಿದೆಂದು ತೋರಿದ ಗುರುವೆ, ನಿಜದರಿವನರುಹಿಸಿಕೊಟ್ಟ ಗುರುವೆ, ನಿರ್ಮಳಪ್ರಭೆಯ ತೋರಿದ ಗುರುವೆ, ನಿಜವನನುಭವಕ್ಕೆ ತಂದ ಗುರುವೆ ನಿಮ್ಮ ಘನವ ಕಾಬ ಕಣ್ಣು ಕ್ರಮಗೆಟ್ಟಿತ್ತು ಸಂಗಯ್ಯಾ, ಬಸವನ ಪ್ರಭೆ ಎಲ್ಲಿ ಅಡಗಿತ್ತೊ?
--------------
ನೀಲಮ್ಮ
ಆಟವಳಿದು ನಿರಾಕುಳವಾಯಿತ್ತು; ನಿರಾಕುಳ ಸಂಬಂಧದಿಂದ ನಿಜವನರಿದು ಬದುಕಿದೆನಯ್ಯ. ಮುಕ್ತಿಯನರಿದು ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಆರಾಧ್ಯರಿಲ್ಲದಂದು ಹುಟ್ಟಿದ ಗಂಡನೆನ್ನ ಗಂಡ; ಹಿರಿಯರಿಲ್ಲದಂದು ಹುಟ್ಟಿದ ಗಂಡನಾತ ನಮ್ಮಯ್ಯ. ಮಾನುಷರಿಲ್ಲದುದನರಿದು ಆ ಮಾನುಷರ ಇರವೆ ಪ್ರಸಾದವಾಯಿತ್ತು. ಆ ಪ್ರಸಾದವ ತಿಳಿಯದ ಮುನ್ನ, ಹೆಣ್ಣುತನದ ರೂಪಳಿಯಿತ್ತೆನಗೆ. ಆ ಹೆಣ್ಣುತನದ ರೂಪನಳಿದು ನಿರೂಪಿಯಾದೆನಯ್ಯ ಸಂಗಯ್ಯ
--------------
ನೀಲಮ್ಮ
ಆನು ಭಕ್ತೆಯಲ್ಲ, ಆನು ವಿರಕ್ತೆಯಲ್ಲ, ಆನು ನಿಜ ಸುಖಿಯಲ್ಲ. ಆನು ಬಸವನ ಮೂರ್ತಿಯ ಕಂಡು ಬದುಕಿದೆನಯ್ಯ ಸಂಗಯ್ಯ
--------------
ನೀಲಮ್ಮ
ಆನಳಿದೆನು ನೀನಳಿದೆನೆಂಬ ಶಬ್ದವಡಗಿ ನಿಃಶಬ್ದವಾಗಿ, ನಿಃಶೂನ್ಯಮಂಟಪದಲ್ಲಿ ನಿಂದು ನಾನು ಉರಿಯುಂಡ ಕರ್ಪೂರದಂತಾದೆನಯ್ಯ. ಕರ್ಪೂರ ಉರಿಯುಂಡು ಕರವಳಿದು ಸುಖವ ಉಡುಗಿದೆನಯ್ಯ. ಸುಖವಡಗಿ ದುಃಖ ನಿರ್ದ್ವಂದ್ವವಾಗಿ ನಿರೂಪು ಸ್ವರೂಪುವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಆದಿ ನಾದದ ಬಿಂದುವನರಿದು ಭಕ್ತಿಸಂಭಾಷಣೆಯ ಮಾಡಿದ ಬಸವಾ, ಪ್ರಣವದಲ್ಲಿ ನಿಜವ ಕಂಡು ತೋರಿದ ಬಸವಾ. ಆ ಪ್ರಣವದ ಘನವ ಕಂಡ ಬಸವಾ. ಇತರ ತೃಪ್ತಿಯನನುಭವಿಸಬಲ್ಲ ಬಸವಾ ನೀನೆನ್ನಲ್ಲಿ ಅಡಗಿ, ನಾ ನಿನ್ನಲ್ಲಿ ಅಡಗಿ, ನಾ ನಿನ್ನ ಮನದ ಅರಿವನರಿದು ಉಭಯವಿಲ್ಲವೆಂದೆನೆಂದೆ ಬಸವಾ. ಸುಖದ ಸಮಯಾಚಾರವ ಕಂಡು ನಿಜದಲ್ಲಿ ನಿಂದವಳಾನು ನಾನಯ್ಯ ಬಸವಾ. ಸಂಗಯ್ಯನಲ್ಲಿ ನಿಜವಿಡಿದ ಹೆಣ್ಣು ನಾನೇ ಅಹುದೆಂದು ನುಡಿದೆನಯ್ಯಾ ಅಪ್ಪಣ್ಣಾ.
