ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏತರಲ್ಲಿಯೂ ತೆರಹಿಲ್ಲವೆನಗೆ ಏತರಲ್ಲಿಯೂ ಕುರುಹಿಲ್ಲವೆನಗೆ; ಏತರಲ್ಲಿಯೂ ಮೂರ್ತಿಯ ಮುಖ ಕಾಣಿಸದೆನಗೆ, ಸಂಗಯ್ಯನಲ್ಲಿ ಬಸವ ಪ್ರಸಾದಿಯಾದಬಳಿಕ.
--------------
ನೀಲಮ್ಮ
ಏಕಯೇವ ದೇವನೊಬ್ಬನೆ ಶರಣ ಬಸವಯ್ಯ. ಆ ಶರಣ ಬಸವಯ್ಯನಿರವೆ ಪರಮಪ್ರಸಾದರೂಪವಾಯಿತ್ತು. ಆ ಪರಮಪ್ರಸಾದರೂಪಮೂರ್ತಿ ನಮ್ಮ ಸಂಗಯ್ಯನಲ್ಲಿ ಸದ್ಗುರು ಬಸವಯ್ಯನು.
--------------
ನೀಲಮ್ಮ
ಏಕೆನ್ನ ಪುಟ್ಟಿಸಿದೆಯಯ್ಯಾ ಹೆಣ್ಣು ಜನ್ಮದಲ್ಲಿ ಪುಣ್ಯವಿಲ್ಲದ ಪಾಪಿಯ ? ನಾನು ಇಹಪರಕ್ಕೆ ದೂರಳಯ್ಯಾ. ಎನ್ನ ನಾಮ ಹೆಣ್ಣು ನಾಮವಲ್ಲಯ್ಯಾ. ನಾನು ಸಿರಿಯಿದ್ದ ವಸ್ತುವಿನ ವಧುವಾದ ಕಾರಣ, ಸಂಗಯ್ಯನಲ್ಲಿ ಬಸವನ ವಧುವಾದ ಕಾರಣ ಎನಗೆ ಹೆಣ್ಣುನಾಮವಿಲ್ಲವಯ್ಯಾ.
--------------
ನೀಲಮ್ಮ
ಏಕಲಿಂಗದಲ್ಲಿ ಏಕತ್ವವಲ್ಲ ಮೂರ್ತಿಗಳಲ್ಲ ಆ ಮೂರ್ತಿಗಳಲ್ಲಿ ಶರಣ ಸಂಗ ಪರಿಣಾಮ ಸಂಗಪ್ರಭೆಯ ಪೂರೈಸಿದ ಸಂಗವಯ್ಯ ಸಂಗಯ್ಯ.
--------------
ನೀಲಮ್ಮ
ಏಕ ಸಂಗ ನಿಸ್ಸಂಗವಾಗಿ ಪ್ರಸಾದದ ಹಂಗಿಗಳಲ್ಲ. ಪ್ರಣವದ ಅಕ್ಷರರೂಪಡಗಿ ನಿಂದು ಏಕೋದೇಹವಾಯಿತ್ತೆನಗೆ ಸಂಗಯ್ಯ.
--------------
ನೀಲಮ್ಮ
ಏಹೆ ಎಲೆ ಅಭವ ಬಸವಾ, ಏಹೆ ಎಲೆ ಪರಿಣಾಮಿ ಬಸವಾ, ಏಹೆ ವಿಚಾರಿ ಬಸವಾ, ವಿಚಾರ ಸಂಗನನರಿದು ಹೇಳಲಿಲ್ಲವೆನಗೆ ಬಸವಾ. ಹೇ ಹೇ ಎನಲೊಂದೆ ಸಂಗ ಸಂಗ, ನಿರಂಗ ನಿರಂಗ ಬಸವ ಬಸವ ಎಲೆ ಬಯಲು ?
