ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅನುಭಾವದ ಸಾರವೆ ನಿಜಸಾರವಾಗಿ ನಿಂದನೆಮ್ಮ ಬಸವಯ್ಯನು. ವಿವೇಕದ ಸಂಗವೆ ನಿಜಸಂಗವಾಗಿ ನಿಂದನೆಮ್ಮ ಬಸವಯ್ಯನು. ಭಾವದ ಬಯಲಿಂಗೆ ಬಣ್ಣವಿಟ್ಟನೆಮ್ಮ ಬಸವಯ್ಯನು. ಇತರೇತರ ಮಾರ್ಗವಳಿದು, ಗಮನನಾಸ್ತಿಯಾದನೆಮ್ಮ ಬಸವಯ್ಯನು. ಸಂಗಯ್ಯನಲ್ಲಿ ಉಭಯಕುಳ ನಾಸ್ತಿಯಾದನೆಮ್ಮ ಬಸವಯ್ಯನು.
--------------
ನೀಲಮ್ಮ
ಅಂಗದ ಸಂಗವ ಹಿಂಗಿ ಅಂಗವನಳಿದೆನಯ್ಯ. ಆ ಅಂಗವನಳಿದ ಬಳಿಕ ಅಣೋರಣೀಯಾನ್ ಮಹತೋಮಹೀಯಾನ್ ಎಂಬ ಶಬ್ದವಡಗಿತ್ತು. ಮನವನರಿದು, ಆ ಮನ ಘನವ ತಿಳಿದು, ಆನು ಬದುಕಿದೆನಯ್ಯ; ಆನು ಸುಖಿಯಾದೆನಯ್ಯ. ಆನು ಇಹಪರದ ಹಂಗಹರಿದು, ಸುಖ ವಿಸುಖ ಪ್ರಸನ್ನರೂಪಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಅರುವೆರಳುದ್ದದೇಹವ ಮಾಡಿದೆ ಕರುಣಿ ಬಸವಾ. ಬೆರಸಿ ಬೇರಿಲ್ಲದೆ ಇದ್ದೆ ಬಸವಾ. ನೆರೆನಂಬಿದೆ ನಿಮ್ಮುವ ಬಸವಾ. ಬರುಕಾಯದ ಭ್ರಮೆಯ ಬಿಡಿಸಿದೆಯಲ್ಲಾ ಬಸವಾ. ನೀನು ತೃಪ್ತನಾಗಿ ನಾನು ತೃಪ್ತಳಲ್ಲ ಬಸವಾ. ಸಂಗನಬಸವಾ ಮೂಲಕರ್ತೃ ನಾನು ನಿನಗೆ.
--------------
ನೀಲಮ್ಮ
ಅಡವಿಯ ಹುಯ್ಯಲು ಎನ್ನ ಮೇಲುವರಿಯಿತ್ತು. ಎನ್ನ ಮೇಲುವರಿವ ಹುಯ್ಯಲಬೆಳಸಿ ನಾನು ನಿಜಪ್ರಸಂಗಿಯಾದೆನಯ್ಯ. ನಿತ್ಯವ ಹಡದು ನಿಃಶೂನ್ಯದ ಮಂಟಪದಲ್ಲಿ ನಿರಾಲಂಬಿಯಾನಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಅಡವಿಯಲ್ಲಿ ಕಣ್ಣುಗೆಟ್ಟ ಪಶುವಿನಂತೆ ನಾನು ಪ್ರಳಾಪಿಸುತ್ತಿದ್ದೆನಯ್ಯಾ. ಕಡುದುಃಖದಿಂದ ಮರುಗಲು, ಶರಣ ಚೆನ್ನಣ್ಣನರಿದು ಶಿವಶಿವಾ ಎಂಬ ಮಂತ್ರವನರುಹಿ ಅಳಲುವ ಬಳಲಿಕೆಯ ಕಳೆದನಯ್ಯಾ. ಸಂಗಯ್ಯನಲ್ಲಿ ಚೆನ್ನಬಸವಣ್ಣಂಗೆ ನಮೋ ನಮೋ ಎನುತಿದ್ದೆನು.
--------------
ನೀಲಮ್ಮ
ಅಲ್ಲಮನ ವಂಶದವಳು ನಾನು. ಆಜಾತ ಶರಣರ ವಂಶದವಳು ನಾನು. ಅಪ್ರತಿಮ ಶರಣರ ವಂಶದವಳು ನಾನು. ಆಗಮಾನಂದಿಗಳ ವಂಶದವಳಾನು. ನಾನು ಆವ ದೇಶದಲ್ಲಿಯಿದ್ದಡೇನು ? ನಾನು ಆವಸ್ಥಾನದಲ್ಲಿಯಿದ್ದಡೇನು ? ಸಂಗಯ್ಯನಲ್ಲಿ ಬಸವ ಸ್ವಯಲಿಂಗಿಯಾದನು.
--------------
ನೀಲಮ್ಮ
ಅಂಡದಲ್ಲಿಯೊಂದು ಆಕಾರದ ರೂಪು ಹುಟ್ಟಿತ್ತು. ಆ ಆಕಾರದ ರೂಪಿನಲ್ಲಿ ಅನುವಿನ ಮೂರ್ತಿಯ ಭಕ್ತಿ ಹುಟ್ಟಿತ್ತು. ಆ ಭಕ್ತಿಯ ಸುಖ ವಿಸುಖವಾಗಿ ತೋರಿತ್ತು. ವಿಸುಖ ವಿತೃಪ್ತಿಯ ಕಂಡು ತಲೆದೋರಿತ್ತು. ಮೂರ್ತಿಯಮೂರ್ತಿಯ ಮುಖವರಳಿ ಸುಖದಲ್ಲಿ ನಿರ್ವಯಲಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಅರಿಯದ ಶಬ್ದವ ಕುರುಹಿಂಗೆ ತಂದ ಬಸವಯ್ಯನು. ಆ ಕುರುಹನೆರಡಮಾಡಿದ ಬಸವಯ್ಯನು. ಅವೆರಡ ಒಂದರಲ್ಲಿ ವೇಧಿಸಿ ಸಂಗಯ್ಯನಲ್ಲಿ ಸ್ವಯಲಿಂಗಿಯಾದನಯ್ಯ ಬಸವಯ್ಯನು.
--------------
ನೀಲಮ್ಮ
ಅಂಗವಿಲ್ಲವೆನಗೆ ಲಿಂಗವಿಲ್ಲವೆನಗೆ ಜಂಗಮವಿಲ್ಲವೆನಗೆ ಪ್ರಸಾದವಿಲ್ಲವೆನಗೆ ಪ್ರಾಣವಿಲ್ಲವೆನಗೆ ಪರಿಣಾಮವಿಲ್ಲವೆನಗೆ ಆವ ಸುಖವೂ ಇಲ್ಲ; ಆ ಸುಖವಿಲ್ಲದ ಕಾರಣ ಪ್ರಸಾದವೆನಗೆ ಸಾಧ್ಯವಯ್ಯ ಸಂಗಯ್ಯ.
--------------
ನೀಲಮ್ಮ