--------------
ನೀಲಮ್ಮ
ಆವಾವ ಕಾಲದಲ್ಲಿಯೂ ಎನಗೆ ಎಮ್ಮವರೆ ಗತಿಮತಿಗಳಯ್ಯ. ಆವಾವ ಕಾಲದಲ್ಲಿಯೂ ಎನಗೆ ಪ್ರಾಣಲಿಂಗಿಗಳ ಸಂಗವಲ್ಲದೆ ಮತ್ತೊಂದನೊಲ್ಲೊನಯ್ಯ. ಇಹಪರದ ಹಂಗಿಲ್ಲದವಳಿಗೆ ಕಾಯಕ ಕಪಟನಾಟಕವುಂಟೆ ಸಂಗಯ್ಯ ?
--------------
ನೀಲಮ್ಮ
ಆಡದ ಭಾಷೆಯ ನುಡಿವಳಲ್ಲ ನಾನು ಬಸವಾ, ಆ ನುಡಿಯ ಭಾಷೆಯ ಕೇಳುವಳಲ್ಲ ನಾನು ಬಸವಾ, ರೂಪಳಿದ ನಿರೂಪಿಯಾನು ಬಸವಾ, ಅಂಗವಳಿದ ನಿರಂಗಿಯಾನು ಬಸವಾ, ದ್ವಯವಳಿದ ಪ್ರಸಾದಿಯಾನು ಬಸವಾ, ಪರಿಣಾಮವರತ ಹೆಣ್ಣೆಂದು ಎಮ್ಮವರೆನ್ನ ಹೆಸರಿಡಲು, ನಾನು ಬಸವನ ಪಾದದಲ್ಲಿ ತಲ್ಲೀಯವಾದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಆಡದ ನುಡಿಯ ನುಡಿದೆ ನನ್ನ ಮನ ತುಂಬಿ. ಮದದ ಹಂಗು ಹರಿದು, ಮಾತನಳಿದು, ಉಳಿದ ಪ್ರಸಂಗ ಪ್ರಸನ್ನವನರಿದು, ಅರಿಯದ ಮುಕ್ತಿಯ ಮರೆದು, ಕುರುಹನಳಿದು, ನಾನು ನಿಂದೆನಯ್ಯ ಸಂಗಯ್ಯ.
--------------
ನೀಲಮ್ಮ
ಆನು ನಿಷ್ಠೆಯುಳ್ಳವಳೆ ಅಲ್ಲವಯ್ಯ. ಆನು ನಿಷ್ಠೆಯಿಲ್ಲದ ಕರ್ಮಿಯಾದ ಕಾರಣವೆನಗೆ ಸುಖದ ತೃಪ್ತಿ ನೆಲೆಗೊಳ್ಳಲಿಲ್ಲವಯ್ಯ. ಎನಗೆ ಪತಿನಾಮದರುಹು ಸಾಧ್ಯವಲ್ಲದ ಕಾರಣ ಸಂಗಯ್ಯನಲ್ಲಿ ಬಸವನ ನೆನೆದು ಬದುಕಿದೆನಯ್ಯ.
--------------
ನೀಲಮ್ಮ
ಆನೆತ್ತಲೀ ಸಂಸಾರವೆತ್ತ ! ಆನೆತ್ತಲೀ ಕಾಯವೆತ್ತ ! ಆನೆತ್ತಲೀ ನಿಜಮಹತ್ವವೆತ್ತ ! ಸಂಗಯ್ಯನೆತ್ತ, ಬಸವನೆತ್ತ, ಆನೆತ್ತ !