--------------
ನೀಲಮ್ಮ
ಏನೆಂದೆನ್ನಬಹುದಯ್ಯ ?ಎಂತೆಂದೆನ್ನಬಹುದಯ್ಯ ? ಈ ಘನದ ವಿಚಾರವ ? ಈ ಘನದಲ್ಲಿ ಇಹಪರದ ಸುಖವ ಕಂಡು ಕೊಡುವೆನೆಂದು ಹೋದರೆ ಆ ಲಿಂಗವೆನ್ನ ಕರದೊಳಗೆ ತಾನೆಯಡಗಿತ್ತು. ನಾನಡಗಿ ನನ್ನ ವಿಚಾರವ ತಿಳಿಯಲು ನಾನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಏಕಮೂರ್ತಿ ತ್ರಿಮೂರ್ತಿ ದ್ವಿಮೂರ್ತಿಯಾಗಿ ತೋರಿ ಬೇರೆ ಅರಿಯ ಬಂದಿತ್ತಯ್ಯ. ಅರಿಯಲು, ಪ್ರಭೆ ಪರಿಪೂರಿತವಂತಃಕ್ಕರುಣಮೂರ್ತಿಯುಳ್ಳವಳಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಏಣನಗರ, ಎಸಳಗಂಗಳ ಸಾರಂಗ, ಪ್ರಭೆಯನೊಳಕೊಂಡ ಮೊಲ, ಈ ಮೂರು ಮೃಗವನೆಚ್ಚು ಬಾಣಸವ ಮಾಡಿ, ಸಂಗಯ್ಯಂಗಿತ್ತು ಸುಖಿಯಾದನಯ್ಯಾ. ಬಸವನಗಣಿತಮೂರ್ತಿಯಯ್ಯಾ, ಇಹಪರ ನಾಯಕನು.
--------------
ನೀಲಮ್ಮ
ಏತರಲ್ಲಿಯೂ ಹೆಸರಿಲ್ಲದ ಕುರುಹು ಈ ವಸ್ತು ಬಸವಯ್ಯನು. ಏತರಲ್ಲಿಯೂ ನೆಲೆಯಿಲ್ಲದ ಮೂರ್ತಿ ಈ ವಸ್ತು ಬಸವಯ್ಯನು. ಏತರಲ್ಲಿಯೂ ತೆರಹಿಲ್ಲದೆ ಪರಿಪೂರ್ಣವಾಗಿರಲು ಬಸವಯ್ಯನು, ಪ್ರಭೆ ಬೆಳಗಿತ್ತು ಬಸವಂಗೆ, ಪ್ರಕಾಶವಡಗಿತ್ತು ಬಸವಂಗೆ, ಪರಿಣಾಮ ಉಡುಗಿತ್ತು ಬಸವಂಗೆ, ಮನವಳಿಯಿತ್ತು ಬಸವಂಗೆ, ಸಂಗಯ್ಯನಲ್ಲಿ ಬಸವ ಸ್ವಯಲಿಂಗಿಯಾದ ಬಳಿಕ.
--------------
ನೀಲಮ್ಮ
ಏಕಾಂಗವೆನಗೆ ಅನೇಕ ಬಸವಾ, ಪ್ರಾಣಪ್ರಸನ್ನವದನೆಯಾದೆನು ಬಸವಾ, ಎನಗೆ ಏತರಲ್ಲಿಯೂ ಹಂಗಿಲ್ಲ ಬಸವಾ, ಇಷ್ಟದ ಸಂಗದ ಕುಳವಳಿದ ಬಳಿಕ ಪ್ರಾಣಯೋಗವಾಯಿತ್ತು ಬಸವಾ, ಸಂಗಯ್ಯಾ, ನಿಮ್ಮ ಬಸವನ ರೂಪು ಹೆಸರಿಲ್ಲದೆ ಹೋದ ಬಳಿಕ.
