ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಐವರು ಭಾಮಿನಿಯರು ಐದು ಮುಖದಲ್ಲಿ ನಿಂದು, ಬೇರೊಂದು ಸ್ಥಾನದಲ್ಲಿ ಒಬ್ಬ ಪುರುಷ ನಿಂದು, ಸಕಲವನೊಳಕೊಂಡು, ನಿಃಕಲನಾಗಿಪ್ಪನು ನೋಡಾ, ಆ ನಿಃಕಲವನರಿತು ಆಚರಿಸುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಬಣ್ಣದ ಪಕ್ಷಿ ಬಿಂದುವ ನುಂಗಿ ಬಿಂದುವಿನೊಳು ನಿಂದಿತ್ತು. ನಾದವ ನುಂಗಿ ಸುನಾದಮಯವಾಗಿ ಕಳೆಯನಾವರಿಸಿ, ಕಳೆ ಗುರುನಿರಂಜನ ಚನ್ನಬಸವಲಿಂಗವಾದ ಮತ್ತೆ, ನಾದಬಿಂದುಕಳಾತೀತ ನಾಮ ನಿಂದಿತ್ತು ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಐದಂಗದಂಗನೆಯಾನು ಬಾರಯ್ಯಾ. ಐದು ಕೆಳದಿಯರೆನಗೆ ನೋಡಯ್ಯಾ. ಹಿರಿಯ ಕಾಲದ ದೇವರ ವರವೆನಗಯ್ಯಾ. ಬೇಡಿದ್ದು ಮಾಡಿ ಮನೆ ತುಂಬಿಸುವ ಬಾರಯ್ಯಾ. ಕೈಗೂಡಿ ಕಾರ್ಯವ ಮಾಡಿ, ಮನಗೂಡಿ ಒಗತನ ಮಾಡಿ, ಪ್ರಾಣಗೂಡಿ ಇಚ್ಫೆಯನರಿದಿತ್ತು, ಪರಮಪದವಿಯೊಳೋಲಾಡುವ ಬಾರಯ್ಯಾ, ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಐದೂರ ಹೊಲದಲಿ ಕೆಟ್ಟ ಪಶುವನು ಆರೂರ ಹೊಕ್ಕು ಅರಿಸಿಹೆನೆಂದು ಹೋದರೆ ಮೂರೇ ಮನೆಯಲ್ಲಿ ಈರುಗಾರಾಗಲಾಗಿ ಅರಸಬಂದಯ್ಯಗಳು ಆಸತ್ತು ಹೋದರಲ್ಲ. ಅರಸುವ ಅರುಹೆ ತಾನೆಂದು ತಿಳಿಯಲು ಮೂರಾರಕ್ಷರವಾಗಿ ತೋರುವ ಮೂಲಾಕ್ಷರಾತ್ಮಕ ತಾನೆ ತಪ್ಪದೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಐದಾನೆಯ ಬೆನ್ನಲ್ಲಿ ಐದು ಒಂಟೆ ಹೋದವು, ಒಂಬತ್ತು ಸಾವಿರ ಕುದುರೆಯನು ಒಂದು ಎಳಗ ಎಯ್ದಿಸುತ್ತಿದ್ದಿತ್ತು. ಅರೆಮರುಳಾದವನ ನೆರೆ ಮರುಳಾದವ ಬಲ್ಲನೆ ? ಕುರುಬ ಕುರಿಯ ಹಾಲ ಕರೆದು ಒಲೆಯ ಮೇಲಿಕ್ಕೆ, ಇಕ್ಕಿದ ಹಾಲ ಬೆಕ್ಕು ಕುಡಿಯಿತ್ತು, ಬೆಣ್ಣೆಯ ಮುಂದಿಟ್ಟುಕೊಂಡಳುತಿರ್ದ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಐದು ತತ್ತ್ವಂಗಳಿಂದಾದ ದೇಹಕ್ಕೆ ರೋಗರುಜೆಯಹುದೆ ? ಕಾಯತತ್ವಂಗಳ ಗೊತ್ತಿನಲ್ಲಿ ನಿಂದು, ಅವರವರ ಚಿಕಿತ್ಸೆಯಲ್ಲಿ ಹೊತ್ತು ನಿತ್ತರಿಸುವುದೆ ಕ್ರಮ. ಅದೆಂತೆಂದಡೆ : ಭಕ್ತಿನಿಷೆ* , ವಿಶ್ವಾಸನಿಷೆ*, ಜ್ಞಾನನಿಷೆ*. ಇಂತಿ ಸದ್ಭಾವ ನೆಲೆಗೊಳ್ಳದ ಕಾರಣ, ತನುವಿಂಗೆ ಅನುಪಾನವ ಪಾನವ ಮಾಡಬೇಕು. ಮೇಲೆ ಅರಿದಡೆ, ಮನವು ಮನದಲ್ಲಿ ನಿಲಬೇಕು. ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನೊಡಗೂಡಬೇಕು.
--------------
ವೈದ್ಯ ಸಂಗಣ್ಣ
ಐದು ಮೇರುವೆಯ ಮೇಲೆ ಒಂದು ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೊಂದು ಲಿಂಗವ ಕಂಡೆನಯ್ಯ. ಊರೊಳಗಣ ಪುರುಷನು ಜ್ಞಾನಶಕ್ತಿಯ ಸಂಗವ ಮಾಡಿ ಆ ಲಿಂಗದಲ್ಲಿ ಕೂಡಿ ನಿಃಪ್ರಿಯವನೈದಿದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐಕ್ಯಸ್ಥಲದ ಲೇಪಜ್ಞಾನ ವಿವರ : ಅಪ್ಪು ಆವಾವ ಪಾಕಕ್ಕೂ ತಪ್ಪದೆ ಸಾರವ ಕೊಡುವಂತೆ ತಥ್ಯಮಿಥ್ಯವಾದ ದ್ರವ್ಯಕ್ಕೆ ಹೆಚ್ಚುಕುಂದನರಿಯದಿಪ್ಪಂತೆ ವಾಯು ಸುಗುಣ ದುರ್ಗುಣವೆನ್ನದೆ ತನ್ನಯ ಸಹಜದಿಂದ ಸಂಚರಿಸುವಂತೆ ಅಗ್ನಿಗೆ ಕಾಷ* ಸರಿಸ ಡೊಂಕೆನ್ನದೆ ಮಲಿನ ಅಮಲಿನವೆನ್ನದೆ ಆವ ದ್ರವ್ಯ ದೃಷ್ಟದಲ್ಲಿ ಸಿಕ್ಕಿದಡೂ ಭೇದಿಸಿ ವೇಧಿಸಿ ಸುಡುವುದಾಗಿ. ಇಂತಿವು ತ್ರಿವಿಧಸ್ಥಲದಂತೆ ಇಪ್ಪುದು ಐಕ್ಯನ ಅರ್ಪಿತ ಸ್ಥಲಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಐಮುಕ್ತಿ ಕ್ಷೇತ್ರದ ವಾಸದ ರಜತಗಿರಿಯ ಮಧ್ಯದಲ್ಲಿ ಕುರುಕ್ಷೇತ್ರ. ಅದರೊಳಗಿಬ್ಬರು ದೊರೆಗಳು ಅರಿರಿಪುಗಳಾದರು. ಅವರ ಹೆಸರು ಕಳಾಂಧರ ಕಮ್ಮಟಹತ. ಅಸುಗತನೆಂಬವ ಬೇರೊಬ್ಬನರಸು ರಿಪು. ಕುಲತಮನಾಶಗತಿ ಮಂಡಲವಿರಹಿತ ರಾಜಕುಲ ಅಸುನಾಥ. ಇವರಿಬ್ಬರು ಮಸಕಲಿಕೆ ಮೊನೆಯಾಯಿತ್ತು. ಅಸುಭಟರೆಲ್ಲರು ಹುಸಿಭಟರಾದರು, ಬಂಕೇಶ್ವರಲಿಂಗವ ಅಹುದಲ್ಲವೆಂದ ಕಾರಣ.
--------------
ಸುಂಕದ ಬಂಕಣ್ಣ
ಐವತ್ತಾರು ದೇಶದೊಳಗುಳ್ಳ ಸ್ಥಾವರಂಗಳ ತನ್ನೊಳಗುಳ್ಳ ಭಕ್ತಿಯಲ್ಲರಿದರ್ಚಿಸಬಲ್ಲರೆ ಶರಣ. ಆ ಶರಣ ಶಿವನಂತಿಪ್ಪ ನೋಡಿರೆ. ಕಾಲತ್ರಿಪುರವ ಸುಟ್ಟು ಬೂದಿಯನು ಸರ್ವಾಂಗದಲ್ಲಿ ಧರಿಸಿರ್ದ ನೋಡಿರೆ. ಸರ್ಪಾಭರಣಭೂಸಿತನಾಗಿ ಚಂದ್ರನ ಮಸ್ತಕದಲ್ಲಿ ತಳೆದುಕೊಂಡಿರ್ದ ನೋಡಿರೆ. ಬ್ರಹ್ಮಕಪಾಲ ಕೈಯಲ್ಲಿ ಪಿಡಿದು, ಮಾಯೆಯ ಗೆಲಿದ ನೋಡಿರೆ. ನಾರಾಯಣನ ಕಣ್ಣ ಪಾದದಲ್ಲಿರಿಸಿ, ಗಂಗೆ ಗೌರಿಯ ಸಂಪರ್ಕ ಒಳಹೊರಗೆ ಪರಿಪೂರ್ಣ ನೋಡಿರೆ, ತನ್ನೊಲುಮೆಯ ಇರವೆಯಲ್ಲಿ ಕೈಲಾಸಮಧ್ಯಪೀಠ ಪ್ರಕಾಶದೊಳಗು ನೋಡಿರೆ ಹುಟ್ಟಿ ಬೆಳೆದುದ ಸವರಿಬಿಟ್ಟು ಕಟ್ಟಾಳುಯೆನಿಸಿ ಕಾಣುವ ಗುರುನಿರಂಜನ ಚನ್ನಬಸವಲಿಂಗದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಐದರಿಂದ ಕಾಬುದು ಜೀವ, ಮೂವರಿಂದ ಕಾಬುದು ಆತ್ಮ. ಇಪ್ಪತ್ತೈದರಿಂದ ಕಾಬುದು ಪರಮ, ಮೂವತ್ತಾರರಿಂದ ಕಾಬುದು ಚಿತ್ತ. ಒಂದರಿಂದ ಕಾಣಿಸಿಕೊಂಬುದು ಚಿದಾನಂದ. ಚಿದಾನಂದವೆಂಬ ಆನಂದ ನಿಂದು, ಸದಮಲಾನಂದ ತಾನಾದಲ್ಲಿ, ಸದಾಸನ್ನದ್ಧವೆಂಬ ಆನಂದ ಹಿಂಗಿ ನಿಂದ ಉಳುಮೆ, ಕಮಠೇಶ್ವರಲಿಂಗ ತಾನಾದ ಶರಣ.
--------------
ಬಾಲಸಂಗಣ್ಣ
ಐದು ದಾರಿಯ ಮೇಲೆ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ. ಆ ಪುರುಷಂಗೆ ಒಬ್ಬ ಸತಿಯಳಿಪ್ಪಳು ನೋಡಾ. ಆ ಸತಿಯಳ ಸಂಗದಿಂದ ಆರು ದೇಶವ ದಾಂಟಿ, ಮೂರು ಗ್ರಾಮವ ಮೀರಿ, ಪರಕೆಪರವನಾಚರಿಸುತಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದರಿಂದತ್ತತ್ತ ಮಹಾಮಹಿಮನ ಕಂಡೆನಯ್ಯ, ಆ ಮಹಾಮಹಿಮನ ಸಂಗದಿಂದ ಒಬ್ಬ ಸತಿಯಳು ಹುಟ್ಟಿ, ಚಿಲ್ಲಿಂಗಾರ್ಚನೆಯಂ ಮಾಡಿ, ಚಿದ್ಘನಸ್ವರೂಪವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಮೇರುವೆಯ ಮೇಲೆ ಪರಮಲಿಂಗವ ಕಂಡೆನಯ್ಯ! ಆ ಲಿಂಗದಲ್ಲಿ ಕೂಡಿ ನಿರ್ಲೇಪಕನಾದ ಶರಣನು, ಸಕಲ ಭ್ರಮೆಯಂಗಳನಳಿದು ತಾನುತಾನಾಗಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐಕ್ಯಪದವ ಹಡೆವಡೆ ನಿಕ್ಷೇಪಧಾರಣಿಯಾಗಿರಬೇಕು. ಗುರುವೆಂಬ ಅಂಜನ, ಶಿಷ್ಯನೆಂಬ ಪಾಯಾಳು, ಲಿಂಗವೆ ಕಡವರ, ಆಚಾರವೆ ದಿಗ್ಭಂಧನ, `ಭಕ್ತಕಾಯೋ ಮಮಕಾಯ' ಎಂದುದು ಕೂಡಲಚೆನ್ನಸಂಗಯ್ಯನವಚನ.
--------------
ಚನ್ನಬಸವಣ್ಣ

ಇನ್ನಷ್ಟು ...
-->