--------------
ನೀಲಮ್ಮ
ಆಡದ ಮುನ್ನವಚ್ಚನೆ ಛಂದವಾಯಿತ್ತೆನಗಯ್ಯ. ಅಚ್ಚನೆಯಳಿದು ನಿರೂಢವಾಯಿತ್ತು ಪ್ರಸಂಗ. ಸಂಗ ಸ್ವಯಕೂಟವನ್ನೈದಲು, ಅಪ್ರತಿಮ ಮೂರ್ತಿಯ ಇರವನರಿದೆ ನಾನು. ಇಪ್ಪತ್ತೈದು ತತ್ತ್ವವ ಸರಗೊಳಿಸಿ ಸುಖಿಯಾದೆನಯ್ಯ ಸಂಗಯ್ಯ, ಬಸವನಳಿದು ನಿರಾಭಾರಿಯಾದ ಬಳಿಕ.
--------------
ನೀಲಮ್ಮ
ಆಡಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ; ನುಡಿಯಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ; ನಾನು ಹೆಣ್ಣಲ್ಲದ ಕಾರಣ, ನಾನು ಇರಪರ ನಾಸ್ತಿಯಾದವಳಯ್ಯಾ. ನಾನು ಉಭಯದ ಸಂಗವ ಕಂಡು ಕಾಣದಂತಿದ್ದೆನಯ್ಯಾ ಸಂಗಯ್ಯಾ, ಬಸವ ಬಯಲ ಕಂಡ ಕಾರಣ.
--------------
ನೀಲಮ್ಮ
ಆಗಿಂಗೆ ಮುಯ್ಯಾನದಿರು, ಚೇಗಿಂಗೆ ಬೆಂಬೀಳದಿರು, ಆಹಾ ಮನವೆ, ಸಂತೈಸಿಕೊ ನಿನ್ನ ನೀನೆ. ಆಗೆಂದಡೆ ನಿನ್ನ ವಶವಲ್ಲ, ಹೋಗೆಂದಡೆ ನಿನ್ನಿಚ್ಫೆಯಲ್ಲ, ಭೋಗಾದಿಭೋಗಂಗಳೆಲ್ಲವು ಸಂಗಯ್ಯನಧೀನವಾಗಿ.
--------------
ನೀಲಮ್ಮ
ಆಡಲಿಲ್ಲ ಹಾಡಲಿಲ್ಲ ನುಡಿಯಲಿಲ್ಲ ನಡೆಯಲಿಲ್ಲ ಪ್ರಾಣವಿಲ್ಲ ಪ್ರಸಾದವಿಲ್ಲ ಪರಿಣಾಮವಿಲ್ಲ ಇರದಂಗ ಸಂಗ ಸುಖವಿಲ್ಲ ಎವೆಯಿಕ್ಕಲಿಲ್ಲ ಎವೆಗಳೆಯಲಿಲ್ಲ ಜವೆಯರಿದು ಸವಿಗೂಟವನನುಭವ ಸುಖವ ಕಂಡೆನಯ್ಯ ಸಂಗಯ್ಯ.
--------------
ನೀಲಮ್ಮ
ಆರೆಸಳೆಂಬರು ಮೂರೆಸಳೆಂಬರು; ಆರು ಮೂರು ಎಸಳ ಕಲೆಯ ನುಡಿವರು. ನುಡಿವ ಪ್ರಸಾದವ ಪ್ರಸಾದವೆಂದು ನುಡಿವರು. ಆ ನುಡಿಯ ನಾ ನುಡಿಯಲರಿಯದೆ ಬಯಲ ಪದವ ಕಂಡು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಆರಸಂಗವೂ ಸ್ವಯವಲ್ಲವೆನಗೆ, ಆರ ಹಂಗೂ ಸ್ವಯವಲ್ಲವೆನಗೆ, ಆರ ಸಂಗವ ಮಾಡಿ ನಾನು ಎಷ್ಟೆಷ್ಟು ಕಾಲ ಬಳಲ್ವೆನಯ್ಯ ? ಎನ್ನ ಸಂಗವಿಹಪರದ ಹಂಗಿನ ಸಂಗವಲ್ಲಯ್ಯ. ಎನ್ನ ಸಂಗ ಸ್ವಯಲಿಂಗ ಸಂಬಂಧವಯ್ಯ ಸಂಗಯ್ಯ.