--------------
ನೀಲಮ್ಮ
ಏನೂ ಏನೂ ಎನಲಿಲ್ಲ ಎನ್ನ ಭಕ್ತಿಯಳಿದ ಭಾವಕ್ಕೆ ಇನ್ನೇನೂ ಏನೂ ಎನಲಿಲ್ಲ. ಎನ್ನ ಪ್ರಾಣದ ಹಂಗಹರಿದಬಳಿಕ ಇನ್ನೇನೂ ಏನೂ ಎನಲಿಲ್ಲ. ಎನ್ನೈಕ್ಯದ ಸಮರಸ ಕೈಗೂಡಿದಬಳಿಕ ಇನ್ನೇನೂ ಏನೂ ಎನಲಿಲ್ಲ. ಎನ್ನಭಿಮಾನದ ಕರ್ತೃ ನಿರಾಳದಲ್ಲಿ ನಿಂದ ಬಳಿಕ, ಸಯದಾನ ಸುಯಿದಾನವಾಯಿತ್ತಯ್ಯಾ, ಸಂಗಯ್ಯಾ.
--------------
ನೀಲಮ್ಮ
ಏತರಲ್ಲಿಯೂ ಪರಿಣಾಮವಿಲ್ಲವೇತರಲ್ಲಿಯೂ ಗಮನವಿಲ್ಲ ವೇತರಲ್ಲಿಯೂ ವಿವೇಕದನುಭವವಿಲ್ಲ- ವಪ್ರತಿಮನ ಸುಖವ ಕಂಡು, ಆನು ವಿವೇಕ ವಿವರವ ತಿಳಿದೆನಯ್ಯ. ತಿಳಿದು ಮನೋಹರ ಪ್ರಸನ್ನ ಮೂರುತಿಯ ವಿವರವ ಕಂಡೆನಯ್ಯ ಸಂಗಯ್ಯ.
--------------
ನೀಲಮ್ಮ
ಏತರಮಾರ್ಗವಡಗದ ಸಂಗ, ಭ್ರಮೆಯಳಿಯದ ಸಂಗ. ಇಂತೀ ಉಭಯಸಂಗ ಸಾಧ್ಯವಾಯಿತ್ತೆನಗೆ. ಮನವನಳಿದು ತನುವಿನ ಹಂಗು ಹರಿದು ಪರಮಪ್ರಸಾದಿಯಾಗಿ ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಏಕಾಕಾರ ನಿರಾಕಾರವಾಯಿತ್ತಯ್ಯ, ಏಕಾಕಾರ ಶಿವಸುಖವಾಯಿತ್ತಯ್ಯ, ಅಧಿಕದ ತನುವನರಿದು ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಏಕಯೇವದೇವ ಬಸವಾ, ಏಕಲಿಂಗಾಂಗಿ ಬಸವಾ, ಪ್ರಸಾದಪರಿಪೂರ್ಣಮೂರ್ತಿ ಬಸವಾ, ಪರಿಣಾಮವಡಗಿ ಪ್ರಸನ್ನನಾದ ಬಸವಾ ಕಾಯವಿಲ್ಲದ ಗಮನಿ ಬಸವಾ, ಕಲೆಯಳಿದುಳಿದೆ ಬಸವಾ, ಪ್ರಭಾವವಡಗಿ ಸಂಗಯ್ಯನಲ್ಲಿ ನಿಸ್ಸಂಗಿಯಾದೆಯಾ ಬಸವಾ.
--------------
ನೀಲಮ್ಮ
ಏಕಲಿಂಗನಿಷ್ಠಾಪಾರಿಗಳೆಂದೆಂಬರಯ್ಯ; ತಾವು ಏಕಲಿಂಗ ಸಂಬಂಧಿಗಳಾದ ಕಾರಣವೇನಯ್ಯ ? ತಾವು ಹಿತವಿಲ್ಲದ ವಸ್ತುವ ಕಂಡು ಸ್ವಯ ಸಂಬಂಧಿಗಳಾದರು. ಪರಿಣಾಮದ ನೆಲೆಯನರಿವ ಪರಿಯೆಂತಯ್ಯ ಸಂಗಯ್ಯ ?
--------------
ನೀಲಮ್ಮ
ಏತರಲ್ಲಿಯೂ ತೆರಹಿಲ್ಲವೆನಗೆ ಸುಖ ಎನಗೆ; ಸುಖದಿಂದ ವಿಪತ್ತನಳಿದೆನಯ್ಯಾ. ವಿಚಾರವ ತಿಳಿದು ನಿಃಪತಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