--------------
ನೀಲಮ್ಮ
ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು, ಕಾಮನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು, ಯುಗಜುಗವಿಲ್ಲದಂದು, ಪಿಂಡಾಂಡ ಬ್ರಹ್ಮಾಂಡವಿಲ್ಲದಂದು, ಏನೂ ಏನೂ ಇಲ್ಲದಂದು, ಎಲ್ಲಾ ಮೂರ್ತಿಗಳು ನೆಲೆಗೊಳ್ಳದಂದು, ಅಂದು ಏನೆಂದು ಅರಿಯದಿರ್ಪ ನಮ್ಮ ಬಸವಯ್ಯನು. ಒಂದು ಗುಣವನೊಂದು ಅಕ್ಷರಕ್ಕೆ ತಂದಾತ ನಮ್ಮ ಬಸವಯ್ಯನು. ಆ ಅಕ್ಷರವ ರೂಪಮಾಡಿ, ತ್ರಯಾಕ್ಷರದಲ್ಲಿ ಕಳೆಯ ಸಂಬಂಧಿಸಿದಾತ ನಮ್ಮ ಬಸವಯ್ಯನು. ಆ ಕಳೆಯ ಮೂರು ತೆರನ ಮಾಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಎಂಬ ಪಂಚತತ್ವವೆ ಪಂಚವದನವಾಗಿ, ಆ ಪಂಚವದನವೇ ಪಂಚೀಕೃತವನೆಯ್ದಿ, ಜಗದಾದಿ ಸೃಷ್ಟಿಯನನುಮಾಡುವುದಕ್ಕೆ ಕರ್ತನಾದ ನಮ್ಮ ಬಸವಯ್ಯನು. ಆ ಸೃಷ್ಟಿಯ ಮುಖವ ಕಂಡು ಸೃಜಿಸಲು ಪುಟ್ಟಿದರು ಪಂಚಶಕ್ತಿಯರು. ಆ ಪಂಚಶಕ್ತಿಯರಿಗೆ ಪಂಚಮೂರ್ತಿಯರ ಕೈಗೊಳಿಸಿದಾತ ನಮ್ಮ ಬಸವಯ್ಯನು. ಆ ಪಂಚಮೂರ್ತಿಗಳಿಂದುತ್ಪತ್ಯವಾದ ಲೋಕವ ನೋಡಲೆಂದು, ಕೈಲಾಸವನೆ ಕಲ್ಯಾಣವ ಮಾಡಿದಾತ ನಮ್ಮ ಬಸವಯ್ಯನು. ಆ ಕೈಲಾಸವೇ ಕಲ್ಯಾಣವಾಗಲಾ ಕಲ್ಯಾಣಕ್ಕೆ- ಪ್ರಮಥಗಣಂಗಳ, ರುದ್ರಗಣಂಗಳ, ಅಮರಗಣಂಗಳ, ಪುರಾತನಗಣಂಗಳ, ಪುಣ್ಯಗಣಂಗಳ, ಮಹಾಗಣಂಗಳ, ಮುಖ್ಯಗಣಂಗಳ, ಮಹಾಲಿಂಗೈಕ್ಯಸಂಪನ್ನರಂ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆಂಬ ಆಚಾರಾದಿ ಮಹಾಲಿಂಗಸಂಪನ್ನರಂ, ಷಟ್‍ಸ್ಥಲಪ್ರಸಾದಪ್ರಸನ್ನರೂಪರಂ, ಆದಿಮುಕ್ತರಂ, ಅನಾದಿಮುಕ್ತರಂ, ಅಜಾತರಂ, ಅಪ್ರಮಾಣರಂ, ಅನಿಮಿಷಲಿಂಗನಿರೀಕ್ಷಣರಂ, ತ್ರಿವಿಧವಿದೂರರಂ, ತ್ರಿವಿಧಲಿಂಗಾಂಗಮೂರ್ತಿಗಳಂ, ಅರ್ಪಿತಸಂಯೋಗರಂ, ಆಗಮವಿದರಂ, ಅನಾದಿಪರಶಿವಮೂರ್ತಿಗಳಂ, ಏಕಲಿಂಗನಿಷ್ಠಾಪರರುಮಪ್ಪ ಮಹಾಪ್ರಮಥಗಣಂಗಳಂ ತಂದು ನೆರಹಿದಾತ ನಮ್ಮ ಬಸವಯ್ಯನು. ಮರ್ತ್ಯಲೋಕವನೆ ಮಹಾಪ್ರಮಥರ ಬಿಡಾರವ ಮಾಡಿದಾತ ನಮ್ಮ ಬಸವಯ್ಯನು. ಆದಿಯಸೃಷ್ಟಿಯನನಾದಿಯಸೃಷ್ಟಿಗೆ ತಂದು, ಅನಾದಿಸೃಷ್ಟಿಯನಾದಿಸೃಷ್ಟಿಗೆ ತಂದು, ಅಜಾತನಬೀಡನಂಗದಲ್ಲಿ ನೆರಹಿದಾತ ನಮ್ಮ ಬಸವಯ್ಯನು. ಭಾವವಿಲ್ಲದ ಭ್ರಮೆಯ ಭ್ರಮೆಗೊಳಿಸಿ ಭಾವಕ್ಕೆ ತಂದಾತ ನಮ್ಮ ಬಸವಯ್ಯನು. ಬಯಲನೊಂದು ರೂಪಮಾಡಿ ಬಣ್ಣಕ್ಕೆ ತಂದು, ಆ ಬಣ್ಣವ ನಿಜದಲ್ಲಿ ನಿಲಿಸಿದಾತ ನಮ್ಮ ಬಸವಯ್ಯನು. ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಇಚ್ಫೆಯನರಿದು ಅರ್ಪಿತವ ಮಾಡಿದಾತ ನಮ್ಮ ಬಸವಯ್ಯನು. ಅಂಗಸಂಗಿಗಳನಂತರಿಗೆ ಅಂಗನೆಯರ ಅನುಭವವ ನಡಸಿದಾತ ನಮ್ಮ ಬಸವಯ್ಯನು. ಮೂವತ್ತಾರುಸಾವಿರ ಮಾಹೇಶ್ವರರಿಗೆ ಮುಖಮೂರ್ತಿಯಾಗಿ, ಅರ್ಪಿತಪ್ರಸಾದವನನುಭವಿಸಿದಾತ ನಮ್ಮ ಬಸವಯ್ಯನು. ಹನ್ನೆರಡುಸಾವಿರ ರಾಣಿಯರ ಅಂಗವನರ್ಪಿತಪ್ರಸಾದಿಗಳ ಮಾಡಿದಾತ ನಮ್ಮ ಬಸವಯ್ಯನು. ಎಂಬತ್ತೆಂಟುಪವಾಡಮಂ ಗೆದ್ದು ಮುನ್ನೂರರುವತ್ತು ಸತ್ತ ಪ್ರಾಣವನೆತ್ತಿ ಮೆರೆದು ಪರಸಮಯವನಳಿದಾತ ನಮ್ಮ ಬಸವಯ್ಯನು. ಇಪ್ಪತ್ತೈದುಸಾವಿರ ಚಾರ್ವಾಕರಂ ನೆಗ್ಗಿಲೊತ್ತಿ, ಅಪ್ರತಿಮ ಶಿವಗಣಂಗಳ ಮಹಾತ್ಮೆಯಂ ಮೆರೆದಾತ ನಮ್ಮ ಬಸವಯ್ಯನು. ಪ್ರಣವದ ಬೀಜವ ಬಿತ್ತಿ, ಪಂಚಾಕ್ಷರಿಯಬೆಳೆಯ ಬೆಳೆದು, ಪರಮಪ್ರಸಾದವನೊಂದು ರೂಪಮಾಡಿ ಮೆರೆದು, ಭಕ್ತಿಫಲವನುಂಡಾತ ನಮ್ಮ ಬಸವಯ್ಯನು. ಚೆನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವಮಂಟಪವನನುಮಾಡಿ, ಅನುಭವಮೂರ್ತಿಯಾದ ನಮ್ಮ ಬಸವಯ್ಯನು. ಅರಿವ ಸಂಪಾದಿಸಿ ಆಚಾರವನಂಗಂಗೊಳಿಸಿ, ಏಳುನೂರೆಪ್ಪತ್ತು ಅಮರಗಣಂಗಳ ಅನುಭವಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು. ಆ ಅನುಭವದಲ್ಲಿ ಐಕ್ಯಪ್ರಸಾದವನಂಗಂಗೊಂಡು, ಮಂತ್ರ ನಿರ್ಮಂತ್ರವಾದಾತ ನಮ್ಮ ಬಸವಯ್ಯನು. ಭಕ್ತಿಸ್ಥಲವನಳಿದು ಭಾವವಡಗಿ ಬಟ್ಟಬಯಲ ಕೂಡಿ, ಸಂಗಯ್ಯನಲ್ಲಿ ಸ್ವಯಲಿಂಗಿಯಾದ ನಮ್ಮ ಬಸವಯ್ಯನು.
--------------
ನೀಲಮ್ಮ